ಗುರುವಾರ, ಸೆಪ್ಟೆಂಬರ್ 4, 2025

ಸೆ.೫ರಂದು ಶಿಕ್ಷಕರ ದಿನಾಚರಣೆ

    ಭದ್ರಾವತಿ: ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಹಾಗು ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ಸೆ.೫ರ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನಾಚರಣೆ `ಶಿಕ್ಷಕರ ಧಿನಾಚರಣೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ಅಧ್ಯಕ್ಷರಾದ ಶಾಸಕ ಗೋಪಾಲಕೃಷ್ಣ ಬೇಳೂರು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ, ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್ ಭೋಜೇಗೌಡ, ಭಾರತಿ ಶೆಟ್ಟಿ, ಡಾ. ಧನಂಜಯ ಸರ್ಜಿ, ಬಲ್ಕೀಶ್ ಬಾನು, ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿ, ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್ ಶ್ರೀಧರ್ ಸಾವಂತ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ. ಕೊಟ್ರಪ್ಪ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಎಸ್. ಉಮಾ, ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪೋಲಾರ್ ಮುರಳಿಧರ್ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಆರ್.ಯು ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 
    ಉಡುಪಿ ಟಿಎಂಎಪೈ ಶಿಕ್ಷಣ ಸಂಸ್ಥೆ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ವಿಶೇಷ ಉಪನ್ಯಾಸ ನೀಡಲಿದ್ದು, ತಾಲೂಕಿನ ಶಿಕ್ಷಕರು, ಶಿಕ್ಷಣ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮನವಿ ಮಾಡಿದ್ದಾರೆ. 

ನಾಲ್ವರು ಸಹ ಶಿಕ್ಷಕಿಯರು ಸೇರಿ ೫ ಮಂದಿಗೆ ಶಿಕ್ಷಕ ಪ್ರಶಸ್ತಿ

    ಭದ್ರಾವತಿ: ತಾಲೂಕಿನ ಮೂವರು ಸಹ ಶಿಕ್ಷಕಿಯರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗು ಓರ್ವ ಸಹ ಶಿಕ್ಷಕ ಮತ್ತು ಸಹ ಶಿಕ್ಷಕಿಗೆ ಜಿಲ್ಲಾಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಶುಕ್ರವಾರ ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. 
    ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಹೊಳೆಗಂಗೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಎಸ್. ಶಾರದಾ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬದನೇಹಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಎಸ್. ಭಾರತಿ ಮತ್ತು ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಛಾಯಾ ಶ್ಯಾಮಸುಂದರ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. 
    ಉಳಿದಂತೆ ಸನ್ಯಾಸಿ ಕೋಡಮಗ್ಗಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಶಬಿನಾ ಮತ್ತು ಮೈದೊಲು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ(ಪಿಎಂಶ್ರೀ) ಸಹ ಶಿಕ್ಷಕ ಆರ್. ತಿಪ್ಪೇಸ್ವಾಮಿ ಅವರಿಗೆ ಜಿಲ್ಲಾಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ಲಭಿಸಿದೆ. 

ಕುವೆಂಪು ವಿವಿ ಕುಲಸಚಿವರಾಗಿ ಪ್ರೊ. ಆರ್. ತಿಮ್ಮರಾಯಪ್ಪ ಅಧಿಕಾರ ಸ್ವೀಕಾರ

ಭದ್ರಾವತಿ ಕುವೆಂಪು ವಿಶ್ವ ವಿದ್ಯಾಲಯದ ಕುಲಸಚಿವರಾಗಿ(ಮೌಲ್ಯಮಾಪನ) ಪ್ರಾಧ್ಯಾಪಕ ಪ್ರೊ. ಆರ್. ತಿಮ್ಮರಾಯಪ್ಪ ಗುರುವಾರ ಅಧಿಕಾರ ವಹಿಸಿಕೊಂಡರು. 
    ಭದ್ರಾವತಿ: ಇಲ್ಲಿನ ಕುವೆಂಪು ವಿಶ್ವ ವಿದ್ಯಾಲಯದ ಕುಲಸಚಿವರಾಗಿ(ಮೌಲ್ಯಮಾಪನ) ಪ್ರಾಧ್ಯಾಪಕ ಪ್ರೊ. ಆರ್. ತಿಮ್ಮರಾಯಪ್ಪ ಗುರುವಾರ ಅಧಿಕಾರ ವಹಿಸಿಕೊಂಡರು. 
    ಪ್ರೊ. ಆರ್. ತಿಮ್ಮರಾಯಪ್ಪರವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಇವರನ್ನು ಇದೀಗ ಕುವೆಂಪು ವಿಶ್ವ ವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಹುದ್ದೆಗೆ ನಿಯೋಜನೆಗೊಳಿಸಿದ್ದು, ಈ ಕುರಿತು ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾನಿಲಯಗಳು-೧) ಸರ್ಕಾರದ ಅಧೀನ ಕಾರ್ಯದರ್ಶಿ ಸಿ. ಶಶಿಕಲಾರವರು ಅಧಿಸೂಚನೆ ಹೊರಡಿಸಿದ್ದಾರೆ. 


    ಕುವೆಂಪು ವಿಶ್ವ ವಿದ್ಯಾಲಯದ ಕುಲಸಚಿವರಾಗಿ(ಮೌಲ್ಯಮಾಪನ) ಕರ್ತವ್ಯ ನಿರ್ವಹಿಸುತ್ತಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್.ಎಂ ಗೋಪಿನಾಥ್‌ರವರನ್ನು ಅವರ ಮಾತೃ ವಿಶ್ವವಿದ್ಯಾಲಯಕ್ಕೆ ಹಿಂದಿರುಗಿಸಲಾಗಿದೆ. 
    ನೂತನ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪರವರನ್ನು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹಾಗು ವಿಶ್ವ ವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 

ಸಾಮಾಜಿಕ ಪಿಡುಗು ಬಾಲ್ಯ ವಿವಾಹ ಕುರಿತು ಬೀದಿ ನಾಟಕ ಮೂಲಕ ಜಾಗೃತಿ

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಹಾಗು ಬಾರಂದೂರು, ದೊಣಬಘಟ್ಟ ಮತ್ತು ಬಾಳೆಮಾರನಹಳ್ಳಿ ಗ್ರಾಮಗಳಲ್ಲಿ ಬಾಲ್ಯ ವಿವಾಹದಿಂದ ಎದುರಾಗುವ ಸಮಸ್ಯೆಗಳು ಹಾಗು ಬಾಲ್ಯ ವಿವಾಹ ನಿರ್ಮೂಲನೆ ಕುರಿತು ಸಂತ ಡೊಮಿನಿಕ್ ಶಾಲಾ ಮಕ್ಕಳು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು.   
    ಭದ್ರಾವತಿ:  ಸಾಮಾಜಿಕ ಪಿಡುಗುಗಳಲ್ಲಿ ಅತಿಮುಖ್ಯವಾದ ಪಿಡುಗು ಬಾಲ್ಯ ವಿವಾಹ ನಿರ್ಮೂಲನೆ ಕುರಿತು ನಗರದ ಸಂತ ಡೊಮಿನಿಕ್ ಶಾಲಾ ಮಕ್ಕಳು ವಿವಿಧೆಡೆ ಬೀದಿ ನಾಟಕ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು. 
    ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಹಾಗು ಬಾರಂದೂರು, ದೊಣಬಘಟ್ಟ ಮತ್ತು ಬಾಳೆಮಾರನಹಳ್ಳಿ ಗ್ರಾಮಗಳಲ್ಲಿ ಬಾಲ್ಯ ವಿವಾಹದಿಂದ ಎದುರಾಗುವ ಸಮಸ್ಯೆಗಳು ಹಾಗು ಬಾಲ್ಯ ವಿವಾಹ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಯಿತು.  
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಬೀದಿ ನಾಟಕ ಪ್ರದರ್ಶನ ವೀಕ್ಷಿಸಿ ವಿದ್ಯಾಸಂಸ್ಥೆ ಆಡಳಿತ ಮಂಡಳಿಗೂ ಹಾಗು ಶಾಲಾ ಮಕ್ಕಳಿಗೂ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕೆಂದರು. 
    ಕಾರೆಹಳ್ಳಿ ಸಂತ ಅಂತೋನಿ ದೇವಾಲಯದ ಧರ್ಮ ಗುರುಗಳು ವಂದನೆಯ ಸಂತೋಷ್ ಡಿ ಅಲ್ಮೇಡಾ, ಸಂತ ಡೊಮಿನಿಕ್ ಶಾಲೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೆಲ್ಫಿ,  ಸಿಸ್ಟರ್ ಲಾಲಮ್ಮ ಹಾಗೂ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
 

ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ ಮೆರವಣಿಗೆಗೆ ಚಾಲನೆ

ಭದ್ರಾವತಿ ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ವಿನಾಯಕ ಮೂರ್ತಿ ರಾಜಬೀದಿ ಉತ್ಸವ ಮೆರವಣಿಗೆಗೆ ಗುರುವಾರ ಮಧ್ಯಾಹ್ನ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. 
    ಭದ್ರಾವತಿ:  ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ವಿನಾಯಕ ಮೂರ್ತಿ ವಿಸರ್ಜನೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಜಬೀದಿ ಉತ್ಸವ ಮೆರವಣಿಗೆಗೆ ಗುರುವಾರ ಮಧ್ಯಾಹ್ನ ಸುಮಾರು ೧೨.೩೦ರ ಸಮಯದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. 
    ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್, ಶಾಸಕರ ಸಹೋದರರಾದ ಉದ್ಯಮಿ ಬಿ.ಕೆ ಜಗನ್ನಾಥ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಮತ್ತು ಹಿರಿಯ ಪುತ್ರ, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯರಾದ ಚನ್ನಪ್ಪ, ಕೆ. ಸುದೀಪ್‌ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ. ಮಂಜುನಾಥ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಮೆಸ್ಕಾಂ ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ, ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ, ಹಿಂದೂಪರ ಸಂಘಟನೆಗಳ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸೇರಿದಂತೆ ಇನ್ನಿತರರ ಸಮ್ಮುಖದಲ್ಲಿ ರಾಜಬೀದಿ ಉತ್ಸವ ಮೆರವಣಿಗೆ ಆರಂಭಗೊಂಡಿತು. 
    ಪ್ರತಿವರ್ಷದಂತೆ ಈ ಬಾರಿ ಸಹ ವೈಭವಯುತವಾಗಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ನಡೆಯಿತು. ನಿರೀಕ್ಷೆಗೂ ಮೀರಿ ಭಕ್ತರು ಪಾಲ್ಗೊಂಡಿದ್ದರು. ಪ್ರತಿಷ್ಠಾಪನೆ ಸ್ಥಳದಿಂದ ಆರಂಭಗೊಂಡ ಮೆರವಣಿಗೆ ಹೊಸಮನೆ ಶಿವಾಜಿ ವೃತ್ತ ತಲುಪಿ ಪುನಃ ಹಿಂದಿರುಗಿ ಹೊಸಮನೆ ಮುಖ್ಯ ರಸ್ತೆಯಲ್ಲಿ ಸಾಗಿತು. ಮಧ್ಯಾಹ್ನ ೨.೩೦ರ ವೇಳೆಗೆ ರಂಗಪ್ಪವೃತ್ತ ಸಮೀಪ ಸಾಗಿತು. ಸಂಜೆ ೫ರ ವೇಳೆಗೆ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತ ತಲುಪಿತು. 
    ಪ್ರಮುಖ ವೃತ್ತಗಳ ದ್ವಾರಬಾಗಿಲುಗಳ ಬಳಿ ಫ್ಲೆಕ್ಸ್, ಬಂಟಿಂಗ್ಸ್, ಕೇಸರಿ ಧ್ವಜ ರಾರಾಜಿಸುತ್ತಿದ್ದವು. ಹೊಸಮನೆ ಮುಖ್ಯ ರಸ್ತೆ, ಡಾ. ರಾಜ್‌ಕುಮಾರ್ ರಸ್ತೆ, ಬಿ.ಎಚ್ ರಸ್ತೆ, ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಸೇರಿದಂತೆ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಕೆಸರಿಮಯವಾಗಿ ಕಂಗೊಳಿಸುತ್ತಿದ್ದವು. ನಿವಾಸಿಗಳು, ವರ್ತಕರು, ವ್ಯಾಪರಸ್ಥರು ಮನೆ, ಅಂಗಡಿ ಮುಂಗಟ್ಟುಗಳ ಮುಂಭಾಗ ಸ್ವಚ್ಛಗೊಳಿಸಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ವಿನಾಯಕ ಮೂರ್ತಿಯನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಕೆಲವು ವರ್ತಕರು ಹಾಗು ಸಂಘಟನೆಗಳು ಫಲ-ಪುಷ್ಪಗಳಿಂದ, ಸಿಹಿ ದಿನಸಿಗಳಿಂದ ತಯಾರಿಸಿರುವ ಬೃಹತ್ ಮಾಲೆಗಳನ್ನು ವಿನಾಯಕ ಮೂರ್ತಿಗೆ ಸಮರ್ಪಿಸಿದರು. ವಿನಾಯಕ ಮೂರ್ತಿ ಆಗಮಿಸುತ್ತಿದ್ದಂತೆ ಯುವ ಸಮುದಾಯದವರು ಅಲ್ಲಲ್ಲಿ ರಸ್ತೆಗಳ ಮೇಲೆ ಬೃಹತ್ ಓಂಕಾರ ಚಿತ್ತಾರಗಳನ್ನು ಬಿಡಿಸಿ ಕರ್ಪೂರ ಹಚ್ಚಿ ಸಂಭ್ರಮಿಸಿದರು. 


ಭದ್ರಾವತಿ ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ವಿನಾಯಕ ಮೂರ್ತಿ ರಾಜಬೀದಿ ಉತ್ಸವ ಮೆರವಣಿಗೆ ಗುರುವಾರ ಮಧ್ಯಾಹ್ನ ಆರಂಭಗೊಂಡಿದ್ದು, ಕಲಾತಂಡಗಳೊಂದಿಗೆ ಸಾವಿರಾರು ಭಕ್ತರು ಹೆಜ್ಜೆ ಹಾಕಿ ಮುಂದೆ ಸಾಗಿದರು. ಶಾಸಕರ ಹಿರಿಯ ಪುತ್ರ, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. 
    ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕಂಸಾಳೆ, ಕೋಲಾಟ, ಗೊಂಬೆ ನೃತ್ಯ, ವೀರಗಾಸೆ, ನಾದಸ್ವರ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಮಕ್ಕಳು, ಮಹಿಳೆಯರು, ಯುವಕರು-ಯುವತಿಯರು ಸೇರಿದಂತೆ ವಯಸ್ಸಿನ ಬೇಧಭಾವವಿಲ್ಲದೆ ಸಾವಿರಾರು ಭಕ್ತರು ಹೆಜ್ಜೆ ಹಾಕಿ ಸಂಭ್ರಮಿಸಿದರು.  ವಿವಿಧ ಸಂಘಟನೆಗಳಿಂದ ಅಂಗಡಿಮುಂಗಟ್ಟುಗಳ ಬಳಿ ಅನ್ನಸಂತರ್ಪಣೆಗೆ ಕೈಗೊಳ್ಳಲಾಗಿತ್ತು. ಲಾಡು, ಮಜ್ಜಿಗೆ, ಪಾನಕ ವಿತರಣೆ ಸಹ ನಡೆಯಿತು. ಹಲವು ಸಂಘಟನೆಗಳಿಂದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಒಳ ರಸ್ತೆಗಳ ಸಂಪರ್ಕ ಬ್ಯಾರಿಕೇಡ್‌ಗಳಿಂದ ಕಡಿತಗೊಳಿಸಲಾಗಿತ್ತು. ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿತ್ತು. 

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ : ರಾಜಬೀದಿ ಉತ್ಸವ ಮೆರವಣಿಗೆಗೆ ಚಾಲನೆ

ಭದ್ರಾವತಿ ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ವಿನಾಯಕ ಮೂರ್ತಿ ರಾಜಬೀದಿ ಉತ್ಸವ ಮೆರವಣಿಗೆ ಗುರುವಾರ ಬೆಳಿಗ್ಗೆ ಆರಂಭಗೊಂಡಿದ್ದು, ಕಲಾತಂಡಗಳೊಂದಿಗೆ ಸಾವಿರಾರು ಭಕ್ತರು ಹೆಜ್ಜೆ ಹಾಕಿ ಮುಂದೆ ಸಾಗುತ್ತಿದ್ದಾರೆ. 
    ಭದ್ರಾವತಿ:  ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ವಿನಾಯಕ ಮೂರ್ತಿ ವಿಸರ್ಜನೆ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ರಾಜಬೀದಿ ಉತ್ಸವ ಮೆರವಣಿಗೆ ಗುರುವಾರ ಬೆಳಿಗ್ಗೆ ಆರಂಭಗೊಂಡಿದ್ದು, ಮಧ್ಯಾಹ್ನ ೨ರ ವೇಳೆಗೆ ರಂಗಪ್ಪವೃತ್ತ ಸಮೀಪ ಆಗಮಿಸಿತು. 
   ಪ್ರತಿವರ್ಷದಂತೆ ಈ ಬಾರಿ ಸಹ ವೈಭವಯುತವಾಗಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ನಡೆಯುತ್ತಿದ್ದು, ನಿರೀಕ್ಷೆಗೂ ಮೀರಿ ಭಕ್ತರು ಪಾಲ್ಗೊಂಡಿದ್ದಾರೆ. ಪ್ರತಿಷ್ಠಾಪನೆ ಸ್ಥಳದಿಂದ ಆರಂಭಗೊಂಡ ಮೆರವಣಿಗೆ ಹೊಸಮನೆ ಶಿವಾಜಿ ವೃತ್ತ ತಲುಪಿ ಪುನಃ ಹಿಂದಿರುಗಿ ಹೊಸಮನೆ ಮುಖ್ಯ ರಸ್ತೆಯಲ್ಲಿ ಸಾಗಿತು. ಪ್ರಮುಖ ವೃತ್ತಗಳ ದ್ವಾರಬಾಗಿಲುಗಳ ಬಳಿ ಫ್ಲೆಕ್ಸ್, ಬಂಟಿಂಗ್ಸ್, ಕೇಸರಿ ಧ್ವಜ ರಾರಾಜಿಸುತ್ತಿವೆ. ಹೊಸಮನೆ ಮುಖ್ಯ ರಸ್ತೆ, ಡಾ. ರಾಜ್‌ಕುಮಾರ್ ರಸ್ತೆ, ಬಿ.ಎಚ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಕೆಸರಿಮಯವಾಗಿ ಕಂಗೊಳಿಸುತ್ತಿವೆ. 
    ಅಂಗಡಿಮುಂಗಟ್ಟುಗಳ ಬಳಿ ಅನ್ನಸಂತರ್ಪಣೆಗೆ ಕೈಗೊಳ್ಳಲಾಗಿದ್ದು, ಲಾಡು, ಮಜ್ಜಿಗೆ, ಪಾನಕ ವಿತರಣೆ ಸಹ ನಡೆಯಿತು. ಹಲವು ಸಂಘಟನೆಗಳಿಂದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಒಳ ರಸ್ತೆಗಳ ಸಂಪರ್ಕ ಬ್ಯಾರಿಕೇಡ್‌ಗಳಿಂದ ಕಡಿತಗೊಳಿಸಲಾಗಿದೆ. ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕಂಸಾಳೆ, ಕೋಲಾಟ, ಗೊಂಬೆ ನೃತ್ಯ, ವೀರಗಾಸೆ, ನಾದಸ್ವರ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡಿವೆ. ಸಾವಿರಾರು ಭಕ್ತರು ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿ ಮುಂದೆ ಸಾಗುತ್ತಿದ್ದಾರೆ. 
    ರಾಜಬೀದಿ ಉತ್ಸವ ಮೆರವಣಿಗೆ ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮೂಲಕ ಲೋಯರ್ ಹುತ್ತಾ ಬಸ್ ನಿಲ್ದಾಣದ ವರೆಗೆ ಸಾಗಿ ಪುನಃ ಹಿಂದಿರುಗಿ ಸಂಜೆ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿ ಸಾಗಿ ನಗರಸಭೆ ಮುಂಭಾಗ ಅಂತ್ಯಗೊಳ್ಳಲಿದೆ. ನಂತರ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ. 
    ಬಿಗಿ ಪೊಲೀಸ್ ಬಂದೋಬಸ್ತ್ : 
    ಪ್ರತಿ ವರ್ಷದಂತೆ ಈ ಬಾರಿ ಸಹ ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸ್ ಅಧೀಕ್ಷಕರು-೩, ಹೆಚ್ಚುವರಿ ಅಧೀಕ್ಷಕರು-೫, ಪೊಲೀಸ್ ಉಪಾಧೀಕ್ಷಕರು-೧೭, ವೃತ್ತ ನಿರೀಕ್ಷಕರು-೩೪, ನಿರೀಕ್ಷಕರು ೨೩, ಕಾನ್‌ಸ್ಟೇಬಲ್-೧೭೫೦, ಗೃಹರಕ್ಷಕದಳ-೨೨೦, ಕೆಎಸ್‌ಆರ್‌ಪಿ(ಮೀಸಲು ಪಡೆ) ತುಕಡಿ-೮, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ(ಡಿಆರ್)-೮ ತುಕಡಿ, ಕ್ಷಿಪ್ರ ಕಾರ್ಯಪಡೆ(ಆರ್‌ಎಎಫ್)-೧ ತುಕಡಿ, ವಿಶೇಷ ಕಾರ್ಯಪಡೆ(ಎಸ್‌ಎಎಫ್)-೧ ತುಕಡಿ ಹಾಗು ೧೦೦ ದ್ರೋಣ್ ನಿರ್ವಾಹಕರು ಮತ್ತು ೫೦ ವಿಡಿಯೋ ಚಿತ್ರೀಕರಣ ಛಾಯಾಗ್ರಾಹಕರು ಬಿಗಿ ಪೊಲೀಸ್ ಬಂದೋಬಸ್ತ್‌ಗೆ ಬಳಸಿಕೊಳ್ಳಲಾಗಿದೆ. 

ಬುಧವಾರ, ಸೆಪ್ಟೆಂಬರ್ 3, 2025

ಸೆ.೧೪ರವರೆಗೆ ಪೈಗಂಬರ್ ಮುಹಮ್ಮದ್‌ರವರ ಸೀರತ್ ಅಭಿಯಾನ


    ಭದ್ರಾವತಿ : ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನ್ಯಾಯದ ಹರಿಕಾರ, ಪೈಗಂಬರ್ ಮುಹಮ್ಮದ್‌ರವರ ಸೀರತ್ ಅಭಿಯಾನ ಸೆ.೧೪ರವರೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಶಾಖೆ ವತಿಯಿಂದ ಪ್ರಬಂಧ ಸ್ಪಧೆ, ನಗರದ ಗಣ್ಯ ವ್ಯಕ್ತಿಗಳಿಂದ ಭೇಟಿ, ಸ್ವಚ್ಛತಾ ಕಾರ್ಯಕ್ರಮ, ಸೀರತ್ ಪ್ರವಚನ, ಅನಾಥಶ್ರಮ ಮತ್ತು ಆಸ್ಪತ್ರೆ ಭೇಟಿ, ರಕ್ತದಾನ ಶಿಬಿರ ಹೀಗೆ ಸಾಮಾಜಿಕ ಶೈಕ್ಷಣಿಕ ಆರೋಗ್ಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
    ಪ್ರವಾದಿ ಮುಹಮ್ಮದ್‌ರವರು ಅರೆಬಿಕ್ ಕ್ಯಾಲೆಂಡರ್ ಪ್ರಕಾರ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಜನಿಸಿದರು. ಅವರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಮತ್ತು ವಿವಿಧ ಧರ್ಮಿಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ `ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್' ಶೀರ್ಷಿಕೆಯಡಿ ಸೆ.೧೪ರವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. 
    ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನ ಪ್ರಕಟಿಸಿರುವ ಪ್ರವಾದಿಯವರ ಬದುಕು ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವ ಎರಡು ಹೊಸ ಪುಸ್ತಕಗಳನ್ನು ರಾಜ್ಯಾದ್ಯಂತ ಬಿಡುಗಡೆ ಗೊಳಿಸಲಾಗುವುದು. ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ. ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು, ಜಮಾತೆ ಇಸ್ಲಾಮಿ ಹಿಂದ್, ಭದ್ರಾವತಿ, ಮೊ: ೯೦೩೬೫೩೫೩೮೫ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.