Tuesday, August 18, 2020

ಶಾಲೆ ಆರಂಭಕ್ಕೂ ಮುನ್ನವೇ ಸಿದ್ದತೆ : ಸ್ವಂತ ಹಣದಲ್ಲಿ ಸ್ಯಾನಿಟೈಜರ್ ಯಂತ್ರ ಖರೀದಿ

ಭದ್ರಾವತಿ ತಾಲೂಕಿನ ಬಾಳೆಮಾರನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ವಂತ ಯಂತ್ರದಲ್ಲಿ ಸ್ಯಾನಿಟೈಜರ್ ಯಂತ್ರ ಖರೀದಿಸಿ ಶಾಲಾ ಕೊಠಡಿಗಳನ್ನು ಸ್ಯಾನಿಟೈಜರ್ ಮಾಡುತ್ತಿರುವುದು.

ಗಮನ ಸೆಳೆಯುತ್ತಿರುವ ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆ

ಭದ್ರಾವತಿ, ಆ. ೧೮: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕಳೆದ ೫-೬ ತಿಂಗಳುಗಳಿಂದ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟಿದ್ದು, ಪುನಃ ಆರಂಭಿಸಲು ಸರ್ಕಾರದಿಂದ ಇದುವರೆಗೂ ಯಾವುದೇ ಆದೇಶ ಬಂದಿಲ್ಲ. ಈ ಹಿನ್ನಲೆಯಲ್ಲಿ ಪ್ರಸ್ತಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ವಿಳಂಬವಾಗಿವೆ. ಈ ನಡುವೆ ಆನ್‌ಲೈನ್ ತರಗತಿಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ. ಮತ್ತೊಂದೆಡೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಗೆ ಚಾಲನೆ ನೀಡಿದೆ. ಇವೆಲ್ಲದರ ನಡುವೆ ತಾಲೂಕಿನ ಸರ್ಕಾರಿ ಶಾಲೆಯೊಂದು ಶಾಲೆ ಯಾವಾಗ ಆರಂಭವಾಗುತ್ತದೆಯೋ ಗೊತ್ತಿಲ್ಲ. ಆದರೂ ಮುನ್ನಚ್ಚರಿಕೆ ಕ್ರಮವಾಗಿ ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಳ್ಳುವ ಮೂಲಕ ಗಮನ ಸೆಳೆದಿದೆ.
    ತಾಲೂಕಿನ ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಹಕಾರದೊಂದಿಗೆ ಸ್ಯಾನಿಟೈಜರ್ ಯಂತ್ರ ಖರೀದಿಸಲಾಗಿದೆ. ಈಗಾಗಲೇ ಈ ಯಂತ್ರ ಬಳಸಿಕೊಂಡು ೫-೬ ಬಾರಿ ಶಾಲಾ ಕೊಠಡಿಗಳನ್ನು ಸ್ಯಾನಿಟೈಜರ್ ಮಾಡಲಾಗಿದೆ. ಈ ಶಾಲೆಗೆ ಹೊಂದಿಕೊಂಡಂತೆ ಬಯಲು ರಂಗಮಂದಿರ ಸಹ ಇದ್ದು, ಇದನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಅದರಲ್ಲೂ ವಿದ್ಯಾಗಮ ಯೋಜನೆಗೆ ಸೂಕ್ತ ಸ್ಥಳವಾಗಿದೆ. ಈ ಹಿನ್ನಲೆಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ.
     ಈಗಾಗಲೇ ಈ ಭಾಗದಲ್ಲಿ ಸುಮಾರು ೧೦ ಸ್ಥಳಗಳಲ್ಲಿ ವಿದ್ಯಾಗಮ ಯೋಜನೆಯಡಿ ತರಗತಿಗಳು ನಡೆಯುತ್ತಿವೆ. ಗ್ರಾಮಸ್ಥರು ಹಾಗೂ ಪೋಷಕರು ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಪಾಠ ಪ್ರವಚನಗಳು ಲಭ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಒಂದೆಡೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಂಗಮಂದಿರ ಬಳಸಿಕೊಳ್ಳಲು ಅನುಮತಿಗಾಗಿ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಪುನಃ ಶಾಲೆಗಳು ಆರಂಭವಾಗುವವರೆಗೂ ಅಥವಾ ಸರ್ಕಾರದ ಆದೇಶ ಬರುವವರೆಗೂ ವಿದ್ಯಾಗಮ ಯೋಜನೆ ಮುಂದುವರೆಯಲಿದೆ. ಈ ಯೋಜನೆಯಲ್ಲಿ ತಾಲೂಕಿನಾದ್ಯಂತ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ಸಿಆರ್‌ಪಿಗಳು, ಶಿಕ್ಷಣ ಸಂಯೋಜಕರು ಸೇರಿದಂತೆ ಸುಮಾರು ೩೦ ರಿಂದ ೪೦ ಅಧಿಕಾರಿಗಳು ತೊಡಗಿಕೊಂಡಿದ್ದಾರೆಂದು ಶಾಲೆಯ ಮುಖ್ಯ ಶಿಕ್ಷಕರಾದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಗಣೇಶ್ ತಿಳಿಸಿದ್ದಾರೆ.
   ಶಾಲೆಯಲ್ಲಿ ನಡೆಯುತ್ತಿರುವ ಸ್ಯಾನಿಟೈಜರ್ ಕಾರ್ಯವನ್ನು ಬಿಆರ್‌ಸಿ ಸಂಪನ್ಮೂಲ ಅಧಿಕಾರಿ ನವೀದ್ ಪರ್ವೀಜ್ ಅಹಮದ್ ಸೇರಿದಂತೆ ಇನ್ನಿತರರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು.

No comments:

Post a Comment