Tuesday, October 22, 2024

ಕಾಡುಕೋಣ ಹತ್ಯೆ ಪ್ರಕರಣ : ತಲೆಮರೆಸಿಕೊಂಡಿದ್ದ ಇಬ್ಬರ ಸೆರೆ

ಭದ್ರಾವತಿ ಅರಣ್ಯ ವಿಭಾಗದ ತಂಡ ಯಶಸ್ವಿ ಕಾರ್ಯಾಚರಣೆ 

ಕಾಡುಕೋಣ ಹತ್ಯೆ ಮಾಡಿ ಹೊಲದಲ್ಲಿ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಭದ್ರಾವತಿ ಅರಣ್ಯ ವಿಭಾಗದ ತಂಡ ಯಶಸ್ವಿಯಾಗಿದೆ. 
    ಭದ್ರಾವತಿ : ಕಾಡುಕೋಣ ಹತ್ಯೆ ಮಾಡಿ ಹೊಲದಲ್ಲಿ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಇಲ್ಲಿನ ಅರಣ್ಯ ವಿಭಾಗದ ತಂಡ ಯಶಸ್ವಿಯಾಗಿದೆ. 
    ಕಾಡುಕೋಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಶ್ರೀನಿವಾಸಪುರ ನಿವಾಸಿ ಶಿವರಾಮ(೬೫) ಮತ್ತು ಉಕ್ಕುಂದ ಗ್ರಾಮದ ನಿವಾಸಿ ರಂಗಸ್ವಾಮಿ(೩೮) ಸೇರಿದಂತೆ ೩ ಜನರ ವಿರುದ್ಧ ಅ.೧೭ರಂದು ಪ್ರಕರಣ ದಾಖಲಾಗಿತ್ತು. ಈ ಪೈಕಿ ಶಿವರಾಮ ಮತ್ತು ರಂಗಸ್ವಾಮಿ ತಲೆ ಮರೆಸಿಕೊಂಡಿದ್ದರು. 
    ಇವರ ಪತ್ತೆಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎ ರತ್ನಪ್ರಭಾ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಬಿ.ಎಚ್ ದುಗ್ಗಪ್ಪರವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಉಪವಲಯ ಅರಣ್ಯ ಅಧಿಕಾರಿಗಳಾದ, ಪಿ. ಅಣ್ಣ ನಾಯ್ಕ್, ಕೃಷ್ಣಾರೆಡ್ಡಿ, ಶೇಖರ್ ಚೌಗುಲೆ, ಹನುಮಂತ ನಾಯ್ಕ್, ಕೋರ್ಟ್ ಅಂಡ್ ಸರ್ವೆ ಸಿಬ್ಬಂದಿ ಹನುಮಂತರಾಯ ಗಸ್ತು ಅರಣ್ಯ ಪಾಲಕರಾದ ಎಸ್. ಕಾಂತೇಶ್ ನಾಯ್ಕ್, ವಿನೋದ್ ಬಿರಾದರ್, ಬಾಲರಾಜ್, ಪಿ. ನಾಗೇಂದ್ರ, ಸಿ. ಚಂದ್ರಶೇಖರ್, ಪ್ರಥಮ ದರ್ಜೆ ಸಹಾಯಕ ಎಸ್. ಎಲ್ ಸಂತೋಷ್ ಕುಮಾರ್ ಹಾಗೂ ಅರಣ್ಯ ವೀಕ್ಷಕರು ತಂಡದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  ತಂಡ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಅರಣ್ಯ ವಿಭಾಗದ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

೪೩ನೇ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಡಿ. ನಾಗರಾಜ್ ಆಯ್ಕೆ.

ಕರ್ನಾಟಕ ರಾಜ್ಯ ಯೋಗ ಸಂಸ್ಥೆ ವತಿಯಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಡಾ. ವಿಷ್ಣುವರ್ಧನ್ ರಸ್ತೆಯ, ಓಂಕಾರಾಶ್ರಮದ ಸತ್ಸಂಗ ಭವನದಲ್ಲಿ ನಡೆದ ೪೩ನೇ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭದ್ರಾವತಿ ನಗರದ ವಿವೇಕಾನಂದ ಯೋಗ ಕೇಂದ್ರದ ಡಿ. ನಾಗರಾಜ್ ೬೦ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡು ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ಕರ್ನಾಟಕ ರಾಜ್ಯ ಯೋಗ ಸಂಸ್ಥೆ ವತಿಯಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಡಾ. ವಿಷ್ಣುವರ್ಧನ್ ರಸ್ತೆಯ, ಓಂಕಾರಾಶ್ರಮದ ಸತ್ಸಂಗ ಭವನದಲ್ಲಿ ನಡೆದ ೪೩ನೇ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಯೋಗ ಕೇಂದ್ರದ ಡಿ. ನಾಗರಾಜ್ ೬೦ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದಾರೆ.  
    ಡಿ.೨೮, ೨೯ ಮತ್ತು ೩೦ರಂದು ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಯಲ್ಲಿರುವ ೪೩ನೇ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಯೋಗ ಸಂಸ್ಥೆ ಕಾರ್ಯದರ್ಶಿ ಡಿ.ಪುಟ್ಟೇಗೌಡರವರು ನಾಗರಾಜ್‌ರವರಿಗೆ ಬೆಳ್ಳಿ ಪದಕ ಹಾಗು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.  ಕರ್ನಾಟಕ ರಾಜ್ಯ ಯೋಗ ಸಂಸ್ಥೆ ಖಜಾಂಚಿ ಎಲ್.ಎಸ್ ಈಶ್ವರ್ ಹಾಗೂ ಕಾರ್ಯದರ್ಶಿ ಕೆ. ಗೋವಿಂದ ರಾವ್ ಉಪಸ್ಥಿತರಿದ್ದರು. ನಾಗರಾಜ್‌ರವರಿಗೆ ನಗರದ ಯೋಗಪಟುಗಳು, ಕ್ರೀಡಾಭಿಮಾನಿಗಳು ಹಾಗು ಗಣ್ಯರು ಅಭಿನಂದಿಸಿದ್ದಾರೆ. 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಬಹುತೇಕ ಕ್ಷೇತ್ರಗಳಿಂದ ಅವಿರೋಧ ಆಯ್ಕೆ

ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ನಡುವೆ ಪೈಪೋಟಿ : ಅ.೨೮ರಂದು ಮತದಾನ 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಕಛೇರಿ. 
    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಗೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಬಹುತೇಕ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಕೆಲವು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
    ಕೃಷಿ ಇಲಾಖೆ ಮತಕ್ಷೇತ್ರದಿಂದ ದೇವೇಂದ್ರಪ್ಪ ಕಡ್ಲೇರ, ಪಶುಪಾಲನಾ ಮತ್ತು ವೈದ್ಯ ಸೇವಾ ಇಲಾಖೆ ಮತಕ್ಷೇತ್ರದಿಂದ ಡಾ.ಸಿ.ಬಿ ರಮೇಶ್, ಕಂದಾಯ ಇಲಾಖೆ ಮತಕ್ಷೇತ್ರದಿಂದ ಕೆ.ಆರ್ ಪ್ರಶಾಂತ್ ಮತ್ತು ರವಿಕುಮಾರ್, ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಹಾಗು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮತಕ್ಷೇತ್ರದಿಂದ ಎ. ಲಲಿತಾ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಪಿಎಂಜಿಎಸ್.ವೈ ಯೋಜನೆ ಹಾಗು ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲೀಕರಣ ಇಲಾಖೆ ಮತಕ್ಷೇತ್ರದಿಂದ ಜಾನ್ ನಿರ್ಮಲ್ ಮತ್ತು ಬಿ.ಎಚ್ ಕೃಷ್ಣಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಕಛೇರಿ ಮತಕ್ಷೇತ್ರದಿಂದ ಸಿ.ಎ ಸುನಿಲ್ ಕುಮಾರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಹಾಗು ಅಲ್ಪಸಂಖ್ಯಾತರ ಇಲಾಖೆ ಮತಕ್ಷೇತ್ರದಿಂದ ಆರ್. ಅಶೋಕ್‌ರಾವ್, ತೋಟಗಾರಿಕೆ ಇಲಾಖೆ ಮತ್ತು ರೇಷ್ಮೆ ಇಲಾಖೆ ಮತಕ್ಷೇತ್ರದಿಂದ ಎಚ್.ಎಸ್ ರಾಮಕೃಷ್ಣ, ಖಜಾನೆ ಇಲಾಖೆ ಮತಕ್ಷೇತ್ರದಿಂದ ಎ.ಸಿ ಮಮತ, ನ್ಯಾಯಾಂಗ ಇಲಾಖೆಯಿಂದ ಕೆ. ಮುರಳಿಧರ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಜಿ. ಲಕ್ಷ್ಮೀಕಾಂತ ಮತ್ತು ಸಿ. ವೆಂಕಟೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತಕ್ಷೇತ್ರದಿಂದ ಡಿ. ನಾಗರತ್ನ, ಮೀನುಗಾರಿಕೆ, ತೂಕ ಮತ್ತು ಅಳತೆ ಇಲಾಖೆ ಹಾಗು ಸಾರಿಗೆ ಇಲಾಖೆ ಮತಕ್ಷೇತ್ರದಿಂದ ಬಿ.ಕೆ ನಾರಾಯಣ ಮೂರ್ತಿ, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಮತಕ್ಷೇತ್ರದಿಂದ ಆರ್. ಜನಾರ್ಧನ, ಅಬಕಾರಿ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಮತಕ್ಷೇತ್ರದಿಂದ ಸುನಿಲ್ ಕಲ್ಲೂರ, ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಹಾಗು ಸಾಂಖ್ಯಿಕ ಇಲಾಖೆ ಮತಕ್ಷೇತ್ರದಿಂದ ಎಂ. ಮಾಲತಿ ಹಾಗು ಗ್ರಂಥಾಲಯ ಇಲಾಖೆ ಹಾಗು ಕಾರ್ಮಿಕ ಇಲಾಖೆ ಮತಕ್ಷೇತ್ರದಿಂದ ರಾಜ್‌ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ಉಳಿದಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳು ಮತಕ್ಷೇತ್ರದ ಒಟ್ಟು ೩ ಸ್ಥಾನಗಳಿಗೆ ಜೇನಮ್ಮ, ಎಸ್. ನಾಗರತ್ನಮ್ಮ, ಯು. ಮಹಾದೇವಪ್ಪ, ಮುಕ್ತಿಯಾರ್ ಅಹಮದ್, ಎಸ್.ಕೆ ಮೋಹನ್, ರಮೇಶ್ ನಾಯ್ಕ, ಎ. ರಂಗನಾಥ, ವೈ.ಎನ್ ಶಶಿಧರಗೌಡ ಮತ್ತು ಎಚ್.ಎಸ್ ಸುಮಾ, ಸರ್ಕಾರಿ ಪ್ರೌಢಶಾಲೆ ಮತ ಕ್ಷೇತ್ರದ ೧ ಸ್ಥಾನಕ್ಕೆ ವಿ. ಮೋತಿನಾಯ್ಕ, ಜಿ. ಶಿವಾನಾಯ್ಕ ಮತ್ತು ಬಿ. ಸಿದ್ದಬಸಪ್ಪ, ಸರ್ಕಾರಿ ಪದವಿಪೂರ್ವ ಕಾಲೇಜುಗಳು ಮತ್ತು ಪದವಿ ಕಾಲೇಜುಗಳು ಮತಕ್ಷೇತ್ರದ ೧ ಸ್ಥಾನಕ್ಕೆ ಬಿ. ಚನ್ನಯ್ಯ, ಎಸ್. ಚಂದ್ರಶೇಖರಪ್ಪ, ಎಂ.ಆರ್ ತಿಪ್ಪೇಸ್ವಾಮಿ ಮತ್ತು ಎಂ. ವೆಂಕಟೇಶ್, ಅರಣ್ಯ ಇಲಾಖೆ ಮತಕ್ಷೇತ್ರದ ೧ ಸ್ಥಾನ ಸ್ಥಾನಕ್ಕೆ ಕಾಂತೇಶ್ ನಾಯ್ಕ ಮತ್ತು ಡಿ. ವೆಂಕಟೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತಕ್ಷೇತ್ರದ ಒಟ್ಟು ೪ ಸ್ಥಾನಗಳಿಗೆ ಉಮೇಶಪ್ಪ, ಡಾ.ಎಚ್.ಎಸ್ ಗಿರೀಶ್, ಎಚ್.ಎಂ ನಾಗರಾಜಪ್ಪ, ಪದ್ಮರಾಜ ಶೆಟ್ಟಿ, ಕೆ. ರಮೇಶ್, ಆರ್. ರೀನಾ ಮತ್ತು ಶ್ರೀನಿವಾಸ್ ಎಚ್. ಬಾಗೋಡಿ, ಎಂ.ಎಚ್ ಹರೀಶ್, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗು ಸಬಲೀಕರಣ ಮತ್ತು ಮುದ್ರಾಂಕಗಳ ಇಲಾಖೆ  ಮತಕ್ಷೇತ್ರದ ೧ ಸ್ಥಾನಕ್ಕೆ ಸಿ.ಎನ್ ಮಮತ, ಎಚ್.ಎಲ್ ಮಂಜಾನಾಯ್ಕ ಮತ್ತು ಎನ್. ವಿನಯ್, ತಾಂತ್ರಿಕ ಶಿಕ್ಷಣ ಇಲಾಖೆ(ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಕಿರಿಯ ತಾಂತ್ರಿಕ ಶಾಲೆ) ಮತಕ್ಷೇತ್ರದ ೧ ಸ್ಥಾನಕ್ಕೆ ತಮ್ಮಣ್ಣ, ಟಿ. ತಿಮ್ಮಪ್ಪ ಮತ್ತು ಎಂ.ಎನ್ ಬಸವರಾಜು ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆ ಮತಕ್ಷೇತ್ರದ ೧ ಸ್ಥಾನಕ್ಕೆ ಎಸ್.ಎನ್ ಚಂದ್ರಶೇಖರ್ ಮತ್ತು ಎಂ. ಪುಟ್ಟಲಿಂಗಮೂರ್ತಿ ಸ್ಪರ್ಧಿಸಿದ್ದಾರೆ. ಅ.೨೮ರಂದು ಮತದಾನ ನಡೆಯಲಿದ್ದು, ಇದೆ ದಿನ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿಯಾಗಿರುವ ನಿವೃತ್ತ ಉಪತಹಸೀಲ್ದಾರ್ ಎಸ್. ಮೈಲಾರಯ್ಯ ತಿಳಿಸಿದ್ದಾರೆ. 

ಇಆರ್‌ವಿ ಅಧಿಕಾರಿಗಳಿಂದ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ಮಹಿಳೆ ರಕ್ಷಣೆ

    ಭದ್ರಾವತಿ : ನಗರದ ಹೊಸಸೇತುವೆ ಬಳಿ ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ಮಹಿಳೆಯೊಬ್ಬರನ್ನು ಇಆರ್‌ವಿ ಅಧಿಕಾರಿಗಳು ರಕ್ಷಿಸಿರುವ ಘಟನೆ ೨ ದಿನಗಳ ಹಿಂದೆ ನಡೆದಿದೆ. 
    ಹೊಸಸೇತುವೆ ಬಳಿ ವೃದ್ಧ ಮಹಿಳೆಯೊಬ್ಬರು ಭದ್ರಾ ನದಿಯಲ್ಲಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಇಆರ್‌ವಿ ಅಧಿಕಾರಿಗಳಾದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಸಿಬ್ಬಂದಿ ಬಿನೇಶ್ ಹಾಗು ಶಿವಮೊಗ್ಗ ಡಿಎಆರ್ ಸಿಬ್ಬಂದಿ ಚಾಲಕ ಶಿವಶರಣರವರು ಸ್ಥಳೀಯರ ನೆರವಿನೊಂದಿಗೆ ಮಹಿಳೆಯನ್ನು ರಕ್ಷಿಸಿದ್ದಾರೆ. ನಂತರ ಆತ್ಮಹತ್ಯೆಗೆ ಯತ್ನಿಸಲು ಕಾರಣ ತಿಳಿದು ಸಮಾಧಾನಪಡಿಸಿ ಕರೆ ತಂದಿದ್ದಾರೆ. ಬಿನೇಶ್ ಹಾಗು ಶಿವಶರಣರವರ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಶಂಸಿಸಿದೆ. 
 

ಭದ್ರಾವತಿ ನಗರದ ಹೊಸಸೇತುವೆ ಬಳಿ ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ಮಹಿಳೆಯೊಬ್ಬರನ್ನು ಇಆರ್‌ವಿ ಅಧಿಕಾರಿಗಳು ರಕ್ಷಿಸಿರುವ ಘಟನೆ ೨ ದಿನಗಳ ಹಿಂದೆ ನಡೆದಿದೆ. 

Monday, October 21, 2024

ಬೊಮ್ಮನಕಟ್ಟೆಯಲ್ಲಿ ಓ.ಸಿ, ಮಟ್ಕಾ ಜೂಜಾಟ : ಪ್ರಕರಣ ದಾಖಲು


    ಭದ್ರಾವತಿ : ಮಸೀದಿಯೊಂದರ ಮುಂದಿನ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ. 
    ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಎಸ್.ಎಲ್ ಭರತ್ ಅ.೨೦ರಂದು ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಬೊಮ್ಮನಕಟ್ಟೆ ಕೂಬಾ ಮಸೀದಿ ಮುಂದಿನ ರಸ್ತೆಯಲ್ಲಿ ಪರಿಶೀಲನೆ ನಡೆಸಿದಾಗ ವ್ಯಕ್ತಿಯೋರ್ವ ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಓ.ಸಿ, ಮಟ್ಕಾ ಜೂಜಾಟ : ಪ್ರಕರಣ ದಾಖಲು



ಭದ್ರಾವತಿ : ರಸ್ತೆ ಪಕ್ಕದಲ್ಲಿ ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿ ಪ್ರವೀಣ್‌ರವರು ಅ.೧೯ರಂದು ಗಸ್ತು ಕರ್ತವ್ಯದಲ್ಲಿದ್ದಾಗ ಸಂಜೆ ಖಚಿತ ಮಾಹಿತಿ ಮೇರೆಗೆ ನಗರದ ಗುಂಡಪ್ಪ ಶೆಡ್ ರಸ್ತೆ ಪಕ್ಕದಲ್ಲಿ ಪರಿಶೀಲನೆ ನಡೆಸಿದಾಗ ವ್ಯಕ್ತಿಯೋರ್ವ ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಮಾದಕ ವಸ್ತು ಗಾಂಜಾ ಸೇವನೆ : ಪ್ರಕರಣ ದಾಖಲು

    

    ಭದ್ರಾವತಿ : ಹೊಸಮನೆ ಸಂತೆ ಮೈದಾನ ಏರಿಯಾದಲ್ಲಿ ಮಾದಕ ವಸ್ತು ಸೇವನೆ ಮಾಡಿ ಅಮಲಿನಿಂದ ವರ್ತಿಸುತ್ತಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 
    ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಸಿಬ್ಬಂದಿ ಹಣಮಂತ ಅಮಾತಿ ಅ.೧೯ರಂದು ಗಸ್ತು ಕರ್ತವ್ಯದಲ್ಲಿದ್ದಾಗ ವ್ಯಕ್ತಿಯೋರ್ವ ಅಮಲಿನಿಂದ ವರ್ತಿಸುತ್ತಿರುವುದು ಕಂಡು ಬಂದಿದ್ದು, ಈತ ಸಾರ್ವಜನಿಕರಿಗೆ ತೊಂದರೆ ನೀಡಬಹುದೆಂಬ ಅನುಮಾನದ ಮೇರೆಗೆ ವಶಕ್ಕೆ ಪಡೆದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಲಾಗಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.