Tuesday, August 1, 2023

ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರಕ್ಕೆ ಖಂಡನೆ

ಹೆಚ್ಚಿನ ಕಾನೂನು ವ್ಯವಸ್ಥೆ ಜಾರಿಗೆ ಆಗ್ರಹ

ಕೇಂದ್ರ  ಹಾಗೂ ರಾಜ್ಯ ಸರ್ಕಾರಗಳು, ಮಹಿಳೆಯರ ಮಾನ, ಪ್ರಾಣ, ಭದ್ರತೆ ಹಾಗೂ ರಕ್ಷಣೆಗೆ ಹೆಚ್ಚಿನ ಕಾನೂನು ವ್ಯವಸ್ಥೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಹಾಗು ಮಹಿಳೆಯರ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಂಗಳವಾರ ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ, ಆ. ೧ :  ಕೇಂದ್ರ  ಹಾಗೂ ರಾಜ್ಯ ಸರ್ಕಾರಗಳು, ಮಹಿಳೆಯರ ಮಾನ, ಪ್ರಾಣ, ಭದ್ರತೆ ಹಾಗೂ ರಕ್ಷಣೆಗೆ ಹೆಚ್ಚಿನ ಕಾನೂನು ವ್ಯವಸ್ಥೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಹಾಗು ಮಹಿಳೆಯರ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ತಪ್ಪಿತಸ್ಥರಿಗೆ
    ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಂಗಳವಾರ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಮನವಿ ಸಲ್ಲಿಸಲಾಯಿತು.  
    ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿಯ ಮಾನ ಹಾನಿ ಪ್ರಕರಣ ಹಾಗೂ ಮಣಿಪುರ ರಾಜ್ಯದಲ್ಲಿ ನಡೆದ ಮಹಿಳೆಯರ ದೌರ್ಜನ್ಯ, ಅತ್ಯಾಚಾರ ಹಾಗೂ ಬೆತ್ತಲೆ ಮೆರವಣಿಗೆ ಪ್ರಕರಣಗಳು, ಅಮಾನವೀಯ, ರೌದ್ರ ಹಾಗೂ ರಾಕ್ಷಸತನದ ಪರಮಾವಧಿ ಮೀರಿದಂತಹ ಹೇಯ ಕೃತ್ಯಗಳಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ನೀಚ ಕೃತ್ಯಗಳು ಮರುಕಳುಹಿಸದಂತೆ ಎಚ್ಚರವಹಿಸಬೇಕೆಂದು ಆಗ್ರಹಿಸಲಾಯಿತು.
    ತಹಸೀಲ್ದಾರ್‌ ಗ್ರೇಡ್‌-೨ ರಂಗಮ್ಮ ಅವರ ಮೂಲಕ ಮನವಿ ಸಲ್ಲಿಸಲಾಯಿತು. ವೇದಿಕೆ ಅಧ್ಯಕ್ಷೆ ಎಂ.ಎಸ್‌ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಪ್ರಧಾನ ಕಾರ್ಯದಶಿ ಲತಾ ಪ್ರಭಾಕರ್‌, ಉಪಾಧ್ಯಕ್ಷೆ ಸುಮ ಚಂದ್ರಶೇಖರ್‌, ಕಾರ್ಯದರ್ಶಿ ಶೀಲಾ ರವಿ, ಖಜಾಂಚಿ ಭಾರತಿ ಕುಮಾರ್‌ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಾಗ ಕಬಳಿಕೆ ವಿರೋಧಿಸಿ ಆ.೨ರಂದು ಧರಣಿ ಸತ್ಯಾಗ್ರಹ

    ಭದ್ರಾವತಿ, ಆ. ೧: ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿ ವತಿಯಿಂದ ಯೋಧಯೊಬ್ಬರಿಗೆ ಸೇರಿದ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿ ಕಬಳಿಸಲು ಯತ್ನಿಸುತ್ತಿರುವುದನ್ನು ವಿರೋಧಿಸಿ  ಆ.೨ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. 
    ಬೊಮ್ಮನಕಟ್ಟೆ ವಾರ್ಡ್‌ ನಂ.೨೩ರಲ್ಲಿರುವ ಸರ್ವೆ ನಂ.೯೧ರ ಬಡಾವಣೆಯಲ್ಲಿ ವಿ. ಗುರುವಯ್ಯನ ಹೆಸರಿನಲ್ಲಿರುವ ಖಾತೆ ನಂ.೧೨೦೨/೩೮, ಸೈಟ್‌ ನಂ.೩೮ನ್ನು ಅಕ್ರಮವಾಗಿ ಅತಿಕ್ರಮಿಸಿ ಕಬಳಿಸಲು ಯತ್ನಿಸುತ್ತಿದ್ದು, ಇದನ್ನು ವಿರೋಧಿಸಿ ನಗರಸಭೆ ಮುಂಭಾಗ ಬೆಳಿಗ್ಗೆ ೧೦.೩೦ಕ್ಕೆ ಧರಣಿ ಸತ್ಯಾಗ್ರಹ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ವಾರ್ಷಿಕ ೩೬ ಸಾವಿರ ಟನ್‌ ಉತ್ಪನ್ನ ಸಿದ್ದಪಡಿಸುವ ಬಾರ್‌ಮಿಲ್‌

    ಭದ್ರಾವತಿ, ಆ. ೧: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ. ಹಲವು ಪ್ರಮುಖ ಘಟಕಗಳಿದ್ದು, ಈ ಪೈಕಿ ಬಾರ್‌ ಮಿಲ್‌ ಸಹ ಒಂದಾಗಿದೆ.  ಈ ಘಟಕದಲ್ಲಿ ಸದ್ಯಕ್ಕೆ ಕಬ್ಬಿಣದ ರೌಂಡ್ಸ್‌  ಮತ್ತು ಬಿಲೆಟ್ಸ್‌ ಮಾದರಿ ಉತ್ಪನ್ನಗಳನ್ನು ಸಿದ್ದಪಡಿಸಲಾಗುತ್ತಿದೆ.
    ಬಾರ್‌ ಮಿಲ್‌ನಲ್ಲಿ ಒಂದು ಸ್ಟಾಂಡ್‌ ಅಳವಡಿಸಲಾಗಿದ್ದು, ವಾರ್ಷಿಕ ೩೬ ಸಾವಿರ ಟನ್‌ ಉತ್ಪನ್ನಗಳನ್ನು ಸಿದ್ದಪಡಿಸುವ ಸಾಮರ್ಥ್ಯ ಹೊಂದಿದೆ. ರೈಲ್ವೆ ಇಲಾಖೆ, ರಕ್ಷಣಾ ಇಲಾಖೆಗಳಿಗೆ ಅಗತ್ಯವಿರುವ ಹಾಗು ಮಾರುಕಟ್ಟೆಯಿಂದ ಬೇಡಿಕೆ ಬರುವ ಉತ್ಪನ್ನಗಳನ್ನು ಮಾತ್ರ ಸಿದ್ದಪಡಿಸಲಾಗುತ್ತದೆ. ಈ ಘಟಕದಲ್ಲಿ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಒಳಗೊಂಡಂತೆ ಸುಮಾರು ೩೫೦ ರಿಂದ ೪೦೦ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  
    ಕಚ್ಚಾ ಸಾಮಾಗ್ರಿಗಳ ಕೊರತೆಯಿಂದಾಗಿ ಇತ್ತೀಚೆಗೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಕಚ್ಛಾ ಸಾಮಾಗ್ರಿಗಳು ಪೂರೈಕೆಯಾಗಲಿದ್ದು, ಆ.೧೦ರಿಂದ ಘಟಕ ಪುನಃ ಕಾರ್ಯಾರಂಭಗೊಳ್ಳಲಿದೆ.

ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಒಂದು ಹಂತದಲ್ಲಿ ಜಯ : ಆ.೧೦ರಿಂದ ಬಾರ್‌ಮಿಲ್ ಘಟಕ ಆರಂಭ

ಪ್ರಕಟಣೆ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಸಂಸದ ಬಿ.ವೈ ರಾಘವೇಂದ್ರ ಕೃತಜ್ಞತೆ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ.
    ಭದ್ರಾವತಿ, ಆ. ೧ : ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವುದು, ಅಗತ್ಯವಿರುವ ಬಂಡವಾಳ ತೊಡಗಿಸುವುದು ಹಾಗು ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಸುಮಾರು ೭ ತಿಂಗಳಿನಿಂದ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಇದೀಗ ಒಂದು ಹಂತದಲ್ಲಿ ಫಲ ಲಭಿಸಿದೆ. ಉದ್ಯೋಗ ಕಡಿತದಿಂದ ಸಂಕಷ್ಟಕ್ಕೆ ಒಳಗಾಗಿರುವ ಗುತ್ತಿಗೆ ಕಾರ್ಮಿಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
    ಈ ಹಿಂದೆ ಕೇಂದ್ರ ಸರ್ಕಾರ ನೀತಿ ಆಯೋಗದ ನಿರ್ದೇಶನದ ಮೇರೆಗೆ ವಿಐಎಸ್‌ಎಲ್ ಕಾರ್ಖಾನೆಯನ್ನು ಬಂಡವಾಳ ಹಿಂಪಡೆಯುವ ಕಾರ್ಖಾನೆಗಳ ಸಾಲಿನಲ್ಲಿ ಸೇರ್ಪಡೆಗೊಳಿಸಿ ಖಾಸಗೀಕರಣಗೊಳಿಸಲು ಮುಂದಾಗಿತ್ತು. ಆದರೆ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಬಂಡವಾಳಶಾಹಿಗಳು ಮುಂದೆಬಾರದ ಹಿನ್ನಲೆಯಲ್ಲಿ ಕಳೆದ ಸುಮಾರು ೭ ತಿಂಗಳ ಹಿಂದೆ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ತೀರ್ಮಾನ ಕೈಗೊಳ್ಳಲಾಗಿತ್ತು. ಇದರ ವಿರುದ್ಧ ಗುತ್ತಿಗೆ ಕಾರ್ಮಿಕ ಸಂಘಟನೆಗಳು ಕಾರ್ಖಾನೆ ಮುಂಭಾಗ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಇಂದಿಗೂ ಮುಂದುವರೆದಿದೆ.  
    ಎದೆಗುಂದದೆ ಒಗ್ಗಟ್ಟಿನ ಹೋರಾಟ :
    ಸುಮಾರು ೭ ತಿಂಗಳು ಕಳೆದರೂ ಸಹ ಗುತ್ತಿಗೆ ಕಾರ್ಮಿಕರು ಧೈರ್ಯ ಕಳೆದುಕೊಳ್ಳದೆ ಒಗ್ಗಟ್ಟಿನಿಂದ ಹೋರಾಟ ಮುನ್ನಡೆಸುತ್ತಿದ್ದು, ಬೆಂಗಳೂರು ವಿಧಾನಸೌಧ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿವರೆಗೂ ಪಾದಯಾತ್ರೆ, ಬೈಕ್ ರ‍್ಯಾಲಿ, ದೆಹಲಿಯಲ್ಲಿ ಹೋರಾಟ, ಮೈಸೂರು ಮಹಾರಾಜರ ವಂಶಸ್ಥರ ಗಮನ ಸೆಳೆಯಲು ಮೈಸೂರಿನಲ್ಲಿ ಹೋರಾಟ, ಭದ್ರಾವತಿ ಬಂದ್, ಬೃಹತ್ ಜಾಥಾ, ರಸ್ತೆ ತಡೆ, ಸಹಿ ಅಭಿಯಾನ, ಪತ್ರ ಚಳುವಳಿ ಸೇರಿದಂತೆ ಹಲವು ಬಗೆಯ ಹೋರಾಟಗಳನ್ನು ಕೈಗೊಳ್ಳಲಾಗಿದೆ.
    ಹೋರಾಟದ ನಡುವೆ ರಾಜ್ಯದ ಪ್ರಮುಖ ಮಠಗಳಿಗೆ ತೆರಳಿ ಮಠಾಧೀಶರುಗಳಿಗೆ, ಮಾಜಿ ಪ್ರಧಾನಿ, ಕೇಂದ್ರ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳಿಗೆ ಮನವಿ ಸಲ್ಲಿಸಿ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆದು ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಲಾಗಿದೆ.
    ವಿವಿಧ ಧರ್ಮಗಳ ಧರ್ಮಗುರುಗಳು, ಮಠಾಧೀಶರು, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಆಗ್ರಹಿಸಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಕೈಜೋಡಿಸಿವೆ. ಆದರೂ ಸಹ ಕೇಂದ್ರ ಸರ್ಕಾರವಾಗಲಿ, ಉಕ್ಕು ಪ್ರಾಧಿಕಾರವಾಗಲಿ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸಿರಲಿಲ್ಲ. ಈ ನಡುವೆ ಕಾರ್ಖಾನೆಯಲ್ಲಿರುವ ಘಟಕಗಳು ಒಂದಾದ ನಂತರ ಒಂದರಂತೆ ಉತ್ಪಾದನೆ ಸ್ಥಗಿತಗೊಳಿಸುವ ಮೂಲಕ ಕಾರ್ಖಾನೆ ಸಂಪೂರ್ಣವಾಗಿ ಮುಚ್ಚುವ ಭೀತಿ ಎದುರಾಗಿತ್ತು.  

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಬಾರ್ ಮಿಲ್ ಘಟಕ ಆ.೧೦ರಿಂದ ಪುನಃ ಕಾರ್ಯಾರಂಭಗೊಳಿಸುವ ಸಂಬಂಧ ಘಟಕದ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಪ್ರತಿ ವ್ಯಾಪಕವಾಗಿ ಹರಿದಾಡುತ್ತಿದೆ.
    ಆ.೧೦ರಿಂದ ಬಾರ್‌ಮಿಲ್ ಘಟಕ ಆರಂಭ:
    ಇದೀಗ ಮುಚ್ಚಲ್ಪಟ್ಟರುವ ಬಾರ್‌ಮಿಲ್ ಘಟಕ ಆರಂಭಗೊಳ್ಳುತ್ತಿದೆ. ಆ.೧೦ರಿಂದ ಪುನಃ ಕಾರ್ಯಾರಂಭಗೊಳಿಸುವ ಸಂಬಂಧ ಘಟಕದ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಪ್ರತಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದರಿಂದಾಗಿ ಗುತ್ತಿಗೆ ಕಾರ್ಮಿಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಕೆಲವು ವರ್ಷಗಳಿಂದ ಗುತ್ತಿಗೆ ಕಾರ್ಮಿಕರಿಗೆ ತಿಂಗಳು ಪೂರ್ತಿ ಕೆಲಸ ಲಭಿಸುತ್ತಿಲ್ಲ. ಇತ್ತೀಚೆಗೆ ಕೇವಲ ೧೩ ದಿನ ಮಾತ್ರ ಕೆಲಸ ಲಭಿಸುತ್ತಿದ್ದು, ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.
    ಸಂಸದ ಬಿ.ವೈ ರಾಘವೇಂದ್ರ ಕೃತಜ್ಞತೆ :
    ಈ ಕುರಿತು ಸಂಸದ ಬಿ.ವೈ ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, 'ಮತ್ತೆ ಶುರುವಾಗುತ್ತಿದೆ ಭದ್ರಾವತಿಯ ಸುವರ್ಣಯುಗ!, ಮತ್ತೆ ಫಳಫಳಿಸಲಿದೆ ಕಪ್ಪು ಚಿನ್ನ!, ವಿಐಎಸ್‌ಎಲ್ ಮೈಕೊಡವಿ ಮೇಲೇಳುತ್ತಿದೆ!' ಎಂಬ ತಲೆ ಬರಹದೊಂದಿಗೆ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
    ಉತ್ಪಾದನೆ ಶುರುಮಾಡಲು ಸೈಲ್ ಮ್ಯಾನೇಜ್ಮೆಂಟ್ ಒಪ್ಪಿಕೊಂಡಿದೆ. ಇದೇ ತಿಂಗಳ ೧೦ಕ್ಕೆ ಬಾರ್ ಮಿಲ್ ಶುರುವಾಗಿ, ಅದಾದ ಕೆಲದಿನದಲ್ಲೇ ಪೂರ್ಣ ಪುನರಾರಂಭ!. ಸವಾಲುಗಳನ್ನೆಲ್ಲಾ ಎದುರಿಸಿ ಗೆದ್ದ ಹೆಮ್ಮೆ ಶಿವಮೊಗ್ಗ ಜಿಲ್ಲೆ ಹಾಗೂ ಭದ್ರಾವತಿ ನಗರದ ಜನರದ್ದು, ಭರವಸೆ ಕಳೆದುಕೊಳ್ಳದ ನೌಕರ ಸಮುದಾಯದ್ದು. ಇದಕ್ಕೆ ಕಾರಣರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ,  ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ಪ್ರಕಾಶ್ ನಿಧನ


ಪ್ರಕಾಶ್
    ಭದ್ರಾವತಿ, ಆ. ೧ : ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ, ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಿವಾಸಿ ಪ್ರಕಾಶ್(೫೨) ಮಂಗಳವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರ ಇದ್ದರು. ಹಲವಾರು ವರ್ಷಗಳಿಂದ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಕಾಶ್ ನಿಧನಕ್ಕೆ ಗುತ್ತಿಗೆ ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

Monday, July 31, 2023

ಸಮಸ್ಯೆಗಳು ಹೊಸದಲ್ಲ, ಪರಿಹಾರ ಕಂಡುಕೊಳ್ಳುವ ದಾರಿಯಲ್ಲಿ ಸಾಗಲಿ : ನಾಡೋಜ ಡಾ. ಗೊ.ರು ಚನ್ನಬಸಪ್ಪ

ಭದ್ರಾವತಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಬಂಟರ ಸಂಘದ ಸಹಕಾರದೊಂದಿಗೆ ನ್ಯೂಟೌನ್‌ ಬಂಟರ ಭವನದಲ್ಲಿ ದತ್ತಿ ದಾನಿ  ಎಂ.ವಿರುಪಾಕ್ಷಪ್ಪ ಮತ್ತು ಕುಟುಂಬದವರು ಆಯೋಜಿಸಿದ್ದ  ಲಿಂ.ಲಕ್ಕಮ್ಮ ಮತ್ತು ಮಂಜಪ್ಪ ಸಂಸ್ಕರಣ ದತ್ತಿ ಹಾಗು ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮ ಬಂಟರ ಸಂಘದ ಅಧ್ಯಕ್ಷ ಬಿ. ದಿವಾಕರ ಶೆಟ್ಟಿ ಉದ್ಘಾಟಿಸಿದರು.
    ಭದ್ರಾವತಿ :  ಮಹಿಳೆಯರಿಗೆ ಸಮಸ್ಯೆ ಎಂಬುದು ಹೊಸದಲ್ಲ. ಬೆಂಕಿ ಇರುವಲ್ಲಿ ಬಿಸಿ, ಮಂಜು ಇರುವಲ್ಲಿ ತಂಪು ಇರಲೇಬೇಕು. ಅದರಂತೆ ಹೆಣ್ಣು ಎಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತದೆ. ಇದನ್ನು ನಾವುಗಳು ಮೊದಲು ಅರ್ಥಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಾರಿಯಲ್ಲಿ ಸಾಗಬೇಕಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ ಗೌರವ ಸಲಹೆಗಾರರಾದ ನಾಡೋಜ ಡಾ.ಗೊ.ರು ಚನ್ನಬಸಪ್ಪ ಹೇಳಿದರು.
    ಅವರು ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಬಂಟರ ಸಂಘದ ಸಹಕಾರದೊಂದಿಗೆ ನ್ಯೂಟೌನ್‌ ಬಂಟರ ಭವನದಲ್ಲಿ ದತ್ತಿ ದಾನಿ  ಎಂ.ವಿರುಪಾಕ್ಷಪ್ಪ ಮತ್ತು ಕುಟುಂಬದವರು ಆಯೋಜಿಸಿದ್ದ  ಲಿಂ.ಲಕ್ಕಮ್ಮ ಮತ್ತು ಮಂಜಪ್ಪ ಸಂಸ್ಕರಣ ದತ್ತಿ ಹಾಗು ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಮಹಿಳೆಯರ ಸಮಸ್ಯೆಗಳಿಗೆ ಸ್ವ ಹಿತಾಸಕ್ತಿ, ಸ್ವಾರ್ಥತೆ, ಪಟ್ಟಭದ್ರ ಹಿತಾಸಕ್ತಿ ಸೇರಿದಂತೆ ಇತರ ಸಂಗತಿಗಳು ಕಾರಣಗಳಾಗಿವೆ. ಅಲ್ಲದೆ ಈಕೆ ತಾನೇ ಹೆಣೆದುಕೊಂಡ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಾಳೆ. ಅದರಿಂದ ಹೊರ ಬರುವ ದಾರಿಯನ್ನು ಆಕೆಯೇ ಹುಡುಕಿಕೊಳ್ಳಬೇಕಾಗಿದೆ ಎಂದರು.
    ಮಹಿಳೆಯ ಸುತ್ತಮುತ್ತಲಿನ ಪರಿಸರದಿಂದಲೇ ಆಕೆಯ ಸಮಸ್ಯೆಗಳನ್ನು ಅರಿತುಕೊಳ್ಳಬಹುದಾಗಿದೆ. ಪ್ರತಿ ಮಹಿಳೆಯ ಸಮಸ್ಯೆ ವಿಭಿನ್ನವಾಗಿದ್ದು,  ವಿಜ್ಞಾನಿಗಳು ಸಮಾಜದಲ್ಲಿ ಮಹಿಳೆಯರ ಸಮಸ್ಯೆಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಿದ್ದಾರೆ. ಪ್ರಾಕೃತಿಕ ಅಥವಾ ನೈಸರ್ಗಿಕ, ಕೌಟುಂಬಿಕ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಮಹಿಳೆ ಎದುರಿಸುತ್ತಿದ್ದಾಳೆ. ಕೆಲವು ಬಾಹ್ಯ ಆದರೆ ಇನ್ನು ಕೆಲವು ಆಂತರಿಕ ಸಮಸ್ಯೆಗಳಾಗಿವೆ. ಇವುಗಳನ್ನು ಅಕೆಯೇ ಬಗೆಹರಿಸಿಕೊಳ್ಳಬೇಕು ಎಂದರು.
    ಬಂಟರ ಸಂಘದ ಅಧ್ಯಕ್ಷ  ಬಿ. ದಿವಾಕರ ಶೆಟ್ಟಿ ಕಾರ್ಯಕ್ರ ಉದ್ಘಾಟಿಸಿದರು.  ಎನ್.ಎಸ್  ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್, ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ದತ್ತಿ ದಾನಿ  ಎಂ. ವಿರುಪಾಕ್ಷಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.      
    ಕದಳಿ ವೇದಿಕೆ ಸದಸ್ಯರುಗಳಿಂದ ವಚನ ಗಾಯನ ನಡೆಯಿತು. ವಿ. ರಾಜಶೇಖರಪ್ಪ ಸ್ವಾಗತಿಸಿದರು. ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಪ್ರಸ್ತಾವಿಕ ನುಡಿಗಳನ್ನಾಡಿದರು.
    ಸಾಹಿತಿ ಅರಳೇಹಳ್ಳಿ ಅಣ್ಣಪ್ಪ ಅತಿಥಿಗಳ ಪರಿಚಯ ನಡೆಸಿ ಕೊಟ್ಟರು.  ನಂದಿನಿ ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿ, ಕತ್ತಲಗೆರೆ ತಿಮ್ಮಪ್ಪ ವಂದಿಸಿದರು.

ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ : ಡಾ. ಸಿದ್ದಲಿಂಗಮೂರ್ತಿ

ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ  ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್‌ ಶ್ರೀಹರ್ಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜು. ೩೧ : ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ ಪ್ರಾಂಶುಪಾಲ ಡಾ. ಸಿದ್ದಲಿಂಗಮೂರ್ತಿ ಕರೆ ನೀಡಿದರು.
    ಅವರು ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
    ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾಗಿದೆ.  ಇಂದು ದೃಶ್ಯ ಮಾಧ್ಯಮಗಳಿಗೆ ಜನರು ಜೋತು ಬಿದ್ದಿದ್ದು, ಈ ನಡುವೆಯೂ ಪತ್ರಿಕೆಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸುತ್ತಿವೆ. ಯಾವುದೇ ಸ್ವಾರ್ಥವಿಲ್ಲದೆ ಸಮಾಜದ ಸ್ವಾಸ್ಥ್ಯಕ್ಕಾಗಿ  ಪತ್ರಕರ್ತರು ಇದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆಗಳನ್ನು ಓದುವ ಮೂಲಕ ಸಮಾಜದ ಎಲ್ಲಾ ವಿಚಾರಗಳ ಕುರಿತು ಅರಿವು ಹೊಂದಬೇಕೆಂದರು.
    ಪತ್ರಿಕಾಭವನ ಟ್ರಸ್ಟ್‌ ಅಧ್ಯಕ್ಷ ಕಣ್ಣಪ್ಪ, ಹಿರಿಯ ಪತ್ರಕರ್ತ ಎನ್. ಬಾಬು, ಜಿಲ್ಲಾ ಸಂಘದ ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಅರುಣ್‌, ಆರ್.ಎಸ್‌ ಹಾಲಪ್ಪ ಸೇರಿದಂತೆ ಇನ್ನಿತರರು ಮಾತನಾಡಿ, ಇಂದು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಗೆ ನೀಡುವಷ್ಟು ಮಹತ್ವ ಪತ್ರಿಕೆಗಳಿಗೂ ನೀಡಬೇಕು. ಆ ಮೂಲಕ ತಮ್ಮ ಭವಿಷ್ಯಕ್ಕೆ ಸಹಕಾರಿಯಾಗಿರುವ ವಿಚಾರಗಳನ್ನು ಅರಿತುಕೊಳ್ಳಬೇಕೆಂದರು.
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್‌ ಶ್ರೀಹರ್ಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಪತ್ರಿಕಾ ದಿನಾಚರಣೆ ಅಂಗವಾಗಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಮ್ಮಿಕೊಳ್ಳಲಾಗಿದ್ದ ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ಮಾಯಾವತಿ, ಕೃಪಾಶ್ರೀ, ಆರ್. ಮೇಘನಾ, ಸುಚಿತ್ರ ಹಾಗು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಎಚ್‌.ಎಸ್‌ ರಚನಾ, ಎಸ್. ದೀಕ್ಷಿತಾ, ಓ. ಪೂಜಾ ಮತ್ತು ಎಚ್.ಎಸ್‌ ಸಂಜನಾ ಅವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
    ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್‌ ಸ್ವಾಗತಿಸಿದರು. ಕಾಲೇಜಿನ ಚನ್ನಯ್ಯ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಖಜಾಂಚಿ ಅನಂತಕುಮಾರ್‌ ವಂದಿಸಿದರು.
    ಸಂಘದ ಹಿರಿಯ ಹಾಗು ಕಿರಿಯ ಸದಸ್ಯರು, ಕಾಲೇಜಿನ ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು ಹಾಗು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.