ಭಾನುವಾರ, ಆಗಸ್ಟ್ 30, 2020

ಶಿಕ್ಷಕರು ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಿ : ಮಧುಕರ್ ವಿ. ಕಾನಿಟ್ಕರ್

ಭದ್ರಾವತಿ ತರುಣ ಭಾರತಿ ವಿದ್ಯಾಕೇಂದ್ರದ ಕೋಡಿಹಳ್ಳಿ ರಸ್ತೆಯಲ್ಲಿರುವ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ಕಾರ್ಯಾಗಾರದ ಸಮಾರೋಪ ಸಮಾರಂಭ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕಿ ಜಯಶ್ರೀ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು.
ಭದ್ರಾವತಿ, ಆ. ೩೦: ಶಿಕ್ಷಕರು ವೃತ್ತಿ ಜೀವನದಲ್ಲಿ ಉತ್ತಮ ಗುಣಗಳನ್ನು ರೂಢಿಸಿಕೊಂಡಾಗ ಮಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ತರುಣ ಭಾರತಿ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಮಧುಕರ್ ವಿ. ಕಾನಿಟ್ಕರ್ ಹೇಳಿದರು.
    ಅವರು ಭಾನುವಾರ ತರುಣ ಭಾರತಿ ವಿದ್ಯಾಕೇಂದ್ರದ ಕೋಡಿಹಳ್ಳಿ ರಸ್ತೆಯಲ್ಲಿರುವ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ಕಾರ್ಯಾಗಾರದ ಸಮಾರೋಪ ಸಮಾರಂಭ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
      ಶಿಕ್ಷಕರು ಮತ್ತು ಮಕ್ಕಳ ನಡುವಿನ ಸ್ವಭಾವಗಳು ಶಿಕ್ಷಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉತ್ತಮ ಸ್ವಭಾವಗಳು ಭವಿಷ್ಯದಲ್ಲಿ ಮಕ್ಕಳ ವ್ಯಕ್ತಿತ್ವ ರೂಪಿಸುತ್ತವೆ. ನಮ್ಮ ದೇಶ, ನಮ್ಮ ಸಮಾಜ, ನಮ್ಮ ಸಂಸ್ಕೃತಿ, ಸ್ವಾಭಿಮಾನದ ಗುಣಗಳನ್ನು ಶಿಕ್ಷಣದ ಜೊತೆ ಜೊತೆಗೆ ತಿಳಿಸಿಕೊಡಬೇಕಾಗಿದೆ. ಶಿಕ್ಷಕರ ವೃತ್ತಿ ಬದುಕು ಸಾರ್ಥಕವಾಗಬೇಕೆಂದರು.
    ನ್ಯೂಟೌನ್ ಬಾಲಬಾರತಿ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲ ಮಾತನಾಡಿ, ನಗರದಲ್ಲಿ ಮೊದಲ ಬಾರಿಗೆ ವಿದ್ಯಾಸಂಸ್ಥೆ ಆರಂಭಗೊಂಡಾಗ ಎದುರಾದ ಸಮಸ್ಯೆಗಳು, ೩೫ ವರ್ಷಗಳ ನಿರಂತರ ಸೇವೆಯಲ್ಲಿ ಅನುಭವಿಸಿದ ಶಿಕ್ಷಕ ವೃತ್ತಿಯಲ್ಲಿನ ಸವಾಲುಗಳನ್ನು ವಿವರಿಸಿದರು.
    ಇದಕ್ಕೂ ಮೊದಲು ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದ ಅನುಭವಗಳನ್ನು ಶಿಕ್ಷಕರಾದ ತೇಜಸ್ವಿ, ಶಿಲ್ಪ, ರಾಘವಿ ಮತ್ತು ಪೂರ್ಣಿಮಾ ಹಂಚಿಕೊಂಡರು. ಕಾರ್ಯಾಗಾರ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಹಲವು ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
    ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿ ಜಯಶ್ರೀ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು. ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ಎಂ.ಎಚ್ ವಿದ್ಯಾಶಂಕರ್ ಉಪಸ್ಥಿತರಿದ್ದರು.  ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಚ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
    ಮುಖ್ಯ ಶಿಕ್ಷಕಿ ರಾಧಿಕಾ ನಿರೂಪಿಸಿದರು. ಹಳೇ ವಿದ್ಯಾರ್ಥಿನಿ ದೃತಿ ಪ್ರಾರ್ಥಿಸಿದರು. ಶಿಕ್ಷಕಿ ಸುಜಾತ ಸ್ವಾಗತಿಸಿದರು. ಶಿಕ್ಷಕಿ ಸವಿತಾ ಕಾರ್ಯಾಗಾರದ ವರದಿ ಮಂಡಿಸಿದರು. ವಿದ್ಯಾಕೇಂದ್ರದ ಖಜಾಂಚಿ ವಿಶ್ವನಾಥ್ ವಂದಿಸಿದರು.  

2 ಕಾಮೆಂಟ್‌ಗಳು: