Tuesday, October 10, 2023

೧೫೫ನೇ ಗಾಂಧಿ ಜಯಂತಿ ಸಂಭ್ರಮಾಚರಣೆ : ಜಾಥ, ಅಭಿನಂದನೆ, ಆರ್ಥಿಕ ನೆರವು ವಿತರಣೆ

ಭದ್ರಾವತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ೧೫೫ನೇ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಥ, ಅಭಿನಂದನೆ, ಆರ್ಥಿಕ ನೆರವು ವಿತರಣೆ ಕಾರ್ಯಕ್ರಮ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಎಂ. ಪಾಲಾಕ್ಷಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ೧೫೫ನೇ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಜಾಥ ನಡೆಯಿತು.
    ಜಾಥ ಹಳೇನಗರದ ಕನಕಮಂಟಪ ಮೈದಾನದಿಂದ ಆರಂಭಗೊಂಡಿತು. ಪೊಲೀಸ್ ನಿರೀಕ್ಷಕ ಜಿ. ಶ್ರೀಶೈಲ ಕುಮಾರ್ ಹಸಿರು ಪತಾಕೆ ಹಾರಿಸಿ ಚಾಲನೆ ನೀಡಿದರು. ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದವರೆಗೂ ಜಾಥ ನಡೆಯಿತು.
    ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನೆ, ವಿಕಲಚೇತನರಿಗೆ ವ್ಹೀಲ್‌ಚೇರ್ ಹಾಗು ಆರ್ಥಿಕ ನೆರವು ವಿತರಣೆ ನಡೆಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಎಂ. ಪಾಲಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು.
.    ಕಾರ್ಯಕ್ರಮದಲ್ಲಿ  ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಜಿ. ಆನಂದಕುಮಾರ್,  ಗಾಂದಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯ ಕ್ಷೇತ್ರದ ಧರ್ಮಗುರು ಫಾದರ್ ಸ್ಟೀವನ್ ಡೇಸಾ, ಶಿವಮೊಗ್ಗ ಮಸೀದಿ ಧರ್ಮಗುರು ಸಾಹುಲ್ ಹಮೀದ್, ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಸಂತೋಷ್ ಭಟ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಆರ್. ಕರುಣಾ ಮೂರ್ತಿ,  ಜಯರಾಂ ಗೊಂದಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಯೋಜನಾಧಿಕಾರಿಗಳಾದ ಮಾಧವ್, ಪ್ರಕಾಶ್, ಪಾರ್ವತಮ್ಮ, ಜಗದೀಶ್, ಮೋಹನ್ ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿ.ಎಲ್ ಸುರಭಿ ಚೆಸ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಬಿ.ಎಲ್ ಸುರಭಿ
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಆಂಗ್ಲ ವಿಭಾಗದ ೯ನೇ ತರಗತಿ ವಿದ್ಯಾರ್ಥಿನಿ ಬಿ.ಎಲ್ ಸುರಭಿ ಚೆಸ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
    ಶಿಕಾರಿಪುರದಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸಪ್ಪ, ಕಾರ್ಯದರ್ಶಿ, ಆಡಳಿತಾಧಿಕಾರಿ, ಆಡಳಿತ ಮಂಡಳಿಯವರು, ದೈಹಿಕ ಶಿಕ್ಷಣ ನಿರ್ದೇಶಕರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ನೌಕರನ ವೇತನಕ್ಕೆ ಸಂಬಂಧಿಸಿದ ನಿಖರ ಮಾಹಿತಿ ನೀಡದ ಅಧಿಕಾರಿಗೆ ೨೫ ಸಾವಿರ ರು. ದಂಡ

    ಭದ್ರಾವತಿ: ನೌಕರನ ವೇತನಕ್ಕೆ ಸಂಬಂಧಿಸಿದ ನಿಖರವಾದ ಮಾಹಿತಿ ನೀಡಲು ವಿಫಲರಾಗಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಯೊಬ್ಬರಿಗೆ ಮಾಹಿತಿ ಆಯೋಗ ೨೫ ಸಾವಿರ ರು. ದಂಡ ವಿಧಿಸಿರುವ ಘಟನೆ ನಡೆದಿದೆ.
    ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ನೌಕರ ಟಿ.ಜಿ ಬಸವರಾಜಯ್ಯನವರು ೦೧.೦೧.೨೦೧೬ ರಿಂದ ನಿವೃತ್ತಿ ಹೊಂದಿದ ದಿನದವರೆಗೆ ಅಂದರೆ ೩೧.೦೫.೨೦೨೧ರವರೆಗೆ ನೀಡಿರುವ ವೇತನದ ಪ್ರತಿ ತಿಂಗಳ ಪೂರ್ಣ ವಿವರದ ಸಂಬಳದ ಚೀಟಿಯ ಧೃಢೀಕೃತ ಪ್ರತಿ ನೀಡಬೇಕೆಂದು ಕಾರ್ಖಾನೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುವ ಮುಖ್ಯ ಆಡಳಿತಾಧಿಕಾರಿ ಜಿ.ಎಸ್ ಶ್ರೀನಿವಾಸ್‌ರವರಿಗೆ ಅರ್ಜಿ ಸಲ್ಲಿಸಿದ್ದರು.
    ಶ್ರೀನಿವಾಸ್‌ರವರು ನಿಗದಿತ ಅವಧಿಯಲ್ಲಿ ನಿಖರವಾದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದು, ಈ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ ಆಯೋಗ ಮಾಹಿತಿ ಹಕ್ಕು ಅಧಿನಿಯಮ ೨೦೦೫ರ ಕಲಂ ೨೦(೧) ಅನ್ವಯ ದಂಡ ವಿಧಿಸಿದೆ. ಈ ಕುರಿತು ರಾಜ್ಯ ಮಾಹಿತಿ ಆಯುಕ್ತ ಎಚ್.ಸಿ ಸತ್ಯನ್ ಮೇಲ್ಮನವಿದಾರ ಟಿ.ಜಿ ಬಸವರಾಜಯ್ಯ ಅವರಿಗೆ ನೀಡಿರುವ ಮಾಹಿತಿ ಪತ್ರದಲ್ಲಿ ತಿಳಿಸಿದ್ದಾರೆ.  

Monday, October 9, 2023

ಮೊಬೈಲ್ ಅಡಮಾನವಿಟ್ಟ ಪ್ರಕರಣ : ಯುವಕನ ಬೆನ್ನಿಗೆ ಇರಿತ

ಭದ್ರಾವತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವನಿಗೆ ಆಯುಧದಿಂದ ಬೆನ್ನಿಗೆ ಇರಿದಿರುವ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಘಟನೆ ಸಂಬಂಧ ನಗರದಲ್ಲಿ ಗೊಂದಲ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನಲೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ: ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವನಿಗೆ ಆಯುಧದಿಂದ ಬೆನ್ನಿಗೆ ಇರಿದಿರುವ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಘಟನೆ ಸಂಬಂಧ   ನಗರದಲ್ಲಿ ಗೊಂದಲ ಪರಿಸ್ಥಿತಿ ನಿರ್ಮಾಣಗೊಂಡಿದೆ.
    ಹೊಸಮನೆ ಹನುಮಂತ ನಗರದಲ್ಲಿ ನಂದ ಕುಮಾರ್(೩೨) ಎಂಬ ಯುವಕ ನಡೆದುಕೊಂಡು ಹೋಗುತ್ತಿದ್ದಾಗ ಆಯುಧದಿಂದ ಬೆನ್ನಿಗೆ ಇರಿಯಲಾಗಿದೆ. ಯುವಕನನ್ನು ತಕ್ಷಣ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ರಾತ್ರಿ ಆಸ್ಪತ್ರೆ ಮುಂಭಾಗ ಗುಂಪು ಜಮಾಯಿಸಿದೆ. ಈ ಹಿನ್ನಲೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳು ಆಸ್ಪತ್ರೆಗೆ ಅನಿಲ್ ಕುಮಾರ್ ಭೂಮರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಘಟನೆ ಸಂಬಂಧ ಸ್ಪಷ್ಟ ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಮೊಬೈಲ್ ಅಡಮಾನವಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಘಟನೆ ನಡೆದಿದ್ದು, ಯುವಕನ ಬೆನ್ನಿಗೆ ಆಯುಧದಿಂದ ಇರಿಯಲಾಗಿದೆ ಎಂದು ತಿಳಿಸಿದ್ದಾರೆ.
    ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುನ್ನಚ್ಚರಿಕೆ ಹಿನ್ನಲೆಯಲ್ಲಿ ಆಸ್ಪತ್ರೆ ಸುತ್ತಾಮುತ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಜಮೀನು ವ್ಯಾಜ್ಯ : ಪತಿಯೇ ಪತ್ನಿಗೆ ವಿಷ ಕುಡಿಯಲು ಪ್ರಚೋದನೆ

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು : ದೃಶ್ಯ ವೈರಲ್

ತನ್ನ ಪಾಲಿನ ಜಮೀನಿನಲ್ಲಿ ಅಡಕೆ ಕೊಯ್ಲು ಮಾಡಲು ಬಂದ ಮಹಿಳೆ ಸೇರಿದಂತೆ ಸುಮಾರು ಹತ್ತಿಪ್ಪತ್ತು ಜನರ ಎದುರು ಮತ್ತೋರ್ವ ಮಹಿಳೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭದ್ರಾವತಿ ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ನಡೆದಿದೆ.
    ಭದ್ರಾವತಿ: ತನ್ನ ಪಾಲಿನ ಜಮೀನಿನಲ್ಲಿ ಅಡಕೆ ಕೊಯ್ಲು ಮಾಡಲು ಬಂದ ಮಹಿಳೆ ಸೇರಿದಂತೆ ಸುಮಾರು ಹತ್ತಿಪ್ಪತ್ತು ಜನರ ಎದುರು ಮತ್ತೋರ್ವ ಮಹಿಳೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ನಡೆದಿದೆ.
    ಮಧುಮಾಲಾ ವಿಷ ಕುಡಿದ ಮಹಿಳೆಯಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಇವರ ಪತಿ ಗಿರೀಶ್ ಪಾಟೀಲ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಘಟನೆ ವಿವರ:
     ಚಂದ್ರಮ್ಮ ಎಂಬುವರು ಕೌಟುಂಬಿಕ ಜಗಳದ ಹಿನ್ನಲೆಯಲ್ಲಿ ತನ್ನ ಪಾಲಿನ ಜಮೀನಿನಲ್ಲಿ ಅಡಕೆ ಕೊಯ್ಲು ಮಾಡಲು ಖಾಸಗಿ ಕ್ಯಾಮೆರಾಮೆನ್ ಜೊತೆಗೆ ತೆರಲಿದ್ದು, ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಗಿರೀಶ್ ಪಾಟೀಲ್ ಹಾಗು ಪತ್ನಿ ಮಧುಮಾಲಾ ಅವರ ಕುಟಂಬ ವ್ಯಾಜ್ಯ ತೆಗೆದಿದೆ. ಈ ವೇಳೆ ಮಧುಮಾಲಾ ವಿಷದ ಬಾಟಲಿ ಹಿಡಿದು ಕುಡಿಯಲು ಮುಂದಾಗಿದ್ದು, ಪತಿಯೇ ವಿಷ ಕುಡಿಯುವಂತೆ ಪ್ರಚೋದಿಸಿದ್ದಾರೆ. ಮಧುಮಾಲಾ ಸುಮಾರು ಅರ್ಧ ಬಾಟಲಿಯಷ್ಟು ವಿಷ ಕುಡಿದಿದ್ದು, ಈ ನಡುವೆ ಸ್ಥಳದಲ್ಲಿ ಹತ್ತಿಪ್ಪತ್ತು ಜನರಿದ್ದರೂ ಸಹ ಯಾರು ವಿಷ ಕುಡಿಯದಂತೆ ತಡೆಯಲಿಲ್ಲ ಎನ್ನಲಾಗಿದೆ. ಈ ಎಲ್ಲಾ ಘಟನೆಗಳು ಚಿತ್ರೀಕರಣಗೊಂಡಿದೆ.
    ಈ ಸಂಬಂಧ ಗಿರೀಶ್ ಪಾಟೀಲ್ ವಿರುದ್ಧ ಚಂದ್ರಮ್ಮ ಪತ್ನಿಗೆ ವಿಷ ಕುಡಿಯಲು ಪ್ರಚೋದಿಸಿದ್ದು, ಅಲ್ಲದೆ ಕ್ಯಾಮೆರಾಮೆನ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ದೂರು ದಾಖಲಿಸಿದ್ದಾರೆ. ಈ ನಡುವೆ ಪೊಲೀಸರು ಚೇತರಿಕೆಯಲ್ಲಿರುವ ಮಧುಮಾಲಾ ಹೇಳಿಕೆ ಪಡೆಯಲು ತೆರಳಿದ್ದಾರೆ ಎಂದು ತಿಳಿದು ಬಂದಿದೆ.  
    ಘಟನೆಗೆ ಸಂಬಂಧಿಸಿದ ಚಿತ್ರೀಕರಣಗೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪತಿ ನಡೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸಜ್ಜನ್ ಜೈನ್ ನಿಧನ

ಸಜ್ಜನ್ ಜೈನ್
    ಭದ್ರಾವತಿ: ನಗರದ ಜೈನ್ ರುದ್ರಭೂಮಿ ಸಂಸ್ಥಾಪಕ ದಿ.ಪಾರಸ್‌ಮಲ್ ಜೈನ್‌ರವರ ಪುತ್ರ ಸಜ್ಜನ್ ಜೈನ್(೪೯) ಭಾನುವಾರ ನಿಧನ ಹೊಂದಿದರು.
    ಪತ್ನಿ ಗೀತಾ ಸಜ್ಜನ್ ಜೈನ್ ಹಾಗು ೩ ಪತ್ರಿಯರು ಇದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇವರ ಅಂತ್ಯಕ್ರಿಯೆ ಸೋಮವಾರ ಜೈನ್ ರುದ್ರಭೂಮಿಯಲ್ಲಿ ಸೋಮವಾರ ನೆರವೇರಿತು.  
    ಇವರ ನಿಧನಕ್ಕೆ ಕಾಂಚನಾ ಹೋಟೆಲ್ ವಾಗೀಶ್, ಜಿಕ್‌ಲೈನ್ ನಿವಾಸಿಗಳು, ಜೈನ್ ಸಮುದಾಯದ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಭದ್ರಾವತಿ ನಗರಸಭೆ : ೩ ದಿನಗಳ ಕಾಲ ಸರಳವಾಗಿ ನಾಡಹಬ್ಬ ದಸರಾ ಆಚರಣೆ

ಭದ್ರಾವತಿ ನಗರಸಭೆ ವತಿಯಿಂದ ೩ ದಿನಗಳ ಕಾಲ ಸರಳವಾಗಿ ನಾಡಹಬ್ಬ ದಸರಾ ಆಚರಿಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ಸೋಮವಾರ ಅಧ್ಯಕ್ಷೆ ಶೃತಿ ವಸಂತಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಭದ್ರಾವತಿ : ಈ ಬಾರಿ ೩ ದಿನಗಳ ಕಾಲ ಸರಳವಾಗಿ ನಾಡಹಬ್ಬ ದಸರಾ ಆಚರಿಸಲು ತೀರ್ಮಾನಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಹೇಳಿದರು.
    ಅವರು ಸೋಮವಾರ ನಗರಸಭೆ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಿರಿಯ ಸಮಾಜ ಸೇವಕರಾದ ವೆಂಕಟರಮಣ ಶೇಟ್‌ರವರು ನಗರಸಭೆ ಆವರಣದಲ್ಲಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ದಸರಾ ಉದ್ಘಾಟಿಸಲಿದ್ದಾರೆ ಎಂದರು.
    ಪೌರಾಯುಕ್ತ ಎಚ್.ಎಂ ಮನುಕುಮಾರ್ ಮಾಹಿತಿ ನೀಡಿ, ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಮಾರ್ಗದರ್ಶನದಲ್ಲಿ ೩ ದಿನಗಳ ಕಾಲ ಸರಳವಾಗಿ ದಸರಾ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಈ ಸಂಬಂಧ ನಗರದ ವಿವಿಧ ಸಂಘ-ಸಂಸ್ಥೆಗಳ ಹಾಗು ದೇವಸ್ಥಾನ ಸಮಿತಿಗಳ ಸಲಹೆ-ಸಹಕಾರ ಪಡೆಯಾಗಿದೆ.  ದಸರಾ ಆಚರಣೆಗಾಗಿ ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ನೇತೃತ್ವದಲ್ಲಿ ೧೧ ಜನ ಸದಸ್ಯರನ್ನೊಳಗೊಂಡ ಉಸ್ತುವಾರಿ ಸಮಿತಿ, ಸದಸ್ಯ ಬಷೀರ್ ಅಹಮದ್ ನೇತೃತ್ವದಲ್ಲಿ ೧೩ ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿ, ಸದಸ್ಯ ಆರ್. ಮೋಹನ್ ಕುಮಾರ್ ನೇತೃತ್ವದಲ್ಲಿ ೧೩ ಸದಸ್ಯರನ್ನೊಳಗೊಂಡ ಸಾಂಸ್ಕೃತಿಕ ಮತ್ತು ಮೆರವಣಿಗೆ ಸಮಿತಿ, ಹಿರಿಯ ಸದಸ್ಯ ವಿ. ಕದಿರೇಶ್ ನೇತೃತ್ವದಲ್ಲಿ ೧೩ ಸದಸ್ಯರನ್ನೊಳಗೊಂಡ ಪ್ರಚಾರ ಮತ್ತು ಅಲಂಕಾರ ಸಮಿತಿ, ಸದಸ್ಯ ಬಸವರಾಜ ಬಿ. ಅನೇಕೊಪ್ಪ ನೇತೃತ್ವದಲ್ಲಿ ೧೪ ಸದಸ್ಯರನ್ನೊಳಗೊಂಡ ಮನರಂಜನಾ ಸಮಿತಿ, ಮಾಜಿ ಉಪಾಧ್ಯಕ್ಷ ಚನ್ನಪ್ಪ ನೇತೃತ್ವದಲ್ಲಿ ೧೫ ಸದಸ್ಯರನ್ನೊಳಗೊಂಡ ಕ್ರೀಡಾ ಸಮಿತಿ, ಸದಸ್ಯ ಮಣಿ ಎಎನ್‌ಎಸ್ ನೇತೃತ್ವದಲ್ಲಿ ೧೨ ಸದಸ್ಯರನ್ನೊಳಗೊಂಡ ದೇವರುಗಳ ಉತ್ಸವ ಸಮಿತಿ ಹಾಗು ಮಾಜಿ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ನೇತೃತ್ವದಲ್ಲಿ ೧೯ ಸದಸ್ಯರನ್ನೊಳಗೊಂಡ ಆಯುಧ ಪೂಜೆ ಉಸ್ತುವಾರಿ ಸಮಿತಿ ರಚಿಸಲಾಗಿದೆ ಎಂದರು.
    ಕನಕಮಂಟಪ ಮೈದಾನದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಈ ಬಾರಿ ಕುಸ್ತಿ ಪಂದ್ಯಾವಳಿ ವಿಜೇತರಾದವರಿಗೆ `ಭದ್ರಾವತಿ ಕೇಸರಿ' ಪ್ರಶಸ್ತಿ ನೀಡಲಾಗುವುದು. ಪ್ರತಿ ವರ್ಷದಂತೆ ಈ ಬಾರಿ ಸಹ ಮಹಿಳಾ ದಸರಾ ನಡೆಯಲಿದ್ದು, ಕನಕಮಂಟಪ ಮೈದಾನದಲ್ಲಿ ಬೆಂಗಳೂರಿನ ಕಲಾವಿದರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್‌ದು, ಸ್ಥಳೀಯ ಕಲಾವಿದರಿಂದ ನಗರಸಭೆ ಮುಂಭಾಗ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.  
    ಪ್ರತಿವರ್ಷದಂತೆ ಈ ಬಾರಿ ಸಹ ಸಂಪ್ರದಾಯದಂತೆ ದೇವಾನುದೇವತೆಗಳ ಉತ್ಸವ ಮೆರವಣಿಗೆ ನಡೆಯಲಿದ್ದು, ಕನಕಮಂಟಪ ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ವಿವಿಧ ಸಮಿತಿಗಳ ಅಧ್ಯಕ್ಷರಾದ ಬಷೀರ್ ಅಹಮದ್, ಬಸವರಾಜ ಬಿ. ಆನೇಕೊಪ್ಪ, ಚನ್ನಪ್ಪ, ಆರ್. ಮೋಹನ್‌ಕುಮಾರ್, ವಿ. ಕದಿರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.