Saturday, May 30, 2020

ಪರಿಶಿಷ್ಟ ಜಾತಿ/ಪಂಗಡ, ಅಂಗವಿಕಲರ ಅನುದಾನ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲ

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಸದಸ್ಯರು ಆಕ್ರೋಶ

ಭದ್ರಾವತಿ ಶನಿವಾರ ತಾಲೂಕು ಪಂಚಾಯಿತಿ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 
ಭದ್ರಾವತಿ, ಮೇ. ೩೦: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ನಿರ್ಲಕ್ಷ್ಯತನದಿಂದ ಪರಿಶಿಷ್ಟ ಜಾತಿ/ಪಂಗಡದವರಿಗಾಗಿ ಮೀಸಲಿಡಲಾಗಿದ್ದ ಹಣ ಸರ್ಕಾರಕ್ಕೆ ಹಿಂದಿರುಗಿದ್ದು, ಇದರಿಂದಾಗಿ ಫಲಾನುಭವಿಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದರು. 
ಅವರು ಶನಿವಾರ ಹಳೇನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಪಂಚಾಯಿತಿಗೆ ವಿವಿಧ ಯೋಜನೆಯಡಿ ಬಿಡುಗಡೆಯಾಗುವ ಅನುದಾನದಲ್ಲಿ ಅಂಗವಿಕಲರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶೇ.೩, ಮತ್ತು ಶೇ.೫ರಷ್ಟು ಅನುದಾನ ಮೀಸಲಿಡಲಾಗುತ್ತಿದೆ. ಈ ಸಂಬಂಧ ಪ್ರಸಕ್ತ ಸಾಲಿನಲ್ಲಿ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಸಲ್ಲಿಸಿದ್ದು, ಆದರೆ ಕಾರ್ಯನಿರ್ವಹಣಾಧಿಕಾರಿಗಳ ನಿರ್ಲಕ್ಷ್ಯತನದಿಂದ ಸರ್ಕಾರಕ್ಕೆ ಹಣ ಹಿಂದಿರುಗಿದೆ. 
ಮೀಸಲಿಡಲಾದ ಹಣ ಸದ್ಬಳಕೆ ಮಾಡಿಕೊಳ್ಳುವಲ್ಲಿ ಅಧಿಕಾರಿ ವರ್ಗ ವಿಫಲವಾಗಿದ್ದು, ಈ ಸಂಬಂಧ ಈ ಹಿಂದೆ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದು ಎಚ್ಚರಿಸಿದ್ದರು. ಆದರೆ ಅಧಿಕಾರ ವರ್ಗ ನಿರ್ಲಕ್ಷ್ಯತನ ವಹಿಸಿದೆ. ಅಂಗವಿಕಲರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಟೆಂಡರ್ ಕರೆಯುವಲ್ಲಿ ವಿಫಲವಾಗಿದೆ. ಅಲ್ಲದೆ ಸದಸ್ಯರಿಗೆ ಗೌರವ ನೀಡದೆ ನಡೆದುಕೊಳ್ಳುತ್ತಿದೆ. ತಕ್ಷಣ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಆಶಾ ಶ್ರೀಧರ್, ಸದಸ್ಯರಾದ ಅಣ್ಣಾಮಲೈ, ಧರ್ಮೇಗೌಡ, ಕೆ. ಮಂಜುನಾಥ್, ಕೆ.ವಿ ರುದ್ರಪ್ಪ, ಎಂ.ಜಿ ದಿನೇಶ್, ಆರ್. ತಿಪ್ಪೇಶ್‌ರಾವ್, ಗೀತಾ ಜಗದೀಶ್, ಉಷಾಕಿರಣ, ಸಿ. ಮಂಜುಳ, ಯಶೋದಮ್ಮ, ಲಕ್ಷ್ಮೀದೇವಿ, ತುಂಗಮ್ಮ ಜಯಪ್ಪ, ಎಸ್. ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

No comments:

Post a Comment