ಭದ್ರಾವತಿ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ `ಶಿವ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ'ದ ರಜತ ಮಹೋತ್ಸವ ಸಂಭ್ರಮ ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ: ಹಣ, ಅಧಿಕಾರ, ಕಾರು, ಬಂಗಲೆ ಇದ್ದವರೆಲ್ಲ ದೊಡ್ಡವರಾಗುವುದಿಲ್ಲ. ಸಮಾಜದ ಸೇವೆಯನ್ನು ಭ್ರಷ್ಟಾಚಾರ ರಹಿತವಾಗಿ ಪ್ರಾಮಾಣಿಕತೆಯಿಂದ ಯಾರು ಮಾಡುತ್ತಾರೋ ಅವರೇ ದೊಡ್ಡವರು, ದೊಡ್ಡ ಗುಣ ಉಳ್ಳವರೆಂದು ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀಗಳು ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ `ಶಿವ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ'ದ ರಜತ ಮಹೋತ್ಸವ ಸಂಭ್ರಮ ಉದ್ಘಾಟಿಸಿ, ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರಸ್ತುತ ಸಹಕಾರ ಸಂಘ ೨೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಸಂತಸದ ಸಂಗತಿಯಾಗಿದೆ. ಇದರ ಹಿಂದೆ ಅಧ್ಯಕ್ಷರು ಹಾಗೂ ನಿರ್ದೇಶಕರು, ಸಿಬ್ಬಂದಿಗಳ ಹೆಚ್ಚಿನ ಪರಿಶ್ರಮವಿದ್ದು, ಅಲ್ಲದೆ ಷೇರುದಾರ ಸದಸ್ಯರ ಸಹಕಾರವಿದೆ. ಸಹಕಾರ ಸಂಘಗಳು ಕೇವಲ ಲಾಭ, ಆದಾಯ ಗಳಿಸುವುದು ಮಾತ್ರ ಸಾಧನೆಯಲ್ಲ. ಬದಲಾಗಿ ಆದಾಯಕ್ಕಿಂತ ಹೆಚ್ಚಾಗಿ ಷೇರುದಾರರಿಗೆ ತಾವು ನೀಡಿರುವ ಸಾಲದಿಂದ ಆರ್ಥಿಕ ಸ್ಥಿತಿ ಸುಧಾರಿಸಿಕೊಂಡರೆ ಅದೇ ದೊಡ್ಡ ಸಾಧನೆ ಎನಿಸಿಕೊಳ್ಳುತ್ತದೆ ಎಂದರು.
ಒಮ್ಮೆ ನಂಬಿಕೆ ಕಳೆದುಕೊಂಡರೆ ಆ ವ್ಯಕ್ತಿ ಸರ್ವನಾಶವಾದಂತೆ. ಸಹಕಾರಿ ಸಂಘಗಳು ಸಾಲ ನೀಡುತ್ತವೆಂದು ಸಾಲ ಮಾಡುವುದನ್ನು ಅಭ್ಯಾಸವಾಗಿಸಿಕೊಳ್ಳಬಾರದು. ಅಗತ್ಯ ಹಾಗು ಅನಿವಾರ್ಯತೆ ಇದ್ದಲ್ಲಿ ಮಾತ್ರ ಸಾಲ ಮಾಡಬೇಕು. ವಿನಾಕಾರಣ ಸಾಲ ಮಾಡಿ ಸಾಲದ ಸುಳಿಯಲ್ಲಿ ಸಿಲುಕಬಾರದು ಎಂದರು.
ಅಡಕೆ ಬೆಳೆದರೆ ಆರ್ಥಿಕ ಸುಧಾರಣೆಯಾಗುತ್ತದೆ ಎನ್ನುವ ಮಾತು ಇಂದಿನ ದಿನಮಾನಗಳಲ್ಲಿ ಸುಳ್ಳಾಗುತ್ತಿದೆ. ಅಡಕೆ ಬೆಳೆಯುವ ಮೂಲಕ ಆರ್ಥಿಕತೆ ಹೆಚ್ಚಿದರೂ, ಅನಾರೋಗ್ಯ ಉಲ್ಬಣಿಸುತ್ತಿರುವುದು ಆತಂಕಕಾರಿ. ಅಷ್ಟೇ ಅಲ್ಲ ತಟ್ಟೆಯಲ್ಲಿ ವಿಷ ಎನ್ನುವಂತಾಗಿದೆ. ತಾವು ಪ್ರತಿದಿನ ಉಪಯೋಗಿಸುವ ತರಕಾರಿ, ಹಣ್ಣು ಹಂಪಲುಗಳು ಔಷಧಿ ಸಿಂಪಡಣೆಗಳಿಂದ ವಿಷಕಾರಿಯಾಗಿವೆ ಎನ್ನುವ ಮಾಹಿತಿ ಇದೆ. ಪುರಾತನ ಕಾಲದಿಂದಲೂ ತಾಯಿ ಮಗುವಿಗೆ ಉಣಿಸುವ ಹಾಲು ಅಮೃತಕ್ಕೆ ಸಮಾನ ಎನ್ನುತ್ತೇವೆ. ಆದರೆ, ತಾಯಿಯ ಎದೆ ಹಾಲು ಕೂಡ ವಿಷಕಾರಿಯಾಗಿದೆ ಎನ್ನುವ ಪರಿಸ್ಥಿತಿ ಪ್ರಸ್ತುತ ದಿನಮಾನಗಳಲ್ಲಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಒಂದು ಲಕ್ಷ ರು. ಕೊಟ್ಟು ತಂದಿರುವ ನಾಯಿಯ ಮೇಲೆ ಪ್ರೀತಿ ತೋರಿಸುವ ಮಕ್ಕಳು ತಮ್ಮನ್ನು ಹೆತ್ತು, ಹೊತ್ತು, ಸಾಕಿ, ಸಲುಹಿ ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡುವ ಹೆತ್ತ ತಂದೆ ತಾಯಿಗಳನ್ನು ನೋಡಿಕೊಳ್ಳುವ ಬದಲು ವೃದ್ಧಾಶ್ರಮಗಳಿಗೆ ಬಿಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಸಂಘ ಆರಂಭದಿಂದ ಹಂತ ಹಂತವಾಗಿ ಬೆಳೆದು ಬಂದಿರುವ ದಾರಿ, ಪಟ್ಟ ಪರಿಶ್ರಮವನ್ನು ವಿವರಿಸಿದರು. ಸಂಘದ ಆರಂಭದ ದಿನಗಳಲ್ಲಿ ಪಾದಯಾತ್ರೆಯ ಮೂಲಕ ಸಮಾಜ ಬಾಂಧವರ ಮನೆ ಮನೆಗೆ ತೆರಳಿ ಷೇರು ಸಂಗ್ರಹ ಮಾಡುವ ಮೂಲಕ ಶ್ರಮಿಸಿದ ಎಂಪಿಎಂ ಕಾರ್ಖಾನೆಯ ಅನೇಕ ಅಧಿಕಾರಿಗಳು, ಕಾರ್ಮಿಕರು ಹಾಗೂ ಸಮಾಜದ ಎಲ್ಲರನ್ನೂ ನೆನಪು ಮಾಡಿಕೊಳ್ಳುವ ಜೊತೆಗೆ ಅಭಿನಂದಿಸಿದರು.
ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ ಶ್ರೀನಿವಾಸ್ ಮಾತನಾಡಿ, ಷೇರುದಾರರ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸಹಕಾರಿ ಸಂಘಗಳ ಲಾಭದಲ್ಲಿ ಶೇಕಡ ೩೦ರಷ್ಟು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿರುವುದರಿಂದ ದೇಶದ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಎಸ್ ಸತೀಶ್ ಮಾತನಾಡಿ, ಕಳೆದ ೨೫ ವರ್ಷಗಳಿಂದ ಸಂಘದ ಬೆಳವಣಿಗೆಗೆ ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಭವಿಷ್ಯದಲ್ಲಿ ಮತ್ತಷ್ಟು ಬೆಳವಣಿಗೆ ಸಾಧಿಸಲು ಇನ್ನೂ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದರು.
ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಅರಕೆರೆ ಹೆಚ್. ಎಲ್. ಷಡಾಕ್ಷರಿ, ಜಿಲ್ಲಾ ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್. ಪಿ. ದಿನೇಶ್, ಸಂಘದ ಸಂಸ್ಥಾಪಕ ಗೌರವಾಧ್ಯಕ್ಷ ನಾಗಪ್ಪ .ಸಿ ಅಗಸೇಬಾಗಿಲು, ಜಿಲ್ಲಾ ಸಹಕಾರ ಸಂಘಗಳ ಅಭಿವೃದ್ದಿ ಅಧಿಕಾರಿ ಕೆ.ಜಿ ಶಾಂತರಾಜ್, ಸಂಘದ ಉಪಾಧ್ಯಕ್ಷ ಎಸ್.ಎನ್ ಕುಮಾರ್, ನಿರ್ದೇಶಕರುಗಳಾದ ಎನ್.ಎಸ್ ಮಲ್ಲಿಕಾರ್ಜುನಯ್ಯ, ಕೆ. ತಿಮ್ಮಪ್ಪ, ಎಚ್.ಕೆ ಮಂಜುನಾಥ್, ಟಿ.ಎಚ್ ಆನಂದ್, ಕೆ.ಎಸ್ ಓಂಪ್ರಕಾಶ್, ಎಚ್ .ನಾಗರತ್ನ ಮಲ್ಲಿಕಾರ್ಜುನಯ್ಯ, ಎಚ್.ಕೆ ಲತಾ ತೀರ್ಥಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜಿ.ಎಸ್ ಸತೀಶ್ ಅಧ್ಯಕ್ಷರಾಗಿ ಹಾಗೂ ಎಸ್.ಎನ್ ಕುಮಾರ್ ಉಪಾಧ್ಯಕ್ಷರಾಗಿ ೨೫ ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು. ಸಂಘಕ್ಕೆ ಸೇವೆ ಸಲ್ಲಿಸಿದ ಹಾಲಿ ಮತ್ತು ನಿಕಟಪೂರ್ವ ನಿರ್ದೇಶಕರುಗಳಿಗೆ ಹಾಗೂ ಸಂಘದ ಸಿಬ್ಬಂದಿ ವರ್ಗದವರಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ.ಜಿ ಏಕಾಕ್ಷರಪ್ಪ, ಲೆಕ್ಕಿಗ ಎ.ಎಂ ಕುಮಾರ್, ಡಿ ದರ್ಜೆ ನೌಕರ ಜಿ. ಕಿರಣ್, ಪಿಗ್ಮಿ ಠೇವಣಿಕಾರರು ಸಚ್ಚಿದಾನಂದಯ್ಯ ಮತ್ತು ಜಿ.ಎಸ್ ಹರೀಶ ಹಾಗೂ ಬಸವೇಶ್ವರ ಸಭಾ ಭವನದ ಮಾಲೀಕರಾದ ಶಿವಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ನಾಗರಾಜ್ ನೇತೃತ್ವದ ಸಾಣೇಹಳ್ಳಿ ಕಲಾವೃಂದದವರು ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮ ಮನಸೂರೆಗೊಂಡಿತು. ಅನುಪಮಾ ಚನ್ನೇಶ್ ಮತ್ತು ಮಮತಾ ಪ್ರತಾಪ್ ಪ್ರಾರ್ಥಿಸಿದರು. ಸಂಘದ ನಿರ್ದೇಶಕರಾದ ಯಶೋಧ ವೀರಭದ್ರಪ್ಪ ಸ್ವಾಗತಿಸಿ, ಎಚ್ ಬಿ ಸಿದ್ದೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಂತಾ ಆನಂದ್ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment