Monday, July 6, 2020

ಜು.೮ರಂದು ತಾಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಅಧ್ಯಕ್ಷ ಸ್ಥಾನಕ್ಕೆ ನಾಲ್ವರು, ಉಪಾಧ್ಯಕ್ಷ ಸ್ಥಾನ ಒಬ್ಬ ಮಹಿಳೆ ಪೈಪೋಟಿ 

ಭದ್ರಾವತಿ ತಾಲೂಕು ಪಂಚಾಯಿತಿ. 
ಭದ್ರಾವತಿ, ಜು. ೬: ಉಳಿದ ೧೦ ತಿಂಗಳ ಅವಧಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜು.೮ರಂದು ಚುನಾವಣೆ ನಡೆಯಲಿದ್ದು,  ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಒಪ್ಪಂದದ ಪ್ರಕಾರ ಎರಡು ಸ್ಥಾನಗಳಲ್ಲೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 
ಒಪ್ಪಂದದ ಪ್ರಕಾರ ಕಾಂಗ್ರೆಸ್ ಪಕ್ಷದ  ಆಶಾ ಶ್ರೀಧರ್ ಅಧ್ಯಕ್ಷರಾಗಿ, ಜೆಡಿಎಸ್ ಪಕ್ಷದ ಸರೋಜಮ್ಮ ಹಾಜ್ಯನಾಯ್ಕ ಉಪಾಧ್ಯಕ್ಷೆಯಾಗಿ ಅಧಿಕಾರ ನಡೆಸಿದ್ದು, ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಜೆಡಿಎಸ್ ಪಕ್ಷದ ಸದಸ್ಯರಾದ ಸಿಂಗನಮನೆ ಕ್ಷೇತ್ರದ ಉಷಾಕಿರಣ, ಹಿರಿಯೂರು ಕ್ಷೇತ್ರದ ಸರೋಜಮ್ಮ ಹಾಜ್ಯನಾಯ್ಕ, ಅಂತರಗಂಗೆ ಕ್ಷೇತ್ರದ ಲಕ್ಷ್ಮೀದೇವಿ ಹಾಗೂ ದೊಣಬಘಟ್ಟ ಕ್ಷೇತ್ರದ ಶಮಾ ಬಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷೆ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಈ ಸ್ಥಾನಕ್ಕೆ ಕಲ್ಲಹಳ್ಳಿ ಕ್ಷೇತ್ರದ ನೇತ್ರಾಬಾಯಿ ಮಾತ್ರ ಆಕಾಂಕ್ಷಿಯಾಗಿದ್ದಾರೆ. 
ಈಗಾಗಲೇ ಜೆಡಿಎಸ್ ಪಕ್ಷದ ಗೀತಾ ಜಗದೀಶ್, ಯಶೋದಮ್ಮ ಹಾಗೂ ಕಾಂಗ್ರೆಸ್ ಪಕ್ಷದ ಆಶಾ ಶ್ರೀಧರ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್ ಪಕ್ಷದ ತುಂಗಮ್ಮ ಜಯಮ್ಮ, ಜೆಡಿಎಸ್ ಪಕ್ಷದ ಸರೋಜಮ್ಮ ಹಾಜ್ಯನಾಯ್ಕ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. 
ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿರ್ಧಾರದ ಮೇಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.  ಒಟ್ಟು ೧೯ ಸದಸ್ಯ ಬಲ ಹೊಂದಿರುವ ತಾಲೂಕು ಪಂಚಾಯಿತಿಯಲ್ಲಿ ೯ ಜೆಡಿಎಸ್, ೬ ಕಾಂಗ್ರೆಸ್ ಮತ್ತು ೪ ಬಿಜೆಪಿ ಸದಸ್ಯರಿದ್ದು, ಕಾಂಗ್ರೆಸ್-ಜೆಡಿಎಸ್ ಒಪ್ಪಂದದ ಪ್ರಕಾರ ಅಧಿಕಾರದ ಚುಕ್ಕಾಣಿ ಹಿಡಿದಿವೆ.

No comments:

Post a Comment