
ಭದ್ರಾವತಿಯಲ್ಲಿ ಶನಿವಾರ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ವತಿಯಿಂದ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ೩೯೫ನೇ ಜಯಂತ್ಯೋತ್ಸವ ಕಾರ್ಯಕ್ರಮ ಬೆಂಗಳೂರು, ಶ್ರೀ ಭವಾನಿ ದತ್ತಪೀಠ ಗವಿಪುರಂ, ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಉದ್ಘಾಟಿಸಿದರು.
ಭದ್ರಾವತಿ: ಹಿಂದೂ ಸಾಮ್ರಾಜ್ಯ ನಿರ್ಮಾಣದಲ್ಲಿ ಶಿವಾಜಿ ಮಹಾರಾಜರ ಕೊಡುಗೆ ಹೆಚ್ಚಿನದ್ದಾಗಿದ್ದು, ಈ ಹಿನ್ನಲೆಯಲ್ಲಿ ಶಿವಾಜಿ ಮಹಾರಾಜರು ದೇಶದ ಇತಿಹಾಸದ ಪುಟದಲ್ಲಿ ಇಂದಿಗೂ ಅಪ್ರತಿಮ ನಾಯಕರಾಗಿ ಉಳಿದು ಕೊಂಡಿದ್ದಾರೆ. ಅವರ ಜೀವನ ಚರಿತ್ರೆ ಪ್ರತಿಯೊಬ್ಬರಿಗೂ ಆದರ್ಶವಾಗಿದೆ ಎಂದು ನಗರದ ತರುಣ ಭಾರತಿ ವಿಶ್ವಸ್ಥ ಮಂಡಳಿ ಪ್ರಮುಖರು, ಹಿರಿಯ ಮಾರ್ಗದರ್ಶಕರಾದ ಮಧುಕರ್ ಕಾನಿಟ್ಕರ್ ಹೇಳಿದರು.
ಅವರು ಶನಿವಾರ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ವತಿಯಿಂದ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ೩೯೫ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
ಶಿವಾಜಿ ಮಹಾರಾಜರು ಒಬ್ಬ ನ್ಯಾಯಶೀಲ, ವಿಚಾರಶೀಲ, ಸಂಯಮಶೀಲ, ಗುಣಶೀಲ ಹಾಗು ಅಪ್ರತಿಮ ಶೂರತ್ವದ ಶ್ರೀಮಂತ ವ್ಯಕ್ತಿತ್ವದ ಒಬ್ಬ ಮಹಾರಾಜರಾಗಿದ್ದು, ಅವರ ಜೀವನ ಚರಿತ್ರೆ ಗಮನಿಸಿದಾಗ ಹಿಂದೂ ಸಾಮ್ರಾಜ್ಯ ನಿರ್ಮಾಣದಲ್ಲಿ ಅವರು ನೀಡಿರುವ ಕೊಡುಗೆ ಅನನ್ಯವಾಗಿರುವುದು ತಿಳಿದುಬರುತ್ತದೆ. ಹಿಂದೂ ಧರ್ಮದ ವಿರುದ್ಧ ಮುಸ್ಲಿಂ ಧರ್ಮದವರು ನಡೆಸಿದ ದಾಳಿ ಸಮರ್ಥವಾಗಿ ಎದುರಿಸುವ ಮೂಲಕ ಧರ್ಮ ರಕ್ಷಕರಾಗಿರುವುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಇಂತಹ ಮಹಾರಾಜರ ಆದರ್ಶತನ, ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆಂದರು.
ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಅಧ್ಯಕ್ಷ ಎಚ್.ಆರ್ ಲೋಕೇಶ್ವರರಾವ್ ದೊಂಬಾಳೆ ಮಾತನಾಡಿ, ಕ್ಷೇತ್ರದಲ್ಲಿ ಮರಾಠ ಸಮುದಾಯದವರು ಅಲ್ಪ ಪ್ರಮಾಣದಲ್ಲಿ ಇದ್ದರೂ ಸಹ ಪ್ರಸ್ತುತ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಸಮುದಾಯದ ಎಲ್ಲರೂ ಸಂಘಟಿತರಾಗಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಆಚರಿಸಿಕೊಂಡು ಬರುತ್ತಿರುವುದು ಸಂಘಟನೆಗೆ ಮತ್ತಷ್ಟು ಸ್ಪೂರ್ತಿ ನೀಡುತ್ತಿದೆ. ನಗರದ ಹೊಸಮನೆ ಶಿವಾಜಿ ವೃತ್ತದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಿಸುವ ಸಂಬಂಧ ಸಂಘ ಕ್ರಿಯಾಶೀಲವಾಗಿದ್ದು, ಅಲ್ಲದೆ ಸಮುದಾಯದವರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಬೆಂಗಳೂರು, ಶ್ರೀ ಭವಾನಿ ದತ್ತಪೀಠ ಗವಿಪುರಂ, ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಪಾಧ್ಯಕ್ಷ ಶಿವಾಜಿರಾವ್ ಗಾಯ್ಕವಾಡ್, ಹಿರಿಯ ಮುಖಂಡ, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಸದಸ್ಯೆ ಅನುಪಮ ಚನ್ನೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಉಪಾಧ್ಯಕ್ಷೆ ಮೀರಾಬಾಯಿ ಬಿಸೆ, ಉದ್ಯಮಿ ಡಾ. ನಾಗೇಶ್‌ರಾವ್ ಬಾಂಡಲ್ಕರ್, ಯಶವಂತರಾವ್ ಘೋರ್ಪಡೆ, ರಘುನಾಥರಾವ್ ಗಿಡ್ಡೆ, ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಎಚ್.ಎಲ್ ರಂಗನಾಥರಾವ್ ಚೌವ್ಹಾಣ್, ಪ್ರಧಾನ ಕಾರ್ಯದರ್ಶಿ ಈ ಸುನಿಲ್ ಗಾರ್ಗೆ, ಸಹ ಕಾರ್ಯದರ್ಶಿ ರಂಗನಾಥರಾವ್ ಎಚ್. ಪಿಂಗ್ಳೇನರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜೀಜಾ ಮಹಿಳಾ ಸಂಘದ ಸದಸ್ಯರು ಪ್ರಾರ್ಥಿಸಿ, ಡಿ.ಎಸ್ ಬಸವಂತರಾವ್ ದಾಳೆ ಸ್ವಾಗತಿಸಿದರು. ಶೋಭಾ ದಾಳೆ ನಿರೂಪಿಸಿ, ಸಂಘದ ಖಜಾಂಚಿ ರಾಮನಾಥ್ ವಿ. ಬರ್ಗೆ ವಂದಿಸಿದರು. ಇದಕ್ಕೂ ಮೊದಲು ನಗರದ ಸಿ.ಎನ್ ರಸ್ತೆ, ಭವಾನಿ ಕಾಂಪ್ಲೆಕ್ಸ್‌ನಿಂದ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದ ವರೆಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು.