Friday, June 5, 2020

ಆದಿ ಕರ್ನಾಟಕ ಜನಾಂಗದವರ ಬೇಡಿಕೆಗಳನ್ನು ಈಡೇರಿಸಿ

ಓಡಾಡಲು ರಸ್ತೆ, ನಿವೇಶನಗಳಿಗೆ ಖಾತೆ, ಸ್ಮಶಾನ ಭೂಮಿ ಮಂಜೂರಿಗೆ ಒತ್ತಾಯ 

ಭದ್ರಾವತಿ ತಾಲೂಕಿನ ಕಲ್ಪನಹಳ್ಳಿಯಲ್ಲಿ ಕಳೆದ ಸುಮಾರು ೫೦ ವರ್ಷಗಳಿಂದ ಗ್ರಾಮ ಠಾಣಾ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಆದಿ ಕರ್ನಾಟಕ ಜನಾಂಗದವರ ಬೇಡಿಕೆಗಳನ್ನು ತಕ್ಷಣ ಈಡೇರಿಸಿಕೊಡುವ ಜೊತೆಗೆ ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಶುಕ್ರವಾರ ತಾಲೂಕು ಪಂಚಾಯಿತಿ ಮುಂಭಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಪ್ರತಿಭಟನೆ ನಡೆಸಲಾಯಿತು. 
ಭದ್ರಾವತಿ, ಜೂ. ೫ : ತಾಲೂಕಿನ ಕಲ್ಪನಹಳ್ಳಿಯಲ್ಲಿ ಕಳೆದ ಸುಮಾರು ೫೦ ವರ್ಷಗಳಿಂದ ಗ್ರಾಮ ಠಾಣಾ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಆದಿ ಕರ್ನಾಟಕ ಜನಾಂಗದವರ ಬೇಡಿಕೆಗಳನ್ನು ತಕ್ಷಣ ಈಡೇರಿಸಿಕೊಡುವ ಜೊತೆಗೆ ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಶುಕ್ರವಾರ ತಾಲೂಕು ಪಂಚಾಯಿತಿ ಮುಂಭಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಪ್ರತಿಭಟನೆ ನಡೆಸಲಾಯಿತು. 
ಕೂಡ್ಲಿಗೆರೆ ಹೋಬಳಿ ಕಲ್ಪನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಜನಾಂಗದ ೫ ರಿಂದ ೬ ಕುಟುಂಬಗಳು ಸುಮಾರು ೫೦ ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದು, ಈ ಕುಟುಂಬಗಳಿಗೆ ಓಡಾಡಲು ರಸ್ತೆ ಸಹ ಇದುವರೆಗೂ ನಿರ್ಮಿಸಿಕೊಟ್ಟಿರುವುದಿಲ್ಲ. ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಈ ಭಾಗದ ಜನಪ್ರತಿನಿಧಿಗಳು ಸಹ ಗಮನ ಹರಿಸುತ್ತಿಲ್ಲ ಎಂದು ಅಳಲು ವ್ಯಕ್ತಪಡಿಸಲಾಯಿತು.
ತಕ್ಷಣ ಸರ್ಕಾರದ ನಿಯಮಾನುಸಾರ ಓಡಾಡಲು ರಸ್ತೆ ನಿರ್ಮಾಣ ಮಾಡಿಕೊಡಬೇಕು. ವಾಸದ ನಿವೇಶನಗಳಿಗೆ ಖಾತೆ ಮಾಡಿಕೊಡಬೇಕು. ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು. ಗ್ರಾಮದ ಆದಿ ಕರ್ನಾಟಕ ಜನಾಂಗದವರಿಗೆ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರು ಮಾಡಕೊಡಬೇಕು ಹಾಗೂ ಬೇಡಿಕೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯತನ ವಹಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಿ ಪ್ರಕರಣದ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಯಿತು. 
ಪ್ರಮುಖರಾದ ಜಿಲ್ಲಾ ಸಂಚಾಲಕ ಟಿ.ಎಚ್ ಹಾಲೇಶಪ್ಪ, ಸಂಘಟನಾ ಸಂಚಾಲಕ ಎಂ. ಪಳನಿರಾಜ್, ತಾಲ್ಲೂಕು ಪ್ರಧಾನ ಸಂಚಾಲಕ ಎಂ. ಕುಬೇಂದ್ರಪ್ಪ, ಜಿಲ್ಲಾ ಮಹಿಳಾ ಒಕ್ಕೂಟದ ರತನ್‌ಜ್ಯೋತಿ, ತಾಲೂಕು ಮಹಿಳಾ ಒಕ್ಕೂಟದ ಸಂಚಾಲಕಿ ಯೋಗೇಶ್ವರಿ, ಕಲ್ಲೇಶ್, ಜಗ್ಗು, ಎಚ್. ಲೋಕೇಶ್, ಇಬ್ರಾಹಿಂ ಸಾಬ್, ಆನಂದ ರಾವ್, ನ್ಯಾಮತಿ ಹಾಲಪ್ಪ, ಶಿವನಾಯ್ಕ, ಜಗದೀಶ್, ಕೆ. ಮಂಜಪ್ಪ, ಕರ್ಣ, ತಿಮ್ಮಣ್ಣ ಮತ್ತು ರಮೇಶ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
೧೫ ದಿನದಲ್ಲಿ ಸಮಸ್ಯೆಗಳಿಗೆ ಪರಿಹಾರ: 
ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ. ಕೊಟ್ರೇಶಪ್ಪ, ೧೫ ದಿನಗಳಲ್ಲಿ ಭೇಡಿಕೆ ಈಡೇರಿಸಿ ಕೊಡುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. 

No comments:

Post a Comment