ಭದ್ರಾವತಿ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡರಾದ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರು ಆನಂದ ಸಾಮಾಜಿಕ ಸೇವಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಆಯುಷ್ಮಾನ್ ಭಾರತ್ ಯೋಜನೆಯ ಉಚಿತ ಸ್ಮಾರ್ಟ್ ಕಾರ್ಡ್ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸಂಸದ ಬಿ.ವೈ ರಾಘವೇಂದ್ರ ಸ್ಮಾರ್ಟ್ ಕಾರ್ಡ್ ವಿತರಿಸಿದರು.
ಭದ್ರಾವತಿ : ಆಯುಷ್ಮಾನ್ ಕಾರ್ಡ್ ೧೬೫೦ಕ್ಕೂ ವಿವಿಧ ತರಹದ ಚಿಕಿತ್ಸೆ, ೯೩೪ ತುರ್ತು ಸಂದರ್ಭದ ಚಿಕಿತ್ಸೆ ಹಾಗು ೧೭ ಅತಿ ತುರ್ತು ಸಂದರ್ಭದ ಚಿಕಿತ್ಸೆಗಳನ್ನು ಒಳಗೊಂಡಿದೆ. ಆದರೆ ಈ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲು ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಸಂಸದ ಬಿ.ವೈ ರಾಘವೇಂದ್ರ ಆರೋಪಿಸಿದರು.
ಅವರು ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡರಾದ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರು ಆನಂದ ಸಾಮಾಜಿಕ ಸೇವಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಆಯುಷ್ಮಾನ್ ಭಾರತ್ ಯೋಜನೆಯ ಉಚಿತ ಸ್ಮಾರ್ಟ್ ಕಾರ್ಡ್ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕೆಂಬ ಬಹುದೊಡ್ಡ ಕನಸು ಕಂಡಿದ್ದಾರೆ. ದೇಶದಲ್ಲಿ ಕೋವಿಡ್ ನಂತರ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯ ವೆಚ್ಚಕ್ಕೆ ಕಡಿವಾಣ ಹಾಕಲು ಈ ಯೋಜನೆ ಸಹಕಾರಿಯಾಗಿದೆ ಎಂದರು.
ಕುಟುಂಬದಲ್ಲಿ ಹಿರಿಯರ ಆರೋಗ್ಯ ಮತ್ತು ಯೋಗ ಕ್ಷೇಮ ನೋಡಿಕೊಳ್ಳುವುದು ಕಿರಿಯರ ಜವಾಬ್ದಾರಿಯಾಗಿದೆ. ಅದರೆ ಇತ್ತೀಚಿನ ದಿನಗಳಲ್ಲಿ ಹಿರಿಯರ ಆರೈಕೆ ಮಾಡುವುದನ್ನು ಕಡೆಗಣಿಸುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಪ್ರವೃತ್ತಿ ಸಮಾಜದಲ್ಲಿ ತೊಲಗಬೇಕು. ಹಿರಿಯ ಆರೈಕೆ ಮಾಡುವುದು ಪುಣ್ಯದ ಕೆಲಸವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಪಕ್ಷದ ಮುಖಂಡರು, ಕಾರ್ಯಕರ್ತರು ಈ ಯೋಜನೆ ಯಶಸ್ವಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಸಮಾಜದ ಪ್ರತಿಯೊಬ್ಬ ಕಡು ಬಡವನಿಗೂ ಈ ಯೋಜನೆ ತಲುಪಬೇಕು. ಈ ನಿಟ್ಟಿನಲ್ಲಿ ಸಂಸದ ರಾಘವೇಂದ್ರರವರು ಈ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ ಎಂದರು.
ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ.ಧರ್ಮ ಪ್ರಸಾದ್ ಮಾತನಾಡಿ, ಸಮಾಜದಲ್ಲಿನ ಮಧ್ಯಮ ವರ್ಗ ಹಾಗು ಶ್ರೀ ಸಾಮನ್ಯರಿಗೆ ಈ ಯೋಜನೆ ವರದಾನವಾಗಿದೆ ಎಂದರು.
ಯುವ ಮುಖಂಡರಾದ ಜಿ.ಆನಂದ ಕುಮಾರ್, ಟಿ.ಎಸ್ ದುಗ್ಗೇಶ್, ಅಣ್ಣಪ್ಪ, ಬಿ.ಜಿ ರಾಮಲಿಂಗಯ್ಯ, ಎಂ. ಮಂಜುನಾಥ್, ಮಧುಕರ್ ಕಾನಿಟ್ಕರ್, ದಿನೇಶ್, ಕೆ.ಎಚ್ ತೀರ್ಥಯ್ಯ, ನಗರಸಭಾ ಸದಸ್ಯೆ ಅನುಪಮ ಚನ್ನೇಶ್ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಜೇಂದ್ರ ಪ್ರಾರ್ಥಿಸಿ, ವೆಂಕಟೇಶ್ ಸ್ವಾಗತಿಸಿದರು. ಮಂಗೋಟೆ ರುದ್ರೇಶ್ ಪ್ರಸ್ತಾವಿಕ ನುಡಿಗಳನ್ನಾಡಿ, ಚನ್ನೇಶ್ ಕಾರ್ಯಕ್ರಮ ನಿರೂಪಿಸಿ, ಆನಂದ್ ವಂದಿಸಿದರು.