
ಭದ್ರಾವತಿ ತಾಲೂಕು ಸಮಗಾರ ಶ್ರೀ ಹರಳಯ್ಯ ಮೋಚಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸಂಘದ ಸುವರ್ಣ ಮಹೋತ್ಸವ ಹಾಗೂ ಸರ್ವಸದಸ್ಯರ ಮಹಾಸಭೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಉದ್ಯಮಿ ಬಿ.ಕೆ ಜಗನ್ನಾಥ, ಬಿ.ಪಿ ರಾಘವೇಂದ್ರ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ : ಕಾಯಕ ನಿಷ್ಠೆಯೊಂದಿಗೆ ಸಮಾಜಕ್ಕೆ ತನ್ನದೇ ಆದ ಆದರ್ಶ ಮೌಲ್ಯಗಳನ್ನು ನೀಡಿರುವ ಸಂತ ಗುರು ಹರಳಯ್ಯರವರ ಬದುಕು ನಮ್ಮೆಲ್ಲರಿಗೂ ಪ್ರೇರಣೆಯಾಗುವ ಮೂಲಕ ಭವಿಷ್ಯದ ಸಮಾಜ ರೂಪಿಸಿಕೊಳ್ಳಬೇಕೆಂದು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಕರೆ ನೀಡಿದರು.
ಅವರು ತಾಲೂಕು ಸಮಗಾರ ಶ್ರೀ ಹರಳಯ್ಯ ಮೋಚಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸಂಘದ ಸುವರ್ಣ ಮಹೋತ್ಸವ ಹಾಗೂ ಸರ್ವಸದಸ್ಯರ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಗುರು ಹರಳಯ್ಯ ೧೨ನೇ ಶತಮಾನದ ವಚನ ಸಾಹಿತ್ಯದ ಮಹಾನ್ ಸಂತ. ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪದಲ್ಲಿ ನೆಲೆಸಿದ್ದ ಹರಳಯ್ಯ, ಪತ್ನಿ ಕಲ್ಯಾಣಮ್ಮ ದಂಪತಿ ಕಾಯಕದ ಮಹತ್ವ, ನಿಷ್ಠೆ ತಿಳಿಸಿಕೊಡುವ ಜೊತೆಗೆ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಸುಧಾರಣೆಗೆ ಮುಂದಾಗಿದ್ದರು. ಇವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದರು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಸಂಜೀವ್ ಶಂಕರ್ ನಿಪ್ಪಾಣಿಕರ್, ಸಂಘದ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭವಿಷ್ಯ ರೂಪಿಸುವಂತೆ ಕರೆ ನೀಡಿದರು.
ನ್ಯಾಯವಾದಿ ವೈ.ಸಿ. ಕಾಂಬಳೆ ಮಾತನಾಡಿ, ಶಿಕ್ಷಣದ ಜೊತೆಗೆ ಸಮಾಜವನ್ನು ಸಂಘಟನೆಯ ಮೂಲಕ ಬಲಪಡಿಸಿದಾಗ ಮಾತ್ರ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದರು.
ಸಂಘದ ಅಧ್ಯಕ್ಷ ಬಿ.ಪಿ ರಾಘವೇಂದ್ರ ಮಾತನಾಡಿ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘದ ಏಳಿಗೆಗೆ ದುಡಿದಾಗ ಮಾತ್ರ ಯಾವುದೇ ಹಿಂದುಳಿದ ಸಮಾಜ ಮುಂದುವರೆಯಲು ಸಾಧ್ಯ ಎಂದರು.
ಉದ್ಯಮಿ ಬಿ.ಕೆ ಜಗನ್ನಾಥ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ನಗರಸಭೆ ಸದಸ್ಯ ಬಿ.ಎಂ ಮಂಜುನಾಥ್, ಸಂಘದ ಗೌರವಾಧಕ್ಷ ದೇವರಾವ್, ಉಪಾಧ್ಯಕ್ಷರಾದ ಜಿ.ಗಣೇಶ್ ಮತ್ತು ಬಿ.ಅಶ್ವಥ್, ಪ್ರಧಾನ ಕಾರ್ಯದರ್ಶಿ ದಶರಥ, ಖಜಾಂಚಿ ಎಸ್. ಚಂದ್ರಶೇಖರ್, ಸಹ ಕಾರ್ಯದರ್ಶಿ ಶಿವಾಜಿರಾವ್, ಸಂಘಟನಾ ಕಾರ್ಯದರ್ಶಿ ಗುರುಮೂರ್ತಿ, ಲೋಕೇಶ್ ಸರಾಠೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.