Sunday, January 7, 2024

ಅಪರಚಿತ ಶವ ಪತ್ತೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಬ್ಯಾಡಗಿ ಪೊಲೀಸರು

ಹಳೇನಗರ ಠಾಣೆ ಪೊಲೀಸರಿಂದ ಯುಡಿಆರ್ ದಾಖಲು, ಪತ್ನಿ, ಪುತ್ರನಿಂದಲೇ ಕೊಲೆ

ಮೌನೇಶಪ್ಪ
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಹೊಳೆಹೊನ್ನೂರು ರಸ್ತೆಯ ಹಳೇಸೀಗೆಬಾಗಿ ಈಶ್ವರ ದೇವಸ್ಥಾನದ ಬಳಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬರ ಮೃತ ದೇಹವೊಂದರ ಪ್ರಕರಣ ಬೇಧಿಸುವಲ್ಲಿ ಬ್ಯಾಡಗಿ ಪೊಲೀಸರು ಯಶಸ್ವಿಯಾಗಿದ್ದು, ಅಪರಿಚಿತ ವ್ಯಕ್ತಿಯನ್ನು ಆತನ ಪತ್ನಿ ಹಾಗು ಪುತ್ರ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
    ಸೊರಬ ತಾಲೂಕಿನ ಯಲವಾಲ ಗ್ರಾಮದ ನಿವಾಸಿ ಮೌನೇಶಪ್ಪ(೫೦) ಎಂಬುವರ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಹಳೇನಗರ ಠಾಣೆ ಪೊಲೀಸರು ಅಪರಚಿತ ಮೃತದೇಹದ ಯುಡಿಆರ್ ದಾಖಸಿಕೊಂಡಿದ್ದರು. ಈ ನಡುವೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಮೌನೇಶಪ್ಪ ಕಾಣೆಯಾಗಿರುವ ಕುರಿತು ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು ಪ್ರಕರಣ ಬೇಧಿಸುವ ಮೂಲಕ ಪತ್ನಿ ಮಂಜುಳ, ಪುತ್ರ ಶಂಭು ಹಾಗು ಕೃತ್ಯಕ್ಕೆ ಸಹಕರಿಸಿದ ಶಿವರಾಜ್ ಎಂಬುವರನ್ನು ಬಂಧಿಸಿದ್ದಾರೆ.
    ಪ್ರಕರಣ ವಿವರ :
    ಮೌನೇಶಪ್ಪ ಎರಡು ಮದುವೆಯಾಗಿದ್ದರು. ಮೊದಲನೇ ಪತ್ನಿ ಮಂಜುಳಾರವರ ಜೊತೆಗಿದ್ದ ಮೌನೇಶಪ್ಪ ಬ್ಯಾಡಗಿ ತಾಲೂಕಿನ ಮಸಣಗಿಯಲ್ಲಿ ವಾಸವಾಗಿದ್ದರು. ಎರಡನೇ ಪತ್ನಿಗೆ ಎರಡು ಮಕ್ಕಳು ಮತ್ತು ಮೊದಲನೇ ಹೆಂಡತಿ ಮಂಜುಳಾರಿಗೆ ಶಂಭು ಎಂಬ ಮಗನಿದ್ದನು.
    ಪತ್ನಿ ಮಂಜುಳ ಮತ್ತು ಮೌನೇಶಪ್ಪ ನಡುವೆ ಜಗಳ ನಡೆಯುತ್ತಿತ್ತು ಎಂದು ದೂರಿನಲ್ಲಿ ದಾಖಲಾಗಿದೆ. ಮೌನೇಶಪ್ಪ ಜಗಳವಾದಾಗ ಮನೆಬಿಟ್ಟು ಹೋಗುವುದು ಮತ್ತು ವಾಪಾಸಾಗುವುದು ಮಾಮೂಲಿಯಾಗಿತ್ತು. ಜಗಳ ಕುರಿತು ಮೌನೇಶಪ್ಪ ತನ್ನ ಅಳಿಯ ರಾಜಶೇಖರ್ ಮಲ್ಲಪ್ಪ ಕಬ್ಬೂರು ಬಳಿ ಹೇಳಿಕೊಂಡಿದ್ದರು.
    ಮನೆ ಬಿಟ್ಟು ಹೋಗಿದ್ದ ಮೌನೇಶಪ್ಪ ಬಹಳ ದಿನಗಳವರೆಗೆ ಹಿಂದಿರುಗಿ ಮನೆಗೆ ಬಾರದ ಹಿನ್ನಲೆಯಲ್ಲಿ ಅಳಿಯ ರಾಜಶೇಖರ್ ಮತ್ತೋರ್ವ ಮಾವನಿಗೆ ಕರೆ ಮಾಡಿ ಕೇಳಿದಾಗ ಮಂಜುಳಮ್ಮ ಏರು ಧ್ವನಿಯಲ್ಲಿ ಪದೇ ಪದೇ ಕರೆ ಮಾಡಬೇಡಿ ಎಂದು ತಿಳಿಸಿರುತ್ತಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅನುಮಾನಗೊಂಡ ರಾಜಶೇಖರ್ ದೂರು ದಾಖಲಿಸಿದ್ದು, ಈ ದೂರಿನ ಅನ್ವಯ ಬ್ಯಾಡಗಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
    ಯುಡಿಆರ್ ದಾಖಲಿಸಿಕೊಂಡಿದ್ದ ಹಳೇನಗರ ಠಾಣೆ ಪೊಲೀಸರು ಪ್ರಕರಣ ಬೇಧಿಸಲು ನೆರವಾಗಿದ್ದಾರೆ.  ಪತ್ನಿ ಮಂಜುಳ ಹಾಗು ಪುತ್ರ ಶಂಭು ಇಬ್ಬರ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೌನೇಶಪ್ಪ ಕೊಲೆಯಾಗಿರುವುದು ತಿಳಿದುಬಂದಿದ್ದು, ಈ ಸಂಬಂಧ ಮಂಜುಳ, ಶಂಭು ಹಾಗು ಕೃತ್ಯಕ್ಕೆ ಸಹಕರಿಸಿದ ಶಿವರಾಜ್ ಒಟ್ಟು ೩ ಜನರನ್ನು ಬಂಧಿಸಿರುವುದು ತಿಳಿದು ಬಂದಿದೆ.

ಲಾರಿ ರಾಜಣ್ಣ ನಿಧನ

ಲಾರಿ ರಾಜಣ್ಣ
    ಭದ್ರಾವತಿ: ನಗರದ ಎಂಪಿಎಂ ಕಬ್ಬು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಲಾರಿ ರಾಜಣ್ಣ(೯೨) ಭಾನುವಾರ ನಿಧನ ಹೊಂದಿದರು.
    ರಾಜಣ್ಣ ೧೯೮೪ ರಿಂದ ೨೦೧೫ ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಅಂತ್ಯಸಂಸ್ಕಾರ ಸೋಮವಾರ ತಡಸ-ದೊಣಬಘಟ್ಟೆ ರಸ್ತೆಯ ಕವಲಗುಂದಿ ಗ್ರಾಮದ ಇವರ ಜಮೀನಿನಲ್ಲಿ ನಡೆಯಲಿದೆ. ಇವರ ನಿಧನಕ್ಕೆ ಎಂಪಿಎಂ ನಿವೃತ್ತ ಕಾರ್ಮಿಕರು, ಕಬ್ಬು ಬೆಳೆಗಾರರು ಸಂತಾಪ ಸೂಚಿಸಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿ, ಸ್ವಚ್ಛತಾ ಸಿಬ್ಬಂದಿ ನೇಮಿಸಿ

ಶಿಕ್ಷಕರಿಂದ ಶಿಕ್ಷಣ, ಸಾಕ್ಷರತಾ ಸಚಿವ, ಮುಖ್ಯಮಂತ್ರಿಗೆ ಮನವಿ

ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೌಚಾಲಯ ಹಾಗೂ ಶಾಲಾ ಸ್ವಚ್ಛತೆಗಾಗಿ ಸ್ವಚ್ಛತಾ ಸಿಬ್ಬಂದಿ ನೇಮಿಸುವ ಮೂಲಕ ಶಿಕ್ಷಕರುಗಳಿಗೆ ಆಗುತ್ತಿರುವ ಒತ್ತಡ ಕಡಿಮೆಗೊಳಿಸುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ.
    ಭದ್ರಾವತಿ: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೌಚಾಲಯ ಹಾಗೂ ಶಾಲಾ ಸ್ವಚ್ಛತೆಗಾಗಿ ಸ್ವಚ್ಛತಾ ಸಿಬ್ಬಂದಿ ನೇಮಿಸುವ ಮೂಲಕ ಶಿಕ್ಷಕರುಗಳಿಗೆ ಆಗುತ್ತಿರುವ ಒತ್ತಡ ಕಡಿಮೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ.
    ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಶೌಚಾಲಯ ಮತ್ತು ಶಾಲಾ ಸ್ವಚ್ಛತೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಿಬ್ಬಂದಿ ಇರುವುದಿಲ್ಲ. ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆಗಾಗಿ ಮಕ್ಕಳನ್ನು ಬಳಸುತ್ತಿದ್ದಾರೆ ಎಂದು ಕೆಲವು ದೂರುಗಳು ಕಂಡು ಬಂದಿದ್ದು, ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರನ್ನು ಅಮಾನತ್ತು ಮಾಡುತ್ತಿರುವ ಮತ್ತು ಪೊಲೀಸರು ಪ್ರಕರಣ ದಾಖಲಿಸುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಗೊಂದಲಮಯ ವಾತಾವರಣ ನಿರ್ಮಾಣವಾಗಿ ಶಿಕ್ಷಕರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸದಂತಾಗಿದೆ ಎಂದು ಮನವಿಯಲ್ಲಿ ಅಳಲು ತೋರ್ಪಡಿಸಿಕೊಳ್ಳಲಾಗಿದೆ.
    ಪ್ರಸ್ತುತ ರಾಜ್ಯ ಸರ್ಕಾರ ಶಿಕ್ಷಣದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದು,  `ರಾಷ್ಟ್ರದ ಭದ್ರ ಬುನಾದಿ ಪ್ರಾಥಮಿಕ ಶಿಕ್ಷಣ' ಎಂಬಂತೆ ಶಾಲೆಗಳ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಪ್ರಗತಿಯತ್ತ ಕೊಂಡೊಯ್ಯುತ್ತಿರುವುದು ಸಂತಸ ತಂದಿದೆ. ಈ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಮತ್ತು ಮುಖ್ಯಮಂತ್ರ ಸಿದ್ದರಾಮಯ್ಯ ಅವರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೌಚಾಲಯ ಒಳಗೊಂಡಂತೆ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಿಸುವುದರೊಂದಿಗೆ ಹೊಸ ದಾಖಲೆ ನಿರ್ಮಿಸುವ ಮೂಲಕ ಶಿಕ್ಷಣ ಸಬಲೀಕರಣಗೊಳಿಸುವಂತೆ ಮನವಿ ಮಾಡಲಾಗಿದೆ.
    ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೋಹನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರಗೌಡ, ಮಹಿಳಾ ಘಟಕದ ಅಧ್ಯಕ್ಷೆ ಭಾರತಿ, ಉಳಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರಾದ ಹನುಮಂತಪ್ಪ, ಸುಮತಿ ಕಾರಂತ್, ಮಾಯಮ್ಮ, ಲೋಲಾಕ್ಷಿ, ಕೋಕಿಲ, ಶಿವಕುಮಾರ್, ಸೌಭಾಗ್ಯ, ರಾಜಾನಾಯ್ಕ ಹಾಗು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ತಹಸೀಲ್ದಾರ್ ಕೆ.ಆರ್ ನಾಗರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮೂಲಕ ಮನವಿ ಸಲ್ಲಿಸಲಾಯಿತು.

Saturday, January 6, 2024

ಸರ್ಕಾರದ ಮಾರ್ಗಸೂಚಿಯನ್ವಯ ಕನ್ನಡ ನಾಮಫಲಕ ಅಳವಡಿಕೆಗಾಗಿ ಹೋರಾಟ

ಹೋರಾಟ ಹತ್ತಿಕ್ಕಲು ಹೋರಾಟಗಾರರ ಬಂಧನ ಸರಿಯಲ್ಲ : ಕರವೇ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಸೇರಿದಂತೆ ಬಂಧಿಸಲಾಗಿರುವ ಕನ್ನಡ ಹೋರಾಟಗಾರರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ವೇದಿಕೆ ಭದ್ರಾವತಿ ತಾಲೂಕು ಘಟಕದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಸೇರಿದಂತೆ ಬಂಧಿಸಲಾಗಿರುವ ಕನ್ನಡ ಹೋರಾಟಗಾರರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ವೇದಿಕೆ ತಾಲೂಕು ಘಟಕದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ  ಮನವಿ ಸಲ್ಲಿಸಲಾಯಿತು.
    ತಾಲೂಕು ಕಛೇರಿ ಮುಂಭಾಗ ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರಮುಖರು, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿ ವೇದಿಕೆ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ರ್‍ಯಾಲಿಗೆ ವಿನಾಕಾರಣ ಪೊಲೀಸರು ತಡೆಯೊಡ್ಡಿ ವೇದಿಕೆಯ ಸುಮಾರು ೧ ಸಾವಿರ ಕಾರ್ಯಕರ್ತರನ್ನು ಬಂಧಿಸಿದ್ದು, ಅಲ್ಲದೆ ಮಧ್ಯ ರಾತ್ರಿ ಟಿ.ಎ ನಾರಾಯಣಗೌಡ ಅವರನ್ನು ಬಲವಂತಾಗಿ ಬಂಧಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸರ್ಕಾರದ ಮಾರ್ಗಸೂಚಿಯನ್ವಯ ನಾಮಫಲಕ ಅಳವಡಿಕೆಯಲ್ಲಿ ಕನ್ನಡ ಭಾಷೆಗೆ ಶೇ.೬೦ ಹಾಗು ಇತರೆ ಭಾಷೆಗೆ ಶೇ.೪೦ರಷ್ಟು ಸ್ಥಾನ ಮೀಸಲಿಡಬೇಕೆಂಬುದು ವೇದಿಕೆ ಆಶಯವಾಗಿದ್ದು, ಬಹಳಷ್ಟು ಜನರು ಇದನ್ನು ಪಾಲಿಸದೆ ನಿರ್ಲಕ್ಷ್ಯವಹಿಸಿದ್ದಾರೆ. ಹಲವಾರು ಬಾರಿ ಮನವಿ ಮಾಡಿಕೊಂಡರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ಅಲ್ಲದೆ ಈ ಸಂಬಂಧ ಸರ್ಕಾರಕ್ಕೂ ಸಹ ಮನವಿ ಸಲ್ಲಿಸಲಾಗಿರುತ್ತದೆ. ಈ ಹಿನ್ನಲೆಯಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲು ವೇದಿಕೆ ರ್‍ಯಾಲಿ ಹಮ್ಮಿಕೊಂಡಿತ್ತು. ಆದರೆ ಸರ್ಕಾರ ಹೋರಾಟ ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಂಡು ಕಾರ್ಯಕರ್ತರು ಹಾಗು ಟಿ.ಎ ನಾರಾಯಣಗೌಡ ಅವರನ್ನು ಬಂಧಿಸಿ ಅಪರಾಧಿಗಳಂತೆ ಬಿಂಬಿಸಿ ಕಿರುಕುಳ ನೀಡಿರುವುದು ಸರಿಯಲ್ಲ. ತಕ್ಷಣ ಬಂಧಿತರನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಪ್ರಮುಖರಾದ ಯುವ ಘಟಕದ ಅಧ್ಯಕ್ಷ ಎಚ್. ರಾಮಕೃಷ್ಣ, ಸಂಘಟನಾ ಕಾರ್ಯದರ್ಶಿ ಎನ್. ರಮೇಶ್, ತುಕಾರಾಂ, ಎ. ಮಂಜುನಾಥ್, ಪ್ರವೀಣ, ಮುನ್ನಾಬಾಯ್, ಉಮೇಶ್ ಮತ್ತು ಪವನ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಚಲುವಯ್ಯ ನಿಧನ

ಚಲುವಯ್ಯ
    ಭದ್ರಾವತಿ : ಮೂಲತಃ ತಾಲೂಕಿನ ಗುಡ್ಡದ ಕೆಂಚಮ್ಮನ ಹಳ್ಳಿ ಗ್ರಾಮದ ಸಮೀಪದ ಶ್ರೀನಿವಾಸಪುರ ನಿವಾಸಿ ಚಲುವಯ್ಯ(೬೫) ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು, ಸೊಸೆ, ಅಳಿಯಂದಿರು ಹಾಗು ಮೊಮ್ಮಕ್ಕಳು ಇದ್ದರು. ಈ ಹಿಂದೆ ನಗರಸಭೆ ವ್ಯಾಪ್ತಿಯ ವೇಲೂರುಶೆಡ್‌ನಲ್ಲಿ ವಾಸವಾಗಿದ್ದರು. ಇವರ ಅಂತ್ಯಕ್ರಿಯೆ ಶ್ರೀನಿವಾಸಪುರ ಗ್ರಾಮದಲ್ಲಿ ಶನಿವಾರ ಸಂಜೆ ನಡೆಯಿತು.  

ಸೇವೆಯನ್ನು ಕರ್ತವ್ಯವೆಂದು ಭಾವಿಸಿ : ಬಿ.ಕೆ ಮೋಹನ್

ಭದ್ರಾವತಿ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗು ಬಡ ಕಾರ್ಮಿಕರಿಗೆ ವಸ್ತ್ರ ವಿತರಣೆ ಸಮಾರಂಭ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಉದ್ಘಾಟಿಸಿದರು.
    ಭದ್ರಾವತಿ: ಮಾನವರಾಗಿ ಹುಟ್ಟಿದ ಪ್ರತಿಯೊಬ್ಬರೂ ಸಹ ಸೇವೆಯನ್ನು ಕರ್ತವ್ಯ ಎಂದು ಭಾವಿಸಬೇಕು.  ಕ್ಷೇತ್ರದಲ್ಲಿ ಹಲವರು ಶ್ರೀಮಂತರಿದ್ದಾರೆ. ಆದರೆ ದಾನಿಗಳ ಸಂಖ್ಯೆ ಕಡಿಮೆ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
    ನಗರದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗು ಬಡ ಕಾರ್ಮಿಕರಿಗೆ ವಸ್ತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಬಡತನದಲ್ಲಿ ಹುಟ್ಟಿದರೂ ಶ್ರಮಪಟ್ಟು ಶ್ರೀಮಂತರಾಗಬೇಕು. ಅದೇರೀತಿ ಶ್ರೀಮಂತಿಕೆ ಬಂದ ಮೇಲೆ ದಾನಿಗಳಾಗಬೇಕು. ದೇವರು ಕೊಟ್ಟು ನೋಡುತ್ತಾನೆ. ಕೊಡದೆಯೂ ನೋಡುತ್ತಾನೆ. ಕೊಟ್ಟಾಗ ದಾನ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಆಗ ಮಾತ್ರ ದೇವರು ಮೆಚ್ಚುತ್ತಾನೆ ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಮಾತನಾಡಿ, ಅನೇಕ ಅನುದಾನ ರಹಿತ ಶಾಲೆಗಳ ಅಭಿವೃದ್ಧಿಯಲ್ಲಿ ಸಂಘ-ಸಂಸ್ಥೆಗಳ ಕೊಡುಗೆ ಮಹತ್ವದ್ದಾಗಿದೆ. ಸಂಘ-ಸಂಸ್ಥೆಗಳ ಸಹಕಾರವಿಲ್ಲದಿದ್ದರೆ ಶಿಕ್ಷಣ ವ್ಯವಸ್ಥೆ ಅತಂತ್ರವಾಗುತ್ತದೆ ಎಂದರು.
    ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟ್ರಸ್ಟಿ ತಸ್ಮೈ ಕಿರಣ್ ಅಧ್ಯಕ್ಷತೆ ವಹಿಸಿದ್ದರು.
    ಪೇಪರ್‌ಟೌನ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿ. ಬಸವರಾಜ್, ಜ್ಞಾನೇಶ್ವರಿ ವಿದ್ಯಾವರ್ಧಕ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ್, ಸಾಹಿತಿ ಜೆ.ಎನ್ ಬಸವರಾಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಂದಿನಿ ಮಲ್ಲಿಕಾರ್ಜುನ್ ಪ್ರಾರ್ಥಿಸಿದರು. ಅಪೇಕ್ಷ ಮಂಜುನಾಥ್ ಸ್ವಾಗತಿಸಿದರು. ಅಣ್ಣಪ್ಪ ನಿರೂಪಿಸಿ, ವಂದಿಸಿದರು.

Friday, January 5, 2024

ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಆಹ್ವಾನ

ಶ್ರೀರಾಮ ಚಂದ್ರನ ಭಾವಚಿತ್ರ, ಮಂತ್ರಾಕ್ಷತೆ, ಆಹ್ವಾನ ಪತ್ರಿಕೆ ನೀಡಿದ ಬಿಜೆಪಿ ಕಾರ್ಯಕರ್ತರು

ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಭದ್ರಾವತಿ ಹೊಸಮನೆ ಎನ್‌ಎಂಸಿ ಬಡಾವಣೆಯಲ್ಲಿರುವ ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸಕ್ಕೆ ತೆರಳಿ ಆಹ್ವಾನಿಸಿದರು.
    ಭದ್ರಾವತಿ: ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದ ಹೊಸಮನೆ ಎನ್‌ಎಂಸಿ ಬಡಾವಣೆಯಲ್ಲಿರುವ ಶಾಸಕರ ನಿವಾಸಕ್ಕೆ ತೆರಳಿ ಆಹ್ವಾನಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸಕ್ಕೆ ತೆರಳಿದ ಕಾರ್ಯಕರ್ತರು ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಮಹತ್ವ ವಿವರಿಸಿ ಆಯೋಧ್ಯಾಪತಿ ಶ್ರೀರಾಮ ಚಂದ್ರನ ಭಾವಚಿತ್ರ, ಮಂತ್ರಾಕ್ಷತೆ ಹಾಗು ಆಹ್ವಾನ ಪತ್ರಿಕೆ ನೀಡಿ ಸ್ವಾಗತಿಸಿದರು.
ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಎಸ್. ಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ನ್ಯಾಯವಾದಿ ವಿನಾಯಕ್ ಅವರಿಗೂ ಸಹ ಆಹ್ವಾನ ಪತ್ರಿಕೆ ನೀಡಿ ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
    ಬಿಜೆಪಿ ಕಾರ್ಯಕರ್ತರಾದ ರಾಜಶೇಖರ್ ಉಪ್ಪಾರ, ಸುಬ್ರಮಣ್ಯ ಸೇರಿದಂತೆ ಇನ್ನಿತರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.