Saturday, May 30, 2020

ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಮನವಿ

ಭದ್ರಾವತಿ, ಮೇ. ೩೦: ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಹೊಸ ಕಾಯ್ದೆ ಜಾರಿಗೆ ತಂದಿರುವುದು ರೈತ ವಿರೋಧಿಯಾಗಿದೆ. ತಕ್ಷಣ ಈ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಶನಿವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಶಿವಮೊಗ್ಗ ಜಿಲ್ಲಾ ಕಬ್ಬು ಬೆಳೆಗಾರರ ಸಂಘ ತಾಲೂಕು ಘಟಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದೆ.
ಕೃಷಿ ಭೂಮಿ ಹೊಂದಿರುವವರೇ ಬೇರೊಂದು ಕೃಷಿ ಭೂಮಿ ಖರೀದಿಸಬಹುದು ಎಂಬ ಈ ಹಿಂದಿನ ನಿಯಮವನ್ನು ಬದಲಿಸಿ ನೂತನ ಕಾಯ್ದೆಯಲ್ಲಿ ಯಾರು ಬೇಕಾದರೂ ಕೈಗಾರಿಕೋದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಕೃಷಿ ಭೂಮಿಯನ್ನು ಎಷ್ಟು ಬೇಕಾದರೂ ಖರೀದಿ ಮಾಡಬಹುದು ಎಂಬ ನಿಯಮ ಜಾರಿಗೆ ತಂದಿರುವುದು ರೈತ ವಿರೋಧಿಯಾಗಿದೆ. ನೂತನ ಕಾಯ್ದೆ ಪ್ರಕಾರ ಫಲವತ್ತಾದ ಕೃಷಿ ಭೂಮಿ ದೊಡ್ಡ ದೊಡ್ಡ ಉದ್ಯಮಿಗಳ ಪಾಲಾಗಿ ರೈತರು ಕೃಷಿಯಿಂದ ವಿಮುಖರಾಗುವ ಸಾಧ್ಯತೆ ಹೆಚ್ಚಾಗಿದ್ದು, ಅಲ್ಲದೆ ಕೃಷಿ ಭೂಮಿ ಖರೀದಿಸುವಾಗ ರೈತರಿಗೆ ನ್ಯಾಯಯುತ ಬೆಲೆ ನೀಡದೆ ವಂಚಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ರಾಜ್ಯ ಸರ್ಕಾರ ಎಪಿಎಂಸಿ  ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದು, ಈ ಕಾಯ್ದೆ ಸಹ ರೈತರಿಗೆ ಮಾರಕವಾಗಿ ಪರಿಣಮಿಸಿದೆ. ತಿದ್ದುಪಡಿ ಕಾಯ್ದೆಯಲ್ಲಿ ರೈತರು ಬೆಳೆದ ಉತ್ಪನ್ನಗಳನ್ನು ಖರೀದಿದಾರರು ಹಾಗೂ ಮಾರುವ ಮಾಲೀಕರು ನೇರವಾಗಿ  ರೈತರಿಂದ ಖರೀದಿಸುವ ನಿಯಮ ರೂಪಿಸಲಾಗುತ್ತಿದೆ. ಇದರಿಂದ ರೈತರಿಗೆ ನ್ಯಾಯಯುತ ಬೆಲೆ ಸಿಗುವ ಬದಲು ಹೆಚ್ಚು ಶೋಷಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ತೂಕದಲ್ಲೂ ವಂಚನೆ ನಡೆಯುವ ಸಂಭವವಿದೆ. ಅಲ್ಲದೆ ಇಡೀ ಎಪಿಎಂಸಿ ವ್ಯವಸ್ಥೆ ನಾಶವಾಗಲಿದೆ ಎಂದು ಎಚ್ಚರಿಸಲಾಗಿದೆ.
ಕೇಂದ್ರ ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆ ೨೦೨೦ ಜಾರಿಗೆ ತರುವುದು ಬೇಡ. ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣ ಮಾಡುವ ಹುನ್ನಾರ ಇದಾಗಿದ್ದು, ಇದನ್ನು ಸಂಘ ವಿರೋಧಿಸುತ್ತದೆ. ಸರ್ಕಾರ ಮನವಿಗೆ ಪೂರಕವಾಗಿ ಸ್ಪಂದಿಸದಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಲಾಗಿದೆ.
ಸಂಘದ ತಾಲೂಕು ಶಾಖೆ ಅಧ್ಯಕ್ಷ ಕೆ. ಈರಣ್ಣ, ಪ್ರಧಾನ ಕಾರ್ಯದರ್ಶಿ ಸಣ್ಣಯ್ಯ, ಜಿಲ್ಲಾ ಸಂಚಾಲಕ ಎನ್.ಎಚ್ ದೇವಕುಮಾರ್, ಉಪಾಧ್ಯಕ್ಷ ಎನ್. ನಾಗರಾಜ್, ಬಿ. ಆನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment