Saturday, November 23, 2024

ಅಂತರಗಂಗೆ ಕ್ಯಾಂಪ್‌ನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ : ದಾಳಿ

ಭದ್ರಾವತಿ: ತಾಲೂಕಿನ ಅಂತರಗಂಗೆ ಕ್ಯಾಂಪ್ ಚಾನಲ್ ಬಳಿ ಗುಡ್ಡದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಲಾರಿಗೆ ಜೆಸಿಬಿ ಮೂಲಕ ಕಲ್ಲು ತುಂಬಿಕೊಂಡು ಹೋಗುತ್ತಿರುವುದು. 
    ಭದ್ರಾವತಿ: ತಾಲೂಕಿನ ಅಂತರಗಂಗೆ ಕ್ಯಾಂಪ್ ಚಾನಲ್ ಬಳಿ ಗುಡ್ಡದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಶನಿವಾರ ರಾತ್ರಿ ತಹಸೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿರುವ ಘಟನೆ ನಡೆದಿದೆ. 
    ಚಾನಲ್ ಬಳಿ ಜಮೀನಿನಲ್ಲಿರುವ ಗುಡ್ಡದಲ್ಲಿ ಜೆಸಿಬಿ ಹಾಗು ಟ್ರ್ಯಾಕ್ಟರ್ ಬಳಸಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ ಕಲ್ಲುಗಳನ್ನು ಲಾರಿ ಮೂಲಕ ಬೇರೆಡೆಗೆ ಸಾಗಾಟ ಮಾಡಲಾಗುತ್ತಿದ್ದು, ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಕೆ.ಆರ್ ನಾಗರಾಜು, ಪೇಪರ್‌ಟೌನ್ ಪೊಲೀಸ್ ಠಾಣೆ ನಿರೀಕ್ಷಕಿ ನಾಗಮ್ಮ ಹಾಗು ಭೂ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ದಾಳಿ ನಡೆಸಿದೆ.  ದಾಳಿ ವೇಳೆ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ. 

ವಿಜೃಂಭಣೆಯಿಂದ ಜರುಗಿದ ಶ್ರೀ ಸತ್ಯ ಸಾಯಿ ಬಾಬಾರ ೯೯ನೇ ಜನ್ಮದಿನೋತ್ಸವ

ಭದ್ರಾವತಿ ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ೮ ದಿನಗಳ ಕಾಲ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೯ನೇ ಜನ್ಮದಿನೋತ್ಸವ ಸಾಮಾಜಿಕ ಸೇವಾ ಕಾರ್ಯಗಳು ಹಾಗು ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಶನಿವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಡಾ. ಕೊಟೇಶ್ ಶರ್ಮ ಶಿಬಿರ ಉದ್ಘಾಟಿಸುವ ಜೊತೆಗೆ ರಕ್ತದಾನ ಮಾಡಿದರು. 
    ಭದ್ರಾವತಿ: ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ೮ ದಿನಗಳ ಕಾಲ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೯ನೇ ಜನ್ಮದಿನೋತ್ಸವ ಸಾಮಾಜಿಕ ಸೇವಾ ಕಾರ್ಯಗಳು ಹಾಗು ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. 
    ಶನಿವಾರ ಬೆಳಿಗ್ಗೆ ಓಂಕಾರ, ಜ್ಯೋತಿರ್ಧ್ಯಾನ, ಸುಪ್ರಭಾತ, ನಗರಸಂಕೀರ್ತನೆ, ಪ್ರಶಾಂತಿ ಧ್ವಜಾರೋಹಣ, ಶಿವಮೊಗ್ಗ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಸಹಯೋಗದೊಂದಿಗೆ ಉಚಿತ ರಕ್ತದಾನ ಶಿಬಿರ, ಸಾಮೂಹಿಕ ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಶ್ರೀ ಸತ್ಯ ಸಾಯಿ ಬಾಬಾರವರ ಪಲ್ಲಕ್ಕಿ ಉತ್ಸವ, ಶ್ರೀ ಸತ್ಯ ಸಾಯಿ ಸಹಸ್ರನಾಮಾರ್ಚನೆ, ಮಧ್ಯಾಹ್ನ ಮಹಾಮಂಗಳಾರತಿ, ನಾರಾಯಣರಿಗೆ ವಸ್ತ್ರದಾನ ಮತ್ತು ನಾರಾಯಣ ಸೇವೆ ಹಾಗು ಶಾಲಾ ಮಕ್ಕಳಿಗೆ, ಪೋಷಕರಿಗೆ ಮತ್ತು ಭಕ್ತಾಧಿಗಳಿಗೆ ಮಹಾಪ್ರಸಾದ ವಿನಿಯೋಗ, ಸಂಜೆ ವೇದ ಪಠಣ ಹಾಗು ಭಜನೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
    ಪ್ರಶಾಂತಿ ದ್ವಜಾರೋಹಣ ಹಿರಿಯ ಸಾಯಿ ಭಕ್ತರಾದ ಶಿವಾಜಿರಾವ್ ನೆರವೇರಿಸಿದರು. ಉಚಿತ ರಕ್ತದಾನ ಶಿಬಿರ ಡಾ. ಕೊಟ್ರೇಶ್ ಶರ್ಮ ಉದ್ಘಾಟಿಸಿದರು.  ಶಿವಮೊಗ್ಗ ರಾಮಕೃಷ್ಣ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಪಾಲ್ಗೊಂಡು ಭಕ್ತರನ್ನು ಆಶೀರ್ವದಿಸಿದರು. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಣ ಸಂಯೋಜಕ ಪರಮೇಶ್ವರಪ್ಪ, ಶ್ಯಾಮರಾಯ ಆಚಾರ್, ಮೃತ್ಯುಂಜಯ ಕಾನಿಟ್ಕರ್ ಸೇರಿದಂತೆ ಬೋಧಕ ಹಾಗು ಬೋಧಕೇತರ  ವರ್ಗದವರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗ ಶಾಖೆಯ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಭಕ್ತರು, ಸೇವಾಕರ್ತರು, ಶಾಲಾ ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು. 
 

ಭದ್ರಾವತಿ ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ೮ ದಿನಗಳ ಕಾಲ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೯ನೇ ಜನ್ಮದಿನೋತ್ಸವ ಸಾಮಾಜಿಕ ಸೇವಾ ಕಾರ್ಯಗಳು ಹಾಗು ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಶನಿವಾರ ಮಧ್ಯಾಹ್ನ ಸಾವಿರಾರು ಮಂದಿಗೆ ಮಹಾಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು. 

೩ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು : ವಿಜಯೋತ್ಸವ

ರಾಜ್ಯದ ೩ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಶನಿವಾರ ಭದ್ರಾವತಿಯಲ್ಲಿ ನಗರ ಹಾಗು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯೋತ್ಸವ ನಡೆಸಲಾಯಿತು. 
    ಭದ್ರಾವತಿ: ರಾಜ್ಯದ ೩ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಶನಿವಾರ ನಗರ ಹಾಗು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯೋತ್ಸವ ನಡೆಸಲಾಯಿತು. 
    ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗು ಅಭಿಮಾನಿಗಳು ನಗರದ ರಂಗಪ್ಪ ವೃತ್ತದಲ್ಲಿ ವಿಜಯೋತ್ಸವ ನಡೆಸಿದರು. ಪಕ್ಷದ ಪ್ರಮುಖರು ಮಾತನಾಡಿ, ಚನ್ನಪಟ್ಟಣ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್, ಶಿಗ್ಗಾಂವಿ ಕ್ಷೇತ್ರದಿಂದ ಯಾಸಿರ್ ಅಹಮದ್ ಪಠಾಣ್ ಮತ್ತು ಸಂಡೂರ್ ಕ್ಷೇತ್ರದಿಂದ ಅನ್ನಪೂರ್ಣ ತುಕಾರಾಂರವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಬಿಜೆಪಿ ಹಾಗು ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ನಡೆಸಿದ ಅಪಪ್ರಚಾರಕ್ಕೆ ಕಿವಿಗೊಡದೆ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದರು.  
    ರಾಜ್ಯದ ೩ ವಿಧಾನಸಭಾ ಕ್ಷೇತ್ರಗಳ ಗೆಲುವಿನ ನಡುವೆ ಜಾರ್ಖಂಡ್ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಭಾರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿರುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗು ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಪಕ್ಷ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಂಘಟಿಗೊಳ್ಳುವ ಆಶಾಭಾವನೆ ಪಕ್ಷದ ಕಾರ್ಯಕರ್ತರಲ್ಲಿ ಮೂಡಿಸಿದೆ ಎಂದರು. 
    ಪಕ್ಷದ ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಜಯಪ್ಪ ಹೆಬ್ಬಳಗೆರೆ, ಪ್ರಮುಖರಾದ ಚನ್ನಪ್ಪ, ಬಿ. ಗಂಗಾಧರ್, ಕೆ. ಮಂಜುನಾಥ್, ಅಮೀರ್ ಜಾನ್,  ಜಹೀರ್‌ಜಾನ್, ಮುಸ್ವೀರ್ ಬಾಷಾ, ಕುಮಾರ್(ಮಾಸ್ಟರ್), ಬಷೀರ್ ಅಹಮದ್, ಜುಂಜ್ಯಾನಾಯ್ಕ, ಎಂ. ಅನಸೂಯ, ಕೆ. ರುಕ್ಮಿಣಿ, ಅರುಣ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.  
    ಗೆಲುವು ಸಾಧಿಸಿದ ೩ ಅಭ್ಯರ್ಥಿಗಳಿಗೆ ಶಾಸಕರಿಂದ ಅಭಿನಂದನೆ : 
    ಚನ್ನಪಟ್ಟಣ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್, ಶಿಗ್ಗಾಂವಿ ಕ್ಷೇತ್ರದಿಂದ ಯಾಸಿರ್ ಅಹಮದ್ ಪಠಾಣ್ ಮತ್ತು ಸಂಡೂರ್ ಕ್ಷೇತ್ರದಿಂದ ಅನ್ನಪೂರ್ಣ ತುಕಾರಾಂರವರು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬಂದಿದ್ದು, ಗೆಲುವು ಸಾಧಿಸಿರುವ ೩ ಅಭ್ಯರ್ಥಿಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದ್ದಾರೆ. 
    ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗು ಅಭಿಮಾನಿಗಳು ಮತ್ತು ಮತ ನೀಡಿದ ೩ ಕ್ಷೇತ್ರಗಳ ಮತದಾರರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.  

ಅಗ್ನಿಶಾಮಕ ಸಿಬ್ಬಂದಿಗಳಿಂದ ಚರಂಡಿಯಲ್ಲಿ ಸಿಕ್ಕಿಕೊಂಡಿದ್ದ ಎಮ್ಮೆ ರಕ್ಷಣೆ

ಭದ್ರಾವತಿ ಜನ್ನಾಪುರದಲ್ಲಿ ಎರಡು ಮನೆಯ ಗೋಡೆಯ ಮಧ್ಯದಲ್ಲಿರುವ ಚರಂಡಿಗೆ ಆಕಸ್ಮಿಕವಾಗಿ ಬಿದ್ದು ಸಿಕ್ಕಿ ಹಾಕಿಕೊಂಡಿದ್ದ ಎಮ್ಮೆಯನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. 
ಭದ್ರಾವತಿ: ಎರಡು ಮನೆಯ ಗೋಡೆಯ ಮಧ್ಯದಲ್ಲಿರುವ ಚರಂಡಿಗೆ ಆಕಸ್ಮಿಕವಾಗಿ ಬಿದ್ದು ಸಿಕ್ಕಿ ಹಾಕಿಕೊಂಡಿದ್ದ ಎಮ್ಮೆಯನ್ನು ರಕ್ಷಿಸುವಲ್ಲಿ ಇಲ್ಲಿನ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. 
    ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ಶುಕ್ರವಾರ ಎರಡು ಮನೆಯ ಗೋಡೆಯ ಮಧ್ಯದಲ್ಲಿರುವ ಚರಂಡಿಗೆ  ಎಮ್ಮೆ ಆಕಸ್ಮಿಕವಾಗಿ ಬಿದ್ದು ಸಿಕ್ಕಿ ಹಾಕಿಕೊಂಡಿದ್ದು, ಸುಮಾರು ಸಂಜೆ ೪.೧೪ರ ಸಮಯದಲ್ಲಿ ಅಗ್ನಿಶಾಮಕ ಠಾಣೆ ಈ ಸಂಬಂಧ ಕರೆ ಮಾಡಲಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಠಾಣೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸುಮಾರು ೧ ಗಂಟೆ ಸಮಯ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್, ಸಿಬ್ಬಂದಿಗಳಾದ ಆನಂದ, ಸುರೇಶ್, ರಾಜಾನಾಯ್ಕ, ಸಂತೋಷ್ ಮತ್ತು ಸಿದ್ದಪ್ಪ ಹಾಗು ಪೌರಕಾರ್ಮಿಕರು ಪಾಲ್ಗೊಂಡಿದ್ದರು. 

ಚುಂಚಾದ್ರಿ ಕಲೋತ್ಸವದಲ್ಲಿ ಬಿಜಿಎಸ್ ಶಾಲೆ ಮಕ್ಕಳಿಗೆ ಬಹುಮಾನ

 ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆದ ೨೭ನೇ ರಾಜ್ಯಮಟ್ಟದ ಚುಂಚಾದ್ರಿ ಕಲೋತ್ಸವದಲ್ಲಿ ಭದ್ರಾವತಿ ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ (ಬಿಜಿಎಸ್) ಕ್ರೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆಯೊಂದಿಗೆ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ : ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆದ ೨೭ನೇ ರಾಜ್ಯಮಟ್ಟದ ಚುಂಚಾದ್ರಿ ಕಲೋತ್ಸವದಲ್ಲಿ ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ (ಬಿಜಿಎಸ್) ಕ್ರೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆಯೊಂದಿಗೆ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 
    ಹಿರಿಯ ಪ್ರಾಥಮಿಕ ಶಾಲೆ ವಿಭಾಗ ಜಾನಪದ ಗೀತೆ ಮತ್ತು ನೃತ್ಯ ದ್ವೀತಿಯ ಸ್ಥಾನ ಪಡೆದುಕೊಂಡಿದೆ. ಹನಿಗವನ/ಚುಟುಕು ಭೂಮಿಕ ಎಂ. ರಾವ್ ಪ್ರಥಮ ಹಾಗೂ ಲಿಖಿತ ಕೃಷ್ಣ ಪಿ ತೃತೀಯ ಸ್ಥಾನ ಪಡೆದಿರುತ್ತಾರೆ. 
    ಪ್ರೌಢಶಾಲಾ ವಿಭಾಗದಲ್ಲಿ ಯಶಸ್ವಿನಿ. ಕೆ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು,  ಜೀವಿತ ಟಿ.ಆರ್ ಜನಪದಗೀತೆ ಪ್ರಥಮ ಹಾಗು ನೃತ್ಯ ಮತ್ತು ಚಿತ್ರಕಲೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ನಿಹಾರಿಕ ಎಂ ರಾವ್ ಹನಿಗವನ/ಚುಟುಕು ಪ್ರಥಮ ಸ್ಥಾನ  ಹಾಗು ಓಂ ಶ್ರೇಯಸ್ .ಎಚ್ ಕವಿತಾವಾಚನ ಪ್ರಥಮ ಸ್ಥಾನ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಬೋಧಕ ಹಾಗು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Friday, November 22, 2024

೧೦೦ ದಿನ ಪೂರೈಸಿದ ನಿರ್ಗತಿಕರಿಗೆ ಉಚಿತ ಉಪಾಹಾರ ಸೇವಾ ಕಾರ್ಯ


ಭದ್ರಾವತಿ ನಗರದ ತಮಿಳು ಯೂತ್ಸ್ ಅಸೋಸಿಯೇಷನ್ ವತಿಯಿಂದ ನಿರ್ಗತಿಕರಿಗೆ ಬೆಳಗಿನ ಉಚಿತ ಉಪಾಹಾರ ವಿತರಿಸುವ ಸೇವಾ ಕಾರ್ಯ ನಡೆಸಿಕೊಂಡು ಬರಲಾಗುತ್ತಿದ್ದು, ಶನಿವಾರ ೧೦೦ನೇ ದಿನ ಪೂರೈಸಿದೆ.
    ಭದ್ರಾವತಿ : ನಗರದ ತಮಿಳು ಯೂತ್ಸ್ ಅಸೋಸಿಯೇಷನ್ ವತಿಯಿಂದ ನಿರ್ಗತಿಕರಿಗೆ ಬೆಳಗಿನ ಉಚಿತ ಉಪಾಹಾರ ವಿತರಿಸುವ ಸೇವಾ ಕಾರ್ಯ ನಡೆಸಿಕೊಂಡು ಬರಲಾಗುತ್ತಿದ್ದು, ಶನಿವಾರ ೧೦೦ನೇ ದಿನ ಪೂರೈಸಿದೆ.
    ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗ ತಮಿಳು ಯೂತ್ಸ್ ಅಸೋಸಿಯೇಷನ್ ಸೇವಾ ಚಟುವಟಿಕೆಗಳನ್ನು ಕೈಗೊಂಡಿದ್ದು, ವಿಶೇಷವಾಗಿ ೧೦೦ನೇ ದಿನದ ಅಂಗವಾಗಿ ಬೆಳಿಗ್ಗೆ ರಂಗಪ್ಪ ವೃತ್ತದಲ್ಲಿ ಉಚಿತ ಉಪಾಹಾರ ವಿತರಣೆ ಮಾಡಲಾಯಿತು. 
    ತಮಿಳು ಯೂತ್ಸ್ ಅಸೋಸಿಯೇಷನ್ ಸೇವಾ ಕಾರ್ಯಕ್ಕೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತಿದ್ದು, ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಸರ್ಕಾರಿ ಶಾಲೆಯ ಮಕ್ಕಳಿಗೆ ಪೂರಕವಾಗುವ ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ನೆರವಾಗಿ : ವಿ. ವಿನೋದ್


ಪ್ರಿಯಾಂಕ ಖರ್ಗೆ ಅಭಿಮಾನಿಗಳ ಬಳಗ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್  ಖರ್ಗೆರವರ ಹುಟ್ಟುಹಬ್ಬದ ಪ್ರಯುಕ್ತ ೨೫೦ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಶುಕ್ರವಾರ ಆಯೋಜಿಸಲಾಗಿತ್ತು. 
    ಭದ್ರಾವತಿ: ಸರ್ಕಾರಿ ಶಾಲೆಗೆ ಬರುವ ಮಕ್ಕಳು ಆರ್ಥಿಕವಾಗಿ ಹಿಂದುಳಿದ ಮಕ್ಕಳಾಗಿರುತ್ತಾರೆ. ಅವರ ಶಿಕ್ಷಣಕ್ಕೆ ಪೂರಕವಾಗುವ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನೆರವಾಗಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಹೇಳಿದರು. 
       ಪ್ರಿಯಾಂಕ ಖರ್ಗೆ ಅಭಿಮಾನಿಗಳ ಬಳಗ ತಾಲೂಕು ಶಾಖೆ ವತಿಯಿಂದ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್  ಖರ್ಗೆರವರ ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ೨೫೦ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  
    ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಈ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದರು. 
    ತರೀಕೆರೆ ಎಆರ್‌ಟಿಓ ಎನ್. ಮಂಜುನಾಥ್ ಮಾತನಾಡಿ, ಯುವರಾಜಕಾರಣಿಯಾಗಿರುವ ಪ್ರಿಯಾಂಕ್ ಖರ್ಗೆಯವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅವರು ಬಸವ, ಅಂಬೇಡ್ಕರ್ ಅವರ ಅನುಯಾಯಿಯಾಗಿ ಅವರ ಸಿದ್ಧಾಂತಗಳ ಪ್ರಕಾರ ಪ್ರಬುದ್ಧ ರಾಜಕೀಯ ಮತ್ತು ಜನಸೇವೆ ಮಾಡುತ್ತಿದ್ದಾರೆ. ಅವರ ಹುಟ್ಟು ಹಬ್ಬದ ಪ್ರಯುಕ್ತ  ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಪೂರಕವಾಗಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಹಾಗೂ ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು. 
    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಯು. ಮಹದೇವಪ್ಪ, ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್ ರೇವಣ್ಣಪ್ಪ, ನಿವೃತ್ತ ಮುಖ್ಯ ಶಿಕ್ಷಕ ಡಿ. ಕರಿಯಪ್ಪ, ದಲಿತ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ. ಚನ್ನಪ್ಪ,  ಪ್ರಿಯಾಂಕ ಖರ್ಗೆ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಆದರ್ಶ ಸಿ ಪಾಟೀಲ್ ಹಾಗೂ ತಾಲೂಕ ಪ್ರಧಾನ ಕಾರ್ಯದರ್ಶಿ ಸುನಿಲ್ ಕೋಠಿ,  ಭೂತನಗುಡಿ ಶಾಲೆ ಮುಖ್ಯ ಶಿಕ್ಷಕರಾದ ಹಿರೇಮಠ, ಸುಜಾತ ಶಿಕ್ಷಕರಾದ ಪ್ರಕಾಶ್, ಮೀನಾಕ್ಷಮ್ಮ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.