Thursday, December 7, 2023

ಕುಡಿದು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ ಸವಾರನಿಗೆ ೧೧ ಸಾವಿರ ರು. ದಂಡ

    ಭದ್ರಾವತಿ: ಕುಡಿದು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿದ್ದ ಸವಾರನೊಬ್ಬನಿಗೆ ಸ್ಥಳೀಯ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ೧೧ ಸಾವಿರ ರು. ದಂಡ ವಿಧಿಸಿದೆ.
    ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಜಯಶ್ರೀ ವೃತ್ತದಲ್ಲಿ ಠಾಣಾಧಿಕಾರಿ ರಮೇಶ್‌ರವರು ಡಿ.೪ರಂದು ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ದ್ವಿಚಕ್ರ ವಾಹನ ಸವಾರನೋರ್ವ ಮದ್ಯಪಾನ ಮಾಡಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ೧೧ ಸಾವಿರ ರು. ದಂಡ ವಿಧಿಸಿದೆ ಆದೇಶಿಸಿದೆ.   

ಪ್ರೊ. ಎಸ್.ಎಸ್ ವಿಜಯಾದೇವಿ `ಶಕುಂತಲ ಜಯದೇವ ಶರಣ ಪ್ರಶಸ್ತಿ'ಗೆ ಆಯ್ಕೆ

ಪ್ರೊ.ಎಸ್.ಎಸ್ ವಿಜಯಾದೇವಿ
    ಭದ್ರಾವತಿ: ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ, ಎಮೆರಿಟಸ್ ಪ್ರೊ. ಎಸ್.ಎಸ್ ವಿಜಯಾದೇವಿ ಅವರು ಮೈಸೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ನೀಡಲಾಗುವ `ಶಕುಂತಲ ಜಯದೇವ ಶರಣ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
    ವಿಜಯಾದೇವಿಯವರು ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪರಿಷತ್ ವತಿಯಿಂದ ಪ್ರತಿ ವರ್ಷ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ವಿಜಯಾದೇವಿಯವರು ಆಯ್ಕೆಯಾಗಿದ್ದು, ಪರಿಷತ್ ಅವರಿಗೆ ಅಭಿನಂದಿಸುತ್ತದೆ ಎಂದು ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದ್ದಾರೆ.

ಡಿ.೧೦, ೧೧ ಶ್ರೀ ಉದ್ದಾಮ ಕ್ಷೇತ್ರದಲ್ಲಿ ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ

ಶ್ರೀ ಉದ್ದಾಮ ಕ್ಷೇತ್ರ, ಶ್ರೀ ಉದ್ದಾಂಜನೇಯ ಸ್ವಾಮಿ
    ಭದ್ರಾವತಿ: ತಾಲೂಕಿನ ಗಂಗೂರಿನ ಪುರಾಣ ಪ್ರಸಿದ್ದ ಶ್ರೀ ಉದ್ದಾಮ ಕ್ಷೇತ್ರ, ಶ್ರೀ ಉದ್ದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಡಿ.೧೦ ಮತ್ತು ೧೧ರಂದು ಲೋಕ ಕಲ್ಯಾಣಾರ್ಥವಾಗಿ ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ.
    ೧೦ರಂದು ಬೆಳಿಗ್ಗೆ ಶ್ರೀ ಸ್ವಾಮಿಗೆ ಫಲಪಂಚಾಮೃತ ಅಭಿಷೇಕ, ಕಂಕಣಧಾರಣೆ, ಧ್ವಜಾರೋಹಣ, ಬೆಳಿಗ್ಗೆ ೧೧ ಗಂಟೆಗೆ ಸುಹಾಸಿನಿಯರಿಂದ ಗಂಗಾಪೂಜೆ, ಸಮಜೆ ೬ಕ್ಕೆ ಕಳಸಾರಾಧನೆ, ಗಣಪತಿ ಹೋಮ, ನವಗ್ರಹ ಹೋಮ, ಶ್ರೀ ಲಕ್ಷ್ಮೀ ನಾರಾಯಣ ಸಹಿತ ಶ್ರೀ ಲಕ್ಷ್ಮೀನರಸಿಂಹ, ಶ್ರೀ ವೈಜಯಂತಿ ಮಹಾಸುದರ್ಶನ ಹೋಮ, ಪೂರ್ಣಾಹುತಿ, ಅಷ್ಟಾವದಾನ ಸೇವೆ, ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
    ೧೧ರಂದು ಪ್ರಾಥಃಕಾಲ, ಸುಪ್ರಭಾತ ಸೇವೆ, ವೇದಪಾರಾಯಣ, ಶ್ರೀರಾಮ-ಸೀತಾದೇವರ ಫಲಪಂಚಾಮೃತ ಅಭಿಷೇಕ, ೯.೪೦ ರಿಂದ ೧೦.೨೫ರ ವರೆಗೆ ಶ್ರೀ ಸೀತಾ-ರಾಮದೇವರ ಮಾಂಗಲ್ಯಧಾರಣ ಕಲ್ಯಾಣ ಮಹೋತ್ಸವ, ಮಹಾಮಂಗಳಾರತಿ, ಶಾತುಮೊರೈ, ಅಷ್ಟಾವಧಾನ ಸೇವೆ ನಂತರ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
    ಅವಧೂತ ಶ್ರೀ ಸದ್ಗರು ಶ್ರೀ ಬಿಂಧುಮಾಧವ ಶರ್ಮ ಗುರುಗಳ ದಿವ್ಯ ಸಾನಿಧ್ಯದಲ್ಲಿ ಬೆಲಗೂರು ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿ, ಶ್ರೀ ಮಾರುತಿ ಪೀಠ ಪೀಠಾಧ್ಯಕ್ಷರಾದ ಶ್ರೀ ವಿಜಯ ಮಾರುತಿ ಶರ್ಮ ಅವರ ಮಾರ್ಗದರ್ಶನದಲ್ಲಿ ಹಿರೇಮಗಳೂರು ಶ್ರೀ ಕೋದಂಡಸ್ವಾಮಿ ದೇವಸ್ಥಾನದ ವೇದಬ್ರಹ್ಮ ಶ್ರೀ ವೈಷ್ಣವ ಸಿಂಹ ಹಾಗು ದೇವರನರಸೀಪುರ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಪ್ರಧನ ಅರ್ಚಕ ವೇದಬ್ರಹ್ಮ ಶ್ರೀ ಜಗನ್ನಾಥ್ ಭಟ್ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೮೨೧೭೭೯೭೩೫೬ ಅಥವಾ ೬೩೬೧೧೫೯೧೬೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ತಾಲೂಕು ಪಂಚಾಯಿತಿಯಲ್ಲಿ ವಾಟರ್ ಪ್ಯೂರಿಫೈಯರ್ ಖರೀದಿಯಲ್ಲಿ ಭ್ರಷ್ಟಾಚಾರ

ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಸಚಿವರಿಗೆ ಮನವಿ

ಭದ್ರಾವತಿ ತಾಲೂಕು ಪಂಚಾಯಿತಿ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ನೀಡಲಾಗಿರುವ ವಾಟರ್ ಪ್ಯೂರಿಫೈಯರ್.
    ಭದ್ರಾವತಿ : ತಾಲೂಕು ಪಂಚಾಯಿತಿಯಲ್ಲಿ ಕಳಪೆ ಗುಣಮಟ್ಟದ ವಾಟರ್ ಪ್ಯೂರಿಫೈಯರ್ ಖರೀದಿಸಿ ಅವ್ಯವಹಾರ ನಡೆಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ತಾಲೂಕಿನ ಉಕ್ಕುಂದ ಗ್ರಾಮದ ಶಿವಕುಮಾರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ ಖರ್ಗೆಯವರಿಗೆ ಮನವಿ ಸಲ್ಲಿಸಿದ್ದಾರೆ.
    ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯಲು ಗಡಸು ನೀರು ಬಳಸುತ್ತಿರುವ ಪ್ರದೇಶಗಳ ಸುಮಾರು ೮೦ ಅಂಗನವಾಡಿ ಕೇಂದ್ರಗಳಿಗೆ ತಾಲೂಕು ಪಂಚಾಯಿತಿ ವತಿಯಿಂದ ೨೦೨೩-೨೪ನೇ ಸಾಲಿನ ಸಂಯುಕ್ತ ಅನುದಾನದ ಸುಮಾರು ೪,೭೬,೦೦೦ ರು. ವೆಚ್ಚದಲ್ಲಿ ವಾಟರ್ ಪ್ಯೂರಿಫೈಯರ್‌ಗಳನ್ನು ಖರೀದಿಸಿ ತಲಾ ಒಂದರಂತೆ ನೀಡಲಾಗಿದೆ. ಒಂದು ವಾಟರ್ ಪ್ಯೂರಿಫೈಯರ್‌ಗೆ ೫,೯೫೦ ರು. ದಾಖಲಿಸಲಾಗಿದ್ದು, ಆದರೆ ವಾಸ್ತವವಾಗಿ ಅಂಗನವಾಡಿ ಕೇಂದ್ರಗಳಿಗೆ ನೀಡಲಾಗಿರುವ ಪ್ಯೂರಿಫೈಯರ್ ಕಳಪೆ ಗುಣಮಟ್ಟದಿಂದ ಕೂಡಿದ್ದು, ಮಾರುಕಟ್ಟೆಯಲ್ಲಿ ೧,೨೦೦ ರು. ಮೌಲ್ಯ ಹೊಂದಿರುವಂತೆ ಕಂಡು ಬರುತ್ತಿದೆ. ಬಳಸಲು ಯೋಗ್ಯವಿಲ್ಲದ ಕಾರಣ ಬಹಳಷ್ಟು ವಾಟರ್ ಪ್ಯೂರಿಫೈಯರ್‌ಗಳು ಅಂಗನವಾಡಿ ಕೇಂದ್ರಗಳಲ್ಲಿ ಮೂಲೆ ಸೇರಿವೆ ಎಂದು ಆರೋಪಿಸಿದ್ದಾರೆ.
    ವಾಟರ್ ಪ್ಯೂರಿಫೈಯರ್ ಖರೀದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಸೂಕ್ತ ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


ಶಿವಕುಮಾರ್, ಸಾಮಾಜಿಕ ಹೋರಾಟಗಾರ.
ಅಂಗನವಾಡಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ವಾಟರ್ ಪ್ಯೂರಿಫೈಯರ್‌ಗಳನ್ನು ಖರೀದಿಸಲಾಗಿದ್ದು, ಇಲ್ಲೂ ಸಹ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೆ ಭ್ರಷ್ಟಾಚಾರ ನಡೆಸಿರುವವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ವಜಾಗೊಳಿಸಬೇಕು.
                                                                                        -ಶಿವಕುಮಾರ್, ಸಾಮಾಜಿಕ ಹೋರಾಟಗಾರ

ಮೆಸ್ಕಾಂ ವಿಭಾಗೀಯ ಕಛೇರಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ

ಮೆಸ್ಕಾಂ ಭದ್ರಾವತಿ ನಗರದ ಜೆಪಿಎಸ್ ಕಾಲೋನಿಯಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್ ವಿಭಾಗೀಯ ಕಛೇರಿಯಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನ ಆಚರಿಸಲಾಯಿತು.
    ಭದ್ರಾವತಿ : ಮೆಸ್ಕಾಂ ನಗರದ ಜೆಪಿಎಸ್ ಕಾಲೋನಿಯಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್ ವಿಭಾಗೀಯ ಕಛೇರಿಯಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನ ಆಚರಿಸಲಾಯಿತು.
    ಕಾರ್ಯನಿರ್ವಾಹಕ ಇಂಜಿನಿಯರ್ ಬೀರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಬದುಕು, ಸಾಧನೆ, ಕೊಡುಗೆಗಳನ್ನು ಸ್ಮರಿಸಲಾಯಿತು.
    ಲೆಕ್ಕಾಧಿಕಾರಿ ಅಶ್ವಿನ್‌ಕುಮಾರ್,  ಕಾರ್ಯನಿರ್ವಾಹಕ ಇಂಜಿನಿಯರ್(ಪಾ) ಗಿರೀಶ್, ಲೆಕ್ಕಾಧಿಕಾರಿ(ಆಂ.ಪಾ) ಮಲ್ಲೇಶ್ ನಾಯ್ಕ, ಉಪ ವಿಭಾಗದ ಎಲ್ಲಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು, ಎಲ್ಲಾ ಘಟಕಗಳ ಮತ್ತು ಉಪ ವಿಭಾಗ ಹಾಗು ಕಛೇರಿಗಳ ಸಿಬ್ಬಂದಿ ವರ್ಗದವರು, ನೌಕರರು ಪಾಲ್ಗೊಂಡಿದ್ದರು.

Wednesday, December 6, 2023

ವಿಐಎಸ್‌ಎಲ್ ಉಳಿಸಿಕೊಳ್ಳಲು ಕುಮಾರಸ್ವಾಮಿ ಭೇಟಿ ಮಾಡಿದ ಕಾರ್ಮಿಕ ನಿಯೋಗ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ
       ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರನ್ನು ಕಾರ್ಮಿಕ ನಿಯೋಗ ಬುಧವಾರ ಭೇಟಿ ಮಾಡಿ ಕಾರ್ಖಾನೆ ಉಳಿಸಿಕೊಡುವಂತೆ ಮನವಿ ಮಾಡಿದೆ.
    ಕಳೆದ ಸುಮಾರು ೧೧ ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು, ಕಾಯಂ ಹಾಗು ನಿವೃತ್ತ ಕಾರ್ಮಿಕರ ಸಹಕಾರದೊಂದಿಗೆ ಯುವ ಮುಖಂಡ ಎಂ.ಎ ಅಜಿತ್ ನೇತೃತ್ವದಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ತುರ್ತಾಗಿ ಚರ್ಚಿಸಬೇಕೆಂದು ಮನವಿ ಮಾಡಿದ್ದಾರೆ.  
    ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ ಈ ತಿಂಗಳ ಅಂತ್ಯದೊಳಗೆ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಲು ತೆರಳುತ್ತಿದ್ದೇನೆ. ಈ ಸಂದರ್ಭದಲ್ಲಿ ಕಾರ್ಖಾನೆಗೆ ಅವಶ್ಯವಿರುವ ಬಂಡವಾಳ ತೊಡಗಿಸುವಂತೆ ಮನವಿ ಮಾಡಲಾಗುವುದು. ಒಟ್ಟಾರೆ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆಂದು ಗುತ್ತಿಗೆ ಕಾರ್ಮಿಕರ ಸಂಘದ ಪ್ರಮುಖರಾದ ರಾಕೇಶ್ ತಿಳಿಸಿದ್ದಾರೆ.
    ಪ್ರಮುಖರಾದ ಮಧುಕುಮಾರ್, ರಮೇಶ್ ಹಾಗೂ ಗುತ್ತಿಗೆ ಕಾರ್ಮಿಕ ಸಂಘದ ಪದಾಧಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಅಂಬೇಡ್ಕರ್ ಅಕ್ಷರ, ಅರಿವು, ಆಚಾರಗಳ ಪರಿಶುದ್ಧತೆಯ ಪ್ರೇರಕ : ಸಾಹಿತಿ ಡಾ.ಅರ್ಜುನ ಗೋಳಸಂಗಿ

ಕುವೆಂಪು ವಿಶ್ವ ವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಬುಧವಾರ ಬಸವ ಸಭಾಭವನದಲ್ಲಿ ಅಂಬೇಡ್ಕರ್ ೬೭ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ  ಕುಲಪತಿ ಪ್ರೊ.ಎಸ್. ವೆಂಕಟೇಶ್ ಉದ್ಘಾಟಿಸಿದರು.
    ಭದ್ರಾವತಿ: ದಾರಿ ತಪ್ಪಿರುವವರಿಗೆ ಹಾಗು ದಾರಿ ತಪ್ಪಿಸುತ್ತಿರುವವರಿಗೆ ಅಂಬೇಡ್ಕರ್ ವಿಚಾರಗಳು ಸರಿಯಾದ ಮಾರ್ಗದರ್ಶನ ನೀಡುತ್ತವೆ. ಅಕ್ಷರ, ಅರಿವು, ಆಚಾರಗಳನ್ನು ಪರಿಶುದ್ಧತೆಯಿಂದ ಸಂಪಾದಿಸಿಕೊಳ್ಳಲು ಪ್ರೇರಕರಾದವರು ಅಂಬೇಡ್ಕರ್. ಇಡೀ ಜಗತ್ತೇ ಅಚ್ಚರಿ ಪಡುವಂತಹ ಬೌದ್ಧಿಕ ಶಕ್ತಿಯನ್ನು ಅಂಬೇಡ್ಕರ್ ಅವರು ಸಂಪಾದಿಸಿದ್ದರು ಎಂದು ಸಾಹಿತಿ ಡಾ.ಅರ್ಜುನ ಗೋಳಸಂಗಿ ಹೇಳಿದರು.
    ಕುವೆಂಪು ವಿಶ್ವ ವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಬುಧವಾರ ಬಸವ ಸಭಾಭವನದಲ್ಲಿ ಅಂಬೇಡ್ಕರ್ ೬೭ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವ್ಯಕ್ತಿತ್ವ ಕುರಿತು ಮಾತನಾಡಿದರು.
    ಸಾವಿರಾರು ಸಂಕಟಗಳು ಬಂದರೂ ಸಹ ಸಹನೆ ಮೀರದೆ, ಸಾಧನೆಯ ಹಾದಿಯಲ್ಲಿ ಸಾಗಿದರು. ಅವರು ಭಾರತೀಯ ಸಾಮಾಜಿಕ ಅಸಮಾನತೆಯ ನಡುವೆಯೂ ಬೆಳೆದ ರೀತಿ ವಿಸ್ಮಯ. ಭಾರತೀಯ ಸಾಮಾಜಿಕ ವ್ಯವಸ್ಥೆಯ ನಾಡಿಮಿಡಿತವನ್ನು ಅರಿತು, ಮಾನವೀಯತೆಯ ಔಷಧಿಯನ್ನು ನೀಡಿದ ಸಾಮಾಜಿಕ ವೈದ್ಯರಿವರು. ಅಂಬೇಡ್ಕರ್ ಅವರದು ಛಲದ ವ್ಯಕ್ತಿತ್ವ ಎಂದರು.
    ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಪ್ರೊ.ಎಸ್.ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಚರಿತ್ರೆ ಎಂದರೆ ವಿರೂಪಗೊಂಡಿರುವ ಭಾರತೀಯ ಸಾಮಾಜಿಕ ಸ್ವರೂಪವನ್ನು ಸುರೂಪಗೊಳಿಸುವ ಪ್ರಯತ್ನದ ಚರಿತ್ರೆ. ಅದು ಅನನ್ಯವಾದುದು,  ಸಂಶೋಧಕರು, ಸಂಸ್ಕೃತಿ ಚಿಂತಕರು, ಸಮಸಮಾಜದ ಕನಸುಗಾರರು ಆದ ಅಂಬೇಡ್ಕರರ ದೃಷ್ಟಿ ಧೋರಣೆಗಳನ್ನು ಸಮಗ್ರವಾಗಿ ಅಭ್ಯಸಿಸಿದಾಗ ಅವರ ವಿದ್ವತ್, ಬರವಣಿಗೆಯ ಶಕ್ತಿ, ಚಿಂತನೆಗಳ ಒಳನೋಟಗಳು ಅಚ್ಚರಿಗೊಳಿಸುತ್ತವೆ ಎಂದರು.
    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲೆಕ್ಕಪರಿಶೋಧನಾ ಇಲಾಖೆಯ ಜಂಟಿನಿರ್ದೇಶಕ ಕೆ.ಎಚ್ ಓಂಕಾರಪ್ಪ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳನ್ನು ಅರಿಯುವುದೆಂದರೆ ಮಾನವೀಯತೆಯನ್ನು ಅರಿತಂತೆ. ಅಂಬೇಡ್ಕರ್ ಅವರ ಜೀವನವೆಂದರೆ ಮನುಷ್ಯರಲ್ಲಿ ಪ್ರೀತಿ, ಕರುಣೆ, ಸಮಾನತೆ, ಸಂಬಂಧ ಸೌಜನ್ಯ, ಸತ್ ಚಿಂತನೆ, ಸತ್ ನುಡಿ, ಸತ್ ನಡೆಗಳನ್ನು ಬಿತ್ತಿ ಬೆಳೆಯುವಂಥದ್ದಾಗಿದೆ ಎಂದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಪರೀಕ್ಷಾಂಗ ಕುಲಸಚಿವ ಡಾ. ಎಸ್.ಎಂ ಗೋಪಿನಾಥ್, ನನ್ನ ಮಕ್ಕಳ ಶಾಲಾ ದಾಖಲೆಯಲ್ಲಿ ಜಾತಿಯ ಹೆಸರನ್ನೇ ಸೇರಿಸಿಲ್ಲ. ಅಂಬೇಡ್ಕರ್ ಅವರ ಆಶಯದಂತೆ ಜಾತ್ಯಾತೀತವಾಗಿ ಬಾಳಬೇಕು. ಮನುಕುಲದ ಉದ್ದಾರಕ್ಕೆ ನಮ್ಮದೇ ಆದ ಅನನ್ಯ ಸೇವೆಯನ್ನು ಮಾಡಬೇಕು. ಅಂಬೇಡ್ಕರ್ ಅವರದು ಆದರ್ಶ ಮತ್ತು ಅನುಪಮವಾದ ವ್ಯಕ್ತಿತ್ವವೆಂದರು.
    ಹಣಕಾಸು ಅಧಿಕಾರಿ ಜಿ. ಬಂಗಾರಪ್ಪ, ಕಲಾ ನಿಕಾಯದ ಡೀನರ್ ಪ್ರೊ. ಗುರುಲಿಂಗಯ್ಯ, ಡಾ. ಶಿವಾನಂದ ಕೆಳಗಿನಮನಿ, ಡಾ. ಅರ್ತೋಬನಾಯಕ, ಡಾ.ವಾಲ್ಮೀಕಿ, ಡಾ. ಚಂದ್ರಶೇಖರ್, ಪ್ರೊ. ನಾರಾಯಣ, ವಲಯ ಅರಣ್ಯಾಧಿಕಾರಿ ಆರ್.ಟಿ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಡಾ. ಪುರುಷೋತ್ತಮ ಎಸ್.ವಿ ಪ್ರಾರ್ಥಿಸಿ, ಡಾ.ನವೀನಮಂಡಗದ್ದೆ ನಿರೂಪಿಸಿದರು. ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ, ಡಾ.ರವಿನಾಯ್ಕ ವಂದಿಸಿದರು.