ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಭದ್ರಾವತಿ, ಆ. ೭: ತಾಲೂಕಿನಾದ್ಯಂತ ಮಳೆ ಹೆಚ್ಚಾಗಿದ್ದು, ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಗೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ನಗರಸಭೆ ಆಡಳಿತ ತಕ್ಷಣ ಸ್ಪಂದಿಸಬೇಕೆಂದರು.
ಪ್ರವಾಹ, ರಸ್ತೆಗಳಿಗೆ ಮರಗಳು ಬಿದ್ದು ಸಂಚಾರಕ್ಕೆ ತೊಂದರೆ ಕಂಡು ಬಂದಲ್ಲಿ, ವಿದ್ಯುತ್ ಅಡಚಣೆ ಉಂಟಾದಲ್ಲಿ ಮೆಸ್ಕಾಂ, ಅರಣ್ಯ ಹಾಗು ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ತಕ್ಷಣ ಸ್ಪಂದಿಸಬೇಕು. ಅಗ್ನಿಶಾಮಕ ಇಲಾಖೆ ಸಹ ದಿನದ ೨೪ ಗಂಟೆ ಸೇವೆಗೆ ಲಭ್ಯವಿರಬೇಕು. ಒಟ್ಟಾರೆ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಉಂಟಾಗದಂತೆ ಎಚ್ಚರವಹಿಸಬೇಕೆಂದರು.
೧೦೦ ಹಾಸಿಗೆಯುಳ್ಳ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-೧೯ ನಿರ್ವಹಣೆ ಸಮರ್ಪಕವಾಗಿ ಕೈಗೊಳ್ಳುತ್ತಿಲ್ಲ. ಆಸ್ಪತ್ರೆಗೆ ಬರುವ ಇತರೆ ರೋಗಿಗಳಿಗೆ ಸರಿಯಾಗಿ ತಪಾಸಣೆ ನಡೆಸುತ್ತಿಲ್ಲ. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುತ್ತಿಲ್ಲ. ಇತ್ಯಾದಿ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ ಎಂದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ವಿರುದ್ಧ ಶಾಸಕರು ಅಸಮಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ತಾಲೂಕು ಪಂಚಾಯಿತಿ ಆಡಳಿತ ನೋಡಿಕೊಳ್ಳಬೇಕು. ರೈತರಿಗೆ ಮಳೆಯಿಂದ ಎದುರಾಗುವ ಸಮಸ್ಯೆಗಳಿಗೆ ಕೃಷಿ ಇಲಾಖೆ ಪೂರಕವಾಗಿ ಸ್ಪಂದಿಸಬೇಕೆಂದರು.
ಪೌರಾಯುಕ್ತ ಮನೋಹರ್ ಮಾತನಾಡಿ, ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಸ್ವಲ್ಪ ಸಮಸ್ಯೆಯಾಗಲಿದೆ. ಉಳಿದಂತೆ ಸಂಭವಿಸಬಹುದಾದ ಘಟನೆಗಳಿಗೆ ಸ್ಪಂದಿಸಲು ಈಗಾಗಲೇ ಅಧಿಕಾರಿಗಳ ತಂಡ ರಚಿಸಲಾಗಿದೆ. ಅಲ್ಲದೆ ಸಾರ್ವಜನಿಕರ ಕುಂದುಕೊರತೆಗಳಿಗೆ ಸಹಾಯವಾಣಿ ಸಹ ನೀಡಲಾಗಿದೆ ಎಂದರು.
ಕೃಷಿ ಅಧಿಕಾರಿ ಶಶಿಧರ್ ಮಾತನಾಡಿ, ಪ್ರಸ್ತುತ ತಾಲೂಕಿನಲ್ಲಿ ಭತ್ತ ನಾಟಿ ಕಾರ್ಯ ಪೂರ್ಣಗೊಂಡಿದೆ. ಕಳೆದ ೨-೩ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಮಂಜುನಾಥ್, ಪೊಲೀಸ್ ಉಪಾಧೀಕ್ಷಕ ಸುಧಾಕರನಾಯ್ಕ ಮತ್ತು ವಲಯ ಅರಣ್ಯಾಧಿಕಾರಿ ಮಂಜುನಾಥ್ ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಉಪ ವಲಯ ಅರಣ್ಯಾಧಿಕಾರಿ ದಿನೇಶ್‌ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
No comments:
Post a Comment