Monday, July 6, 2020

ಅಂಗಡಿ ಮುಂಗಟ್ಟು ತೆರವುಗೊಳಿಸಲು ನಗರಸಭೆಗೆ ನೋಟಿಸ್

ಎಂಪಿಎಂ ಕಾರ್ಖಾನೆ, ನಗರಾಡಳಿತ ಪ್ರದೇಶ ನಿರ್ವಹಣೆ ಹೊರ ಗುತ್ತಿಗೆ 

ಭದ್ರಾವತಿ ನಗರಸಭೆಗೆ ಎಂಪಿಎಂ ಆಡಳಿತ ಮಂಡಳಿ ಅಂಗಡಿ ಮುಂಗಟ್ಟು ತೆರವುಗೊಳಿಸಲು ನೋಟಿಸ್ ನೀಡಿರುವುದು. 
ಭದ್ರಾವತಿ, ಜು. ೬: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿರ್ವಹಣೆಯನ್ನು ಸರ್ಕಾರ ಹೊರ ಗುತ್ತಿಗೆ ನೀಡುವುದು ಬಹುತೇಕ ಖಚಿತವಾಗಿದೆ.  
ಜು.೧ರಂದು ಕಾರ್ಖಾನೆಗೆ ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಕಾರ್ಖಾನೆಯನ್ನು ಹೊರಗುತ್ತಿಗೆ ನೀಡುವ ನಿರ್ಧಾರ ಹೊರಬಿದಿದ್ದು, ಕಾರ್ಖಾನೆ ನಿರ್ವಹಣೆ ಜೊತೆಗೆ ನಗರಾಡಳಿತ ಪ್ರದೇಶ ನಿರ್ವಹಣೆ ಸಹ ಹೊರಗುತ್ತಿಗೆ ಪಾಲಾಗಲಿದೆ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ತಕ್ಷಣ ಕಾರ್ಖಾನೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಕಾರ್ಖಾನೆ ಅಧೀನಕ್ಕೆ ನೀಡುವಂತೆ ಸೂಚಿಸಲಾಗಿದೆ. 
ಕಾರ್ಖಾನೆಯ ನಗರಾಡಳಿತ ಇಲಾಖೆಯಿಂದ ಯಾವುದೇ ಆದಾಯ ನಗರಸಭೆಗೆ ಬಾರದಿದ್ದರೂ ಸಹ ಕಳೆದ ಹಲವಾರು ವರ್ಷಗಳಿಂದ ಕಾರ್ಖಾನೆ ವ್ಯಾಪ್ತಿಯಲ್ಲಿ ನಗರಸಭೆ ವತಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ನಗರೋತ್ಥಾನ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದೀಗ ಏಕಾಏಕಿ ನಗರಸಭೆ ಆಡಳಿತಕ್ಕೆ ಕಾರ್ಖಾನೆ ಆಡಳಿತ ಮಂಡಳಿ ನೋಟಿಸ್ ಜಾರಿಗೊಳಿಸಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಸೂಚಿಸಿದೆ. ಇದರಿಂದಾಗಿ ವ್ಯಾಪಾರಸ್ಥರು ಆತಂಕಗೊಂಡಿದ್ದು, ಕಾರ್ಖಾನೆಗೆ ಸೇರಿದ ಕೆಲವು ಜಾಗಗಳನ್ನು ಬ್ಯಾಂಕ್, ಅಂಚೆ ಕಛೇರಿ, ಪೊಲೀಸ್ ಠಾಣೆ ಹಾಗೂ ಶಾಲೆಗಳನ್ನು ತೆರೆಯಲು ಬಿಟ್ಟು ಕೊಡಲಾಗಿದೆ. 

No comments:

Post a Comment