Saturday, August 1, 2020

ಚೈನ್ ಲಿಂಕ್ ಮೂಲಕ ವಂಚನೆ ಪ್ರಕರಣ : ದೂರು ದಾಖಲು

ಭದ್ರಾವತಿ, ಆ. ೧:  ಚೈನ್ ಲಿಂಕ್ ಮೂಲಕ ಅನಧಿಕೃತವಾಗಿ ಔಷಧಿ ಉತ್ಪನ್ನಗಳನ್ನು ಮಾರಾಟ ಮಾಡುವ ಜೊತೆಗೆ ಸದಸ್ಯರಿಗೆ ವಂಚನೆ ಮಾಡುತ್ತಿರುವ ಕಂಪನಿಯೊಂದರ ವಿರುದ್ಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
ಕೆಂಚೇನಹಳ್ಳಿ ಮಾವಿನಕೆರೆ ನಿವಾಸಿ ಸುರೇಶ ಎಂಬುವರು ದೂರು ನೀಡಿದ್ದು, ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ರಸ್ತೆ, ನಂದಿನಿ ಬೇಕರಿ ಮುಂಭಾಗ ಎಸ್‌ಡಬ್ಲ್ಯೂಎಸ್ ಮಾರ್ಕೇಟಿಂಗ್ ಸಲೂಷನ್ಸ್ ಪ್ರೈ.ಲಿ. ಸ್ಕೈ ವೇ ಸ್ವಾರ್ ಎಂಬ ಹೆಸರಿನ ಕಂಪನಿಯ ಔಷಧಿ ಎಂದು ಹೇಳಿಕೊಂಡು ಯಾವುದೇ ಪರವಾನಿಗೆ ಪಡೆಯದೇ ಔಷಧಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಸದಸ್ಯರಿಗೆ ಚೈನ್ ಲಿಂಕ್ ಮೂಲಕ ದಿನಕ್ಕೆ ೫,೦೦೦ ರು. ಸಂಭಾವನೆ ಬರುವುದಾಗಿ ನಂಬಿಸಿದ್ದು, ಪ್ರತಿ ಗ್ರಾಹಕರಿಂದ ೩,೦೦೦ ರು. ಹಣ ಪಡೆಯುವಂತೆ ಸೂಚಿಸುತ್ತಿದೆ. ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕ ಐ.ಡಿ ನೀಡುತ್ತಿದ್ದು, ಆದರೆ ಯಾರಿಗೂ ಸಹ ಚೈನ್‌ಲಿಂಕ್ ಮೂಲಕ ಹಣ ಸಂದಾಯವಾಗಿರುವುದಿಲ್ಲ. ಈ ನಡುವೆ ಕಂಪನಿ ನೀಡುತ್ತಿರುವ ಔಷಧಿ ಉತ್ಪನ್ನಗಳು ಬಳಕೆದಾರರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ಕುರಿತು ದೂರುಗಳು ಬರುತ್ತಿವೆ. ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ. 
ಹಳ್ಳಿಕೆರೆ ಬಾರಂದೂರು ನಿವಾಸಿ ಮಂಜುನಾಥ, ಶಿವಮೊಗ್ಗ ಎಸ್‌ಡಬ್ಲ್ಯೂಎಸ್ ಮಾರ್ಕೇಟಿಂಗ್ ಸಲೂಷನ್ಸ್ ಪ್ರೈ.ಲಿ. ಸಿಇಓ ಮತ್ತು ಎಂ.ಡಿ ಶಶಿಧರ ಹಾಗೂ ಶಿವಮೊಗ್ಗ ಮಲವಗೊಪ್ಪ ಯಲವಟ್ಟಿ ಗ್ರಾಮದ ನಿವಾಸಿ ವಿನೂತ ಎಂಬುವರ ವಿರುದ್ಧ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

No comments:

Post a Comment