ಬಿಜೆಪಿ ಮುಖಂಡರು, ಕಾರ್ಯಕರ್ತರಿಂದ ಸರ್ಕಾರದ ವಿರುದ್ಧ ಆಕ್ರೋಶ
ಪ್ರಸ್ತುತ ರಾಜ್ಯದಲ್ಲಿ ವಕ್ಫ್ ಕಾಯ್ದೆ ದುರ್ಬಳಕೆ ಹಿನ್ನಲೆಯಲ್ಲಿ ರೈತರು, ಮಠಮಾನ್ಯಗಳು, ಹಿಂದೂ ದೇವಾಲಯಗಳು ಸೇರಿದಂತೆ ಎಲ್ಲರೂ ಆತಂಕದಲ್ಲಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಈ ಕುರಿತು ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವುದು ಖಂಡನೀಯ ಎಂದು ಆಕ್ರೋಶಪಡಿಸಿ ಸೋಮವಾರ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಭದ್ರಾವತಿ ತಾಲೂಕು ಕಛೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು.
ಭದ್ರಾವತಿ : ಪ್ರಸ್ತುತ ರಾಜ್ಯದಲ್ಲಿ ವಕ್ಫ್ ಕಾಯ್ದೆ ದುರ್ಬಳಕೆ ಹಿನ್ನಲೆಯಲ್ಲಿ ರೈತರು, ಮಠಮಾನ್ಯಗಳು, ಹಿಂದೂ ದೇವಾಲಯಗಳು ಸೇರಿದಂತೆ ಎಲ್ಲರೂ ಆತಂಕದಲ್ಲಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಈ ಕುರಿತು ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವುದು ಖಂಡನೀಯ ಎಂದು ಆಕ್ರೋಶಪಡಿಸಿ ಸೋಮವಾರ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ತಾಲೂಕು ಕಛೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು.
ವಕ್ಫ್ ಕಾಯ್ದೆ ದುರ್ಬಳಕೆ ವಿರೋಧಿಸಿ ತಾಲೂಕು ಬಿಜೆಪಿ ಮಂಡಲ ಹಾಗು ಹೊಳೆಹೊನ್ನೂರು ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ವೇಳೆ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಏಕಾಏಕಿ ತಾಲೂಕು ಕಛೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ ಪೊಲೀಸರು ಹೆಚ್ಚಿನ ಬಂದೋಬಸ್ತ್‌ನೊಂದಿಗೆ ವಿಫಲಗೊಳಿಸಿದರು. ಅಲ್ಲದೆ ಈ ನಡುವೆ ಅಕ್ರಮಕ್ಕೆ ಸಾಕ್ಷಿಯಾದ ಪಹಣಿಗಳನ್ನು ಸುಟ್ಟು ಮುಖಂಡರು, ಕಾರ್ಯಕರ್ತರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ನಗರದ ಮಾಧವಚಾರ್ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಲ್ಪಸಂಖ್ಯಾತರ ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್‌ಖಾನ್ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ಈ ಹಿಂದೆ ಕಾಂಗ್ರೆಸ್‌ನವರು ರೂಪಿಸಿರುವ ವಕ್ಫ್ ಕಾಯ್ದೆ ಮುಸ್ಲಿಂ ತುಷ್ಠಿಕರಣಕ್ಕಾಗಿ, ಮತಗಳಿಕೆಯ ಆಸೆಯೊಂದಿಗೆ ರಚಿಸಿರುವ ಕಾಯ್ದೆಯಾಗಿದೆ. ಪ್ರಸ್ತುತ ಪಸ್ತುತ ರೈತರು, ಮಠಗಳ ಮಠಾಧೀಶರು, ಮಂದಿರದ ಮುಖ್ಯಸ್ಥರು ಆತಂಕಗೊಂಡಿದ್ದಾರೆ. ಕಂದಾಯ ದಾಖಲೆಗಳಲ್ಲಿ ತಮ್ಮ ಮಾಲೀಕತ್ವವದ ಆಸ್ತಿಗಳು ವಕ್ಫ್ ಪಾಲಾಗಿವೆಯೇ ಎನ್ನುವುದನ್ನು ದೃಢೀಕರಿಸಿಕೊಳ್ಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇಂದು ಕಂದಾಯ ದಾಖಲೆಗಳಲ್ಲಿ ರೈತರ ಹೆಸರುಗಳನ್ನು ತೆಗೆದು ಹಾಕದೆ ೧೯೭೪ರ ಗೆಜೆಟ್ ಪ್ರಕಾರ ಇದೀಗ ೫೦ ವರ್ಷಗಳ ನಂತರ ಇಂಡೀಕರಿಸಲು ಸೂಚನೆ ನೀಡಿದ್ದರ ಪರಿಣಾಮ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಕಳ್ಳಾಟ ಮಾಡಬಾರದು. ರೈತರಿಗೆ, ಹಿಂದುಗಳಿಗೆ ದ್ರೋಹ ಬಗೆಯಬಾರದು. ಯಾವ ರೈತರು ಕೃಷಿ ಜಮೀನನ್ನು ಸಾಗುವಳಿ ಮಾಡುತ್ತಿದ್ದಾರೋ, ಯಾವ ಮಠ- ಮಂದಿರಗಳಲ್ಲಿ ಹತ್ತು ಹಲವು ವರ್ಷಗಳಿಂದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುತ್ತಿವೆಯೋ, ಅವೆಲ್ಲವುಗಳನ್ನು ವಕ್ಫ್ ಪಾಲಾಗಲು ಬಿಜೆಪಿ ಬಿಜೆಪಿ ಬಿಡುವುದಿಲ್ಲ. ಆಸ್ತಿ ಮಾಲೀಕರಿಗೆ ಯಾವ ಮಾಹಿತಿಯೂ ಕೊಡದೆ ಗೊತ್ತೇ ಇರದಂತೆ ಸೃಷ್ಟಿ ಮಾಡಿಕೊಂಡಿರುವ ವಕ್ಫ್ ಗೆಜೆಟ್ ಅಧಿಸೂಚನೆಗಳನ್ನು ರದ್ದುಗೊಳಿಸುವ ಕ್ರಮ ರಾಜ್ಯ ಸರ್ಕಾರ ತಕ್ಷಣ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗು ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಮಲ್ಲೇಶ್ ನೇತೃತ್ವವಹಿಸಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಮೊಸರಳ್ಳಿ ಅಣ್ಣಪ್ಪ, ಶಂಕರ್‌ಮೂರ್ತಿ, ಜಿಲ್ಲಾ ವಿಶೇಷ ಆಹ್ವಾನಿತರಾದ ಎಂ. ಮಂಜುನಾಥ್, ಎಚ್. ತೀರ್ಥಯ್ಯ, ಮುಖಂಡರಾದ ಕೂಡ್ಲಿಗೆರೆ ಹಾಲೇಶ್, ಬಿ.ಜಿ ರಾಮಲಿಂಗಯ್ಯ, ಬಜರಂಗದಳ ಪ್ರಮುಖರಾದ ರಾಘವನ್ ವಡಿವೇಲು, ವಿಶ್ವ ಹಿಂದೂ ಪರಿಷತ್ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ರೇಖಾ ಬೋಸ್ಲೆ ಹಾಗೂ ಪಕ್ಷದ ಮಹಿಳಾ ಮೋರ್ಚಾ, ಯುವ ಮೋರ್ಚಾ, ರೈತ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಶಕ್ತಿ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.