Monday, November 18, 2024

ವಿರೋಧದ ನಡುವೆಯೂ ನ.೧೯ರಂದು ಪ್ರತಿಭಟನೆ

 
    ಭದ್ರಾವತಿ: ವಿರೋಧದ ನಡುವೆಯೂ ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಬಡ್ತಿ ಹಾಗು ಸೇವಾ ಸೌಲಭ್ಯಗಳ ಈಡೇರಿಕೆಗಾಗಿ ನ.೧೯ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 
    ಪ್ರತಿಭಟನೆ ಹಮ್ಮಿಕೊಳ್ಳುವ ಸಂಬಂಧ ವಿಶ್ವವಿದ್ಯಾಲಯಕ್ಕೆ ಸಂಘದ ವತಿಯಿಂದ ಪತ್ರ ಬರೆದು ಕೋರಲಾಗಿತ್ತು. ಅಲ್ಲದೆ ನ.೧೮ರೊಳಗಾಗಿ ಬೇಡಿಕೆಗಳು ಈಡೇರದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಲಾಗಿತ್ತು. ಆದರೆ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ವಿಶ್ವವಿದ್ಯಾಲಯ ಸಂಘಕ್ಕೆ ಪತ್ರ ಬರೆದು ತಿಳಿಸಿದೆ. 
    ಹೋರಾಟ ನಮಗೆ ಸಂವಿಧಾನ ನೀಡಿರುವ ಹಕ್ಕು, ನ್ಯಾಯ ಬದ್ಧವಾದ ಹೋರಾಟ ಇದಾಗಿದೆ. ಇದು ಯಾವುದೇ ವ್ಯಕ್ತಿ ವಿರುದ್ಧ ಅಥವಾ ವೈಯಕ್ತಿಕ ಹೋರಾಟವಲ್ಲ. ಈಗಾಗಲೇ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಈ ಸಂಬಂಧ ಹೋರಾಟಕ್ಕೆ ಅವಕಾಶ ನೀಡಲಾಗಿದೆ. ನಮ್ಮ ಹೋರಾಟದಿಂದ ಯಾವುದೇ ರೀತಿ ಸಮಸ್ಯೆ ಉದ್ಭವಿಸುವುದಿಲ್ಲ. ಈ ಹಿನ್ನಲೆಯಲ್ಲಿ  ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಭವನ ಮುಂಭಾಗ ಹೋರಾಟ ನಡೆಸುವುದಾಗಿ ಸಂಘದ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ. 

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ಕನಕ ಜಯಂತಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ಭದ್ರಾವತಿ ನಗರದ ಹೊಸಸೇತುವೆ ರಸ್ತೆ, ಸಿದ್ದಾರೂಢನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಕನಕ ಜಯಂತಿ ಆಚರಿಸಲಾಯಿತು.
    ಭದ್ರಾವತಿ: ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸಸೇತುವೆ ರಸ್ತೆ, ಸಿದ್ದಾರೂಢನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಕನಕ ಜಯಂತಿ ಆಚರಿಸಲಾಯಿತು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಕ ದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಅವರ ಕುರಿತು ಉಪನ್ಯಾಸ ನೀಡಲಾಯಿತು. 
    ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ಕಾರ್ಯದರ್ಶಿ ಎಸ್.ಕೆ ಮೋಹನ್, ನಿರ್ದೇಶಕ ಪುಟ್ಟಲಿಂಗ ಮೂರ್ತಿ ಸೇರಿದಂತೆ ನಿರ್ದೇಶಕರು  ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕನಕದಾಸ, ಬಸವೇಶ್ವರ, ಅಂಬೇಡ್ಕರ್‌ರವರ ವಿಚಾರಧಾರೆಗಳನ್ನು ಅರ್ಥೈಸಿಕೊಳ್ಳಿ : ಬಿ.ಕೆ ಮೋಹನ್

ಭದ್ರಾವತಿಯಲ್ಲಿ ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಕುರುಬರ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೫೩೭ನೇ ಜಯಂತ್ಯೋತ್ಸವ ಕಾರ್ಯಕ್ರಮ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ: ಸರ್ವ ಜನಾಂಗಕ್ಕೆ ಕನಕದಾಸರು, ಜಗಜ್ಯೋತಿ ಬಸವೇಶ್ವರರು ಹಾಗು ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರು ಆದರ್ಶಪ್ರಾಯರಾಗಿದ್ದು, ಈ ಮಹಾನೀಯರ ವಿಚಾರಧಾರೆಗಳನ್ನು ನಾವೆಲ್ಲರೂ ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ. ಭವಿಷ್ಯದಲ್ಲಿ ಇನ್ನೂ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು. 
    ಅವರು ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಕುರುಬರ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೫೩೭ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಸಾಮಾಜಿಕ ಅಸಮಾನತೆ, ಜಾತಿ ತಾರತಮ್ಯ, ಶೋಷಣೆಗಳ ವಿರುದ್ಧ ಹೋರಾಡಿ ಸಮಾಜಕ್ಕೆ ತಮ್ಮದೇ ಆದ ಆದರ್ಶ ಮೌಲ್ಯಗಳನ್ನು ನೀಡಿರುವ ಈ ೩ ಜನ ಮಹನೀಯರನ್ನು ನಾವೆಲ್ಲರೂ ಪ್ರತಿಬಾರಿ ಸ್ಮರಿಸಬೇಕಾಗಿದೆ. ಪ್ರಸ್ತುತ ಕುರುಬರ ಸಮಾಜ ಸದೃಢವಾಗಿ ಬೆಳೆದು ನಿಂತಿದೆ. ಇದರ ಹಿಂದೆ ಸಂಘಟನೆಯ ನೇತೃತ್ವವಹಿಸಿರುವವರ ಶ್ರಮ ಹೆಚ್ಚಿನದ್ದಾಗಿದೆ. ಕುರುಬರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಬೃಹತ್ ಶಕ್ತಿಯಾಗಿ ಬೆಳೆದಿದ್ದಾರೆ. ಇಂತಹ ಸಮಾಜಕ್ಕೆ ಶಾಸಕರು ತಮ್ಮ ಸ್ವಂತ ಜಾಗವನ್ನು ನೀಡಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು. 
    ಅಧ್ಯಾಪಕ, ಸಾಹಿತಿ ಅರಳಿಹಳ್ಳಿ ಅಣ್ಣಪ್ಪ ಉಪನ್ಯಾಸ ನೀಡಿ, ಕನಕದಾಸರು ೧೫-೧೬ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಬೀರಪ್ಪನಾಯಕ-ಬಚ್ಚಮ್ಮ ದಂಪತಿ ಪುತ್ರರಾಗಿದ್ದಾರೆ. ಆರಂಭದಲ್ಲಿ ತಿಮ್ಮಪ್ಪನಾಯಕ ಎಂಬ ಹೆಸರಿನಲ್ಲಿ ವಿಜಯನಗರ ಸಾಮ್ರಾಜ್ಯದ ಸೇನೆಯಲ್ಲಿ ಡಣ್ಣಾಯಕನಾಗಿ ಸೇವೆ ಸಲ್ಲಿಸಿ ಪ್ರಶಂಸೆಗೆ ಪಾತ್ರರಾಗಿದ್ದು, ನಂತರ ಅವರಿಗೆ ಸಿಕ್ಕಿದ ಚಿನ್ನಾಭರಣಗಳಿಂದ ಕನಕನಾಯಕರಾಗಿ ಗುರುತಿಸಿಕೊಂಡಿದ್ದು, ಕೊನೆಯಲ್ಲಿ ಯುದ್ಧದಲ್ಲಿ ಸೋತ ಅವರಿಗೆ ಆಧ್ಯಾತ್ಮಿಕ ಜ್ಞಾನೋದಯವಾಗಿ ಕನಕದಾಸರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದರು. 
    ಸಾಮಾಜಿಕ ಅಸಮಾನತೆ, ಜಾತಿ ತಾರತಮ್ಯ ಹಾಗು ಶೋಷಣೆಗಳ ವಿರುದ್ಧ ಸಿಡಿದೆದ್ದರು. ಒಬ್ಬ ದಾರ್ಶನಿಕನಾಗಿ, ಸಾಮಾಜಿಕ ಸುಧಾರಕನಾಗಿ, ವೈಜ್ಞಾರಿಕತೆಯ ಬೆಳಕಾಗಿ ಎಂದಿಗೂ ಕನಕದಾಸರು ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದರು. 
    ತಹಸೀಲ್ದಾರ್ ಕೆ.ಆರ್ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಆಶ್ರಯ ಸಮಿತಿ ಅಧ್ಯಕ್ಷ ಜಿ.ಎಸ್ ಗೋಪಾಲ್, ಸೂಡಾ ಸದಸ್ಯರಾದ ವೈ. ರೇಣುಕಮ್ಮ, ಎಚ್. ರವಿಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಉಮೇಶ್, ಕರ್ನಾಟಕ ರಾಜ್ಯ ಪೌರ ಸೇವಾ  ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ನಗರಸಭೆ ಆರ್. ಶ್ರೇಯಸ್, ಕುರುಬರ ಸಂಘದ ವಸಂತ್, ಬಿ.ಎಸ್ ಮಂಜುನಾಥ್, ಕೇಶವ, ಮಂಜುನಾಥ್ ಕೊಯ್ಲಿ, ಕುಮಾರ್, ಪ್ರವೀಣ್, ಮಲ್ಲೇಶ್, ಸರಸ್ವತಿ, ರಾಜೇಂದ್ರ, ಉದ್ಯಮಿ ಬಿ.ಕೆ ಜಗನ್ನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಶಿಕ್ಷಕಿಯರಾದ ಎಚ್.ಎಚ್ ಯಾಮಮ್ಮ, ತ್ರಿವೇಣಿ ಮತ್ತು ಕೆ. ಕೋಕಿಲಾ ತಂಡದವರು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿ, ಪ್ರಶಾಂತ್ ಸಣ್ಣಕ್ಕಿ ಕಾರ್ಯಕ್ರಮ ನಿರೂಪಿಸಿದರು. 
    ಇದಕ್ಕೂ ಮೊದಲು ಬಿ.ಎಚ್ ರಸ್ತೆ, ಲೋಯರ್ ಹುತ್ತಾದಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕನಕದಾಸರ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. ಸಮಾಜ ಸೇವಕ ಸಿ. ಮಹೇಶ್ ಕುಮಾರ್ ಸೇರಿದಂತೆ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು. 

Sunday, November 17, 2024

ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಕಸಾಪ ದತ್ತಿ ಕಾರ್ಯಕ್ರಮ

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ದಿವಂಗತ ಎಂ. ಮಲ್ಲಿಕಾರ್ಜುನ ಕೋಠಿ ದತ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ದಿವಂಗತ ಎಂ. ಮಲ್ಲಿಕಾರ್ಜುನ ಕೋಠಿ ದತ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ನಗರದ ಬೈಪಾಸ್ ರಸ್ತೆ, ವಿಶ್ವೇಶ್ವರಾಯ ನಗರದ ಸ್ಪೂರ್ತಿ ಇಂಟರ್‌ನ್ಯಾಷನಲ್ ಶಿಕ್ಷಣ ಸಂಯೋಜಕಿ ಬಿ. ಮಮತ ನವೀನ್ ವಚನ ಸಾಹಿತ್ಯ ದತ್ತಿ ವಿಷಯ ಕುರಿತು ಉಪನ್ಯಾಸ ನಡೆಸಿಕೊಟ್ಟರು. ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಅಧ್ಯಕ್ಷತೆವಹಿಸಿದ್ದರು. 
    ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಕಸಾಪ ಕಾರ್ಯದರ್ಶಿ ಟಿ. ತಿಮ್ಮಪ್ಪ, ಕಮಲಾಕರ್, ದತ್ತಿದಾನಿ ನಾಗರತ್ನ ವಾಗೀಶ್ ಕೋಠಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಗಾಂಧಿನಗರ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಸಮುದಾಯೋತ್ಸವ

ಭದ್ರಾವತಿ ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ ಧರ್ಮ ಕೇಂದ್ರದ ಭಕ್ತಾಧಿಗಳಿಂದ ಸಮುದಾಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
    ಭದ್ರಾವತಿ : ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ ಧರ್ಮ ಕೇಂದ್ರದ ಭಕ್ತಾಧಿಗಳಿಂದ ಸಮುದಾಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. 
    ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೊರವರು ದೀಪ ಬೆಳಗಿಸಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂತೆಯೇ ವಯಸ್ಕರ ಧರ್ಮೋಪದೇಶ ತರಗತಿಗಳನ್ನು ತೆಗೆದುಕೊಂಡರು. 
    ಪ್ರಾಸ್ತಾವಿಕ ನುಡಿಗಳನಾಡಿದ ಧರ್ಮಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ, ಧರ್ಮ ಕೇಂದ್ರದ ಭಕ್ತಾಧಿಗಳು ವಿವಿಧ ವಲಯ(ವಾರ್ಡ್)ಗಳಲ್ಲಿ ವಾಸಿಸುವುದರಿಂದ ಆ ವಲಯಗಳ ಭಕ್ತ ಸಮೂಹವು ವಿವಿಧ ಸಂತರುಗಳ ಹೆಸರುಗಳನ್ನು ವಹಿಸಿಕೊಂಡು ಸಮುದಾಯದವನ್ನಾಗಿ ನಿರ್ಮಿಸಲಾಗಿದೆ. ಆ ವಿವಿಧ ಸಮುದಾಯಗಳ ಭಕ್ತಾಧಿಗಳು ಇಂದು ಒಟ್ಟುಗೂಡಿ ಸಮುದಾಯೋತ್ಸವ ಆಚರಿಸಲಾಗುತ್ತಿದೆ ಎಂದರು. 
    ಸಮುದಾಯೋತ್ಸವದ ಅಂಗವಾಗಿ ವಿವಿಧ ಸಮುದಾಯಗಳಿಂದ ಬೈಬಲ್ ಆಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಈ ರೀತಿಯ ಚಟುವಟಿಕೆಗಳು ನಡೆಯುವುದರಿಂದ ಸಮುದಾಯದಲ್ಲಿರುವ ಕುಟುಂಬಗಳು ಒಂದುಗೂಡಲು, ಪರಸ್ಪರ ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ ಎಂದರು. 
    ಧರ್ಮ ಕೇಂದ್ರದಿಂದ ಒಟ್ಟು ೧೧ ಸಮುದಾಯಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ನೀಡಿ ಸ್ಪರ್ಧಿಸಿದವು. ನಿರ್ಮಲ ಮಾತೆ ಸಮುದಾಯ ಪ್ರಥಮ ಮತ್ತು ಆರೋಗ್ಯ ಮಾತೆ ಸಮುದಾಯ ದ್ವಿತೀಯ ಬಹುಮಾನಗಳನ್ನು ಪಡೆದುಕೊಂಡವು. 
    ಸಮುದಾಯದ ನಿರ್ದೇಶಕಿ ಸಿಸ್ಟರ್ ಬರ್ನಿ, ನಿರ್ಮಲ ಆಸ್ಪತ್ರೆ ಸುಪೀರಿಯರ್ ಸಿಸ್ಟರ್ ವಿಲ್ಮಾ, ಧರ್ಮಭಗಿನಿಯರು, ಸಮುದಾಯ ಒಕ್ಕೂಟಗಳ ಸದಸ್ಯರು, ಪಾಲನಾ ಪರಿಷತ್, ಆರ್ಥಿಕ ಸಮಿತಿಯ ಸದಸ್ಯರು ಮತ್ತು ಭಕ್ತಾಧಿಗಳು ಪಾಲ್ಗೊಂಡಿದ್ದರು.

ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕರಾಗಿ ಎಸ್. ಮಂಜುನಾಥ್ ನೇಮಕ

ಭದ್ರಾವತಿ ಜನ್ನಾಪುರ ನಿವಾಸಿ, ಮಾದಿಗ ಸಮಾಜ(ಕೆಆರ್‌ಎಂಎಸ್) ರಾಜ್ಯಾಧ್ಯಕ್ಷ ಎಸ್. ಮಂಜುನಾಥ್‌ರವರನ್ನು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕರಾಗಿ ನೇಮಕಗೊಳಿಸಲಾಗಿದೆ. ಶಾಸಕ ಬಿ.ಕೆ ಸಂಗಮೇಶ್ವರ್ ಭಾನುವಾರ ಆದೇಶ ಪತ್ರ ವಿತರಿಸಿದರು. 
    ಭದ್ರಾವತಿ: ನಗರದ ಜನ್ನಾಪುರ ನಿವಾಸಿ, ಮಾದಿಗ ಸಮಾಜ(ಕೆಆರ್‌ಎಂಎಸ್) ರಾಜ್ಯಾಧ್ಯಕ್ಷ ಎಸ್. ಮಂಜುನಾಥ್‌ರವರನ್ನು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕರಾಗಿ ನೇಮಕಗೊಳಿಸಲಾಗಿದೆ.  
     ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಒ.ಬಿ.ಸಿ, ಅಲ್ಪಸಂಖ್ಯಾತ ಉಸ್ತುವಾರಿ ಕೆ.ರಾಜು ಹಾಗು ಎ.ಐ.ಸಿ.ಸಿ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಲಿಲೋತಿಯರವರ ಆದೇಶದ ಮೇರೆಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿರ್ದೇಶನದಂತೆ  ಕೆ.ಪಿ.ಸಿ.ಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್ ಧರ್ಮಸೇನ ಮಂಜುನಾಥ್‌ರವರನ್ನು ನೇಮಕಗೊಳಿಸಿದ್ದಾರೆ. 
     ಜಿಲ್ಲಾ ವ್ಯಾಪ್ತಿಯಲ್ಲಿ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು ಹಾಗು ಪಕ್ಷದ ಮುಖಂಡರ ಸಹಕಾರದೊಂದಿಗೆ ಜಿಲ್ಲಾ ಬ್ಲಾಕ್ ಮತ್ತು ಬೂತ್ ಮಟ್ಟದಲ್ಲಿ ಪರಿಶಿಷ್ಟಜಾತಿ ಸಮುದಾಯದ ಎಲ್ಲಾ ಜನಾಂಗದ ಜನರನ್ನು ಗುರುತಿಸಿ ಪಕ್ಷದ ಸಂಘಟನೆಗೆ ಶ್ರಮಿಸುವಂತೆ ಕೋರಲಾಗಿದೆ.  ಆದೇಶ ಪತ್ರವನ್ನು ಭಾನುವಾರ ಶಾಸಕರ ಗೃಹ ಕಛೇರಿಯಲ್ಲಿ ಎಸ್. ಮಂಜುನಾಥ್‌ರವರಿಗೆ ನೀಡಿ ಅಭಿನಂದಿಸಲಾಯಿತು. 

ಪರಿಶಿಷ್ಟ ಜಾತಿ ಸಮುದಾಯದವರಿಗೆ ಪಕ್ಷದಲ್ಲಿ ಹೆಚ್ಚಿನ ಅವಕಾಶ : ಶಾಸಕರಿಗೆ ಕೃತಜ್ಞತೆ


ಭದ್ರಾವತಿಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರನ್ನು ಗೃಹಕಛೇರಿಯಲ್ಲಿ ಮಾದಿಗ ಸಮಾಜ(ಕೆಆರ್‌ಎಂಎಸ್) ರಾಜ್ಯಾಧ್ಯಕ್ಷ, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಎಸ್. ಮಂಜುನಾಥ್ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರನ್ನು ಗುರುತಿಸಿ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ಕಾರಣಕರ್ತರಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ರವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಮಾದಿಗ ಸಮಾಜ(ಕೆಆರ್‌ಎಂಎಸ್) ರಾಜ್ಯಾಧ್ಯಕ್ಷ, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಎಸ್. ಮಂಜುನಾಥ್ ಹೇಳಿದರು. 
    ಅವರು ಭಾನುವಾರ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹಕಛೇರಿಯಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು. 
    ಈಗಾಗಲೇ ತಮ್ಮ ಮಾರ್ಗದರ್ಶನದಲ್ಲಿ ಕ್ಷೇತ್ರದಾದ್ಯಂತ ಪರಿಶಿಷ್ಟ ಜಾತಿ ಸಮುದಾಯದವರನ್ನು ಸಂಘಟಿಸಿದ್ದು, ಅಲ್ಲದೆ ಇತ್ತೀಚೆಗೆ ನಡೆದ ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಉಸ್ತುವಾರಿಯಾಗಿ ನೇಮಕಗೊಳ್ಳಲು ಕಾರಣಕರ್ತರಾಗುವ ಮೂಲಕ ಇದೀಗ ರಾಜ್ಯ ಸಂಚಾಲಕರಾಗಿ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುವುದು ಸಂತಸವನ್ನುಂಟುಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು. 
    ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಶರವಣ, ಸಿ. ಜಯಪ್ಪ, ಪ್ರಮೋದ್ ಕಡೂರು, ಬಸವರಾಜ್ ದಾನವಾಡಿ, ಮೋಹನ್, ನಂಜುಂಡನಾಯ್ಕ ನಾಗತಿಬೆಳಗಲು, ರಂಗಸ್ವಾಮಿ ದಾನವಾಡಿ, ಚಂದ್ರಪ್ಪ ಕೂಡ್ಲಿಗೆರೆ, ಸ್ವಾಮಿ, ನಾಗರಾಜ್ ತಟ್ಟೆಹಳ್ಳಿ, ಜೆಬಿಟಿ ಬಾಬು ಸೇರಿದಂತೆ ಮಾದಿಗ ಸಮಾಜದ ಪ್ರಮುಖರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.