Monday, October 26, 2020

ನಾಡಹಬ್ಬ ೯ ದಿನಗಳ ಜನಜಾಗೃತಿ ದಸರಾ ಆಚರಣೆಗೆ ತೆರೆ

ಉತ್ಸವ ಮೆರವಣಿಗೆಗೆ ಶಾಸಕ ಸಂಗಮೇಶ್ವರ್ ಚಾಲನೆ, 

ಬನ್ನಿ ಮುಡಿದ ಉಪವಿಭಾಗಾಧಿಕಾರಿ ಪ್ರಕಾಶ್

ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೯ ದಿನಗಳ ಜನಜಾಗೃತಿ ದಸರಾ ಸೋಮವಾರ ಉಪವಿಭಾಗಾಧಿಕಾರಿ, ನಗರಸಭೆ ಆಡಳಿತಾಧಿಕಾರಿ ಟಿ.ವಿ ಪ್ರಕಾಶ್ ಬನ್ನಿ ಮುಡಿಯುವ ಮೂಲಕ ಅಂತ್ಯಗೊಂಡಿತು.
ಭದ್ರಾವತಿ, ಅ. ೨೬: ನಾಡಹಬ್ಬ ದಸರಾ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೯ ದಿನಗಳ ಜನಜಾಗೃತಿ ದಸರಾ ಸೋಮವಾರ ಉಪವಿಭಾಗಾಧಿಕಾರಿ, ನಗರಸಭೆ ಆಡಳಿತಾಧಿಕಾರಿ ಟಿ.ವಿ ಪ್ರಕಾಶ್ ಬನ್ನಿ ಮುಡಿಯುವ ಮೂಲಕ ಅಂತ್ಯಗೊಂಡಿತು.
     ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆ ೯ ದಿನಗಳ ಜನಜಾಗೃತಿ ದಸರಾ ಯಶಸ್ವಿಯಾಗಿ ನಡೆಯಿತು. ಹಬ್ಬದ ಆಚರಣೆಯಂತೆ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆಯೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನಂದಿ ಧ್ಜಜಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉತ್ಸವ ಮೆರವಣಿಗೆಗೆ ಚಾಲನೆ ನೀಡಿದರು.
    ಮೆರವಣಿಗೆಯಲ್ಲಿ ಕ್ಷೇತ್ರಪಾಲಕ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಶ್ರೀ ಹಳದಮ್ಮ, ನಗರಸಭೆ ಶ್ರೀ ಚಾಮುಂಡೇಶ್ವರಿ ಸೇರಿದಂತೆ ಕೇವಲ ೪ ಉತ್ಸವ ಮೂರ್ತಿಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಮೆರವಣಿಗೆ ತಾಲೂಕು ಕಛೇರಿ ರಸ್ತೆಯಲ್ಲಿ ಸಾಗಿ ಕನಕಮಂಟಪ ಮೈದಾನ ಬಂದು ತಲುಪಿತು.
    ನಂತರ ಉಪವಿಭಾಗಾಧಿಕಾರಿ, ನಗರಸಭೆ ಆಡಳಿತಾಧಿಕಾರಿ ಟಿ.ವಿ ಪ್ರಕಾಶ್ ಬನ್ನಿ ಮುಡಿಯುವ ಮೂಲಕ ಅಂತ್ಯಗೊಳಿಸಿದರು. ರಾವಣ ದಹನ ಮತ್ತು ಸಿಡಿ ಮದ್ದುಗಳ ಪ್ರದರ್ಶನ ಆಕರ್ಷಕವಾಗಿ ಕಂಡು ಬಂದಿತು. ಸರ್ಕಾರದ ಮಾರ್ಗಸೂಚಿಯಂತೆ  ಸಾಮಾಜಿಕ ಅಂತರ, ಮಾಸ್ಕ್ ಬಳಕೆಯೊಂದಿಗೆ ಸುಮಾರು ೨೦೦ ಮಂದಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.


ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೯ ದಿನಗಳ ಜನಜಾಗೃತಿ ದಸರಾ ಆಚರಣೆಯ ಕೊನೆಯ ದಿನವಾದ ಸೋಮವಾರ ಉತ್ಸವ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
       ಶಾಸಕ ಬಿ.ಕೆ ಸಂಗಮೇಶ್ವರ್ ವಿಷಾದ:
  ಬನ್ನಿಮಂಟದಲ್ಲಿ ಕ್ಷೇತ್ರದ ದಸರಾ ಆಚರಣೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್ ಈ ಬಾರಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿರುವ ನಾಡಹಬ್ಬ ದಸರಾ ವಿಜೃಂಭಣೆ ಕಳೆದುಕೊಂಡಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
    ಪ್ರತಿ ವರ್ಷ ಸುಮಾರು ೩೦ ರಿಂದ ೪೦ ಸಾವಿರ ಜನರು ಒಂದೆಡೆ ಸೇರಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಆದರೆ ಈ ಬಾರಿ ವಿಜೃಂಭಣೆ ಇಲ್ಲದಿದ್ದರೂ ಸಹ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ೯ನೇ ದಿನಗಳ ಆಚರಣೆಯನ್ನು ನಗರಸಭೆ ಆಡಳಿತ ಎಲ್ಲಾ ಇಲಾಖೆಗಳು ಹಾಗು ಸಂಘ-ಸಂಸ್ಥೆಗಳು ಮತ್ತು ನಾಗರೀಕರ ಸಹಕಾರದೊಂದಿಗೆ ಯಶಸ್ವಿಗೊಳಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಈ ಹಿನ್ನಲೆಯಲ್ಲಿ ಕ್ಷೇತ್ರದ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಸಹಾಯಕ ಅರ್ಚಕ ಶ್ರೀನಿವಾಸ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಯಶಸ್ವಿಯಾಗಿ ಜರುಗಿದವು.
    ಪೌರಾಯುಕ್ತ ಮನೋಹರ್, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ, ನಿವೃತ್ತ ತಹಸೀಲ್ದಾರ್ ಸೋಮಶೇಖರ್, ಪ್ರಮುಖರಾದ ಶ್ರೀ ಹಳದಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಿ.ಎಂ ಸಂತೋಷ್, ಪ್ರಮುಖರಾದ ಮಂಗೋಟೆ ರುದ್ರೇಶ್, ಬಿ.ಕೆ ಶ್ರೀನಾಥ್, ನರಸಿಂಹಚಾರ್, ರಮಾಕಾಂತ, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

No comments:

Post a Comment