Wednesday, December 6, 2023

ಅಂಬೇಡ್ಕರ್ ಅಕ್ಷರ, ಅರಿವು, ಆಚಾರಗಳ ಪರಿಶುದ್ಧತೆಯ ಪ್ರೇರಕ : ಸಾಹಿತಿ ಡಾ.ಅರ್ಜುನ ಗೋಳಸಂಗಿ

ಕುವೆಂಪು ವಿಶ್ವ ವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಬುಧವಾರ ಬಸವ ಸಭಾಭವನದಲ್ಲಿ ಅಂಬೇಡ್ಕರ್ ೬೭ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ  ಕುಲಪತಿ ಪ್ರೊ.ಎಸ್. ವೆಂಕಟೇಶ್ ಉದ್ಘಾಟಿಸಿದರು.
    ಭದ್ರಾವತಿ: ದಾರಿ ತಪ್ಪಿರುವವರಿಗೆ ಹಾಗು ದಾರಿ ತಪ್ಪಿಸುತ್ತಿರುವವರಿಗೆ ಅಂಬೇಡ್ಕರ್ ವಿಚಾರಗಳು ಸರಿಯಾದ ಮಾರ್ಗದರ್ಶನ ನೀಡುತ್ತವೆ. ಅಕ್ಷರ, ಅರಿವು, ಆಚಾರಗಳನ್ನು ಪರಿಶುದ್ಧತೆಯಿಂದ ಸಂಪಾದಿಸಿಕೊಳ್ಳಲು ಪ್ರೇರಕರಾದವರು ಅಂಬೇಡ್ಕರ್. ಇಡೀ ಜಗತ್ತೇ ಅಚ್ಚರಿ ಪಡುವಂತಹ ಬೌದ್ಧಿಕ ಶಕ್ತಿಯನ್ನು ಅಂಬೇಡ್ಕರ್ ಅವರು ಸಂಪಾದಿಸಿದ್ದರು ಎಂದು ಸಾಹಿತಿ ಡಾ.ಅರ್ಜುನ ಗೋಳಸಂಗಿ ಹೇಳಿದರು.
    ಕುವೆಂಪು ವಿಶ್ವ ವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಬುಧವಾರ ಬಸವ ಸಭಾಭವನದಲ್ಲಿ ಅಂಬೇಡ್ಕರ್ ೬೭ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವ್ಯಕ್ತಿತ್ವ ಕುರಿತು ಮಾತನಾಡಿದರು.
    ಸಾವಿರಾರು ಸಂಕಟಗಳು ಬಂದರೂ ಸಹ ಸಹನೆ ಮೀರದೆ, ಸಾಧನೆಯ ಹಾದಿಯಲ್ಲಿ ಸಾಗಿದರು. ಅವರು ಭಾರತೀಯ ಸಾಮಾಜಿಕ ಅಸಮಾನತೆಯ ನಡುವೆಯೂ ಬೆಳೆದ ರೀತಿ ವಿಸ್ಮಯ. ಭಾರತೀಯ ಸಾಮಾಜಿಕ ವ್ಯವಸ್ಥೆಯ ನಾಡಿಮಿಡಿತವನ್ನು ಅರಿತು, ಮಾನವೀಯತೆಯ ಔಷಧಿಯನ್ನು ನೀಡಿದ ಸಾಮಾಜಿಕ ವೈದ್ಯರಿವರು. ಅಂಬೇಡ್ಕರ್ ಅವರದು ಛಲದ ವ್ಯಕ್ತಿತ್ವ ಎಂದರು.
    ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಪ್ರೊ.ಎಸ್.ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಚರಿತ್ರೆ ಎಂದರೆ ವಿರೂಪಗೊಂಡಿರುವ ಭಾರತೀಯ ಸಾಮಾಜಿಕ ಸ್ವರೂಪವನ್ನು ಸುರೂಪಗೊಳಿಸುವ ಪ್ರಯತ್ನದ ಚರಿತ್ರೆ. ಅದು ಅನನ್ಯವಾದುದು,  ಸಂಶೋಧಕರು, ಸಂಸ್ಕೃತಿ ಚಿಂತಕರು, ಸಮಸಮಾಜದ ಕನಸುಗಾರರು ಆದ ಅಂಬೇಡ್ಕರರ ದೃಷ್ಟಿ ಧೋರಣೆಗಳನ್ನು ಸಮಗ್ರವಾಗಿ ಅಭ್ಯಸಿಸಿದಾಗ ಅವರ ವಿದ್ವತ್, ಬರವಣಿಗೆಯ ಶಕ್ತಿ, ಚಿಂತನೆಗಳ ಒಳನೋಟಗಳು ಅಚ್ಚರಿಗೊಳಿಸುತ್ತವೆ ಎಂದರು.
    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲೆಕ್ಕಪರಿಶೋಧನಾ ಇಲಾಖೆಯ ಜಂಟಿನಿರ್ದೇಶಕ ಕೆ.ಎಚ್ ಓಂಕಾರಪ್ಪ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳನ್ನು ಅರಿಯುವುದೆಂದರೆ ಮಾನವೀಯತೆಯನ್ನು ಅರಿತಂತೆ. ಅಂಬೇಡ್ಕರ್ ಅವರ ಜೀವನವೆಂದರೆ ಮನುಷ್ಯರಲ್ಲಿ ಪ್ರೀತಿ, ಕರುಣೆ, ಸಮಾನತೆ, ಸಂಬಂಧ ಸೌಜನ್ಯ, ಸತ್ ಚಿಂತನೆ, ಸತ್ ನುಡಿ, ಸತ್ ನಡೆಗಳನ್ನು ಬಿತ್ತಿ ಬೆಳೆಯುವಂಥದ್ದಾಗಿದೆ ಎಂದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಪರೀಕ್ಷಾಂಗ ಕುಲಸಚಿವ ಡಾ. ಎಸ್.ಎಂ ಗೋಪಿನಾಥ್, ನನ್ನ ಮಕ್ಕಳ ಶಾಲಾ ದಾಖಲೆಯಲ್ಲಿ ಜಾತಿಯ ಹೆಸರನ್ನೇ ಸೇರಿಸಿಲ್ಲ. ಅಂಬೇಡ್ಕರ್ ಅವರ ಆಶಯದಂತೆ ಜಾತ್ಯಾತೀತವಾಗಿ ಬಾಳಬೇಕು. ಮನುಕುಲದ ಉದ್ದಾರಕ್ಕೆ ನಮ್ಮದೇ ಆದ ಅನನ್ಯ ಸೇವೆಯನ್ನು ಮಾಡಬೇಕು. ಅಂಬೇಡ್ಕರ್ ಅವರದು ಆದರ್ಶ ಮತ್ತು ಅನುಪಮವಾದ ವ್ಯಕ್ತಿತ್ವವೆಂದರು.
    ಹಣಕಾಸು ಅಧಿಕಾರಿ ಜಿ. ಬಂಗಾರಪ್ಪ, ಕಲಾ ನಿಕಾಯದ ಡೀನರ್ ಪ್ರೊ. ಗುರುಲಿಂಗಯ್ಯ, ಡಾ. ಶಿವಾನಂದ ಕೆಳಗಿನಮನಿ, ಡಾ. ಅರ್ತೋಬನಾಯಕ, ಡಾ.ವಾಲ್ಮೀಕಿ, ಡಾ. ಚಂದ್ರಶೇಖರ್, ಪ್ರೊ. ನಾರಾಯಣ, ವಲಯ ಅರಣ್ಯಾಧಿಕಾರಿ ಆರ್.ಟಿ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಡಾ. ಪುರುಷೋತ್ತಮ ಎಸ್.ವಿ ಪ್ರಾರ್ಥಿಸಿ, ಡಾ.ನವೀನಮಂಡಗದ್ದೆ ನಿರೂಪಿಸಿದರು. ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ, ಡಾ.ರವಿನಾಯ್ಕ ವಂದಿಸಿದರು.

No comments:

Post a Comment