ಬುಧವಾರ, ಸೆಪ್ಟೆಂಬರ್ 17, 2025

ಲಾರಿ ಹಳ್ಳಕ್ಕೆ ಉರುಳಿ ಬಿದ್ದು ಚಾಲಕ ಸಾವು

ಆಟೋ ಹಾಗು ಲಾರಿ ಚಾಲಕ ಚನ್ನಕೇಶವ 
    ಭದ್ರಾವತಿ : ತಾಲೂಕಿನ ಯರೇಹಳ್ಳಿ ಗಾಂಧಿನಗರದ ನಿವಾಸಿ, ಆಟೋ ಹಾಗು ಲಾರಿ ಚಾಲಕ ಚೆನ್ನಕೇಶವ(೪೮) ಮಂಗಳವಾರ ತಿಪಟೂರಿನಲ್ಲಿ ಲಾರಿ ಹಳ್ಳಕ್ಕೆ ಉರುಳಿ ಬಿದ್ದು ಹಿನ್ನಲೆಯಲ್ಲಿ ಗಾಯಗೊಂಡು ಮೃತಪಟ್ಟಿದ್ದಾರೆ. 
    ಆಟೋ ಚಾಲಕರಾಗಿ ಜೀವನ ಸಾಗಿಸುತ್ತಿದ್ದ ಇವರು ಕಳೆದ ಎರಡು ತಿಂಗಳಿನಿಂದ ತಿಪಟೂರಿನ ಕಲ್ಲು ಕ್ವಾರೆಯಲ್ಲಿ ಲಾರಿ ಚಾಲಕ ಕೆಲಸಕ್ಕೆಂದು ತೆರಳಿದ್ದರು. ಕ್ವಾರೆಯಲ್ಲಿ ನಿಯಂತ್ರಣ ಕಳೆದುಕೊಂಡು ಲಾರಿ ಸುಮಾರು ೪೦ ಅಡಿ ಎತ್ತರದಿಂದ ಹಳ್ಳಕ್ಕೆ ಉರುಳಿ ಬಿದ್ದಿದೆ. ಇದರಿಂದಾಗಿ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮದ್ಯೆ ಕೊನೆಯುಸಿರೆಳೆದಿದ್ದಾರೆ. ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆದು ಬುಧುವಾರ ಬೆಳಗಿನ ಜಾವ ಮೃತದೇಹ ಗಾಂಧಿನಗರದ ಮನೆಗೆ ತರಲಾಗಿದ್ದು, ಸಂಜೆ ಗ್ರಾಮದ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
    ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಮೇಶ್, ಬಸವನಗುಡಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಆರ್ ಶಿವರಾಮ್, ಮುಖಂಡರಾದ ಸ್ವಾಮಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.

ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವ ಮಹಾನ್ ನಾಯಕ ಪ್ರಧಾನಿ ನರೇಂದ್ರ ಮೋದಿ

ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷ ನಗರ ಮಂಡಲ ವತಿಯಿಂದ  ಪ್ರಧಾನಮಂತ್ರಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನ ಆಚರಣೆ ಅಂಗವಾರಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. 
    ಭದ್ರಾವತಿ : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇವಲ ಪ್ರಧಾನಿಯಾಗಿ ಮಾತ್ರವಲ್ಲದೆ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವ ಮಹಾನ್ ನಾಯಕರಾಗಿ ಭಾರತವನ್ನು ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲಿಸಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಬಣ್ಣಿಸಿದರು. 
    ಅವರು ಬುಧವಾರ ಭಾರತೀಯ ಜನತಾ ಪಕ್ಷ ನಗರ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ದೇಶಕ್ಕೆ ನರೇಂದ್ರ ಮೋದಿಯವರ ಕೊಡುಗೆ ಅನನ್ಯವಾಗಿದ್ದು, ದೇಶದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ. ಇಂತಹ ಮಹಾನ್ ನಾಯಕನ ದಾರಿಯಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಸಹ ಸಾಗುವಂತಾಗಬೇಕು. ಆ ಮೂಲಕ ದೇಶ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದರು. 
    ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ದೇಶದ ಪ್ರಧಾನ ಸೇವಕರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನ ಅತ್ಯಂತ ಶ್ರದ್ಧೆಯಿಂದ ಹಾಗೂ ಸೇವೆಯೇ ಸಂಘಟನೆ ಎಂಬ ಧ್ಯೇಯ ವಾಕ್ಯಕ್ಕೆ ಅನ್ವರ್ಥವಾಗುವಂತೆ ಪಕ್ಷದ ಕಾರ್ಯಾಲಯದಲ್ಲಿ ವಿಶೇಷ ಸೇವಾ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಗಿದ್ದು,  ಅ.೨ರವರೆಗೆ ಅನೇಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 
    ಡಾ ಧನಂಜಯ ಸರ್ಜಿಯವರು ರಕ್ತದಾನ ಮಾಡುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಮಂಡಲ ಉಪಾಧ್ಯಕ್ಷೆ ಸುಲೋಚನಾ ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. 
    ಪಕ್ಷದ ಪ್ರಮುಖರಾದ ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕ ಜಿ. ಶಿವರಾಜ್, ಪ್ರಧಾನ ಕಾರ್ಯದರ್ಶಿಗಳಾದ ಚೆನ್ನೇಶ್ ಮತ್ತು ರಘುರಾವ್ ರಕ್ತದಾನ ಶಿಬಿರದ ಸಂಚಾಲಕ ಧನುಷ್, ನಗರಸಭೆ ಸದಸ್ಯೆ ಅನುಪಮಾ ಚೆನ್ನೇಶ್, ಎಂ.ಎಸ್ ಸುರೇಶಪ್ಪ, ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. 

ನೂತನ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣ

ವಿಶ್ವಕರ್ಮ ಜಯಂತಿ ದಿನದಂದು ನಾಮಫಲಕ ಅನಾವರಣಗೊಳಿಸಿದ ಶಾಸಕ ಸಂಗಮೇಶ್ವರ್ 

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಗೆ ಬಿ.ಎಚ್ ರಸ್ತೆ (ಡಾ. ರಾಜಕುಮಾರ್ ರಸ್ತೆ)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲಾಗಿದ್ದು, ಬುಧವಾರ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸೇತುವೆ ಕಮಾನುಗಳ ಮೇಲೆ ಅಳವಡಿಸಲಾಗಿರುವ ನಾಮಫಲಕ ಅನಾವರಣಗೊಳಿಸಿದರು. 
    ಭದ್ರಾವತಿ : ನಗರದ ಹೃದಯ ಭಾಗದಲ್ಲಿ ಭದ್ರಾ ನದಿಗೆ ಬಿ.ಎಚ್ ರಸ್ತೆ (ಡಾ. ರಾಜಕುಮಾರ್ ರಸ್ತೆ)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲಾಗಿದ್ದು, ವಿಶ್ವಕರ್ಮ ಸಮಾಜ ಬಾಂಧವರಲ್ಲಿ ಸಂತಸ ಮನೆ ಮಾಡಿದೆ. ಬುಧವಾರ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸೇತುವೆ ಕಮಾನುಗಳ ಮೇಲೆ ಅಳವಡಿಸಲಾಗಿರುವ ನಾಮಫಲಕ ಅನಾವರಣಗೊಳಿಸಿದರು. 
    ಕಳೆದ ಒಂದು ವರ್ಷದ ಹಿಂದೆ ಅಮರಶಿಲ್ಪಿ ಜಕಣಾಚಾರಿ ಜನ್ಮದಿನದಂದು ಸೇತುವೆಗೆ ಅವರ ಹೆಸರನ್ನು ನಾಮಕರಣಗೊಳಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. 
ನಗರಸಭೆ ಸಾಮಾನ್ಯಸಭೆಯಲ್ಲಿ ಈ ಸಂಬಂಧ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ಸದಸ್ಯರು ಪಕ್ಷಬೇಧ ಮರೆತು ಒಮ್ಮತ ಸೂಚಿಸಿ ಸರ್ಕಾರಕ್ಕೆ ನಿರ್ಣಯ ಕಳುಹಿಸಲಾಗಿತ್ತು. ಸರ್ಕಾರ ಅನುಮೋದನೆ ನೀಡಿದ್ದು, ಈ ಹಿನ್ನಲೆಯಲ್ಲಿ ಕಳೆದ ೩ ದಿನಗಳ ಹಿಂದೆ ಸೇತುವೆ ಎರಡು ಬದಿ ಕಮಾನುಗಳ ಮೇಲೆ ಬೃಹತ್ ನಾಮಫಲಕ ಜೆಸಿಬಿ ಯಂತ್ರ ಬಳಸಿ ಅಳವಡಿಸಲಾಗಿತ್ತು. ನಗರಸಭೆ ಅಭಿಯಂತರ ಪ್ರಸಾದ್, ಕಲಾವಿದ ಭದ್ರಾವತಿ ಗುರು, ರಾಮಕೃಷ್ಣ, ಗೋವರ್ಧನರಾವ್, ತಿಪ್ಪೇಸ್ವಾಮಿ, ಶಿವರುದ್ರಪ್ಪ ಸೇರಿದಂತೆ ಇನ್ನಿತರರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 
    2018ರಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ:
    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ. ಎಚ್.ಸಿ ಮಹಾದೇವಪ್ಪ ೨೦೧೮ರಲ್ಲಿ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಅಂದಾಜು ೨೧.೩೪ ಕೋ. ರು. ವೆಚ್ಚದಲ್ಲಿ ೨೪೦.೫ ಮೀಟರ್ ಉದ್ದದ ಸೇತುವೆ ನಿರ್ಮಿಸಲಾಗಿದೆ.  ಮೆ/ಎಸ್‌ಪಿಎಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ಚೆನ್ನೈ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ನಿರ್ವಹಣಾ ಸಲಹೆಗಾರರಾಗಿ ಮೆ/ ಸತ್ರ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರನ್ನು ನೇಮಕಗೊಳಿಸಲಾಗಿದೆ. ೫ ವರ್ಷಗಳವರೆಗೆ ಸೇತುವೆ ನಿರ್ವಹಣಾ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ.
    ೧೫೫ ವರ್ಷಗಳ `ಭದ್ರಾ ಸೇತುವೆ'(ಹಳೇ ಸೇತುವೆ) : 
    ೧೫೫ ವರ್ಷಗಳ ಹಿಂದೆ ಮೈಸೂರು ರಾಜ್ಯದ ಪಿಡಬ್ಲ್ಯೂಡಿ ಇಲಾಖೆಯ ಮುಖ್ಯ ಆಯುಕ್ತರಾಗಿದ್ದ ಬ್ರಿಟಿಷ್ ಅಧಿಕಾರಿ ಕಬ್ಬನ್ ಅಂದಿನ ಬೆಂಕಿಪುರ(ಭದ್ರಾವತಿ)ದಲ್ಲಿ ೭೪,೯೯೭ ರು. ವೆಚ್ಚದಲ್ಲಿ ಭದ್ರಾ ಸೇತುವೆ ನಿರ್ಮಿಸಿದ್ದರು. ಈ ಸೇತುವೆ ಇಂದಿಗೂ ಬಲಿಷ್ಠವಾಗಿದ್ದು, ನಗರದಲ್ಲಿ ವಾಹನ ದಟ್ಟಣೆ ಅಧಿಕಗೊಂಡ ಹಿನ್ನಲೆಯಲ್ಲಿ ಕಳೆದ ಸುಮಾರು ೨ ದಶಕಗಳಿಂದ ಸೇತುವೆ ಸುರಕ್ಷತೆಗೆ ಒತ್ತಾಯಿಸಿಕೊಂಡು ಬಂದ ಹಿನ್ನಲೆಯಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. 
    `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ನಾಮಫಲಕ ಅನಾವರಣ : 
    ಅಮರಶಿಲ್ಪಿ ಜಕಣಾಚಾರಿಯವರ ಹೆಸರನ್ನು ನೂತನ ಸೇತುವೆಗೆ ನಾಮಕರಣಗೊಳಿಸುತ್ತಿರುವುದು ವಿಶ್ವಕರ್ಮ ಸಮಾಜ ಬಾಂಧವರಲ್ಲಿ ಸಂತಸ ಮನೆ ಮಾಡಿದೆ. ಈ ನಡುವೆ ಸಮಾಜ ಬಾಂಧವರು ವಿಶ್ವಕರ್ಮ ಜಯಂತಿ ದಿನದಂದು ನೂತನ ಕಮಾನು ಸೇತುವೆಗೆ ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲು ಶ್ರಮಿಸಿರುವ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. 
    ಈ ನಡುವೆ ಮಧ್ಯಾಹ್ನ ೧.೪೦ರ ಸಮಯದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಸೇತುವೆಗೆ ಅಳವಡಿಸಲಾಗಿರುವ ನಾಮಫಲಕ ಅನಾವರಣಗೊಳಿಸಿದರು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಎನ್.ಕೆ ಹೇಮಂತ್, ಸದಸ್ಯರಾದ ವಿ. ಕದಿರೇಶ್, ಬಿ.ಎಂ ಮಂಜುನಾಥ, ಸುದೀಪ್‌ಕುಮಾರ್, ಅನುಪಮ ಚನ್ನೇಶ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಸರ್ಕಾರ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಅಭಿಯಂತರ ಬಿ.ಬಿ ಶಿವಪ್ರಸಾದ್, ಲೆಕ್ಕಾಧಿಕಾರಿ ಎಲ್.ಎಸ್ ಗಿರಿರಾಜ್, ಎಸ್. ಪವನ್ ಕುಮಾರ್, ಮಹಮದ್ ಗೌಸ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಕೆ ಶ್ರೀನಾಥ್, ಗೌರವಾಧ್ಯಕ್ಷರಾದ ಬಿ.ಎಲ್ ನಾಗರಾಜ್,  ಪಿ. ವೆಂಕಟರಮಣ ಶೇಟ್, ಕಾರ್ಯಾಧ್ಯಕ್ಷ ಸಿ. ರಾಮಾಚಾರಿ, ದಿನಪತ್ರಿಕೆ ವಿತರಕ, ಸಮಾಜದ ಮುಖಂಡ ಕೃಷ್ಣಮೂರ್ತಿ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. 
 

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಗೆ ಬಿ.ಎಚ್ ರಸ್ತೆ (ಡಾ. ರಾಜಕುಮಾರ್ ರಸ್ತೆ)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲಾಗಿದ್ದು, ವಿಶ್ವಕರ್ಮ ಸಮಾಜ ಬಾಂಧವರಲ್ಲಿ ಸಂತಸ ಮನೆ ಮಾಡಿದೆ. 

ಮಂಗಳವಾರ, ಸೆಪ್ಟೆಂಬರ್ 16, 2025

ನೂತನ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣ

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಗೆ ಬಿ.ಎಚ್ ರಸ್ತೆ (ಡಾ. ರಾಜಕುಮಾರ್ ರಸ್ತೆ)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲಾಗುತ್ತಿದ್ದು, ವಿಶ್ವಕರ್ಮ ಸಮಾಜ ಬಾಂಧವರಲ್ಲಿ ಸಂತಸ ಮನೆ ಮಾಡಿದೆ. 
    ಭದ್ರಾವತಿ : ನಗರದ ಹೃದಯ ಭಾಗದಲ್ಲಿ ಭದ್ರಾ ನದಿಗೆ ಬಿ.ಎಚ್ ರಸ್ತೆ (ಡಾ. ರಾಜಕುಮಾರ್ ರಸ್ತೆ)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲಾಗುತ್ತಿದ್ದು, ವಿಶ್ವಕರ್ಮ ಸಮಾಜ ಬಾಂಧವರಲ್ಲಿ ಸಂತಸ ಮನೆ ಮಾಡಿದೆ. 
    ಕಳೆದ ಒಂದು ವರ್ಷದ ಹಿಂದೆ ಅಮರಶಿಲ್ಪಿ ಜಕಣಾಚಾರಿ ಜನ್ಮದಿನದಂದು ಸೇತುವೆಗೆ ಅವರ ಹೆಸರನ್ನು ನಾಮಕರಣಗೊಳಿಸುವಂತೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. 
    ನಗರಸಭೆ ಸಾಮಾನ್ಯಸಭೆಯಲ್ಲಿ ಈ ಸಂಬಂಧ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ಸದಸ್ಯರು ಪಕ್ಷಬೇಧ ಮರೆತು ಒಮ್ಮತ ಸೂಚಿಸಿ ಸರ್ಕಾರಕ್ಕೆ ನಿರ್ಣಯ ಕಳುಹಿಸಲಾಗಿತ್ತು. ಸರ್ಕಾರ ಅನುಮೋದನೆ ನೀಡಿದ್ದು, ಈ ಹಿನ್ನಲೆಯಲ್ಲಿ ಕಳೆದ ೨ ದಿನಗಳ ಹಿಂದೆ ಸೇತುವೆ ಎರಡು ಬದಿ ಕಮಾನುಗಳ ಮೇಲೆ ಬೃಹತ್ ನಾಮಫಲಕ ಜೆಸಿಬಿ ಯಂತ್ರ ಬಳಸಿ ಅಳವಡಿಸಲಾಗಿದೆ. ನಗರಸಭೆ ಅಭಿಯಂತರ ಪ್ರಸಾದ್, ಕಲಾವಿದ ಭದ್ರಾವತಿ ಗುರು, ರಾಮಕೃಷ್ಣ, ಗೋವರ್ಧನರಾವ್, ತಿಪ್ಪೇಸ್ವಾಮಿ, ಶಿವರುದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    2018ರಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ:
    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ. ಎಚ್.ಸಿ ಮಹಾದೇವಪ್ಪ 2018ರಲ್ಲಿ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಅಂದಾಜು 21.34 ಕೋ. ರು. ವೆಚ್ಚದಲ್ಲಿ 240.5 ಮೀಟರ್ ಉದ್ದದ ಸೇತುವೆ ನಿರ್ಮಿಸಲಾಗಿದೆ.  ಮೆ/ಎಸ್‌ಪಿಎಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ಚೆನ್ನೈ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ನಿರ್ವಹಣಾ ಸಲಹೆಗಾರರಾಗಿ ಮೆ/ ಸತ್ರ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರನ್ನು ನೇಮಕಗೊಳಿಸಲಾಗಿದೆ. 5 ವರ್ಷಗಳವರೆಗೆ ಸೇತುವೆ ನಿರ್ವಹಣಾ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ.


    155 ವರ್ಷಗಳ `ಭದ್ರಾ ಸೇತುವೆ'(ಹಳೇ ಸೇತುವೆ) : 
    ೧೫೫ ವರ್ಷಗಳ ಹಿಂದೆ ಮೈಸೂರು ರಾಜ್ಯದ ಪಿಡಬ್ಲ್ಯೂಡಿ ಇಲಾಖೆಯ ಮುಖ್ಯ ಆಯುಕ್ತರಾಗಿದ್ದ ಬ್ರಿಟಿಷ್ ಅಧಿಕಾರಿ ಕಬ್ಬನ್ ಅಂದಿನ ಬೆಂಕಿಪುರ(ಭದ್ರಾವತಿ)ದಲ್ಲಿ ೭೪,೯೯೭ ರು. ವೆಚ್ಚದಲ್ಲಿ ಭದ್ರಾ ಸೇತುವೆ ನಿರ್ಮಿಸಿದ್ದರು. ಈ ಸೇತುವೆ ಇಂದಿಗೂ ಬಲಿಷ್ಠವಾಗಿದ್ದು, ನಗರದಲ್ಲಿ ವಾಹನ ದಟ್ಟಣೆ ಅಧಿಕಗೊಂಡ ಹಿನ್ನಲೆಯಲ್ಲಿ ಕಳೆದ ಸುಮಾರು ೨ ದಶಕಗಳಿಂದ ಸೇತುವೆ ಸುರಕ್ಷತೆಗೆ ಒತ್ತಾಯಿಸಿಕೊಂಡು ಬಂದ ಹಿನ್ನಲೆಯಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. 
    `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' : ಸಂತಸ 
    ಅಮರಶಿಲ್ಪಿ ಜಕಣಾಚಾರಿಯವರ ಹೆಸರನ್ನು ನೂತನ ಸೇತುವೆಗೆ ನಾಮಕರಣಗೊಳಿಸುತ್ತಿರುವುದು ವಿಶ್ವಕರ್ಮ ಸಮಾಜ ಬಾಂಧವರಲ್ಲಿ ಸಂತಸ ಮನೆ ಮಾಡಿದೆ. ಈ ನಡುವೆ ಸಮಾಜ ಬಾಂಧವರು ಸೆ.೧೭ ವಿಶ್ವಕರ್ಮ ಜಯಂತಿ ದಿನದಂದು ನೂತನ ಕಮಾನು ಸೇತುವೆಗೆ ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲು ಶ್ರಮಿಸಿರುವ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಆಡಳಿತವನ್ನು ಅಭಿನಂದಿಸಲು ಮುಂದಾಗಿದ್ದಾರೆ. 

ನಗರಸಭೆಯಿಂದ ೧೦ ದಿನಗಳ ಕಾಲ ವೈಭವಯುತ ದಸರಾ ಆಚರಣೆ

ಸೆ.೨೨ರಂದು ಹಿರಿಯ ಸಮಾಜ ಸೇವಕ ಎಚ್.ವಿ ಶಿವರುದ್ರಪ್ಪ ಉದ್ಘಾಟನೆ 

ಭದ್ರಾವತಿ ನಗರಸಭೆಯಿಂದ ೧೦ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆ ಲಾಂಛನ ಮಂಗಳವಾರ ಅನಾವರಣಗೊಳಿಸಲಾಯಿತು. 
    ಭದ್ರಾವತಿ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಸೆ.೨೨ ರಿಂದ ಅ.೨ರವರೆಗೆ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಹಲವು ವಿಭಿನ್ನ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳೊಂದಿಗೆ ವೈಭವಯುತವಾಗಿ ೧೦ ದಿನಗಳ ಕಾಲ ಆಚರಿಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ತಿಳಿಸಿದರು.
    ಅವರು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ನಾಡಹಬ್ಬ ದಸರಾ ಆಚರಿಸಲಾಗುತ್ತಿದ್ದು, ಸೆ.೨೨ರಂದು ಬೆಳಿಗ್ಗೆ ೧೦.೩೦ಕ್ಕೆ ನಗರಸಭೆ ಸಭಾಂಗಣದಲ್ಲಿ ಹಿರಿಯ ಸಮಾಜ ಸೇವಕರಾದ ಎಚ್.ವಿ ಶಿವರುದ್ರಪ್ಪ ಈ ಬಾರಿ ನಾಡಹಬ್ಬಕ್ಕೆ ಚಾಲನೆ ನೀಡುತ್ತಿದ್ದಾರೆ ಎಂದರು. 
    ನಗರಸಭೆ ಆವರಣದ ವೇದಿಕೆಯಲ್ಲಿ ಇದೆ ದಿನ ಬೆಳಿಗ್ಗೆ ೯ ಗಂಟೆಗೆ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರಿಂದ ಭಾವಗೀತೆ ಮತ್ತು ಸುಗಮ ಸಂಗೀತಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ ೬ ಗಂಟೆಗೆ ಶಿವಮೊಗ್ಗ ಝೇಂಕಾರ ಮೆಲೋಡಿಸ್ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ. ೨೩ರಂದು ಬೆಳಿಗ್ಗೆ ೯.೩೦ಕ್ಕೆ ಜನ್ನಾಪುರ ಬಂಟರ ಭವನದಲ್ಲಿ ಮಹಿಳೆಯರಿಗೆ ಇಂಧನ ರಹಿತ ಅಡುಗೆ ಸ್ಪರ್ಧೆ ಆಯೋಜಿಸಲಾಗಿದ್ದು, ಆರ್ಟ್ ಆಫ್ ಲೀವಿಂಗ್ ಯೋಗ ಶಿಕ್ಷಕಿ ಭಾಗ್ಯಮೂರ್ತಿ ಉದ್ಘಾಟಿಸುವರು. ನಗರಸಭೆ ಆವರಣದ ವೇದಿಕೆಯಲ್ಲಿ ಸಂಜೆ ೬ ಗಂಟೆಗೆ ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕಿರುನಾಟಕ ಮತ್ತು ಜಾನಪದ ಗೀತೆಗಳ ಗಾಯನ ಹಾಗು ನ್ಯೂಟೌನ್ ಮಿತ್ರಕಲಾ ಮಂಡಳಿಯಿಂದ ಸಂಗ್ಯಾ ಬಾಳ್ಯಾ ಜಾನಪದ ನಾಟ ಪ್ರದರ್ಶನ ಕಾರ್ಯಕ್ರಮ ನಡೆಯಲಿದ್ದು, ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ, ಹಿರಿಯ ನಗರಸಭಾ ಸದಸ್ಯ ವಿ. ಕದಿರೇಶ್ ಉದ್ಘಾಟಿಸುವರು ಎಂದರು. 
    ೨೪ರಂದು ಸಂಜೆ ೬ ಗಂಟೆಗೆ ಭದ್ರಾ ಸುಗಮ ಸಂಗೀತಾ ವೇದಿಕೆಯಿಂದ ಸುಗಮ ಸಂಗೀತ ಹಾಗು ಆರ್.ಜೆ ಕಲಾ ತಂಡದವರಿಂದ ಜಾನಪದ ಮತ್ತು ಸುಗಮ ಕಾರ್ಯಕ್ರಮ ನಗರಸಭೆ ಆವರಣದ ವೇದಿಕೆಯಲ್ಲಿ ನಡೆಯಲಿದ್ದು, ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಕಾರ್ಯಕ್ರಮ ಉದ್ಘಾಟಿಸುವರು. ೨೫ರಂದು ಬೆಳಿಗ್ಗೆ ೯.೩೦ಕ್ಕೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಗರದ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಮಹಿಳಾ ಕ್ರೀಡಾ ಕೂಟ ಆಯೋಜಿಸಲಾಗಿದ್ದು, ೩ ಬಾರಿ ಖೋ ಖೋ ರಾಷ್ಟ್ರ ಪ್ರಶಸ್ತಿ ವಿಜೇತ ಮಹಿಳಾ ಕ್ರೀಡಾಪಟು ಎಸ್. ಜಾನಕಿ ಸುರೇಶ್ ಕ್ರೀಡಾಕೂಟ ಉದ್ಘಾಟಿಸುವರು ಎಂದರು. 
    ೨೫ರಂದು ಸಂಜೆ ೬ ಗಂಟೆಗೆ ನಗರಸಭೆ ಆವರಣದ ವೇದಿಕೆಯಲ್ಲಿ ಅಪರಂಜಿ ಅಭಿನಯ ಶಾಲೆವತಿಯಿಂದ ನಾಟಕ ಪ್ರದರ್ಶನ ಮತ್ತು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ದಸರಾ ಕವಿಗೋಷ್ಠಿ ಹಾಗು ಕಥೆ ಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಉದ್ಘಾಟಿಸುವರು. ೨೬ರಂದು ಬೆಳಿಗ್ಗೆ ೧೦ ಗಂಟೆಗೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ಹಿರಿಯ ಕುಸ್ತಿಪಟು ಎಚ್. ವಾಸುದೇವ್ ಉದ್ಘಾಟಿಸುವರು. ಸಂಜೆ ೬ ಗಂಟೆಗೆ ನಗರಸಭೆ ಆವರಣದ ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ನಗರಸಭೆ ಹಿರಿಯ ಸದಸ್ಯ ಟಿಪ್ಪುಸುಲ್ತಾನ್ ಉದ್ಘಾಟಿಸುವರು ಎಂದರು. 
    ೨೭ರಂದು ಕನಕಮಂಟಪ ಮೈದಾನದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಕಬಡ್ಡಿ ಕೇಸರಿ ಪ್ರಶಸ್ತಿ ವಿಜೇತ ಎಚ್.ಎಲ್ ರಂಗನಾಥ್ ಉದ್ಘಾಟಿಸುವರು. ೨೮ರಂದು ಬೆಳಿಗ್ಗೆ ೯.೩೦ಕ್ಕೆ ನ್ಯೂಟೌನ್ ಸರ್.ಎಂ.ವಿ ಒಳಾಂಗಣ ಕ್ರೀಡಾಂಗಣದಲ್ಲಿ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಇದೆ ಮೊದಲ ಬಾರಿಗೆ ಏರ್ಪಡಿಸಲಾಗಿದ್ದು, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ರಾಬರ್ಟ್ ಡಿಸೋಜ ಉದ್ಘಾಟಿಸುವರು. ಸಂಜೆ ೬ ಗಂಟೆಗೆ ಕನಕ ಮಂಟಪ ಮೈದಾನದಲ್ಲಿ ನಗರದ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. 
    ೨೯ರಂದು ಸಂಜೆ ೬ ಗಂಟೆಗೆ ಕನಕಮಂಟಪ ಮೈದಾನದಲ್ಲಿ ಚರಣ್ ಸಂಗೀತ ಮೆಲೋಡಿಯಿಂದ ಆರ್ಕೇಸ್ಟ್ರಾ ನಡೆಯಲಿದ್ದು, ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸುವರು. ೩೦ರಂದು ಸಂಜೆ ೬ ಗಂಟೆಗೆ ಕನಕಮಂಟಪ ಮೈದಾನದಲ್ಲಿ ಕಾಮಿಡಿ ಕಿಲಾಡಿಗಳು ಹಾಗು ಗಾಯಕರಿಂದ ನೃತ್ಯ/ಸಂಗೀತ/ಕಾಮಿಡಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸುವರು ಎಂದರು. 
ಉಳಿದಂತೆ ಅ.೧ರಂದು ಬೆಳಿಗ್ಗೆ ೧೦ ಗಂಟೆಗೆ ಆಯುಧ ಪೂಜೆ ಹಾಗು ೨ರಂದು ಮಧ್ಯಾಹ್ನ ೩ ಗಂಟೆಗೆ ದಸರಾ ಮೆರವಣಿಗೆ ಲೋಯರ್ ಹುತ್ತಾ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ ನಡೆಯಲಿದ್ದು, ಸಂಜೆ ೬ ಗಂಟೆಗೆ ಕನಕಮಂಟಪ ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ. ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಪರುಸಪ್ಪ ಕುರುಬರ ಬನ್ನಿ ಮುಡಿಯುವರು ಎಂದರು.
    ದಸರಾ ವಿವಿಧ ಸಮಿತಿಗಳ ಅಧ್ಯಕ್ಷರಾದ ಕೆ. ಸುದೀಪ್ ಕುಮಾರ್, ಕೆ. ಉದಯ್ ಕುಮಾರ್, ವಿ. ಕದಿರೇಶ್, ಚನ್ನಪ್ಪ, ಬಿ.ಎಂ ಮಂಜುನಾಥ್, ಬಿ.ಪಿ ಸರ್ವಮಂಗಳ ಭೈರಪ್ಪ, ಪೌರಾಯುಕ್ತ ಕೆ.ಎನ್ ಹೇಮಂತ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸೋಮವಾರ, ಸೆಪ್ಟೆಂಬರ್ 15, 2025

ವರ್ಷಾಂತ್ಯದೊಳಗೆ ವಿಐಎಸ್‌ಎಲ್ ಮರುನಿರ್ಮಾಣಕ್ಕೆ ಚಾಲನೆ ನೀಡಿ ಗುತ್ತಿಗೆ ಕಾರ್ಮಿಕರ ಹಿತಕಾಪಾಡಿ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಸಂಸ್ಥಾಪಕ ಅಧ್ಯಕ್ಷರಾದ ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಜನ್ಮದಿನದ ಅಂಗವಾಗಿ ಸೋಮವಾರ ಗುತ್ತಿಗೆ ಕಾರ್ಮಿಕರ ಸಂಘದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಡಿಸೆಂಬರ್ ಅಂತ್ಯದೊಳಗೆ ಮರುನಿರ್ಮಾಣಗೊಳಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡುವ ಮೂಲಕ ಪ್ರಸ್ತುತ ಎದುರಿಸುತ್ತಿರುವ ಸಂಕಷ್ಟಗಳನ್ನು ದೂರ ಮಾಡಬೇಕೆಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. 
    ಕಾರ್ಖಾನೆ ಸಂಸ್ಥಾಪಕ ಅಧ್ಯಕ್ಷರಾದ ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಜನ್ಮದಿನದ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಪದಾಧಿಕಾರಿಗಳು,  ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಪ್ರಕ್ರಿಯೆಯಿಂದ ಕೈಬಿಡುವುದು, ಅಗತ್ಯವಿರುವ ಬಂಡವಾಳ ತೊಡಗಿಸುವುದು, ಗುತ್ತಿಗೆ ಕಾರ್ಮಿಕರಿಗೆ ತಿಂಗಳ ಪೂರ್ತಿ ಕೆಲಸ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ೯೭೦ ದಿನಗಳಿಂದ ಕಾರ್ಖಾನೆ ಮುಂಭಾಗ ಹೋರಾಟ ನಡೆಸಲಾಗುತ್ತಿದೆ. ಆದರೆ ಬೇಡಿಕೆಗಳು ಇದುವರೆಗೂ ಈಡೇರಿಲ್ಲ. ಇದರಿಂದಾಗಿ ಗುತ್ತಿಗೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಅವರ ಹಿತಕಾಪಾಡಲು ಮುಂದಾಗಬೇಕೆಂದರು. 
    ಈಗಾಗಲೇ ಕಾರ್ಖಾನೆ ಹೊಸದಾಗಿ ಮರು ನಿರ್ಮಾಣಗೊಳಿಸುವುದಾಗಿ ಕೇಂದ್ರ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿಯವರು ಭರವಸೆ ನೀಡಿದ್ದು, ಅಲ್ಲದೆ ಈ ನಿಟ್ಟಿನಲ್ಲಿ ಸಂಸದ ಬಿ.ವೈ ರಾಘವೇಂದ್ರರವರು ಸಹ ಸಾಕಷ್ಟು ಶ್ರಮಿಸುತ್ತಿದ್ದಾರೆ. ಈ ವರ್ಷದ ಅಂತ್ಯದೊಳಗೆ ಮರುನಿರ್ಮಾಣಗೊಳ್ಳುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಗುತ್ತಿಗೆ ಕಾರ್ಮಿಕರ ಬೇಡಿಕೆಗಳು ಈಡೇರಿಸಬೇಕೆಂದು ಕೋರಿದರು. 
    ಇದಕ್ಕೂ ಮೊದಲು ಕಾರ್ಖಾನೆ ಆಡಳಿತ ಕಛೇರಿ ಆವರಣದಲ್ಲಿರುವ ಸರ್.ಎಂ. ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ವಂದನೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು. 

ಅಭಿಯಂತರರ ದಿನ : ವಿಐಎಸ್‌ಎಲ್ ಸಂಸ್ಥಾಪಕ ಅಧ್ಯಕ್ಷರಿಗೆ ಗೌರವ ವಂದನೆ

ಸರ್‌ಎಂವಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಅಧಿಕಾರಿಗಳು, ಕಾರ್ಮಿಕರು

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಂಸ್ಥಾಪಕರು, ಮೊದಲ ಅಧ್ಯಕ್ಷರಾದ ಭಾರತರತ್ನ, ದೇಶದ ಅಪ್ರತಿಮ ಅಭಿಯಂತರ ಸರ್.ಎಂ ವಿಶ್ವೇಶ್ವರಾಯರವರ ೧೬೫ನೇ ಜನ್ಮದಿನದ ಅಂಗವಾಗಿ ಸೋಮವಾರ `ಅಭಿಯಂತರರ ದಿನ' ಆಚರಿಸಲಾಯಿತು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಂಸ್ಥಾಪಕರು, ಮೊದಲ ಅಧ್ಯಕ್ಷರಾದ ಭಾರತರತ್ನ, ದೇಶದ ಅಪ್ರತಿಮ ಅಭಿಯಂತರ ಸರ್.ಎಂ ವಿಶ್ವೇಶ್ವರಾಯರವರ ೧೬೫ನೇ ಜನ್ಮದಿನದ ಅಂಗವಾಗಿ ಸೋಮವಾರ `ಅಭಿಯಂತರರ ದಿನ' ಆಚರಿಸಲಾಯಿತು. 
    ಕಾರ್ಖಾನೆ ಆಡಳಿತ ಕಛೇರಿ ಆವರಣದಲ್ಲಿರುವ ವಿಶ್ವೇಶ್ವರಾಯರವರ ಪ್ರತಿಮೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಮಹಾಪ್ರಬಂದಕ(ಸ್ಥಾವರ) ಕೆ.ಎಸ್ ಸುರೇಶ್, ಮಹಾಪ್ರಬಂಧಕ (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ ಸೇರಿದಂತೆ ಇನ್ನಿತರ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.