Friday, November 6, 2020

ಕಸಾಪ ನಿಕಟಪೂರ್ವ ಅಧ್ಯಕ್ಷರಿಂದ ಪರಿಷತ್ ಹೆಸರು ದುರುಪಯೋಗ

ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯ : ಅಪೇಕ್ಷ ಮಂಜುನಾಥ್

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಮಾತನಾಡಿದರು.
ಭದ್ರಾವತಿ, ನ. ೬: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಡಿ. ಮಂಜುನಾಥ್‌ರವರು ಪರಿಷತ್ ಹೆಸರು  ದುರುಪಯೋಗ ಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆಂದು ಪರಿಷತ್ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಆರೋಪಿಸಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಧಿಕಾರದ ಅವಧಿ ಮುಗಿದ ನಂತರ ಪರ್ಯಾಯ ಸಂಘಟನೆ ಮಾಡಿಕೊಳ್ಳುವ ಜೊತೆಗೆ ಪರಿಷತ್ ಹೆಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪರಿಷತ್ ಹೆಸರಿನಲ್ಲಿ ಈ ಹಿಂದೆ ರೂಪಿಸಲಾಗಿರುವ ಕಾರ್ಯಕ್ರಮಗಳನ್ನು ಪರ್ಯಾಯವಾಗಿ ರೂಪಿಸಿಕೊಂಡಿರುವ ಸಂಘಟನೆಯಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದೆ ರೀತಿ ತಾಲೂಕಿನಲ್ಲೂ ಪರ್ಯಾಯ ಸಂಘಟನೆ ರೂಪಿಸಿಕೊಂಡು ಹೆಸರು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದು ಪರಿಷತ್‌ಗೆ ಮಾಡುತ್ತಿರುವ ದ್ರೋಹವಾಗಿದೆ ಎಂದರು.
     ಡಿ. ಮಂಜುನಾಥ್‌ರವರು ಸಾಹಿತ್ಯ ಗ್ರಾಮ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ್ದು, ಈ ಸಂಬಂಧ ಈಗಾಗಲೇ ಜಿಲ್ಲಾಧ್ಯಕ್ಷರಾದ ಡಿ.ಬಿ ಶಂಕರಪ್ಪ ರಾಜ್ಯ ಪರಿಷತ್ ಅಧ್ಯಕ್ಷರಾದ ಡಾ. ಮನು ಬಳಿಗಾರ್‌ಗೆ ದೂರು ನೀಡಿದ್ದಾರೆ. ತನಿಖೆಯಿಂದ ಅವ್ಯವಹಾರ ನಡೆದಿರುವುದು ದೃಢಪಟ್ಟಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಪರಿಷತ್ ಆದೇಶಿದೆ. ಈ ಭ್ರಷ್ಟಾಚಾರವನ್ನು ಪರಿಷತ್‌ನ ಒಬ್ಬ ಸಾಮಾನ್ಯ ಸದಸ್ಯನಾಗಿ ಖಂಡಿಸುತ್ತೇನೆ. ಇದೆ ರೀತಿ ಮುಂದುವರೆದಲ್ಲಿ ಪರಿಷತ್ ಎಲ್ಲಾ ಸದಸ್ಯರು ಮುಂದಿನ ದಿನಗಳಲ್ಲಿ ಡಿ. ಮಂಜುನಾಥ್ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.
          ನ.೧೦ರಂದು ಅಭಿನಂದನಾ ಕಾರ್ಯಕ್ರಮ:
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗು ಶ್ರೀ ಬಸವೇಶ್ವರ ಧರ್ಮಸಂಸ್ಥೆ ವತಿಯಿಂದ ನ.೧೦ರಂದು ಬೆಳಿಗ್ಗೆ ೧೦ ಗಂಟೆಗೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಪರಿಷತ್ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ಆಶಯ ನುಡಿಗಳನ್ನಾಡಲಿದ್ದಾರೆ. ನಗರಸಭೆ ಪೌರಾಯುಕ್ತ ಮನೋಹರ್, ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಶ್ರೀ ಬಸವೇಶ್ವರ ಸಂಸ್ಥೆ ಟ್ರಸ್ಟಿ ಎಂ. ಶಶಿಕಲಾ ಶಿವಕುಮಾರ್, ಡಾ. ವೀಣಾ ಎಸ್ ಭಟ್, ಡಾ. ನಾಸಿರ್‌ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
      ಆಕ್ರೋಶ ವ್ಯಕ್ತಪಡಿಸಿದರು. ಎಚ್ ಎನ್ ಮಹಾರುದ್ರ, ಸತ್ಯಮೂರ್ತಿ, ವೈ ಕೆ ಹನುಮಂತಯ್ಯ ಮತ್ತು ಸಿ ಚನ್ನಪ್ಪ ಇದ್ದರು.

No comments:

Post a Comment