Thursday, December 12, 2024

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕಾರ್ಯಕಾರಣಿ ಸಭೆ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಭದ್ರಾವತಿ ತಾಲೂಕು ಶಾಖೆ ಕಾರ್ಯಕಾರಣಿ ಸಭೆ ಬುಧವಾರ ನಗರದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಕಾರ್ಯಾಲಯದಲ್ಲಿ ನಡೆಯಿತು. 
    ಭದ್ರಾವತಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ತಾಲೂಕು ಶಾಖೆ ಕಾರ್ಯಕಾರಣಿ ಸಭೆ ಬುಧವಾರ ನಗರದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಕಾರ್ಯಾಲಯದಲ್ಲಿ ನಡೆಯಿತು. 
  ತಾಲೂಕು ಶಾಖೆ ಅಧ್ಯಕ್ಷ ಸಿ. ಜಯಪ್ಪ ಹೆಬ್ಬಳಗೆರೆ ಸಭೆಯ ಅಧ್ಯಕ್ಷತೆವಹಿಸಿದ್ದರು. ಸಭೆಯಲ್ಲಿ ಪರಿಷತ್ ವಾರ್ಷಿಕ ವರದಿ ಮಂಡಿಸಲಾಯಿತು. ಜಿಲ್ಲಾಧ್ಯಕ್ಷ ಬಿ.ಡಿ ರವಿಕುಮಾರ್, ತಾಲೂಕು ಶಾಖೆ ಪ್ರಮುಖರಾದ. ಗೌರವಾಧ್ಯಕ್ಷೆ ಡಾ. ವಿಜಯಾದೇವಿ. ಉಪಾಧ್ಯಕ್ಷೆ ಎಸ್. ಉಮಾ, ಪ್ರಧಾನ ಕಾರ್ಯದರ್ಶಿ ವಿನೋದ್, ಖಜಾಂಚಿ ಎಂ.ಈಶ್ವರಪ್ಪ ಮೈದೊಳಲು,  ಪ್ರಕಾಶ್, ಶ್ರೀನಿವಾಸ್ ಜಾಜೂರ್, ಕೃಷ್ಣಪ್ಪ, ನಾಗ(ಕೆಜಿಎಫ್) ಮತ್ತು ದಯಾನಂದ ಮೈದೊಳಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಡಿ.೧೩ರಂದು ಜನ ಸಂಪರ್ಕ ಸಭೆ

ಭದ್ರಾವತಿ: ಮೆಸ್ಕಾಂ ಗ್ರಾಮೀಣ ಉಪವಿಭಾಗದ ಕಛೇರಿಯಲ್ಲಿ ಡಿ.೧೩ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ. 
    ಗ್ರಾಹಕರು ಕುಂದುಕೊರತೆ/ಅಹವಾಲುಗಳನ್ನು ಸಲ್ಲಿಸುವ ಮೂಲಕ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದ್ದು,  ಅಧೀಕ್ಷಕ ಇಂಜಿನಿಯರ್ ಅಥವಾ ವಿಭಾಗೀಯ ಅಧಿಕಾರಿ ಸಭೆಯ ಅಧ್ಯಕ್ಷತೆವಹಿಸಲಿದ್ದಾರೆ. 
    ಕಾರೇಹಳ್ಳಿ, ಬಾರಂದೂರು, ಅಂತರಗಂಗೆ, ದೊಡ್ಡೇರಿ, ಬಿಆರ್‌ಪಿ, ದೊಣಬಘಟ್ಟ, ತಡಸ, ಬಿಳಿಕಿ ಅರಳಿಕೊಪ್ಪ, ಕಂಬದಾಳ್ ಹೊಸೂರು, ಅರಳಿಹಳ್ಳಿ, ಕೂಡ್ಲಿಗೆರೆ, ಅತ್ತಿಗುಂದ, ವೀರಾಪುರ, ಕಲ್ಲಹಳ್ಳಿ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರು ಸಭೆಯಲ್ಲಿ ಭಾಗವಹಿಸಬಹುದಾಗಿದ್ದು, ಜನ ಸಂಪರ್ಕ ಸಭೆ ಸದುಪಯೋಗಪಡೆದುಕೊಳ್ಳುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಇಂಜಿನಿಯರ್ ಡಿ. ಪ್ರದೀಪ್ ಕೋರಿದ್ದಾರೆ. 

ಜೆ.ಎಚ್ ಪಟೇಲ್೨೪ನೇ ಪುಣ್ಯಸ್ಮರಣೆ

ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್ ಪಟೇಲ್‌ರವರ ೨೪ನೇ ಪುಣ್ಯಸ್ಮರಣೆ ಗುರುವಾರ ಭದ್ರಾವತಿ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಜರುಗಿತು. 
    ಭದ್ರಾವತಿ: ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್ ಪಟೇಲ್‌ರವರ ೨೪ನೇ ಪುಣ್ಯಸ್ಮರಣೆ ಗುರುವಾರ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಜರುಗಿತು. 
    ಜೆ.ಎಚ್ ಪಟೇಲ್ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಟೇಲ್‌ರವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸುವ ಮೂಲಕ ಅವರ ಆದರ್ಶತನ ಹಾಗು ನಾಡಿಗೆ ನೀಡಿರುವ ಕೊಡುಗೆಗಳನ್ನು ಸ್ಮರಿಸಲಾಯಿತು.  
    ವಿದ್ಯಾರ್ಥಿ ಸಂಘಟನೆಯ ಯುವ ಮುಖಂಡ ಶಿವಮೊಗ್ಗ ವಿನಯ್ ರಾಜಾವತ್ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಮಾಜಿ ಸದಸ್ಯ ಆಂಜನಪ್ಪ ಕಾರ್ಯಕ್ರಮ ಉದ್ಘಾಟಿಸಿದರು. 
    ಜೆ.ಎಚ್ ಪಟೇಲ್ ಅಭಿಮಾನಿ, ಮುಖಂಡ ಶಶಿಕುಮಾರ್ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಹಿರಿಯ ಮುಖಂಡರಾದ ನಿಂಗೇಗೌಡ, ಸಿದ್ದಲಿಂಗಯ್ಯ, ಕೆ.ಎಸ್ ವಿಜಯ್ ಕುಮಾರ್ ಸೇರಿದಂತೆ ಅಭಿಮಾನಿಗಳು ಉಪಸ್ಥಿತರಿದ್ದರು.

ಡಿ.೧೩ರಂದು ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ


    ಭದ್ರಾವತಿ: ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಡಿ.೧೩ರಂದು ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 
    ರಥೋತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ ಪ್ರಧಾನ ಹೋಮ, ರಥಶುದ್ಧಿ, ಬಲಿಪೂರ್ವಕ ಶ್ರೀ ಸ್ವಾಮಿಯ ರಥೋತ್ಸವ ಮಧ್ಯಾಹ್ನ ೧೨.೩೦ಕ್ಕೆ ಜರುಗಲಿದೆ. ಸಂಜೆ ರಥೋತ್ಸವ ಅಷ್ಟಾವಧಾನ ಸೇವಾ, ಮಹಾಪೂಜೆ, ಮಹಾಮಂಗಳಾರತಿ ಜರುಗಲಿದೆ. 
    ಸೇವಾಕರ್ತರಾದ ಕೆ. ಲಕ್ಷ್ಮಣಸ್ವಾಮಿ ದೇವಸ್ಥಾನಕ್ಕೆ ಹೂವಿನ ಅಲಂಕಾರ, ಪರಮೇಶ್ ಹೋಮ-ಪೂಜಾಕಾರ್ಯಗಳು ಹಾಗು ಎಚ್.ಸಿ ದಾಸೇಗೌಡ ಅನ್ನಸಂತರ್ಪಣೆ ದಾನಿಗಳಾಗಿದ್ದು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಳ್ಳಲಿದ್ದಾರೆ. 
    ಡಿ.೧೪ರಂದು ಬೆಳಿಗ್ಗೆ ಪುಣ್ಯಾಹ, ಕಲಾ ಹೋಮ, ತತ್ವಹೋಮ, ಶಾಂತಿ ಹೋಮ, ಕುಂಭಾಭಿಷೇಕ, ಮಹಾಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಶುಭಾಶೀರ್ವಾದ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಡಿ.೧೩ರಂದು ಭದ್ರಗಿರಿಯಲ್ಲಿ ಕಾರ್ತಿಕ ದೀಪೋತ್ಸವ



    ಭದ್ರಾವತಿ: ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಕಾರ್ತಿಕ ದೀಪೋತ್ಸವ ಮತ್ತು ಶ್ರೀ ಭದ್ರಗಿರಿ ಸಿದ್ದರ್ ಮಹಾ ಸ್ವಾಮೀಜಿಯವರ ಗುರುಪೂಜೆ ಡಿ.೧೩ರಂದು ಹಮ್ಮಿಕೊಳ್ಳಲಾಗಿದೆ. 
    ಬೆಳಿಗ್ಗೆ ೪ ಗಂಟೆಗೆ ವಿಶ್ವರೂಪ ದರ್ಶನ, ೫ ಗಂಟೆಗೆ ಉತ್ಸವ ಪೂಜೆ, ೮ ಗಂಟೆಗೆ ಸಂಧಿ ಪೂಜೆ, ೧೨ ಗಂಟೆಗೆ ನೈವೇದ್ಯ ಮತ್ತು ಮಧ್ಯಾಹ್ನಿಕಪೂಜೆ, ಸಂಜೆ ೬.೦೫ಕ್ಕೆ ಭದ್ರಗಿರಿ ತಿರುಕಾರ್ತಿಕ ದೀಪೋತ್ಸವ (ಜ್ಯೋತಿ ದರ್ಶನ), ಸಂಜೆ ೬.೩೦ಕ್ಕೆ ನಟನಂ ಬಾಲನಾಟ್ಯ ಕೇಂದ್ರ, ಶಿವಮೊಗ್ಗ ಇವರಿಂದ ಭರತನಾಟ್ಯ ಕಾರ್ಯಕ್ರಮವಿದ್ದು, ರಾತ್ರಿ ೧೧ ಗಂಟೆಗೆ ಅರ್ಧಜಾಮ ಪೂಜೆ ಜರುಗಲಿದೆ. 
    ಡಿ.೧೪ರಂದು ಬೆಳಿಗ್ಗೆ ೪ ಗಂಟೆಗೆ ವಿಶ್ವರೂಪ ದರ್ಶನ, ೫ ಗಂಟೆಗೆ ಉತ್ಸವ ಪೂಜೆ, ೮ ಗಂಟೆಗೆ ಸಂಧಿ ಪೂಜೆ, ೯ ಗಂಟೆಗೆ ಶಿರುಕಾಲಯ ಶಾಂತಿಪೂಜೆ, ೧೨ ಗಂಟೆಗೆ ನೈವೇದ್ಯ ಮತ್ತು ಮಧ್ಯಾಹ್ನಿಕಪೂಜೆ, ಸಂಜೆ ೬ ಗಂಟೆಗೆ ಭದ್ರಗಿತಿ ವಿಷ್ಣು ಜ್ಯೋತಿ ದರ್ಶನ , ರಾತ್ರಿ ೧೧ ಗಂಟೆಗೆ ಅರ್ಧಜಾಮ ಪೂಜೆ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಕೋರಿದೆ. 

Wednesday, December 11, 2024

ಸಮಾಜದ ಸೇವೆ ಪ್ರಾಮಾಣಿಕತೆಯಿಂದ ಯಾರು ಮಾಡುತ್ತಾರೋ ಅವರೇ ದೊಡ್ಡವರು : ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಭದ್ರಾವತಿ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ  ಹಮ್ಮಿಕೊಳ್ಳಲಾಗಿದ್ದ `ಶಿವ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ'ದ ರಜತ ಮಹೋತ್ಸವ ಸಂಭ್ರಮ  ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
ಭದ್ರಾವತಿ: ಹಣ, ಅಧಿಕಾರ, ಕಾರು, ಬಂಗಲೆ ಇದ್ದವರೆಲ್ಲ ದೊಡ್ಡವರಾಗುವುದಿಲ್ಲ. ಸಮಾಜದ ಸೇವೆಯನ್ನು ಭ್ರಷ್ಟಾಚಾರ ರಹಿತವಾಗಿ ಪ್ರಾಮಾಣಿಕತೆಯಿಂದ ಯಾರು ಮಾಡುತ್ತಾರೋ ಅವರೇ ದೊಡ್ಡವರು, ದೊಡ್ಡ ಗುಣ ಉಳ್ಳವರೆಂದು ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  
    ಶ್ರೀಗಳು ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ  ಹಮ್ಮಿಕೊಳ್ಳಲಾಗಿದ್ದ `ಶಿವ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ'ದ ರಜತ ಮಹೋತ್ಸವ ಸಂಭ್ರಮ ಉದ್ಘಾಟಿಸಿ, ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 
    ಪ್ರಸ್ತುತ ಸಹಕಾರ ಸಂಘ ೨೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಸಂತಸದ ಸಂಗತಿಯಾಗಿದೆ. ಇದರ ಹಿಂದೆ ಅಧ್ಯಕ್ಷರು ಹಾಗೂ ನಿರ್ದೇಶಕರು, ಸಿಬ್ಬಂದಿಗಳ ಹೆಚ್ಚಿನ ಪರಿಶ್ರಮವಿದ್ದು, ಅಲ್ಲದೆ ಷೇರುದಾರ ಸದಸ್ಯರ ಸಹಕಾರವಿದೆ. ಸಹಕಾರ ಸಂಘಗಳು ಕೇವಲ ಲಾಭ, ಆದಾಯ ಗಳಿಸುವುದು ಮಾತ್ರ ಸಾಧನೆಯಲ್ಲ. ಬದಲಾಗಿ ಆದಾಯಕ್ಕಿಂತ ಹೆಚ್ಚಾಗಿ ಷೇರುದಾರರಿಗೆ ತಾವು ನೀಡಿರುವ ಸಾಲದಿಂದ ಆರ್ಥಿಕ ಸ್ಥಿತಿ ಸುಧಾರಿಸಿಕೊಂಡರೆ ಅದೇ ದೊಡ್ಡ ಸಾಧನೆ ಎನಿಸಿಕೊಳ್ಳುತ್ತದೆ ಎಂದರು. 
    ಒಮ್ಮೆ ನಂಬಿಕೆ ಕಳೆದುಕೊಂಡರೆ ಆ ವ್ಯಕ್ತಿ ಸರ್ವನಾಶವಾದಂತೆ. ಸಹಕಾರಿ ಸಂಘಗಳು ಸಾಲ ನೀಡುತ್ತವೆಂದು ಸಾಲ ಮಾಡುವುದನ್ನು ಅಭ್ಯಾಸವಾಗಿಸಿಕೊಳ್ಳಬಾರದು. ಅಗತ್ಯ ಹಾಗು ಅನಿವಾರ್ಯತೆ ಇದ್ದಲ್ಲಿ ಮಾತ್ರ ಸಾಲ ಮಾಡಬೇಕು. ವಿನಾಕಾರಣ ಸಾಲ ಮಾಡಿ ಸಾಲದ ಸುಳಿಯಲ್ಲಿ ಸಿಲುಕಬಾರದು ಎಂದರು. 
    ಅಡಕೆ ಬೆಳೆದರೆ ಆರ್ಥಿಕ ಸುಧಾರಣೆಯಾಗುತ್ತದೆ ಎನ್ನುವ ಮಾತು ಇಂದಿನ ದಿನಮಾನಗಳಲ್ಲಿ ಸುಳ್ಳಾಗುತ್ತಿದೆ. ಅಡಕೆ ಬೆಳೆಯುವ ಮೂಲಕ ಆರ್ಥಿಕತೆ ಹೆಚ್ಚಿದರೂ, ಅನಾರೋಗ್ಯ ಉಲ್ಬಣಿಸುತ್ತಿರುವುದು ಆತಂಕಕಾರಿ. ಅಷ್ಟೇ ಅಲ್ಲ ತಟ್ಟೆಯಲ್ಲಿ ವಿಷ ಎನ್ನುವಂತಾಗಿದೆ. ತಾವು ಪ್ರತಿದಿನ ಉಪಯೋಗಿಸುವ ತರಕಾರಿ, ಹಣ್ಣು ಹಂಪಲುಗಳು ಔಷಧಿ ಸಿಂಪಡಣೆಗಳಿಂದ ವಿಷಕಾರಿಯಾಗಿವೆ ಎನ್ನುವ ಮಾಹಿತಿ ಇದೆ. ಪುರಾತನ ಕಾಲದಿಂದಲೂ ತಾಯಿ ಮಗುವಿಗೆ ಉಣಿಸುವ ಹಾಲು ಅಮೃತಕ್ಕೆ ಸಮಾನ ಎನ್ನುತ್ತೇವೆ. ಆದರೆ, ತಾಯಿಯ ಎದೆ ಹಾಲು ಕೂಡ ವಿಷಕಾರಿಯಾಗಿದೆ ಎನ್ನುವ ಪರಿಸ್ಥಿತಿ ಪ್ರಸ್ತುತ ದಿನಮಾನಗಳಲ್ಲಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. 
    ಒಂದು ಲಕ್ಷ ರು. ಕೊಟ್ಟು ತಂದಿರುವ ನಾಯಿಯ ಮೇಲೆ ಪ್ರೀತಿ ತೋರಿಸುವ ಮಕ್ಕಳು ತಮ್ಮನ್ನು ಹೆತ್ತು, ಹೊತ್ತು, ಸಾಕಿ, ಸಲುಹಿ ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡುವ ಹೆತ್ತ ತಂದೆ ತಾಯಿಗಳನ್ನು ನೋಡಿಕೊಳ್ಳುವ ಬದಲು ವೃದ್ಧಾಶ್ರಮಗಳಿಗೆ ಬಿಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಸಂಘ ಆರಂಭದಿಂದ ಹಂತ ಹಂತವಾಗಿ ಬೆಳೆದು ಬಂದಿರುವ ದಾರಿ, ಪಟ್ಟ ಪರಿಶ್ರಮವನ್ನು ವಿವರಿಸಿದರು. ಸಂಘದ ಆರಂಭದ ದಿನಗಳಲ್ಲಿ ಪಾದಯಾತ್ರೆಯ ಮೂಲಕ ಸಮಾಜ ಬಾಂಧವರ ಮನೆ ಮನೆಗೆ ತೆರಳಿ ಷೇರು ಸಂಗ್ರಹ ಮಾಡುವ ಮೂಲಕ ಶ್ರಮಿಸಿದ ಎಂಪಿಎಂ ಕಾರ್ಖಾನೆಯ ಅನೇಕ ಅಧಿಕಾರಿಗಳು, ಕಾರ್ಮಿಕರು ಹಾಗೂ ಸಮಾಜದ ಎಲ್ಲರನ್ನೂ ನೆನಪು ಮಾಡಿಕೊಳ್ಳುವ ಜೊತೆಗೆ ಅಭಿನಂದಿಸಿದರು.  
    ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ ಶ್ರೀನಿವಾಸ್ ಮಾತನಾಡಿ, ಷೇರುದಾರರ ಆರ್ಥಿಕ ಅಭಿವೃದ್ಧಿಯ  ಜೊತೆಗೆ ಸಹಕಾರಿ ಸಂಘಗಳ ಲಾಭದಲ್ಲಿ ಶೇಕಡ ೩೦ರಷ್ಟು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿರುವುದರಿಂದ ದೇಶದ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸಿವೆ ಎಂದರು. 
    ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಎಸ್ ಸತೀಶ್ ಮಾತನಾಡಿ, ಕಳೆದ ೨೫ ವರ್ಷಗಳಿಂದ ಸಂಘದ ಬೆಳವಣಿಗೆಗೆ ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಭವಿಷ್ಯದಲ್ಲಿ ಮತ್ತಷ್ಟು ಬೆಳವಣಿಗೆ ಸಾಧಿಸಲು ಇನ್ನೂ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದರು. 
    ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಅರಕೆರೆ ಹೆಚ್. ಎಲ್. ಷಡಾಕ್ಷರಿ, ಜಿಲ್ಲಾ ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್. ಪಿ. ದಿನೇಶ್, ಸಂಘದ ಸಂಸ್ಥಾಪಕ ಗೌರವಾಧ್ಯಕ್ಷ ನಾಗಪ್ಪ .ಸಿ ಅಗಸೇಬಾಗಿಲು, ಜಿಲ್ಲಾ ಸಹಕಾರ ಸಂಘಗಳ ಅಭಿವೃದ್ದಿ ಅಧಿಕಾರಿ ಕೆ.ಜಿ ಶಾಂತರಾಜ್, ಸಂಘದ ಉಪಾಧ್ಯಕ್ಷ ಎಸ್.ಎನ್ ಕುಮಾರ್, ನಿರ್ದೇಶಕರುಗಳಾದ ಎನ್.ಎಸ್ ಮಲ್ಲಿಕಾರ್ಜುನಯ್ಯ, ಕೆ. ತಿಮ್ಮಪ್ಪ, ಎಚ್.ಕೆ ಮಂಜುನಾಥ್, ಟಿ.ಎಚ್ ಆನಂದ್, ಕೆ.ಎಸ್ ಓಂಪ್ರಕಾಶ್, ಎಚ್ .ನಾಗರತ್ನ ಮಲ್ಲಿಕಾರ್ಜುನಯ್ಯ, ಎಚ್.ಕೆ ಲತಾ ತೀರ್ಥಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಜಿ.ಎಸ್ ಸತೀಶ್ ಅಧ್ಯಕ್ಷರಾಗಿ ಹಾಗೂ ಎಸ್.ಎನ್ ಕುಮಾರ್ ಉಪಾಧ್ಯಕ್ಷರಾಗಿ ೨೫ ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು. ಸಂಘಕ್ಕೆ ಸೇವೆ ಸಲ್ಲಿಸಿದ ಹಾಲಿ ಮತ್ತು ನಿಕಟಪೂರ್ವ ನಿರ್ದೇಶಕರುಗಳಿಗೆ ಹಾಗೂ ಸಂಘದ ಸಿಬ್ಬಂದಿ ವರ್ಗದವರಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ.ಜಿ ಏಕಾಕ್ಷರಪ್ಪ, ಲೆಕ್ಕಿಗ ಎ.ಎಂ ಕುಮಾರ್, ಡಿ ದರ್ಜೆ ನೌಕರ ಜಿ. ಕಿರಣ್, ಪಿಗ್ಮಿ ಠೇವಣಿಕಾರರು ಸಚ್ಚಿದಾನಂದಯ್ಯ ಮತ್ತು ಜಿ.ಎಸ್ ಹರೀಶ ಹಾಗೂ ಬಸವೇಶ್ವರ ಸಭಾ ಭವನದ ಮಾಲೀಕರಾದ ಶಿವಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  
    ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ನಾಗರಾಜ್ ನೇತೃತ್ವದ ಸಾಣೇಹಳ್ಳಿ ಕಲಾವೃಂದದವರು ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮ ಮನಸೂರೆಗೊಂಡಿತು. ಅನುಪಮಾ ಚನ್ನೇಶ್ ಮತ್ತು ಮಮತಾ ಪ್ರತಾಪ್ ಪ್ರಾರ್ಥಿಸಿದರು. ಸಂಘದ ನಿರ್ದೇಶಕರಾದ ಯಶೋಧ ವೀರಭದ್ರಪ್ಪ  ಸ್ವಾಗತಿಸಿ, ಎಚ್ ಬಿ ಸಿದ್ದೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಂತಾ ಆನಂದ್ ಕಾರ್ಯಕ್ರಮ ನಿರೂಪಿಸಿದರು. 
 

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನಿಧನಕ್ಕೆ ನೋಟುಗಳ ಮೂಲಕ ಸಂತಾಪ

ವಿಶಿಷ್ಟ ಕೊಡುಗೆ ನೀಡಿದ ಪ್ರಭಾವಿ, ಜನಮೆಚ್ಚಿದ ನಾಯಕ : ವೇದಿಕೆ ಸಂತಾಪ 

ಭದ್ರಾವತಿ ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರ ಗಣೇಶ್‌ರವರು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣರವರ ನಿಧನಕ್ಕೆ ವಿಶೇಷವಾಗಿ ೧೦ ರು. ಮುಖಬೆಲೆ ನೋಟು ಮೂಲಕ ಸಂತಾಪ ಸೂಚಿಸಿದ್ದಾರೆ. 
    ಭದ್ರಾವತಿ : ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರ ಗಣೇಶ್‌ರವರು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣರವರ ನಿಧನಕ್ಕೆ ವಿಶೇಷವಾಗಿ ೧೦ ರು. ಮುಖಬೆಲೆ ನೋಟು ಮೂಲಕ ಸಂತಾಪ ಸೂಚಿಸಿದ್ದಾರೆ. 
    ಕೃಷ್ಣರವರ ಜನ್ಮದಿನ ಹಾಗು ನಿಧನ ಹೊಂದಿದ ದಿನದ ದಿನಾಂಕ ಹೊಂದಿರುವ ೧೦ ರು. ಮುಖಬೆಲೆಯ ನೋಟುಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ಗಣೇಶ್‌ರವರು ಸುಮಾರು ೫ ದಶಕ್ಕೂ ಹೆಚ್ಚು ಕಾಲದಿಂದ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದು, ಗಣ್ಯ ವ್ಯಕ್ತಿಗಳ ಹುಟ್ಟು, ನಿಧನ ಹೊಂದಿದ ದಿನ ಹಾಗು ಪ್ರಮುಖ ಐತಿಹಾಸಿಕ ಘಟನೆಗಳ ಸಂದರ್ಭದಲ್ಲಿ ನೋಟುಗಳ ಮೂಲಕ ಶುಭ ಹಾರೈಕೆ, ಸಂತಾಪ ಸೂಚಿಸುವ ಮೂಲಕ ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ. 
    ಚುಂಚಾದ್ರಿ ಮಹಿಳಾ ವೇದಿಕೆ ಸಂತಾಪ: 
    ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣರವರ ನಿಧನಕ್ಕೆ ನಗರದ ಚುಂಚಾದ್ರಿ ಮಹಿಳಾ ವೇದಿಕೆ ಸಂತಾಪ ಸೂಚಿಸಿದೆ. ರಾಜ್ಯದ ವಿಧಾನಸಭೆ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ಸಚಿವರಾಗಿ ಹಾಗು ಮಹಾರಾಷ್ಟ್ರ ರಾಜ್ಯಪಾಲರಾಗಿ ಹಾಗು ಇನ್ನಿತರ ಅನೇಕ ಹುದ್ದೆಯನ್ನು ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ನಿರ್ವಹಿಸಿ ರಾಜ್ಯಕ್ಕೆ, ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ಒಕ್ಕಲಿಗರ ಜನಾಂಗದ ಪ್ರಭಾವಿ ಹಾಗು ಜನಮೆಚ್ಚಿದ ನಾಯಕರಾದ ಎಸ್.ಎಂ ಕೃಷ್ಣ ಅವರ ನಿಧನ ತುಂಬಲಾರದ ನಷ್ಟವನ್ನುಂಟು ಮಾಡಿದೆ. 
    ಇವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಹಾಗು ಕುಟುಂಬ ವರ್ಗಕ್ಕೆ , ಹಿತೈಷಿಗಳಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ಕುರುಣಿಸಲಿ ಎಂದು ವೇದಿಕೆ  ಗೌರವಾಧ್ಯಕ್ಷೆ ಅನುರಾಧ ಪಟೇಲ್, ಅಧ್ಯಕ್ಷೆ ಎಂ.ಎಸ್ ಸುಧಾಮಣಿ ವೆಂಕಟೇಶ್ ಹಾಗೂ ಪದಾಧಿಕಾರಿಗಳು, ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ.