Tuesday, September 8, 2020

ಭದ್ರೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಬಾಗಿನ ಸಮರ್ಪಣೆ

ಭದ್ರಾವತಿ ಭದ್ರಾ ಜಲಾಶಯದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರೊಂದಿಗೆ ಮಂಗಳವಾರ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಿದರು.
ಭದ್ರಾವತಿ, ಸೆ. ೮: ತಾಲೂಕಿನ ಭದ್ರಾ ಜಲಾಶಯ ಮಂಗಳವಾರ ಬಹುತೇಕ ಪೂರ್ಣಮಟ್ಟ ತಲುಪಿದ್ದು, ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಈ ಬಾರಿ ಅತ್ಯಂತ ಸರಳವಾಗಿ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಿದರು.
       ಪ್ರತಿ ವರ್ಷ ಹಿಂದೂ, ಕ್ರೈಸ್ತ, ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದ ಧಾರ್ಮಿಕ ಗುರುಗಳು, ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು, ಗಣ್ಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಮಹಿಳಾ ಸಂಘಟನೆಗಳ ಪ್ರಮುಖರೊಂದಿಗೆ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೇವಲ ಕುಟುಂಬ ಸದಸ್ಯರೊಂದಿಗೆ ಸಂಗಮೇಶ್ವರ್  ಗಂಗಾಪೂಜೆ ನೆರವೇರಿಸಿ ಅರಣ್ಯ ಇಲಾಖೆ ಬೋಟ್ ಮೂಲಕ ಬಾಗಿನ ಸಮರ್ಪಿಸಿದರು.
      ಸಹೋದರರಾದ ಉದ್ಯಮಿಗಳಾದ ಬಿ.ಕೆ ಜಗನ್ನಾಥ, ಬಿ.ಕೆ ಶಿವಕುಮಾರ್, ಮಕ್ಕಳು ಮತ್ತು ಸೊಸೆಯಂದಿರು, ಸಿಂಗನಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್. ಉಮಾ, ಸುಗ್ರಾಮ ಅಧ್ಯಕ್ಷೆ ಸುಜಾತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment