![](https://blogger.googleusercontent.com/img/a/AVvXsEiGw97ggWkHhLMxhiL7lRD4Kv94NMNMagq103B6oVuEH3sQWYYaTvlomCVrL-7MhZJ5GKuiUFvNIF12g0VAanymSlPkqr5ITbmTFrMGTUe6RAMU1ZLTVLqH_zXWPRWYT_igKuVZdcCKXyBGsgCxiWt-XbqSEG2xnzqSF6XY5zx2HqRvcFt7CSjdWBgdCRRS=w400-h261-rw)
ಭದ್ರಾವತಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು.
ಭದ್ರಾವತಿ, ಆ. ೧೦: ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಲಕ್ಷ್ಯ ಹಾಗು ಸರ್ಕಾರಿ ಶಾಲಾ-ಕಾಲೇಜುಗಳ ಅವ್ಯವಸ್ಥೆಗಳ ವಿರುದ್ಧ ಆ.೧೪ರಂದು ಪ್ರತಿಭಟನಾ ಧರಣಿ ಸತ್ಯಾಗ್ರಹ ಹಾಗು ಆ.೧೫ರಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಹೇಳಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ೧೯೪೭ರಲ್ಲಿ ಭಾರತ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಬಂತು ಎಂಬುದು ನಿಜವಾಗಿದ್ದರು. ಸ್ವಾತಂತ್ರ್ಯ ಎಂದರೇ ಪ್ರತಿ ವ್ಯಕ್ತಿಗೂ ಸಮಾನತೆ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಸಮಭಾಗ ಇದ್ದಾಗ ಮಾತ್ರ ಬಹಳ ಮುಖ್ಯವಾಗಿ ಶಿಕ್ಷಣ, ಸೂರು, ಆರೋಗ್ಯ ಮತ್ತು ರಕ್ಷಣೆಯು ಮೂಲಭೂತ ಹಕ್ಕುಗಳಾಗಿದ್ದು, ಸ್ವಾತಂತ್ರ್ಯ ಬಂದು ಸುಮಾರು ೭೬ ವರ್ಷಗಳಾದರೂ ತಾರತಮ್ಯದಿಂದ ಇಂದಿಗೂ ಸಹ ಉಚಿತ ಶಿಕ್ಷಣ, ಆರೋಗ್ಯ, ಜೀವಿಸಲು ಸೂರು ಕಲ್ಪಿಸದಾ ಅನೇಕ ಸರ್ಕಾರಗಳು ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ ಎಂಬ ಅರ್ಥವನ್ನು ಅನರ್ಥಗೊಳಿಸಿರುವುದು ಖಂಡನೀಯವಾಗಿದೆ ಎಂದರು.
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣವನ್ನು ಗುಣಮಟ್ಟದಿಂದ ನೀಡದೇ ಪ್ರತಿ ವಿಷಯವಾರು ಶಿಕ್ಷಕರಿಲ್ಲದೆ ಕಟ್ಟಡಗಳ ಶಿಥಿಲಾವಸ್ಥೆಗಳನ್ನು ಸರಿಪಡಿಸದೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಮತ್ತು ಪ್ರೌಷ್ಠಿಕಾಂಶಕ್ಕಾಗಿ ಬಡ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಪೌಷ್ಠಿಕಾಂಶವಿಲ್ಲದೆ ಅರ್ಧಂಬರ್ಧ ನೀಡುತ್ತಾ ಬಡ ಮಕ್ಕಳಿಗೆ ಮೋಸ ಮಾಡುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದರು.
ದೇಶದ ಕೆಲವು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದಿಂದ ಮಾನವ ಹಕ್ಕುಗಳ ರಕ್ಷಣೆ ಮಾಡುತ್ತಿದ್ದು, ರಾಜದಲ್ಲಿ ಇದುವರೆಗೂ ಈ ಬಗ್ಗೆ ಸರಿಯಾದ ಅಧ್ಯಯನ ನಡೆದಿರುವುದಿಲ್ಲ. ಸರ್ಕಾರಿ ಶಿಕ್ಷಕರು ತಮ್ಮ ವೇತನಕ್ಕಾಗಿ ಶಾಲೆಗಳನ್ನು ಉಳಿಸಿಕೊಂಡಿರುವುದು ಶೋಚನೀಯ ಸಂಗತಿಯಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರು ತಮ್ಮ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸುವುದಾದರೆ ಇವರ ಸೇವೆ ಸರ್ಕಾರಿ ಶಾಲೆಗೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ಇನ್ನೂ ದುರಂತ ಎಂದರೆ ಸರ್ಕಾರಿ ನೌಕರರ ಸಂಘದಲ್ಲಿ ಇರುವ ಕೆಲ ಶಿಕ್ಷಕರು ತರಗತಿಯಲ್ಲಿ ಪಾಠ ಪ್ರವಚನ ಕೈಗೊಳ್ಳದೆ ಮನಸೋ ಇಚ್ಛೆ ನಡೆದುಕೊಂಡು ಪ್ರತಿ ತಿಂಗಳು ವೇತನ ಪಡೆಯುತ್ತಿದ್ದು, ಕನಿಷ್ಠ ಕಾಳಜಿಯಿಂದ ಬಡ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡದೆ ಮೋಸ ಮಾಡುತ್ತಿರುವುದು ಯಾವುದೇ ಸರ್ಕಾರ ಜವಾಬ್ದಾರಿಯಿಂದ ಇವನ್ನು ಕೇಳದೇ ಇರುವುದು ಬಡ ಮಕ್ಕಳಿಗೆ ಮಾಡಿದ ಮೋಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ಎಲ್ಲಾ ಸರ್ಕಾರಿ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಮತ್ತು ಸಿ.ಸಿ ಟಿವಿ ಅಳವಡಿಸಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗುವಂತೆ ಮುಖ್ಯಮಂತ್ರಿಗಳಿಗೆ ಹಾಗು ಶಿಕ್ಷಣ ಸಚಿವರಿಗೆ ಈ ಮೂಲಕ ಆಗ್ರಹಿಸುತ್ತೇನೆ ಎಂದರು.
ನಗರದ ಹೃದಯ ಭಾಗದಲ್ಲಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ೨೦೧೭ರಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಆರಂಭಗೊಂಡಿದ್ದು, ಇದುವರೆಗೂ ಪೂರ್ಣಗೊಳಿಸದೆ ನಿರ್ಲಕ್ಷ್ಯ ವಹಿಸಸಲಾಗಿದೆ. ಇದನ್ನು ಸಮಿತಿ ಖಂಡಿಸುವ ಜೊತೆಗೆ ತಕ್ಷಣ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗು ಈ ಭವನದ ಉದ್ಘಾಟನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆರವೇರಿಸುಂತೆ ಆಗ್ರಹಿಸುತ್ತೇನೆ ಎಂದರು.
ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್ಕುಮಾರ್, ಪ್ರಧಾನ ಕಾರ್ಯದರ್ಶಿ ಅಕ್ರಮ್ ಖಾನ್, ಬ್ರಹಲಿಂಗಯ್ಯ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.