ಮಾಧವಚಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ

ಮಹಮದ್ ಪೈಗಂಬರರ ಜನ್ಮದಿನ ಸಂಭ್ರಮಾಚರಣೆ ಅಂಗವಾಗಿ ಭದ್ರಾವತಿ ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆಂದು ಆರೋಪಿಸಿ ತಕ್ಷಣ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರ ಮಾಧವಚಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ: ಮಹಮದ್ ಪೈಗಂಬರರ ಜನ್ಮದಿನ ಸಂಭ್ರಮಾಚರಣೆ ಅಂಗವಾಗಿ ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆಂದು ಆರೋಪಿಸಿ ತಕ್ಷಣ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರ ಮಾಧವಚಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹಿಂದೂಪರ ಸಂಘಟನೆಗಳ ಹಾಗೂ ಭಾರತೀಯ ಜನತಾ ಪಕ್ಷ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳ ಪ್ರಮುಖರು, ಅಭಿಮಾನಿಗಳು ರಾಷ್ಟ್ರ ಧ್ವಜ ಹಿಡಿದು ರಾಷ್ಟ್ರಾಭಿಮಾನ ಪ್ರದರ್ಶಿಸುವ ಮೂಲಕ ಘಟನೆಯನ್ನು ಖಂಡಿಸಿದರು. ಅಲ್ಲದೆ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.
ಈ ನಡುವೆ ಪ್ರಮುಖರು ಮಾತನಾಡಿ, ಭದ್ರಾವತಿಯಂತಹ ನಗರದಲ್ಲಿ ಈ ರೀತಿಯ ಕೃತ್ಯ ನಡೆಸಿರುವುದು ಭಾರತೀಯರಾದ ನಮಗೆ ನೋವುಂಟು ಮಾಡುತ್ತದೆ. ದೇಶದ್ರೋಹ ಕೃತ್ಯ ಯಾರೇ ಮಾಡಿದರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಭದ್ರಾವತಿ ನಗರ ಮಿನಿ ಪಾಕಿಸ್ತಾನ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ತಕ್ಷಣ ಇಂತಹ ಕೃತ್ಯಗಳಿಗೆ ಪೊಲೀಸರು ಕಡಿವಾಣ ಹಾಕಬೇಕು. ನಿಮ್ಮಿಂದ ಮಾಡಲು ಸಾಧ್ಯವಾಗತ್ತಿದ್ದಲ್ಲಿ ನಾವೇ ಮಾಡಿ ತೋರಿಸಿದ್ದೇವೆ ಎಂದು ಎಚ್ಚರಿಸಿದರು.
ಈದ್ ಮಿಲಾದ್ ಮೆರವಣಿಗೆಯಲ್ಲಿ ಯಾರೋ ಕಿಡಿಗೇಡಿಗಳು ಪಾಕಿಸ್ತಾನ ಪರ ಜಿಂದಾಬಾದ್ ಘೋಷಣೆ ಕೂಗಿದರೂ ಸಹ ಉಳಿದವರು ಮೌನವಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು ಸ್ಥಳದಲ್ಲಿದ್ದ ಪೊಲೀಸರು ಆ ಕ್ಷಣವೇ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಈ ಕೃತ್ಯವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಮಾಧವಚಾರ್ ವೃತ್ತದಿಂದ ಮಹಾತ್ಮಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅಂತಿಮವಾಗಿ ರಾಷ್ಟ್ರಗೀತೆ ಹಾಡುವ ಮೂಲಕ ಅಂತ್ಯಗೊಳಿಸಲಾಯಿತು. ಪ್ರತಿಭಟನೆ ಹಿನ್ನಲೆಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಸುಗಮ ಸಂಚಾರಕ್ಕೆ ಹರಸಹಾಸ ಪಡುವಂತಾಯಿತು.
ಪ್ರತಿಭಟನೆಯಲ್ಲಿ ಪ್ರಮುಖರಾದ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ತಾಲೂಕು ಮಂಡಲ ನಗರ ಅಧ್ಯಕ್ಷ ಜಿ. ಧರ್ಮಪ್ರಸಾದ್, ಗ್ರಾಮಾಂತರ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಪ್ರಮುಖ್ ಹಾ. ರಾಮಪ್ಪ, ಜೆಡಿಎಸ್ ನಗರ ಅಧ್ಯಕ್ಷ ಆರ್ ಕರುಣಾಮೂರ್ತಿ, ಬಿ.ಜಿ ರಾಮಲಿಂಗಯ್ಯ, ಎನ್. ವಿಶ್ವನಾಥರಾವ್, ಎಂ. ಮಂಜುನಾಥ್, ಡಿ.ಆರ್ ಶಿವಕುಮಾರ್, ರಾಜಶೇಖರ್ ಉಪ್ಪಾರ, ಕೃಷ್ಣ ಛಲವಾದಿ, ಜಿ. ಆನಂದ್ ಕುಮಾರ್, ಯೋಗೇಶ್‌ಕುಮಾರ್, ದುಗ್ಗೇಶ್ ತೇಲ್ಕರ್, ಹನುಮಂತನಾಯ್ಕ, ಧುನಷ್ ಬೋಸ್ಲೆ, ಕಾ.ರಾ ನಾಗರಾಜ್, ಮಹಿಳಾ ಪ್ರಮುಖರಾದ ಸರಸ್ವತಿ, ಅನ್ನಪೂರ್ಣ, ಶಕುಂತಲ, ಲತಾ ಪ್ರಭಾಕರ್, ಆಶಾ ಪುಟ್ಟಸ್ವಾಮಿ, ಕವಿತರಾವ್, ಸುಲೋಚನಾ ಪ್ರಕಾಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.