Friday, August 7, 2020

ಭದ್ರಾವತಿಯಲ್ಲಿ ೧೨ ಸೋಂಕು ಪತ್ತೆ : ಕೊರೋನಾ ತಪಾಸಣೆ ನಡೆಸುವಲ್ಲಿ ನಿರ್ಲಕ್ಷ್ಯತನ

ಸಿಂಗನಮನೆ ಗ್ರಾ.ಪಂ. ಸದಸ್ಯ ಡಿ.ಟಿ ಶಶಿಕುಮಾರ್ ಆರೋಪ 

ಭದ್ರಾವತಿ ಸಿಂಗನಮನೆ ಗ್ರಾಮ ಪಂಚಾಯಿತಿ ಸದಸ್ಯ ಡಿ.ಟಿ ಶಶಿಕುಮಾರ್ 

ಭದ್ರಾವತಿ, ಆ. ೭: ತಾಲೂಕಿನಲ್ಲಿ ಕೊರೋನಾ ಸೋಂಕು ಪ್ರತಿ ದಿನ ಏರಿಕೆಯಾಗುತ್ತಿದ್ದು, ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಂಡು ಬರುತ್ತಿಲ್ಲ. ಶುಕ್ರವಾರ ತಾಲೂಕಿನಾದ್ಯಂತ ಒಟ್ಟು ೧೨ ಪ್ರಕರಣಗಳು ಪತ್ತೆಯಾಗಿವೆ. 

ಗಾಂಧಿನಗರದಲ್ಲಿ ೫೧ ವರ್ಷದ ಮಹಿಳೆ, ಎರೆಹಳ್ಳಿಯಲ್ಲಿ ೫೮ ವರ್ಷದ ವ್ಯಕ್ತಿ, ಹೊಳೆಹೊನ್ನೂರಿನಲ್ಲಿ ೪೦ ವರ್ಷದ ಪುರುಷ, ಮೂಡಲವಿಠಲಪುರದಲ್ಲಿ ೨೦ ವರ್ಷದ ಯುವಕ, ಅರಕೆರೆಯಲ್ಲಿ ೫೬ ವರ್ಷದ ವ್ಯಕ್ತಿ, ಜೇಡಿಕಟ್ಟೆಯಲ್ಲಿ ೪೫ ವರ್ಷದ ವ್ಯಕ್ತಿ, ಬಿ.ಎಚ್ ರಸ್ತೆಯಲ್ಲಿ ೨೫ ವರ್ಷದ ಪುರುಷ, ಇಂದ್ರನಗರದಲ್ಲಿ ೨೩ ವರ್ಷದ ಮಹಿಳೆ ಹಾಗು ಬಸಲಿಕಟ್ಟೆಯಲ್ಲಿ ೫೨ ವರ್ಷದ ವ್ಯಕ್ತಿ ಸೇರಿದಂತೆ ಒಟ್ಟು ೧೨ ಮಂದಿ ಸೋಂಕಿಗೆ ಒಳಗಾಗಿದ್ದು, ಸೋಂಕಿತರನ್ನು ಚಿಕಿತ್ಸೆಗಾಗಿ ಕೋವಿಡ್ ೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ನಗರಸಭೆ ಪೌರಾಯುಕ್ತ ಮನೋಹರ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್ ನೇತೃತ್ವದ ತಂಡ ಸೋಂಕು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ೧೦೦ ಹಾಗು ೨೦೦ ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಸೀಲ್‌ಡೌನ್‌ಗೊಳಿಸಲು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. 

ಕೊರೋನಾ ಸೋಂಕು ತಪಾಸಣೆ ನಿರ್ಲಕ್ಷ್ಯತನ: 

ತಾಲೂಕಿನಲ್ಲಿ ಕೊರೋನಾ ಸೋಂಕು ತಪಾಸಣೆ ನಡೆಸುವಲ್ಲಿ ತಾಲೂಕು ಆರೋಗ್ಯ ಇಲಾಖೆ ನಿರ್ಲಕ್ಷ್ಯತನ ವಹಿಸಿದ್ದು, ಇದರಿಂದಾಗಿ ಸೋಂಕು ಗ್ರಾಮೀಣ ಭಾಗದಲ್ಲೂ ವ್ಯಾಪಕವಾಗಿ ಹರಡುತ್ತಿದೆ ಎಂದು ಸಿಂಗನಮನೆ ಗ್ರಾಮ ಪಂಚಾಯಿತಿ ಸದಸ್ಯ ಡಿ.ಟಿ ಶಶಿಕುಮಾರ್ ಆರೋಪಿಸಿದ್ದಾರೆ. 

ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಕ್ತಿಯೊಬ್ಬರು ಕೆಲವು ದಿನಗಳ ಹಿಂದೆ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ತಪಾಸಣೆಗೆ ತೆರಳಿದ್ದು, ಆದರೆ ಆಸ್ಪತ್ರೆಯಲ್ಲಿ ತಪಾಸಣೆ ನಡೆಸದೆ ನಿರ್ಲಕ್ಷ್ಯತನದಿಂದ ನಡೆದುಕೊಂಡು ವಾಪಾಸು ಕಳುಹಿಸಿದ್ದಾರೆ. ಈ ವ್ಯಕ್ತಿ ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ತಪಾಸಣೆ ಮಾಡಿಸಿದ್ದು, ೩ ದಿನಗಳ ನಂತರ ಸೋಂಕು ದೃಢಪಟ್ಟಿರುವ ವರದಿ ಬಂದಿದೆ. ಇದರಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. 

ಆಸ್ಪತ್ರೆಗೆ ತಪಾಸಣೆಗೆ ಬಂದರೂ ಸಹ ತಪಾಸಣೆ ನಡೆಸದೆ ಕಳುಹಿಸಿರುವ ಕ್ರಮ ಖಂಡನೀಯ.  ತಾಲೂಕು ಆರೋಗ್ಯಾಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಎಲ್ಲಾ ಗ್ರಾಮಪಂಚಾಯಿತಿಗಳು ಎಚ್ಚೆತ್ತುಕೊಂಡು ಮುನ್ನಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸೋಂಕು ನಿವಾರಣೆ ಔಷಧ ಸಿಂಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. 

No comments:

Post a Comment