Sunday, July 19, 2020

ಅರಣ್ಯ ಪ್ರದೇಶ ಒತ್ತುವರಿ : ಗ್ರಾಮಸ್ಥರು, ಅರಣ್ಯ ಇಲಾಖೆ ನಡುವೆ ಮಾತಿನ ಚಕಮಕಿ

ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ವ್ಯಕ್ತಿಯೊಬ್ಬರ ಮೇಲೆ 

ಅಮಾನುಷ ಹಲ್ಲೆ : ಆರೋಪ 

ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದ ನಿವಾಸಿ ಬಸವರಾಜ ಎಂಬುವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. 
ಭದ್ರಾವತಿ, ಜು. ೧೯: ಕಳೆದ ೫ ದಿನಗಳ ಹಿಂದೆ ತಾಲೂಕಿನ ಕಲ್ಲಾಪುರ ಗ್ರಾಮದ ಮಾವಿನಕಟ್ಟೆ ಅರಣ್ಯ ವ್ಯಾಪ್ತಿಯಲ್ಲಿ ಒತ್ತುವರಿಗೆ ಸಂಬಂಧಿಸಿದಂತೆ ಅಲ್ಲಿನ ನಿವಾಸಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ನಡುವೆ ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮರಕಡಿತಲೆಯಲ್ಲಿ ತೊಡಗಿದ್ದವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ವ್ಯಕ್ತಿಯೊಬ್ಬರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆಂದು ತಹಸೀಲ್ದಾರ್‌ಗೆ ದೂರಲಾಗಿದೆ. 
ಈ ವ್ಯಾಪ್ತಿಯಲ್ಲಿ ಬಹಳ ವರ್ಷಗಳಿಂದ ಅರಣ್ಯ ಪ್ರದೇಶ ಒತ್ತುವರಿ ನಡೆಯುತ್ತಿದ್ದು, ಅರಣ್ಯ ಇಲಾಖೆ ವತಿಯಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೂ ಸಹ ಒತ್ತುವರಿ ನಿಂತಿಲ್ಲ. ಈಗಾಗಲೇ ಒತ್ತುವರಿ ಮಾಡಿಕೊಂಡಿರುವ ಅರಣ್ಯ ವ್ಯಾಪ್ತಿಯಲ್ಲಿ ಅಡಕೆ, ತೆಂಗು, ಬಾಳೆತೋಟಗಳನ್ನು ನಿರ್ಮಿಸಿಕೊಂಡಿದ್ದಾರೆ. ಅರಣ್ಯದಲ್ಲಿ ಕಾವಲು ಕಾಯುವ ಸಿಬ್ಬಂದಿಗಳನ್ನು ಬೆದರಿಸಿ ಕಳುಹಿಸುವ ಮೂಲಕ ಮರಕಡಿತಲೆಯಲ್ಲಿ ತೊಡಗಿದ್ದಾರೆ. ಇಂತಹವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿನಾಕಾರಣ ಯಾವುದೇ ರೀತಿ ಯಾರ ಮೇಲೂ ಹಲ್ಲೆ, ದೌರ್ಜನ್ಯ ನಡೆಸಿಲ್ಲ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಷ್ಟನೆಯಾಗಿದೆ. 
ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಗ್ರಾಮಸ್ಥರ ನಡುವೆ ಒತ್ತುವರಿಗೆ ಸಂಬಂಧಿಸಿದಂತೆ ಮಾತಿನಚಕಮಕಿ ನಡೆದಿರುವುದು. 
ಆದರೆ ಡಿಎಸ್‌ಎಸ್ ಮುಖಂಡ ಕೆ. ರಂಗನಾಥ್, ಕಲ್ಲಾಪುರ ಗ್ರಾಮದ  ನಿವಾಸಿ ಬಸವರಾಜ(೩೫) ಎಂಬುವರು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ವೈದ್ಯರ ಮಾರ್ಗದರ್ಶನದಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಣಬೆ ಹುಡುಕಿಕೊಂಡು ಅರಣ್ಯ  ಪ್ರವೇಶಿಸಿದ್ದು, ಇವರ ಮೇಲೆ ವಿನಾಕಾರಣ ಹಲ್ಲೆ ನಡೆಸಿ ಮರಕಡಿತಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದೂರಿದ್ದಾರೆ. 
ಅರಣ್ಯ  ಇಲಾಖೆ ಸಿಬ್ಬಂದಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಮತ್ತು ತಹಸೀಲ್ದಾರ್ ಶಿವಕುಮಾರ್ ಗಮನಕ್ಕೆ ತರಲಾಗಿದೆ. ಅಲ್ಲದೆ ಅರಣ್ಯ ಇಲಾಖೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು. 
ಘಟನೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ಶಿವಕುಮಾರ್ ಪತ್ರಿಕೆಗೆ ಪ್ರತಿಕ್ರಿಯಿಸಿ, ಘಟನೆ ನಡೆದಿರುವುದು  ಗಮನಕ್ಕೆ ಬಂದಿದೆ. ಉಪವಿಭಾಗಾಧಿಕಾರಿಗಳು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. 

No comments:

Post a Comment