Thursday, May 14, 2020

ಕ್ವಾರಂಟೈನ್ ತೆರೆಯಲು ಗ್ರಾಮಸ್ಥರೊಂದಿಗೆ ಶಾಂತಿ ಸಭೆ

ನೂತನ ದಂಡಾಧಿಕಾರಿ ಪ್ರಯತ್ನ ಯಶಸ್ವಿ 

ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಮತ್ತು ದೇವರನರಸೀಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ತೆರೆಯಲು ಗ್ರಾಮಸ್ಥರೊಂದಿಗೆ ಶಾಂತಿ ಸಭೆ ನಡೆಸುತ್ತಿರುವ ನೂತನ ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಶಿವಕುಮಾರ್. 
ಭದ್ರಾವತಿ, ಮೇ. ೧೪: ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಗ್ರಾಮಸ್ಥರ ಸಹಕಾರ ಪಡೆದು ಕ್ವಾರಂಟೈನ್ ತೆರೆಯುವಲ್ಲಿ ನೂತನ ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ.
ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕ್ವಾರಂಟೈನ್ ತೆರೆಯಲು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ತಾಲೂಕಿನ ಹಂಚಿನ ಸಿದ್ದಾಪುರ ಮತ್ತು ದೇವರನರಸೀಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ತೆರೆಯಲು ಅಲ್ಲಿನ ಗ್ರಾಮಸ್ಥರೊಂದಿಗೆ ಶಾಂತಿ ಸಭೆ ನಡೆಸಿ ಕೊರೋನಾ ವೈರಸ್ ನಿರ್ಮೂಲನೆಗೆ ಕೈಗೊಂಡಿರುವ ಕ್ರಮ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ಸಹಕರಿಸುವಂತೆ ಶಿವಕುಮಾರ್ ಮನವಿ ಮಾಡಿದರು.
ತಹಸೀಲ್ದಾರ್ ಮಾತಿಗೆ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದ್ದು, ಕಳೆದ ೩ ದಿನಗಳಿಂದ ಕ್ವಾರಂಟೈನ್ ಕಾರ್ಯಾಚರಣೆಯಲ್ಲಿದ್ದು, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಂದವರಿಗೆ ನಿಗಾದಲ್ಲಿರಿಸಲಾಗುತ್ತಿದೆ. ತುರ್ತು ಸಂದರ್ಭಕ್ಕೆ ಅಗತ್ಯ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್, ಗ್ರಾಮದ ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

No comments:

Post a Comment