Monday, December 16, 2024

ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ತೊಡಗಿಸಿ, ಕೆಲಸದ ದಿನ ಹೆಚ್ಚಿಸಿ

ಸಂಸದರಿಗೆ ಗುತ್ತಿಗೆ ಕಾರ್ಮಿಕರ ನಿಯೋಗ ಮನವಿ 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ನೀಡುವ ನಿಟ್ಟಿನಲ್ಲಿ ಹಾಗು ಕಾರ್ಖಾನೆ ಅಭಿವೃದ್ಧಿಗೆ ಗಮನ ಹರಿಸುವಂತೆ ಸೋಮವಾರ ಗುತ್ತಿಗೆ ಕಾರ್ಮಿಕರ ನಿಯೋಗ ಸಂಸದ ಬಿ.ವೈ ರಾಘವೇಂದ್ರರನ್ನು ಭೇಟಿ ಮಾಡಿ ಮನವಿ ಮಾಡಿದೆ. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ನೀಡುವ ನಿಟ್ಟಿನಲ್ಲಿ ಹಾಗು ಕಾರ್ಖಾನೆ ಅಭಿವೃದ್ಧಿಗೆ ಗಮನ ಹರಿಸುವಂತೆ ಸೋಮವಾರ ಗುತ್ತಿಗೆ ಕಾರ್ಮಿಕರ ನಿಯೋಗ ಸಂಸದ ಬಿ.ವೈ ರಾಘವೇಂದ್ರರನ್ನು ಭೇಟಿ ಮಾಡಿ ಮನವಿ ಮಾಡಿದೆ. 
    ಗುತ್ತಿಗೆ ಕಾರ್ಮಿಕರ ನಿಯೋಗ ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರರನ್ನು ಭೇಟಿ ಮಾಡಿ, ಗುತ್ತಿಗೆ ಕಾರ್ಮಿಕರಿಗೆ ಯಾವುದೇ ರೀತಿಯ ಕೆಲಸದ ದಿನಗಳನ್ನು ಹೆಚ್ಚಿಸಿರುವುದಿಲ್ಲ ಮತ್ತು ಕಾರ್ಖಾನೆ ಯಾವುದೇ ರೀತಿಯಲ್ಲೂ ಅಭಿವೃದ್ಧಿ ಹೊಂದುವ ಲಕ್ಷಣಗಳು ಕಂಡು ಬರುತ್ತಿಲ್ಲ.  ಈ ಕುರಿತು ಗಮನ ಹರಿಸಬೇಕೆಂದು ಮನವಿ ಮಾಡಲಾಯಿತು. 
    ಇದಕ್ಕೆ ಸಂಸದರು ಪ್ರತಿಕ್ರಿಯಿಸಿ, ಮುಂದಿನ ಎರಡು ತಿಂಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಸಿಗುವಂತೆ ಮಾಡುತ್ತೇನೆ. ಅತಿಶೀಘ್ರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸುವಂತೆ ಪುನಃ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಮೂಲಕ ಕಾರ್ಖಾನೆಯನ್ನು ಉತ್ಪಾದನೆಯತ್ತ ಕೊಂಡೊಯ್ಯಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು ಎಂದು ಗುತ್ತಿಗೆ ಕಾರ್ಮಿಕರ ನಿಯೋಗ ತಿಳಿಸಿದೆ. 
    ನಿಯೋಗದಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಹಾಗು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಡಿ.೨೨ರಂದು ಅಂತರ ಜಿಲ್ಲಾ ಮುಕ್ತ ಚದುರಂಗ ಪಂದ್ಯಾವಳಿ

    ಭದ್ರಾವತಿ: ಅಂತರ ಜಿಲ್ಲಾ ಮುಕ್ತ ಚದುರಂಗ ಪಂದ್ಯಾವಳಿ ಡಿ.೨೨ರ ಭಾನುವಾರ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದಲ್ಲಿರುವ ಲಯನ್ಸ್ ಕ್ಲಬ್, ಶುಗರ್‌ಟೌನ್, ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.  
    ಪಂದ್ಯಾವಳಿಯಲ್ಲಿ ೧೬ ವರ್ಷ ವಯೋಮಿತಿಯವರಿಗೆ ಮಾತ್ರ ಅವಕಾಶವಿದ್ದು, ನೆರೆಹೊರೆ ಜಿಲ್ಲೆಯವರು ಈ ಪಂದ್ಯದಲ್ಲಿ ಭಾಗವಹಿಸಬಹುದು. ಮುಕ್ತ ವಿಭಾಗದಲ್ಲಿ ೫ ಟ್ರೋಫಿ ಹಾಗೂ ರು. ೫,೫೦೦ ನಗದು ಬಹುಮಾನಗಳಿದ್ದು, ಬಾಲಕ ಮತ್ತು ಬಾಲಕಿಯರ ವಯೋಮಿತಿ ವಿಭಾಗದಲ್ಲಿ ಯು-೧೬,೧೪,೧೨,೧೦ ಮತ್ತು ೮ ರಲ್ಲಿ ಪ್ರತಿ ವಿಭಾಗದಲ್ಲಿ ೫ ಟ್ರೋಫಿಗಳಿರುತ್ತದೆ. ಅತಿ ಚಿಕ್ಕ ಬಾಲಕ-ಬಾಲಕಿಗೆ ಪ್ರತ್ಯೇಕ ಟ್ರೋಫಿ, ಒಟ್ಟು ೫೭ ಟ್ರೋಫಿಗಳನ್ನು ನೀಡಲಾಗುವುದು. ಪಂದ್ಯ ಬೆಳಿಗ್ಗೆ ೯ ಗಂಟೆಗೆ ಪ್ರಾರಂಭಗೊಂದು ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳುತ್ತದೆ. ಭಾಗವಹಿಸಲು ಇಚ್ಛಿಸುವ ಸ್ಪರ್ಧಿಗಳು ಡಿ.೨೧ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. 

ಪುರಸಭೆ ಮಾಜಿ ಸದಸ್ಯ ಎನ್. ಕೃಷ್ಣಮೂರ್ತಿ ನಿಧನ

    ಎನ್. ಕೃಷ್ಣಮೂರ್ತಿ
    ಭದ್ರಾವತಿ : ನಗರದ ಹಿರಿಯ ಕಾಂಗ್ರೆಸ್ ಮುಖಂಡ, ಪುರಸಭೆ ಮಾಜಿ ಸದಸ್ಯ ಎನ್. ಕೃಷ್ಣಮೂರ್ತಿ(೭೮) ಸೋಮವಾರ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರರು ಇದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಕೃಷ್ಣಮೂರ್ತಿಯವರು ವಾರ್ಡ್ ನಂ.೩ರ ಚಾಮೇಗೌಡ ಏರಿಯಾದಲ್ಲಿ ವಾಸಿಸುತ್ತಿದ್ದು, ಹಲವು ವರ್ಷಗಳ ಕಾಲ ಹಳೇನಗರದ ಮಾಡಲ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪುರಸಭೆ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದರು. 
    ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮಾಡಲ್ ಕೋ-ಅಪರೇಟಿವ್ ಸೊಸೈಟಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಪುಟ್ಟಮ್ಮ ನಿಧನ

ಪುಟ್ಟಮ್ಮ 
    ಭದ್ರಾವತಿ: ನಗರದ ನಂಜಾಪುರ ನಿವಾಸಿ ಪುಟ್ಟಮ್ಮ(೬೫) ಸೋಮವಾರ ನಿಧನ ಹೊಂದಿದರು. ಇವರ ಅಂತ್ಯಕ್ರಿಯೆ ಸಂಜೆ ನೆರವೇರಿತು. 
    ಓರ್ವ ಪುತ್ರ, ಮೂವರು ಪುತ್ರಿಯರು, ಸೊಸೆ, ಅಳಿಯಂದಿರು ಹಾಗು ಮೊಮ್ಮಕ್ಕಳು ಇದ್ದರು. ಈ ಹಿಂದೆ ನಗರಸಭೆ ವ್ಯಾಪ್ತಿಯ ವೇಲೂರುಶೆಡ್‌ನಲ್ಲಿ ವಾಸವಾಗಿದ್ದರು. ಇವರ ಪತಿ ಚಲುವಯ್ಯ ಜನವರಿ ತಿಂಗಳಿನಲ್ಲಿ ನಿಧನ ಹೊಂದಿದ್ದರು. ಪುಟ್ಟಮ್ಮ ಕೆಲವು ವರ್ಷಗಳಿಂದ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು.  
 

Sunday, December 15, 2024

ನೂತನ ತಹಸೀಲ್ದಾರ್ ಪರಶುರಾಮ್‌ರಿಗೆ ಡಿಎಸ್‌ಎಸ್ ಅಭಿನಂದನೆ

ಭದ್ರಾವತಿ ನೂತನ ತಾಲೂಕು ದಂಡಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ತಹಸೀಲ್ದಾರ್ ಪರಶುರಾಮ್‌ರವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಅಭಿನಂದಿಸಲಾಯಿತು. 
    ಭದ್ರಾವತಿ: ನೂತನ ತಾಲೂಕು ದಂಡಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ತಹಸೀಲ್ದಾರ್ ಪರಶುರಾಮ್‌ರವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಅಭಿನಂದಿಸಲಾಯಿತು. 
    ಈ ಹಿಂದೆ ತಾಲೂಕು ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-೧ ಅಧಿಕಾರಿ ತಹಸೀಲ್ದಾರ್ ಕೆ.ಆರ್ ನಾಗರಾಜು ಅವರನ್ನು ಸರ್ಕಾರ ವರ್ಗಾವಣೆಗೊಳಿಸಿದ್ದು, ತೆರೆವಾಗಿದ್ದ ಹುದ್ದೆಗೆ ಗ್ರೇಡ್-೨ ಅಧಿಕಾರಿ ತಹಸೀಲ್ದಾರ್ ಪರಶುರಾಮ್‌ರವರನ್ನು ನಿಯೋಜನೆಗೊಳಿಸಿದೆ. 
    ಪರಶುರಾಮ್‌ರನ್ನು ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ, ನಿವೃತ್ತ ಪ್ರಾಚಾರ್ಯ ಶಿವಬಸಪ್ಪ ನೇತೃತ್ವದಲ್ಲಿ ಅಭಿನಂದಿಸಲಾಯಿತು. ತಾಲೂಕು ಸಂಚಾಲಕ ನಾಗರಾಜ್, ಪ್ರೌಢಶಾಲಾ ನಿವೃತ್ತ ಶಿಕ್ಷಕ ಬೊಮ್ಮೇನಹಳ್ಳಿ ಶ್ರೀನಿವಾಸ್, ದೇವರಲ್ಲಿ ಮೈಲಾರಪ್ಪ,  ಕೆಂಚಮ್ಮನಹಳ್ಳಿ ಶ್ರೀನಿವಾಸ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 
 

ಅಣ್ಣನ ಕೊಲೆ : ಸುಫಾರಿ ನೀಡಿದ್ದ ತಂಗಿ ಗಂಡ ಸೇರಿ ಮೂವರ ಸೆರೆ

    ಭದ್ರಾವತಿ: ತಂಗಿಯ ಗಂಡನೇ ಅಣ್ಣನ ಕೊಲೆಗೆ ಸುಫಾರಿ ನೀಡಿರುವ ಘಟನೆ ಕಳೆದ ೩ ದಿನಗಳ ಹಿಂದೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ. 
    ತಾಲೂಕಿನ ಮೈದೊಳಲು ಮಲ್ಲಾಪುರ ಗ್ರಾಮದ ನಿವಾಸಿ ಪರಶುರಾಮ್(೩೬) ಕೊಲೆಯಾಗಿದ್ದು, ಕಾರೇಹಳ್ಳಿ ಗ್ರಾಮದ ತಾಳೆ ಎಣ್ಣೆ ಕಾರ್ಖಾನೆ ಬಳಿ ನಿರ್ಜನ ಪ್ರದೇಶದಲ್ಲಿ ಇವರ ಮೃತ ದೇಹ ಪತ್ತೆಯಾಗಿದೆ. ಪರಶುರಾಮ್‌ರನ್ನು ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ನಂತರ ಅವರ ಮೃತ ದೇಹವನ್ನು ಕಾರ್ಖಾನೆ ಬಳಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ. 
    ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಗೆ ಮಾಹಿತಿ ಬಂದಿದ್ದು, ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡ ಪೊಲೀಸರು ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ನಿವಾಸಿ ಸುದೀಪ್, ತಾಲೂಕಿನ ಗೊಂದಿ ಗ್ರಾಮದ ಮಹಂತೇಶ್ ಹಾಗು ಬೊಮ್ಮೇನಹಳ್ಳಿ ನಿವಾಸಿ ಅರುಣ್ ಮೂವರನ್ನು ಬಂಧಿಸಿದ್ದಾರೆ. ಮಹಂತೇಶ್ ಕೊಲೆಯಾದ ಪರಶುರಾಮ್ ತಂಗಿಯ ಗಂಡನಾಗಿದ್ದು, ಈತನೇ ಕೊಲೆಗೆ ಸುಫಾರಿ ನೀಡಿದ್ದ ಎನ್ನಲಾಗಿದೆ.  

ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲ್ನಡಿಗೆ ವಿಶೇಷ ಗಸ್ತು


ಕಾನೂನು ಸುವ್ಯವಸ್ಥೆ ಹಿತದೃಷ್ಠಿಯಿಂದ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಕಾಲ್ನಡಿಗೆ ವಿಶೇಷ ಗಸ್ತು ನಡೆಸಲಾಯಿತು. 
    ಭದ್ರಾವತಿ: ಕಾನೂನು ಸುವ್ಯವಸ್ಥೆ ಹಿತದೃಷ್ಠಿಯಿಂದ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಕಾಲ್ನಡಿಗೆ ವಿಶೇಷ ಗಸ್ತು ನಡೆಸಲಾಯಿತು. 
    ಪೊಲೀಸ್ ಠಾಣೆ ಉಪ ನಿರೀಕ್ಷಕ ಟಿ. ರಮೇಶ್ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡ ಠಾಣೆ ವ್ಯಾಪ್ತಿಯ ಬಾಲಭಾರತಿ, ನ್ಯೂಕಾಲೋನಿ ಸೇರಿದಂತೆ ವಿವಿಧೆಡೆ ಕಾಲ್ನಡಿಗೆ ವಿಶೇಷ ಗಸ್ತು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅದರಲ್ಲೂ ವಿಶೆಷವಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ಹೆಣ್ಣು ಮಕ್ಕಳು ಹೆಚ್ಚಾಗಿ ಸಂಚರಿಸುವ ಸ್ಥಳಗಳಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸಲಾಯಿತು.
    ಸಾಮಾನ್ಯ ಗಸ್ತು ಕಾರ್ಯಾಚರಣೆ ಠಾಣಾ ವ್ಯಾಪ್ತಿಯ ಭಂಡಾರಹಳ್ಳಿಯಲ್ಲಿ ನಡೆಯಿತು. ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಇತ್ತೀಚೆಗೆ ಪ್ರತಿ ಭಾನುವಾರ ಸಿಬ್ಬಂದಿಗಳಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಿಬ್ಬಂದಿಗಳ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಲಾಗುತ್ತಿದೆ.