Thursday, November 7, 2024

ನ.೮ರಂದು ಕನ್ನಡರಾಜ್ಯೋತ್ಸವ, ದೀಪಾವಳಿ ಆಚರಣೆ

    ಭದ್ರಾವತಿ: ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ನ.೮ರಂದು ಸಂಜೆ ೭ ಗಂಟೆಗೆ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ, ದೀಪಾವಳಿ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ, ಉಪನ್ಯಾಸ ನೀಡಲಿದ್ದಾರೆ. ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗೌವರ್ನರ್ ದಿವಾಕರಶೆಟ್ಟಿ, ಪ್ರಾಂತೀಯ ಅಧ್ಯಕ್ಷ ಮಹೇಶ್ ಕುಮಾರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎನ್. ಶಿವಕುಮಾರ್ ಮತ್ತು ಖಜಾಂಚಿ ಕೆ.ಜಿ ರಾಜ್‌ಕುಮಾರ್  ಉಪಸ್ಥಿತರಿರುವರು. 
    ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಮೂರ್ತಿ ನಾಯ್ಡು ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. 

ನ.೮ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ: ಮೆಸ್ಕಾಂ ಕೂಡ್ಲಿಗೆರೆ ಶಾಖಾ ವ್ಯಾಪ್ತಿಯ ೧೧ ಕೆವಿ ಮಾರ್ಗಗಳಲ್ಲಿ ತುರ್ತು ನಿರ್ವಹಣೆ ಕೆಲಸವಿರುವುದರಿಂದ ನ.೮ ಶುಕ್ರವಾರ ಬೆಳಿಗ್ಗೆ ೯.೩೦ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಬದನೆಹಾಳ್, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳಿಹಳ್ಳಿ, ಅತ್ತಿಗುಂದ, ಗುಡ್ಡದನೇರಲಕೆರೆ, ಕೋಮಾರನಹಳ್ಳಿ, ಕುಮರಿನಾರಾಯಣಪುರ, ಸೀತಾರಾಂಪುರ, ಹೊಸಹಳ್ಳಿ, ಸಿದ್ದರಮಟ್ಟಿ, ದೇವರಹಳ್ಳಿ, ಸಂಜೀವನಗರ, ಜಯನಗರ, ತಿಪ್ಲಾಪುರ, ಬಸಲೀಕಟ್ಟೆ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳ ೧೧ ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಲು ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. 

ಬಿ.ಓ ಸುದರ್ಶನ್ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆ

ಭದ್ರಾವತಿ ನಗರದ ನಿವಾಸಿ, ಕರ್ನಾಟಕ ಯೋಗ ರತ್ನ ಬಿ.ಓ ಸುದರ್ಶನ್ ೪೯ನೇ ಸಬ್-ಜೂನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. 
     ಭದ್ರಾವತಿ : ನಗರದ ನಿವಾಸಿ, ಕರ್ನಾಟಕ ಯೋಗ ರತ್ನ ಬಿ.ಓ ಸುದರ್ಶನ್ ೪೯ನೇ ಸಬ್-ಜೂನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. 
    ಇತ್ತೀಚೆಗೆ ಯೋಗ ಫೆಡರೇಷನ್ ಆಫ್ ಇಂಡಿಯ ಹಾಗೂ ಹಿಮಾಚಲ ಯೋಗ ಸಂಸ್ಥೆ ವತಿಯಿಂದ ಹಿಮಾಚಲ ಪ್ರದೇಶದ ಊನ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ೪೯ನೇ ಸಬ್-ಜೂನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಸಂಯೋಜಕರಾಗಿ ಮತ್ತು ತೀರ್ಪುಗಾರರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. 
    ಇವರು ಏಷ್ಯನ್ ಯೋಗ ಫೆಡರೇಷನ್ ಆಶ್ರಯದಲ್ಲಿ ಮುಂದಿನ ವರ್ಷ ೨೦೨೫ ಜನವರಿ ತಿಂಗಳಿನಲ್ಲಿ ಸಿಂಗಾಪುರದಲ್ಲಿ ನಡೆಯಲಿರುವ ೧೦ನೇ ಏಷ್ಯನ್ ಯೋಗ ಕ್ರೀಡಾ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾರತೀಯ ತಂಡ ಪ್ರತಿನಿಧಿಸುತ್ತಿದ್ದು, ಅಲ್ಲದೆ ಏಷ್ಯದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 
    ಸುದರ್ಶನ್ ಅವರನ್ನು ಯೋಗ ಫೆಡರೇಷನ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷೆ ಇಂದು ಅಗರ್ವಾಲ್ ಸನ್ಮಾನಿಸಿದರು. ಹಿಮಾಚಲ ಪ್ರದೇಶದ ಸಂಸತ್ ಸದಸ್ಯ, ಕೇಂದ್ರ ಕ್ರೀಡಾ ಮತ್ತು ಯುವಜನ ಮಾಜಿ ಸಚಿವ ಅನುರಾಗ ಠಾಕೂರ್ ಮತ್ತು ಏಷ್ಯಯನ್ ಯೋಗ ಫೆಡರೇಷನ್ ಅಧ್ಯಕ್ಷ ಅಶೋಕ್ ಕುಮಾರ್ ಅಗರ್ವಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸುದರ್ಶನ್‌ರವರು ನಗರದಲ್ಲಿ ಬಾಲ್ಯದಿಂದಲೂ ಸುಮಾರು ೩೦ ವರ್ಷಗಳಿಂದ ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ೧೯೮೯ ರಿಂದ ೨೦೦೦ರವರೆಗೆ ಯೋಗ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಹಲವಾರು ಪದಕಗಳನ್ನು ಗಳಿಸಿ ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.  
    ಇವರು ಪ್ರಸ್ತುತ ಬೆಂಗಳೂರಿನಲ್ಲಿ ಬಿಎಸ್‌ಕೆ ೩ ಹಂತದಲ್ಲಿ ವೈಐಸಿ-ವಿಐಎಎಸ್‌ಎ ಶಿಕ್ಷಕರ ತರಬೇತಿ ನೀಡುತ್ತಿದ್ದು, ಅಲ್ಲದೆ ಡಾ|| ಬಿ.ಕೆ.ಎಸ್ ಅಯ್ಯಂಗಾರ್ ಯೋಗ ತರಗತಿಗಳನ್ನು ಕೂಡಾ ನಡೆಸುತ್ತಿದ್ದಾರೆ. ಇವರನ್ನು ನಗರದ ಯೋಗ ತರಬೇತಿದಾರರು, ಯೋಗ ಅಭಿಮಾನಿಗಳು, ಗಣ್ಯರು ಅಭಿನಂದಿಸಿದ್ದಾರೆ. 
 

Wednesday, November 6, 2024

ಸಿಇಎನ್ ಪೊಲೀಸರ ಕಾರ್ಯಾಚರಣೆ : ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರ ಸೆರೆ

೪ ಕೆ.ಜೆ ೪೬೧ ಗ್ರಾಂ. ಗಾಂಜಾ ಸೇರಿ ಒಟ್ಟು ೨.೧೩ ಲಕ್ಷ ರು. ಮೌಲ್ಯದ ಸ್ವತ್ತು ವಶ 

ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಸಿಇಎನ್ ಪೊಲೀಸರು ಬಂಧಿಸಿ  ೪ ಕೆ.ಜೆ ೪೬೧ ಗ್ರಾಂ. ಗಾಂಜಾ ವಶಪಡಿಸಿಕೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಬಿಳಿಕಿ ಕ್ರಾಸ್‌ನಲ್ಲಿ ನಡೆದಿದೆ. 
    ಭದ್ರಾವತಿ: ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಸಿಇಎನ್ ಪೊಲೀಸರು ಬಂಧಿಸಿ  ೪ ಕೆ.ಜೆ ೪೬೧ ಗ್ರಾಂ. ಗಾಂಜಾ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಬಿಳಿಕಿ ಕ್ರಾಸ್‌ನಲ್ಲಿ ನಡೆದಿದೆ. 
    ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ನಿವಾಸಿ ಮೊಹಮ್ಮದ್ ಅಕ್ರಂ(೨೬) ಮತ್ತು ಸತ್ಯಸಾಯಿ ನಗರದ ನಿವಾಸಿ ಅಬ್ದುಲ್ ರಜಾಕ್(೩೫) ಇಬ್ಬರನ್ನು ಬಂಧಿಸಿ ಸುಮಾರು ೧.೪೦ ಲಕ್ಷ ರು. ಮೌಲ್ಯದ ೪ ಕೆ.ಜಿ ೪೬೧ ಗ್ರಾಂ. ತೂಕದ ಒಣ ಗಾಂಜಾ ಮತ್ತು ಸುಮಾರು ೩ ಸಾವಿರ ರು. ಮೌಲ್ಯದ ಮೊಬೈಲ್ ಹಾಗೂ ಸುಮಾರು ೭೦ ಸಾವಿರ ರು. ಮೌಲ್ಯದ ದ್ವಿ ಚಕ್ರ ವಾಹನ ಸೇರಿ ಒಟ್ಟು ೨.೧೩ ಲಕ್ಷ ರು. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ. 
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಎ.ಜಿ ಕಾರಿಯಪ್ಪ  ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆ ಕೆ. ಕೃಷ್ಣಮೂರ್ತಿ ಮೇಲ್ವಿಚಾರಣೆಯಲ್ಲಿ ಪೊಲೀಸ್ ನಿರೀಕ್ಷಕ ಪಿ.ಐ ಮಂಜುನಾಥ್ ನೇತೃತ್ವ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.  

ವಿಕಲಚೇತನರೊಂದಿಗೆ ಹಟ್ಟುಹಬ್ಬ ಆಚರಣೆ

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಡಾ. ನವೀನ್ ನಾಗರಾಜ್ ಮತ್ತು ಸಿಂಧು ದಂಪತಿ ಪುತ್ರಿ ನಿರಾಲಿ ಹಾಗು ಸವಿತಾ ವಿಶ್ವನಾಥ್‌ರವರ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಲಾಯಿತು. 
    ಭದ್ರಾವತಿ: ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಡಾ. ನವೀನ್ ನಾಗರಾಜ್ ಮತ್ತು ಸಿಂಧು ದಂಪತಿ ಪುತ್ರಿ ನಿರಾಲಿ ಹಾಗು ಸವಿತಾ ವಿಶ್ವನಾಥ್‌ರವರ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಲಾಯಿತು. 
    ಅಂಧ ವಿಕಲಚೇತನರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಸಂಭ್ರಮ ಹಂಚಿಕೊಳ್ಳಲಾಯಿತು. ಸಾಮಾಜಿಕ ಸೇವೆ ಪ್ರಮುಖ ಗುರಿಯಾಗಿಸಿಕೊಂಡಿರುವ ಲಯನ್ಸ್ ಕ್ಲಬ್‌ನಲ್ಲಿ ದಂಪತಿ ತೊಡಗಿಸಿಕೊಂಡಿದ್ದು, ಪುತ್ರಿ ನಿರಾಲಿ ಹುಟ್ಟುಹಬ್ಬ ಸಮಾಜಕ್ಕೆ ಮಾದರಿಯಾಗಬೇಕೆಂಬ ಆಶಯ ವ್ಯಕ್ತಪಡಿಸಲಾಯಿತು. 
    ಲಯನ್ಸ್ ಪ್ರಮುಖರಾದ ರಾಮಸ್ವಾಮಿ ನಾಯ್ಡು, ಶಿವಕುಮಾರ್, ರಾಜಕುಮಾರ್, ಹೆಬ್ಬಂಡಿ ನಾಗರಾಜ್, ಆರ್. ಉಮೇಶ್, ಶ್ರೀನಿವಾಸ್, ಮಂಜುನಾಥ್,  ವಿಶ್ವನಾಥ್, ಎಂ.ಎಸ್ ಮಂಜುನಾಥ್,  ಡಾರತಿ, ನಿರ್ಮಲ, ಸವಿತಾ ಹಾಗು ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ  ಹಾಗು  ಬಿ.ಆರ್ ಪ್ರಾಜೆಕ್ಟ್ ಲಯನ್ಸ್  ಕ್ಲಬ್  ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
 

ನಿವೃತ್ತ ಇಂಜಿನಿಯರ್ ಹನುಮಗೌಡ ನಿಧನ

ಹನುಮಗೌಡ 
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಇಂಜಿನಿಯರ್ ಹನುಮಗೌಡ(೭೫) ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ, ಪುತ್ರಿ ಹಾಗು ಪುತ್ರ ಇದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ನಗರದ ಲೋಯರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಹನುಮಗೌಡರವರು ವಿಐಎಸ್‌ಎಲ್ ಕಾರ್ಖಾನೆಯ ಸಿ.ಇ ಪ್ಲಾಂಟ್‌ನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇವರ ನಿಧನಕ್ಕೆ ನಿವೃತ್ತ ಕಾರ್ಮಿಕರ ಸಂಘ ಸಂತಾಪ ಸೂಚಿಸಿದೆ. 

ವಿಐಎಸ್‌ಎಲ್ ಜಾಗೃತಾ ತಿಳುವಳಿಕೆ ಸಪ್ತಾಹ : ಸಮಾರೋಪ ಸಮಾರಂಭ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಕೇಂದ್ರ ಜಾಗೃತಾ ಆಯೋಗ ಮತ್ತು ಸೈಲ್ ಕಾರ್ಪೋರೇಟ್ ವಿಜಿಲೆನ್ಸ್ ನಿರ್ದೇಶನದಂತೆ ಈ ಬಾರಿ ಜಾಗೃತಾ ತಿಳುವಳಿಕೆ ಸಪ್ತಾಹ "ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ" ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು.
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಕೇಂದ್ರ ಜಾಗೃತಾ ಆಯೋಗ ಮತ್ತು ಸೈಲ್ ಕಾರ್ಪೋರೇಟ್ ವಿಜಿಲೆನ್ಸ್ ನಿರ್ದೇಶನದಂತೆ ಈ ಬಾರಿ ಜಾಗೃತಾ ತಿಳುವಳಿಕೆ ಸಪ್ತಾಹ "ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ" ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು.
    ಜಾಗೃತಾ ತಿಳುವಳಿಕೆ ಸಪ್ತಾಹ ಸಮಾರೋಪ ಸಮಾರಂಭ ಶಾರದಾ ಮಂದಿರದಲ್ಲಿ ಆಯೋಜಿಸಲಾಗಿತ್ತು. ಸೈಂಟ್ ಚಾರ್ಲ್ಸ್ ಶಾಲೆ ೩ನೇ ತರಗತಿ ವಿದ್ಯಾರ್ಥಿನಿ ಪಾವನಿ ಎಂ. ನಾಯಕ್ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.  ವೃತ್ತಿ ಬದುಕು ಮತ್ತು ವೈಯುಕ್ತಿಕ ಬದುಕಿನಲ್ಲಿ ಪ್ರಾಮಾಣಿಕತೆ, ನೀತಿ ಮತ್ತು ಮೌಲ್ಯಗಳ ಮಹತ್ವ ಸಾರುವ "ಸತ್ಯ-ನಿಷ್ಠೆ" ನಾಟಕ ನಗರದ ಅಪ್ಪರ್ ಹುತ್ತಾ ಅನನ್ಯ ಶಾಲೆಯ ಮಕ್ಕಳು ಅದ್ಭುತವಾಗಿ ಪ್ರದರ್ಶಿಸಿದರು.
    ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್, ನಮ್ಮ ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕಿರುವ ಹಾಗು ಜೀವನದಲ್ಲಿ ಅತಿಮುಖ್ಯವಾದ ಪ್ರಾಮಾಣಿಕತೆ, ನೀತಿ, ಪಾರದರ್ಶಕತೆ ಮತ್ತು ಮೌಲ್ಯಗಳ ಮಹತ್ವ ಬಗ್ಗೆ ಒತ್ತಿಹೇಳಿದರು.
    ಮಹಾಪ್ರಬಂಧಕ(ವಿಜಿಲೆನ್ಸ್ ಮತ್ತು ಎ.ಸಿ.ವಿ.ಓ) ರಘುನಾಥ ಬಿ. ಅಷ್ಟಪುತ್ರೆ, ಜಾಗೃತಾ ತಿಳುವಳಿಕೆ ಸಪ್ತಾಹ ಅಂಗವಾಗಿ ೧೮೨ ಉದ್ಯೋಗಿಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ, ಮಾರುಕಟ್ಟೆ ಇಲಾಖೆ ಆಯೋಜಿಸಿದ್ದ ಗ್ರಾಹಕರ ಸಭೆ, ನೈತಿಕ ಉದ್ಯಾನವನ ಸ್ವಚ್ಛತೆ ಮುಂತಾದ ಚಟುವಟಿಕೆಗಳ ವಿವರವಾದ ವರದಿ ಮಂಡಿಸಿದರು. 
    ಎಥಿಕ್ಸ್ ಕ್ಲಬ್ ಚಟುವಟಿಕೆಗಳಲ್ಲಿ ಸಹಕಾರ ನೀಡಿದ ಅನನ್ಯ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್ ಅನಿಲ್ ಕುಮಾರ್, ಆಡಳಿತಾಧಿಕಾರಿ ವೇಣುಗೋಪಾಲ್, ಮುಖ್ಯೋಪಾಧ್ಯಾಯ ಕೆ. ಕಲ್ಲೇಶ್ ಕುಮಾರ್ ಮತ್ತು ಸಿಬ್ಬಂದಿಗಳನ್ನು  ಗೌರವಿಸಲಾಯಿತು. ಜಾಗೃತಾ ತಿಳುವಳಿಕೆ ಸಪ್ತಾಹ ಅಂಗವಾಗಿ ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. 
    ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಕಾರ್ಮಿಕರ ಸಂಘದ ಉಪಾಧ್ಯಕ್ಷ ಕೆ.ಬಿ ಮಲ್ಲಿಕಾರ್ಜುನ,  ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿಕಾಸ್ ಬಸೇರ್ ಸೇರಿದಂತೆ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು. 
    ಕಿರಿಯ ಪ್ರಬಂಧಕ(ಮಿಲ್ಸ್ ಮತ್ತು ಆರ್.ಟಿ.ಎಸ್) ಸಿ. ಲಕ್ಷ್ಮೀಕಾಂತ ಪ್ರಾರ್ಥಿಸಿದರು. ವಿಜಿಲೆನ್ಸ್ ಇಲಾಖೆಯ ಕೇದಾರನಾಥ್ ಸ್ವಾಗತಿಸಿ, ಸಹಾಯಕ ಮಹಾಪ್ರಬಂಧಕ ಎಲ್. ಕುತಲನಾಥನ್,  ಕಾರ್ಯಕ್ರಮ ನಿರೂಪಿಸಿ, ಚೇತನ್ ತಡ್ಕಲ್ ವಂದಿಸಿದರು.