Friday, September 22, 2023

ಜಾತ್ರೆ ರೂಪದಲ್ಲಿ ನ.4, 5 ವಿಐಎಸ್ಎಲ್ ಶತಮಾನೋತ್ಸವ ಸಂಭ್ರಮಾಚರಣೆಗೆ ಭರದ ಸಿದ್ದತೆ

ಕಾರ್ಮಿಕ ವಲಯದಲ್ಲಿಯೇ ಅಸಮಾಧಾನ, ಸಂಭ್ರಮಾಚರಣೆ ಫಲ ನೀಡುವುದೇ?

ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಸಂಭ್ರಮಾಚರಣೆ ಆಮಂತ್ರಣ ಪತ್ರ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ದೊಡ್ಡಣ್ಣ ಮತ್ತು ತಂಡದವರು ನೀಡಿ ಆಹ್ವಾನಿಸುತ್ತಿರುವುದು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಅರಗ ಜ್ಞಾನೇಂದ್ರ ಇತರರು ಉಪಸ್ಥಿತರಿದ್ದರು.

    ಭದ್ರಾವತಿ : ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಹಾಗು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡು ಶತಮಾನ ಪೂರೈಸಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇದೀಗ ಸಂಕಷ್ಟದಲ್ಲಿ ಮುನ್ನಡೆಯುತ್ತಿದ್ದು, ಸಂಪೂರ್ಣವಾಗಿ ಮುಚ್ಚುವ ಭೀತಿ ಎದುರಾಗಿದೆ. ಈ ನಡುವೆ ಇದೀಗ ಕಾರ್ಖಾನೆ ಶತಮಾನೋತ್ಸವ ಸಂಭ್ರಮಾಚರಣೆ ನಡೆಯಲಿದ್ದು, ಇದಕ್ಕೆ ಕಾರ್ಮಿಕ ವಲಯದಲ್ಲಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ.

    ಕಾರ್ಖಾನೆಯ ನಿವೃತ್ತ ನೌಕರ, ಚಲನಚಿತ್ರ ನಟ ದೊಡ್ಡಣ್ಣ ಅವರು ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಶತಮಾನೋತ್ಸವ ಸಂಭ್ರಮಾಚರಣೆ ಕೈಗೊಂಡಿದ್ದಾರೆ. ಸಂಭ್ರಮಾಚರಣೆಗಾಗಿ ಸುಮಾರು 6 ತಿಂಗಳಿನಿಂದ ನಿರಂತರವಾಗಿ ಶ್ರಮವಹಿಸಿದ್ದಾರೆ. ಪೂರ್ವ ಸಿದ್ದತೆಗಳನ್ನು ಕೈಗೊಂಡಿದ್ದಾರೆ.

    ಮೈಸೂರು ಮಹಾರಾಜರ ವಂಶಸ್ಥರ 4 ನಾಲ್ಕು ತಲೆಮಾರುಗಳ ಪರಂಪರೆಯೊಂದಿಗೆ ಸಂಬಂಧ ಹೊಂದಿರುವ ಕಾರ್ಖಾನೆಯ ಶತಮಾನೋತ್ಸವ ಸಂಭ್ರಮಾಚರಣೆ ಜಾತ್ರೆ ರೂಪದಲ್ಲಿ ನಡೆಯಲಿದ್ದು, ಮೈಸೂರು ಮಹಾರಾಜ ಶ್ರೀ ಯದುವೀರ್ ಒಡೆಯರ್ ಅವರು ನ.4ರಂದು ಉದ್ಘಾಟಿಸಲಿದ್ದಾರೆ. ಎರಡು ದಿನ ಸಂಭ್ರಮಾಚರಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರು, ರಾಜ್ಯದ ಸಂಸದರು, ಶಾಸಕರು, ರಾಜ್ಯದ ವಿವಿಧ ಮಠಗಳ ಮಠಾಧೀಶರು, ಹೋರಾಟದ ಹಿರಿಯ ಮುತ್ಸದ್ದಿಗಳು, ಚಲನಚಿತ್ರ ನಟರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಬಹುತೇಕ ಆಮಂತ್ರಣ ಪತ್ರ ವಿತರಿಸಲಾಗಿದ್ದು, ದೊಡ್ಡಣ ಅವರೇ ಖುದ್ದಾಗಿ ತೆರಳಿ ಆಮಂತ್ರಣ ವಿತರಿಸುತ್ತಿರುವುದು ವಿಶೇಷತೆಯಾಗಿದೆ.

    ಶತಮಾನೋತ್ಸವ ಸಂಭ್ರಮಾಚರಣೆಗಾಗಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಕಾಯಂ, ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಒಳಗೊಂಡಿದ್ದಾರೆ. ಈ ನಡುವೆ ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹಿಸದೆ ಕೆಲವೇ ಕೆಲವು ಮಂದಿ ತಮ್ಮದೇ ಆದ ವೈಯಕ್ತಿಕ ನೆಲೆಗಟ್ಟಿನಲ್ಲಿ ನಿರ್ಧಾರ ಕೈಗೊಂಡು ಸಂಭ್ರಮಾಚರಣೆ ನಡೆಸುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.

    ಸಂಭ್ರಮಾಚರಣೆ ಫಲ ನೀಡುವುದೇ ?:

    ಕಾರ್ಖಾನೆ ಮುಚ್ಚುವ ಆದೇಶ ಕೈಬಿಡುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಹಾಗು ಕಾರ್ಮಿಕರ ಹಿತ ಕಾಪಾಡುವಂತೆ ಆಗ್ರಹಿಸಿ ಕಳೆದ ಸುಮಾರು 9 ತಿಂಗಳಿನಿಂದ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ವಿಭಿನ್ನ ರೀತಿಯ ಹಲವು ಹಂತದ ಹೋರಾಟಗಳು ನಡೆದಿವೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

    ಹೋರಾಟ ಇಂದಿಗೂ ಮುನ್ನಡೆಯುತ್ತಿದ್ದು, ಬಹುತೇಕ ಗುತ್ತಿಗೆ ಕಾರ್ಮಿಕರು ಕೆಲಸವಿಲ್ಲದೆ ಬೀದಿಪಾಲಾಗಿದ್ದಾರೆ. ಇನ್ನೂ ಕೆಲವು ಕಾರ್ಮಿಕರು ಅತಿ ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದು, ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಾರ್ಖಾನೆ ವಲಯದಲ್ಲಿ ಸಂಭ್ರಮ ಮರೆಯಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜಾತ್ರೆ ರೂಪದಲ್ಲಿ ಶತಮಾನೋತ್ಸವ ಸಂಭ್ರಮಾಚರಣೆ ನಡೆಸುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ನಿರಂತರ ಹೋರಾಟದಿಂದ ಸಾಧ್ಯವಾಗದ್ದು, ಸಂಭ್ರಮಾಚರಣೆಯಿಂದ ಸಾಧ್ಯವೇ? ಎಂಬ ಪ್ರಶ್ನೆ ಇದೀಗ ಕಾರ್ಮಿಕರಲ್ಲಿ ಕೇಳಿ ಬರುತ್ತಿದೆ.

ತಮಿಳ್ ಸಂಗಮ್ ಅಧ್ಯಕ್ಷರಾಗಿ ಕೆ. ಚಂದ್ರಶೇಖರ್

ಕೆ. ಚಂದ್ರಶೇಖರ್

    ಭದ್ರಾವತಿ: ನಗರದ ತರೀಕೆರೆ ರಸ್ತೆಯಲ್ಲಿರುವ ತಮಿಳ್ ಸಂಗಮ್ ಅಧ್ಯಕ್ಷರಾಗಿ ಯುವ ಮುಖಂಡ ಕೆ. ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.

    ಇತ್ತೀಚೆಗೆ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಜಿ.ಎನ್ ರವಿಕುಮಾರ್, ಕಾರ್ಯದರ್ಶಿಯಾಗಿ ವಿ. ಮಣಿ, ಜಂಟಿ ಕಾರ್ಯದರ್ಶಿಗಳಾಗಿ ವಿ. ರಾಜ, ಶಾಮರಾಜ್(ಸೋಮು) ಹಾಗು ಖಜಾಂಚಿಯಾಗಿ ವೀರಭದ್ರನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿ. ವಡಿವೇಲು, ಜಿ. ಸುರೇಶ್ ಕುಮಾರ್, ದಯಾನಂದ, ಎಂ.ಎಲ್‌ ನಾರಾಯಣಸ್ವಾಮಿ, ಎಂ.ಸುಬ್ರಮಣ್ಯ, ಜಿ.ಎನ್ ಸತ್ಯಮೂರ್ತಿ, ಸಿ. ವಾಸುವೇವನ್, ಆರ್. ಮುತ್ತುಸ್ವಾಮಿ ಮತ್ತು ವಿ. ಮಂಜುಳ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ತಮಿಳು ಸಮಾಜದ ಪ್ರಮುಖರು ಅಭಿನಂದಿಸಿದ್ದಾರೆ.

Thursday, September 21, 2023

ಸೆ.25ರಂದು ಸರ್ವ ಸದಸ್ಯರ ಮಹಾಸಭೆ


    ಭದ್ರಾವತಿ: ನಗರದ ಚನ್ನಗರಿ ರಸ್ತೆಯ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ಮಹಾಸಭೆ ಸೆ.25ರ ಬೆಳಿಗ್ಗೆ 11 ಗಂಟೆಗೆ ಶ್ರೀ ವೀರಶೈವ ಸಮುದಾಯ ಭವನದಲ್ಲಿ ನಡೆಯಲಿದೆ.

    ಸಂಘದ ಅಧ್ಯಕ್ಷ ರಾಜಕುಮಾರ್ ಕೆ.ಎಚ್ ಅರಳಿಹಳ್ಳಿ ಅಧ್ಯಕ್ಷತೆ ವಹಿಸಲಿದ್ದು. ಸಂಘದ ವಾರ್ಷಿಕ ವರದಿ ಹಾಗು ಲೆಕ್ಕಪತ್ರ ಮಂಡನೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸಭೆ ನಡೆಯಲಿದೆ. ಸದಸ್ಯರು ತಪ್ಪದೇ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ

ಸೆ.23ರಂದು ಸರ್ವ ಸದಸ್ಯರ ಸಭೆ

    ಭದ್ರಾವತಿ: ನಗರದ ಅಪ್ಪರ್ ಹುತ್ತಾ ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಸೆ.23ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿದೆ.

    ಸಂಘದ ಅಧ್ಯಕ್ಷ ಬಿ.ಎಸ್ ಮಲ್ಲೇಶ್ ಅಧ್ಯಕ್ಷತೆ ವಹಿಸಲಿದ್ದು, ಸದಸ್ಯರು ತಪ್ಪದೇ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕಾರ್ಯದರ್ಶಿ ಬಿ.ಜೆ ವೀಣಾ ಕೋರಿದ್ದಾರೆ.

ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರ ವರ್ಗಾವಣೆ ಖಂಡಿಸಿ 2 ದಿನಗಳಿಂದ ಪ್ರತಿಭಟನೆ

    ಭದ್ರಾವತಿ: ತಾಲೂಕಿನ ಅರಳಿಹಳ್ಳಿ ಪ್ರೌಢ ಶಾಲೆ ಮುಖ್ಯಶಿಕ್ಷಕರ ವರ್ಗಾವಣೆ ವಿರೋಧಿಸಿ ಕಳೆದ ಎರಡು ದಿನಗಳಿಂದ ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

    ಶಾಲೆಯಲ್ಲಿ ಕಳೆದ ಸುಮಾರು ೮ ವರ್ಷದಿಂದ ಮೋತಿನಾಯ್ಕರವರು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರನ್ನು ಲಕ್ಕವಳ್ಳಿ ಶಾಲೆಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಶಾಲೆಯ ಮುಂಭಾಗದಲ್ಲಿ ಪೋಷಕರು ಮತ್ತು ಮಕ್ಕಳು ಪ್ರತಿಭಟನೆ ಕೈಗೊಂಡಿದ್ದಾರೆ.



ಭದ್ರಾವತಿ ತಾಲೂಕಿನ ಅರಳಿಹಳ್ಳಿ ಪ್ರೌಢ ಶಾಲೆ ಮುಖ್ಯಶಿಕ್ಷಕರ ವರ್ಗಾವಣೆ ವಿರೋಧಿಸಿ ಕಳೆದ ಎರಡು ದಿನಗಳಿಂದ ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

    ಈ ಬಾರಿ ಶಾಲೆಗೆ ಕಡಿಮೆ ಫಲಿತಾಂಶ ಲಭಿಸಿದ್ದು, ಇದಕ್ಕೆ ಮೋತಿನಾಯ್ಕರವರು ಕಾರಣ ಎಂದು ಇಲಾಖೆ ಅವರನ್ನು ವರ್ಗಾವಣೆ ಮಾಡುತ್ತಿದೆ ಎಂಬುದು ಪೋಷಕರ ಆರೋಪವಾಗಿದೆ. ಮೋತಿನಾಯ್ಕರವರು ಕಳೆದ 8 ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ವರ್ಗಾವಣೆಗೊಳಿಸಿರುವುದು ಸರಿಯಲ್ಲ ಇದಕ್ಕೆ ಕ್ಷೇತ್ರ ಶಿಕ್ಷ ಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ಪಷ್ಟನೆ ನೀಡಬೇಕು. ತಕ್ಷಣ ಸ್ಥಳಕ್ಕೆ ಆಗಮಿಸಬೇಕು. ವರ್ಗಾವಣೆ ರದ್ದುಗೊಳಿಸಬೇಕೆಂದು ಪೋಷಕರು ಬುಧವಾರ ಆಗ್ರಹಿಸಿದ್ದರು.

    ಈ ನಡುವೆ ಗುರುವಾರ ಶಾಲೆಯ ಮಕ್ಕಳು ವರ್ಗಾವಣೆ ವಿರೋಧಿಸಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. ಶಾಲೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Wednesday, September 20, 2023

ಮಹಿಳೆಯರಿಗೆ ಶೇ.33 ಮೀಸಲಾತಿ : ಬಿಜೆಪಿ ಸಂಭ್ರಮಾಚರಣೆ


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೂತನ ಸಂಸತ್ ಭವನದಲ್ಲಿ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.33 ಮೀಸಲಾತಿ ಮಸೂದೆ ಯಶಸ್ವಿಯಾಗಿ ಮಂಡಿಸಿರುವ ಹಿನ್ನಲೆಯಲ್ಲಿ ಭದ್ರಾವತಿ ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಸಂಭ್ರಮಾಚರಣೆ ನಡೆಸಲಾಯಿತು.

    ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೂತನ ಸಂಸತ್ ಭವನದಲ್ಲಿ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.33 ಮೀಸಲಾತಿ ಮಸೂದೆ ಯಶಸ್ವಿಯಾಗಿ ಮಂಡಿಸಿರುವ ಹಿನ್ನಲೆಯಲ್ಲಿ ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಸಂಭ್ರಮಾಚರಣೆ ನಡೆಸಲಾಯಿತು.

    ರಂಗಪ್ಪ ವೃತ್ತದಲ್ಲಿ ಪಕ್ಷದ ಮಹಿಳಾ ಪ್ರಮುಖರು ಮೀಸಲಾತಿ ಮಸೂದೆ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಜೊತೆಗೆ ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಿದರು.

    ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಪಾಟೀಲ್, ಪಕ್ಷದ ಮುಖಂಡರಾದ ಮಂಗೋಟೆ ರುದ್ರೇಶ್, ಮಂಡಲ ಉಪಾಧ್ಯಕ್ಷೆ ಗೌರಮ್ಮ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುಳ ಸೇರಿದಂತೆ ಪಕ್ಷದ ಮಹಿಳಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಸೆ.21ರಂದು ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ

 


    ಭದ್ರಾವತಿ : ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ಆಶ್ರಮದ ವತಿಯಿಂದ ತಮಿಳುನಾಡು ದಿಂಡಿಕಲ್‌ನ ವಂಶಪಾರಂಪರೆ ಸಿದ್ದ ವೈದ್ಯರಾದ ಕೆ. ಮುತ್ತುಕೃಷ್ಣನ್ ಅವರಿಂದ ಜು.21ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಕಾರ್ಯಕ್ರಮ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು ಹಾಗು ದೂರ ದೃಷ್ಠಿ ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ: 9480283030 ಅಥವಾ 9448255544 ಸಂಖ್ಯೆಗೆ ಕರೆ ಮಾಡಬಹುದಾಗಿದೆ.