ಮಂಗಳವಾರ, ಜುಲೈ 29, 2025

ಕವಿಗೋಷ್ಠಿಯಿಂದ ಕಾವ್ಯ ರಚನೆ ಮಾಡಲು ಆಸಕ್ತಿ ಬೆಳೆಯುತ್ತದೆ: ಎಂ.ಎಸ್ ಸುಧಾಮಣಿ

ಕನ್ನಡ ಸಾಹಿತ್ಯ ಸಾಂಸ್ಕೃತ ವೇದಿಕೆಯಿಂದ     ಭದ್ರಾವತಿ ಆಂಜನೇಯ ಅಗ್ರಹಾರ, ಉಂಬ್ಳೆಬೈಲು ರಸ್ತೆ,  ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಮುಂಗಾರು ಕಾವ್ಯ ಧಾರೆ ಹಾಗೂ ನೂತನ ಸದಸ್ಯರ  ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಭದ್ರಾವತಿ: ಕಾಲೇಜು ವಿದ್ಯಾರ್ಥಿಗಳಿಗೆ  ಕವಿಗೋಷ್ಠಿ ಏರ್ಪಡಿಸುವುದರಿಂದ ಅವರಲ್ಲಿ ಕಾವ್ಯ ರಚನೆ ಮಾಡಲು ಆಸಕ್ತಿ ಬೆಳೆಯುತ್ತದೆ. ಆ ಮೂಲಕ ಯುವ ಸಮೂಹದಲ್ಲಿ  ಸಾಹಿತ್ಯಾಭಿರುಚಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬರಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಹೇಳಿದರು.

   ಅವರು ಕನ್ನಡ ಸಾಹಿತ್ಯ ಸಾಂಸ್ಕೃತ ವೇದಿಕೆಯಿಂದ  ಆಂಜನೇಯ ಅಗ್ರಹಾರ, ಉಂಬ್ಳೆಬೈಲು ರಸ್ತೆ  ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿ್ದ          ಮುಂಗಾರು ಕಾವ್ಯ ಧಾರೆ ಹಾಗೂ ನೂತನ ಸದಸ್ಯರ  ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ವೇದಿಕೆಯಿಂದ ಸಾಹಿತ್ಯ ಕಮ್ಮಟ, ಮಕ್ಕಳ ಸಾಹಿತ್ಯ ಸಮ್ಮೇಳನ, ಮಾತೃಭಾಷೆ ದಿನಾಚರಣೆ ಮತ್ತು ಶ್ರಾವಣ ಸಂಭ್ರಮ ಸೇರಿದಂತೆ ವಿಭಿನ್ನ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.

    ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಸಾಂಸ್ಕೃತ ವೇದಿಕೆ ಜಿಲ್ಲಾಧ್ಯಕ್ಷ ಡಿ.  ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆಗೆ ಉತ್ತೇಜನದ ಜೊತೆಗೆ   ಕಥೆ, ಕವನ, ಕಾದಂಬರಿ ಹಾಗೂ ಸೃಜನಶೀಲ ಬರವಣಿಗೆ ಸೇರಿದಂತೆ ಸಾಹಿತ್ಯಪರ  ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡು ಕನ್ನಡ ಭಾಷೆ  ಮೇಲಿನ ಹಿಡಿತ ಸಾಧಿಸಿ ಭಾಷಾ ಅಭಿಮಾನ ಬೆಳೆಸುವ ಕಾರ್ಯ ಕೃಗೊಳ್ಳಲಾಗುತ್ತಿದೆ ಎಂದರು.

    ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಹಿರಿಯ ಲೇಖಕ, ಸಾಹಿತಿ ಜಿ.ವಿ ಸಂಗಮೇಶ್ವರ,   ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ  ಡಾ. ವಿಜಯದೇವಿ, ಕ.ಸಾ.ಪ ತಾಲೂಕು ಅಧ್ಯಕ್ಷ ಟಿ. ತಿಮ್ಮಪ್ಪ,     ಉಪಾಧ್ಯಕ್ಷ ಬಿ.ಕೆ  ಜಗನ್ನಾಥ್, ನಿಕಟಪೂರ್ವ ಅಧ್ಯಕ್ಷ ಕೊಡ್ಲುಯಜ್ಞಯ್ಯ .ಸಾ. ಸಾಂ ವೇದಿಕೆ ಕಾರ್ಯದರ್ಶಿ ಉಮಾಪತಿ, ಖಜಾಂಚಿ ಗಂಗರಾಜ್, ಸಂಘಟನಾ ಕಾರ್ಯದರ್ಶಿ ಕಮಲಕುಮಾರಿ, ಕಾಂತಪ್ಪ ಬಣಗಾರ್, ಪ್ರಕಾಶ್, ಕಮಲಾಕರ್, ತಿಪ್ಪಮ್ಮ, ಮಲ್ಲಿಕಾಂಬ, ಇಂದಿರಾ, ಮಾಯಮ್ಮ, ಚನ್ನಪ್ಪ ಸೇರಿದಂತೆ ಇನ್ನಿತರರು  ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ರಮೇಶ್ ಶಂಕರಘಟ್ಟರಿಗೆ ಅಭಿನಂದನೆ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ನೂತನವಾಗಿ ನೇಮಕವಾಗಿರುವ ಎಂ.ರಮೇಶ್ ಶಂಕರಘಟ್ಟರನ್ನು ಬ್ಲಾಕ್ ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಘಟಕಗಳ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ ಜು.29: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ನೂತನವಾಗಿ ನೇಮಕವಾಗಿರುವ ಎಂ.ರಮೇಶ್ ಶಂಕರಘಟ್ಟರನ್ನು ಬ್ಲಾಕ್ ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಘಟಕಗಳ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಪಕ್ಷದ ಜಂಟಿ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಮೇಶ್, ಕ್ಷೇತ್ರದ ಸರ್ವಾಂಗೀಣಾಭಿವೃದ್ದಿಗೆ ಶ್ರಮಿಸುತ್ತಿರುವ ಶಾಸಕ ಬಿ.ಕೆ ಸಂಗಮೇಶ್ವರ್ ರವರ ಕೈ ಬಲಪಡಿಸುವುದರ ಮೂಲಕ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಗಟ್ಟಿಗೊಳಿಸಲು ಶ್ರಮಿಸಬೇಕೆಂದು ಕರೆ ನೀಡಿದರಲ್ಲದೆ, ಪ್ರತಿ ತಿಂಗಳು 27ರಂದು ಕಾರ್ಯಕರ್ತರ ಸಭೆ ಏರ್ಪಡಿಸಿ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುತಿರುವುದು ಶ್ಲಾಘನೀಯ ಕಾರ್ಯ ಈ ಹಿನ್ನೆಲೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಮಾತನಾಡಿ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರನ್ನಾಗಿ ರಮೇಶ್ ರನ್ನು ನೇಮಿಸಿರುವುದು ನಮ್ಮ ತಾಲೂಕಿಗೆ ಹೆಮ್ಮೆಯ ವಿಚಾರ ಎಂದರು.
ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಿ ಮುಂದಿನ ಚುನಾವಣೆಗಳಿಗೆ ಅವರನ್ನು ಸಜ್ಜುಗೊಳಿಸಲಾಗುತ್ತಿದೆ. ಇದಕ್ಕೆ ಹಿಂದುಳಿದ ವರ್ಗಗಳ ವಿಭಾಗದ ಸಹಕಾರ ಅಗತ್ಯವೆಂದರು.
ಕಾರ್ಯಕ್ರಮದಲ್ಲಿ ನಗರ ಹಿಂದುಳಿದ ವರ್ಗಗಳ ಅಧ್ಯಕ್ಷ ಬಿ. ಗಂಗಾಧರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಮೀರ್ ಜಾನ್, ಎಸ್.ಸಿ.ಘಟಕದ ಅಧ್ಯಕ್ಷ ಈಶ್ವರಪ್ಪ, ಎಸ್ ಟಿ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ, ನಗರಸಭಾ ಸದಸ್ಯ ಚನ್ನಪ್ಪ, ಕಾರ್ಯದರ್ಶಿ ಸಿ. ಜಯಪ್ಪ, ಜುಂಜ್ಯಾನಾಯ್ಕ, ಶಶಿಕುಮಾರ್, ಪ್ರಕಾಶ್ ತಳ್ಳಿಕಟ್ಟೆ ಮೊದಲಾದವರಿದ್ದರು.








ಸೋಮವಾರ, ಜುಲೈ 28, 2025

ಪ್ರೇಕ್ಷಕರ ಮನಸೂರೆಗೊಂಡ 'ಸಂಗ್ಯಾ ಬಾಳ್ಯಾ' ನಾಟಕ



ಭದ್ರಾವತಿ ನಗರದ ಮಿತ್ರ ಕಲಾ ಮಂಡಳಿ ವತಿಯಿಂದ ಸಂಘದ ಸಹಾಯಾರ್ಥ ನ್ಯೂಟೌನ್ ಶಾರದ ಮಂದಿರದಲ್ಲಿ ಆಯೋಜಿಸಲಾಗಿದ್ದ ರಂಗಕರ್ಮಿ, ಕಿರುತೆರೆ, ಚಲನಚಿತ್ರ ನಟ ಅಪರಂಜಿ ಶಿವರಾಜ್ ವಿನ್ಯಾಸ ಮತ್ತು ನಿರ್ದೇಶನದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರರ ಜಾನಪದ ನಾಟಕ `ಸಂಗ್ಯಾ ಬಾಳ್ಯಾ' ನಾಟಕ ಪ್ರದರ್ಶನ
ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ಪ್ರಭಾಕರ ಬೀರಯ್ಯ ಉದ್ಘಾಟಿಸಿದ್ದರು.

ಭದ್ರಾವತಿ: ನಗರದ ಮಿತ್ರ ಕಲಾ ಮಂಡಳಿ ವತಿಯಿಂದ ಸಂಘದ ಸಹಾಯಾರ್ಥ ನ್ಯೂಟೌನ್ ಶಾರದ ಮಂದಿರದಲ್ಲಿ ಆಯೋಜಿಸಲಾಗಿದ್ದ  ನಾಟಕ ಪ್ರದರ್ಶನ  ಪ್ರೇಕ್ಷಕರ ಮನಸೂರೆಗೊಂಡಿತು.
      ರಂಗಕರ್ಮಿ, ಕಿರುತೆರೆ, ಚಲನಚಿತ್ರ ನಟ ಅಪರಂಜಿ ಶಿವರಾಜ್ ವಿನ್ಯಾಸ ಮತ್ತು ನಿರ್ದೇಶನದ  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರರ ಜಾನಪದ ನಾಟಕ `ಸಂಗ್ಯಾ ಬಾಳ್ಯಾ' ನಾಟಕ ಪ್ರದರ್ಶನ
ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ಪ್ರಭಾಕರ ಬೀರಯ್ಯ ಉದ್ಘಾಟಿಸಿದ್ದರು.
   ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಎಚ್. ಉಮೇಶ್, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕಿ ಭಾಗ್ಯಮ್ಮ, ಉದ್ಯಮಿ ಬಿ.ಕೆ  ಜಗನ್ನಾಥ, ಶ್ರೀ ಸತ್ಯಸಾಯಿಬಾಬಾ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಣ ಸಂಯೋಜಕ ಜಿ.ಪಿ ಪರಮೇಶ್ವರಪ್ಪ,  ನವೋದಯ ಕಲಾ ಸಂಘದ ಅಧ್ಯಕ್ಷ  ಬಸಪ್ಪ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
       ಕಲಾವಿದರು ತಮ್ಮ ಕಲಾ ಪ್ರತಿಭೆ ಮೂಲಕ ಅಭಿನಯಕ್ಕೆ ಜೀವಂತಿಕೆ ತುಂಬಿದ್ದರು. ಈ ಮೂಲಕ ಇನ್ನೂ ರಂಗ ಕಲಾವಿದರು ಉಕ್ಕಿನ ನಗರದಲ್ಲಿದ್ದಾರೆಂದು  ಸಾಬೀತುಪಡಿಸಿದರು.  ಪ್ರದರ್ಶನಕ್ಕೆ ನವೋದಯ ಕಲಾ ಸಂಘ ಸಹಕಾರ ನೀಡಿತ್ತು.
       ಪ್ರಾತಧಾರಿಗಳಾಗಿ ಸಂಗ್ಯಾ-ಜೆ. ಭಾನುಪ್ರಕಾಶ್, ಬಾಳ್ಯಾ-ಎ.ಜಿ ಫ್ರಾನ್ಸಿಸ್, ಮೇಟಿತಾಳ-ವಿ. ಹಿರೇಮಠ್, ಈರ್‍ಯಾರಗಳೆ-ಭಾನುಪ್ರಕಾಶ್ ಬಾಬು, ಇರಪಕ್ಷಿ-ಎಸ್.ದೀಪಕ್, ಬಸವಂತ-ಬಿ.ಎಸ್ ಮಲ್ಲಿಕಾರ್ಜುನ್, ಮಾರವಾಡಿ-ಶಿವಮಹಾದೇವ, ಪೋಸ್ಟ್‌ಮ್ಯಾನ್-ಎಂ.ಎ ಬೆನಕೇಗೌಡ, ಬ್ಯಾಗರಿ-ಎಂ.ಕೆ ರಾಘವೇಂದ್ರ, ಆಳು-ಜಗದೀಶ್ವರಚಾರಿ, ಗಂಗಾ-ಪ್ರಿಯಾ ನಾಗರಾಜ್, ಪರಮ್ಮ-ಎಸ್. ಸರೋಜಮ್ಮ ಹಾಗು ಮಾಸ್ಟರ್ ಪ್ರತೀಕ್ ಡಿ.  ಅಭಿನಯಿಸಿದ್ದರು.
    ಬಿ.ಕೆ ಮೋಹನ್ ಕುಮಾರ್ ಮತ್ತು ಡಿ.ಆರ್ ಹರೀಶ್-ಸಂಗೀತ, ಜಗದೀಶ್ವರಚಾರಿ-ಬೆಳಕು, ಎಂ.ಕೆ ರಾಘವೇಂದ್ರ ಮತ್ತು ವಿ. ಹಿರೇಮಠ್-ಅಲಂಕಾರ, ಮೇಳ-ಜಿ. ದಿವಾಕರ, ವಿ.ಎ ಮಾರ್ಟಿನ್, ಕೆ.ಕೆ ಸಾಯಿಕೃಷ್ಣ, ಜಿ.ಆರ್ ಭಾರ್ಗವಿ, ಸಿ.ಎಚ್ ಪುಷ್ಪಲತಾ ಮತ್ತು ಎಚ್.ಆರ್ ಸುಧಾ ಕಾರ್ಯ ನಿರ್ವಹಿಸಿದರು.


    

ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆ ಯಶಸ್ವಿಗೊಳಿಸಿ: ಬಿ.ಎಸ್ ಗಣೇಶ್

ಭದ್ರಾವತಿ ಜೆಪಿಎಸ್ ಕಾಲೋನಿಯಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್ ರವರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು
ಭದ್ರಾವತಿ:  ತಾಲೂಕಿನಲ್ಲಿ ಮೆಸ್ಕಾಂ ವತಿಯಿಂದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆ ಯಶಸ್ವಿಗೊಳಿಸಲು ಅಧಿಕಾರಿಗಳು ಮುಂದಾಗಬೇಕೆಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್  ಗಣೇಶ್ ಮನವಿ ಮಾಡಿದರು.
ಅವರು ಸೋಮವಾರ ಜೆಪಿಎಸ್ ಕಾಲೋನಿಯಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್ ರವರ  ಕಚೇರಿಯಲ್ಲಿ  ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.   
ಜಿಲ್ಲೆಯಲ್ಲಿ ಪ್ರಮುಖವಾಗಿ  ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳಲ್ಲಿ ಹೆಚ್ಚಿನ ಗ್ರಾಹಕರಿದ್ದು, ಉಚಿತ ವಿದ್ಯುತ್ ಯೋಜನೆಯನ್ನು ಬಹುತೇಕ ಗ್ರಾಹಕರು ಸದ್ಬಳಕೆ ಮಾಡಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇದೆ ರೀತಿ ಮುಂದುವರೆಯಬೇಕೆಂದರು .
     ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಬಳ್ಳಾಪುರ ಮಾತನಾಡಿ, ಭದ್ರಾವತಿ ಮತ್ತು ಹೊಳೆಹೊನ್ನೂರು ಒಟ್ಟು ತಾಲೂಕಿನಲ್ಲಿ ಸುಮಾರು 1,06,000 ಗ್ರಾಹಕರಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಯಡಿ 86,000 ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಪೈಕಿ ಸುಮಾರು 9000 ಗ್ರಾಹಕರು 200 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
   ಮೆಸ್ಕಾಂ ಗ್ರಾಹಕರ ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಎಂ. ಬಸಂತಪ್ಪ ಅಧ್ಯಕ್ಷತೆ ವಹಿಸಿದ್ದರು. 
   ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಮಣಿ ಎಎನ್ಎಸ್, ಸದಸ್ಯರಾದ ಚನ್ನಪ್ಪ, ಲತಾ ಚಂದ್ರಶೇಖರ್, ಮಾಜಿ ಸದಸ್ಯೆ ಎಂ ಎಸ್ ಸುಧಾಮಣಿ,  ಬಿ.ಕೆ ಜಗನ್ನಾಥ್,  ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್. ಎಲ್ ಷಡಾಕ್ಷರಿ, ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ್ ,  ಮೆಸ್ಕಾಂ ಗ್ರಾಹಕರ ಸಲಹಾ ಸಮಿತಿ ಸದಸ್ಯರಾದ  ವಿಜಯಲಕ್ಷ್ಮಿ ಸುರೇಶ್ ವರ್ಮಾ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ಅಬ್ದುಲ್ ಮುನಾಫ್ ಮತ್ತು  ಬೀರಪ್ಪ, ಮೆಸ್ಕಾಂ ವಿದ್ಯುತ್  ಗುತ್ತಿಗೆದಾರರು ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಹಾಗೂ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಡಿ28-ಬಿಡಿವಿಟಿ

Ananthakumara, Reporter, Kannadaprabha, NDK/31A, Near, Sri Satyasayi Baba school, Newtown, Bhadravathi:-577301(Tq) Shimoga(Dis) Mob: 9738801478 : 9482007466

ಭಾನುವಾರ, ಜುಲೈ 27, 2025

ಪಡಿತರ ವಿತರಕರಿಗೆ ತಕ್ಷಣ ಕೆವೈಸಿ ಕಮಿಷನ್ ಹಣ ಪಾವತಿಸಿ : ಸಿದ್ದಲಿಂಗಯ್ಯ

ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ಸರ್ಕಾರ ತಕ್ಷಣ ಪಡಿತರ ವಿತರಿಕರಿಗೆ ಕೆವೈಸಿ ಕಮಿಷನ್ ಹಣ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ಮಾಸಿಕದ ಪಡಿತರ ವಿಲೇವಾರಿ ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಎಚ್ಚರಿಸಿದ್ದಾರೆ. 
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ೨೦೧೮ ರಿಂದ ೨೦೨೫ರ ವರೆಗೆ ನಿರಂತರವಾಗಿ ಶೇ.೯೮ ರಷ್ಟು ಕೆವೈಸಿ ಮಾಡಲಾಗಿದೆ. ಆದರೆ ಪಡಿತರ ವಿತರಕರಿಗೆ ೪-೫ ತಿಂಗಳಿನಿಂದ ಕಮಿಷನ್ ಹಣ ಬಂದಿರುವುದಿಲ್ಲ. ಈಗಾಗಲೇ ಈ ಸಂಬಂಧ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪಡಿತರ ವಿತರಕರು ಸಂಕಷ್ಟಕ್ಕೆ ಒಳಗಾಗಿದ್ದು, ತಕ್ಷಣ ಕೆವೈಸಿ ಕಮಿಷನ್ ಹಣ ಪಾವತಿಸಬೇಕೆಂದು ಕೋರಲಾಗಿದೆ.  
    ಸಂಘದ ತಾಲೂಕು ಶಾಖೆ ಗೌರವಾಧ್ಯಕ್ಷ ಕೃಷ್ಣೋಜಿರಾವ್, ಅಧ್ಯಕ್ಷ ಆರ್. ನಾಗೇಶ್, ಉಪಾಧ್ಯಕ್ಷ ಎಸ್. ರಾಜೇಂದ್ರ, ಕಾರ್ಯದರ್ಶಿ ಆರ್. ಮಣಿ, ಸಂಘಟನಾ ಕಾರ್ಯದರ್ಶಿ ಜಿ. ಕುಮಾರ್, ಖಜಾಂಚಿ ಪ್ರವೀಣ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜೀವನದಿ ಭದ್ರೆ ಭರ್ತಿಗೆ ಕೇವಲ ೩-೪ ಅಡಿ ಮಾತ್ರ ಬಾಕಿ : ಹೊಸಸೇತುವೆ ಮುಳುಗಡೆ

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿ ಪ್ರವಾಹ ಉಂಟು ಮಾಡಿದ್ದು, ಭಾನುವಾರ ಬೆಳಿಗ್ಗೆ ಹೊಸಸೇತುವೆ ಸಂಪೂರ್ಣವಾಗಿ ಮುಳುಗಡೆಗೊಂಡಿದೆ. 
    ಭದ್ರಾವತಿ : ತಾಲೂಕಿನ ಜೀವ ಭದ್ರಾ ನದಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲು ಕೇವಲ ೩-೪ ಅಡಿ ಮಾತ್ರ ಬಾಕಿ ಉಳಿದಿದೆ. ಈ ಬಾರಿ ನಿರೀಕ್ಷೆಗಿಂತ ಬಹುಬೇಗನೆ ಭರ್ತಿಯಾಗುತ್ತಿದ್ದು, ಇದರಿಂದಾಗಿ ಜಲಾಶಯ ನಂಬಿಕೊಂಡಿರುವ ರೈತರ ಮುಖದಲ್ಲಿ ಸಂತಸ ಮೂಡಿದೆ. 
    ಭಾನುವಾರ ಬೆಳಗ್ಗೆ ಜಲಾಶಯದ ನೀರಿನ ಮಟ್ಟ ೧೮೦.೬ ಅಡಿ ತಲುಪಿದೆ. ಒಟ್ಟು ೧೮೬ ಅಡಿ ಎತ್ತರದ ಜಲಾಶಯ ಸಂಜೆ ವೇಳೆಗೆ ಮತ್ತಷ್ಟು ಭರ್ತಿಯಾಗಿದ್ದು, ಇದರಿಂದಾಗಿ ಸೋಮವಾರ ಅಥವಾ ಮಂಗಳವಾರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ನಿರೀಕ್ಷೆ ಇದೆ. 
    ಪ್ರಸ್ತುತ ಜಲಾಶಯದ ಒಳ ಹರಿವು ೩೯,೦೧೭ ಕ್ಯೂಸೆಕ್ ಇದ್ದು, ಇಷ್ಟೆ ಪ್ರಮಾಣ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನದಿ ತೀರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿ ಪ್ರವಾಹ ಉಂಟು ಮಾಡಿದ್ದು, ಭಾನುವಾರ ಬೆಳಿಗ್ಗೆ ಹೊಸಸೇತುವೆ ಸಂಪೂರ್ಣವಾಗಿ ಮುಳುಗಡೆಗೊಂಡಿದೆ. ನಂತರ ಪುನಃ ನೀರಿನ ಪ್ರಮಾಣ ಕಡಿಮೆಯಾಗಿದೆ. ಶನಿವಾರ ಮಧ್ಯಾಹ್ನದಿಂದಲೇ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ತಾಲೂಕು ಆಡಳಿತ ಹಾಗು ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
    ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ಬೆಳಿಗ್ಗೆ ಸ್ವಲ್ಪ ಮಳೆಯಾಗಿದ್ದು, ನಂತರ ಸಂಜೆವರೆಗೂ ಮಳೆಯಾಗಿಲ್ಲ. ಕಳೆದ ವರ್ಷದ ಇದೆ ದಿನ ೧೭೮ ಅಡಿ ನೀರು ಸಂಗ್ರಹವಾಗಿತ್ತು. 

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಸಹಕಾರ್ಯದರ್ಶಿಯಾಗಿ ಬಿಳಿಕಿ ಶ್ರೀ

ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ 
    ಭದ್ರಾವತಿ : ತಾಲೂಕಿನ ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಸಹಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾಗಿದ್ದಾರೆ. 
    ೩೫ ವರ್ಷಗಳಿಂದ ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾಗಿರುವ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಹಲವಾರು ಬೃಹತ್ ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಳ್ಳುವ ಜೊತೆಗೆ ಹಿರೇಮಠವನ್ನು ಸಾಕಷ್ಟು ಅಭಿವೃದ್ಧಿಗೊಳಿಸಿದ್ದು, ಅಲ್ಲದೆ ಸಂಘಟನಾ ಚಟುವಟಿಕೆಗಳಲ್ಲೂ ಸಹ ತೊಡಗಿಸಿಕೊಂಡಿದ್ದಾರೆ. ಮಲೆನಾಡು ವೀರಶೈವ ಮಠಾಧೀಶರ ಪರಿಷತ್‌ನಲ್ಲಿ ಹಲವಾರು ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇವರ ಸಂಘಟನಾ ಸಾಮರ್ಥ್ಯ ಮನಗಂಡು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಸಹಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. 
    ಬಿಳಿಕಿ ಶ್ರೀಗಳಿಗೆ ನಗರದ ವೀರಶೈವ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರಾದ ಮಹೇಶ್ ಕುಮಾರ್, ಸಿದ್ದಲಿಂಗಯ್ಯ, ಸತೀಶ್ ಕುಮಾರ್, ಡಾ. ಜಿ.ಎಂ ನಟರಾಜ್, ವಾಗೀಶ್, ರುದ್ರೇಶ್ ಶಾಸ್ತ್ರಿ, ಆನಂದ ಸ್ವಾಮಿ ಹಾಗು ಬಿಳಿಕಿ ಮಠದ ಭಕ್ತರು ಮತ್ತು ಗ್ರಾಮಸ್ಥರು ಗುರು ನಮನ ಸಲ್ಲಿಸಿದ್ದಾರೆ.