Sunday, July 5, 2020

ವಿಐಎಸ್‌ಎಲ್ ಇದೀಗ ಕೋವಿಡ್-೧೯ ಆಸ್ಪತ್ರೆ

ಬಟ್ಟೆ ಅಂಗಡಿ ಯುವಕನಿಗೆ ಸೋಂಕು

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಕೋವಿಡ್-೧೯ ಆಸ್ಪತ್ರೆಯನ್ನಾಗಿ ಸಿದ್ದಗೊಳಿಸುತ್ತಿರುವ ಹಿನ್ನಲೆಯಲ್ಲಿ ಅಗತ್ಯವಿರುವ ಸಾಮಗ್ರಿಗಳನ್ನು ಎಂಪಿಎಂ ಆಸ್ಪತ್ರೆಯಿಂದ ಕೊಂಡೊಯ್ಯಲಾಯಿತು. 
ಭದ್ರಾವತಿ, ಜು. ೫: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯನ್ನು ಇದೀಗ ಹೆಚ್ಚುವರಿಯಾಗಿ ಕೋವಿಡ್-೧೯ ಆಸ್ಪತ್ರೆಯನ್ನಾಗಿ ಸಿದ್ದಗೊಳಿಸಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಒಂದು ಸೋಂಕಿನ ಪ್ರಕರಣ ಪತ್ತೆಯಾಗಿದೆ. 
ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳಿಗೆ ಪ್ರತ್ಯೇಕವಾಗಿ ಸುಮಾರು ೫೦ ಹಾಸಿಗೆ ಕಾಯ್ದಿರಿಸಲಾಗಿದ್ದು, ಕಳೆದ ೩ ದಿನಗಳಿಂದ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಸುಮಾರು ೫ ವರ್ಷಗಳಿಂದ ಮುಚ್ಚಲ್ಪಟ್ಟಿರುವ ಎಂಪಿಎಂ ಆಸ್ಪತ್ರೆಯಿಂದ ೫೦ ಹಾಸಿಗೆಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ವಿಐಎಸ್‌ಎಲ್ ಆಸ್ಪತ್ರೆಗೆ ತರಲಾಗಿದೆ. ಆಸ್ಪತ್ರೆ ಆವರಣದಲ್ಲಿ ಪ್ರತ್ಯೇಕವಾಗಿ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿದ್ದು,  ತುರ್ತು ಸೇವೆಗೆ ಅಂಬ್ಯುಲೆನ್ಸ್‌ಗಳನ್ನು ಮೀಸಲಿಡಲಾಗಿದೆ.  
    ನಿರ್ವಹಣೆ, ವೈದ್ಯರು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸುವುದು ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಜಿಲ್ಲಾಡಳಿತ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. 
ಒಂದು ಸೋಂಕಿನ ಪ್ರಕರಣ: 
ಶುಕ್ರವಾರ ಒಟ್ಟು ೪ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಶನಿವಾರ ರಾತ್ರಿ ಹಳೇನಗರದ ಭೂತನಗುಡಿಯಲ್ಲಿ ಸುಮಾರು ೨೮ ವರ್ಷದ ಯುವಕನೋರ್ವನಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. 
ಈತ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಸೋಂಕು ಇತರರಿಗೆ ಹರಡಿರುವ ಸಾಧ್ಯತೆ ಹೆಚ್ಚಾಗಿದೆ. ನಗರಸಭೆ ಆಡಳಿತ ಯುವಕ ವಾಸಿಸುತ್ತಿರುವ ಸ್ಥಳದ ೧೦೦ ಹಾಗೂ ೨೦೦ ಮೀಟರ್ ವಿಸ್ತೀರ್ಣದಲ್ಲಿ ಸ್ಯಾನಿಟೈಸ್ ಮಾಡಿಸಿ ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಈ ಭಾಗದ ಸುತ್ತಮುತ್ತಲ ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಭಾನುವಾರ ಯಾವುದೇ ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ. 

No comments:

Post a Comment