Wednesday, November 25, 2020

ಮಕ್ಕಳಿಗೆ ಪುಸ್ತಕ ಓದುವ, ಬರೆಯುವ, ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಯತ್ನ ನಡೆಯುತ್ತಿಲ್ಲ

'ನಾಡ ದೇವಿಗೆ ನಮನ ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ವಿಷಾದ

ಭದ್ರಾವತಿ ಅಂತರಗಂಗೆ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಕನ್ನಡ ಸಾಹಿತ್ಯಾಭಿಮಾನಿಗಳ ಬಳಗ ಅಂತರಗಂಗೆ ಆಯೋಜಿದ್ದ 'ನಾಡ ದೇವಿಗೆ ನಮನ ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮವನ್ನು ಡಾ. ಮೋಹನ್ ಚಂದ್ರಗುತ್ತಿ, ಡಿ. ಮಂಜುನಾಥ್, ಕೋಗಲೂರು ತಿಪ್ಪೇಸ್ವಾಮಿ ಸೇರಿದಂತೆ ಇತರರು ಉದ್ಘಾಟಿಸಿದರು.
    ಭದ್ರಾವತಿ, ನ. ೨೫; ಪರಸ್ಪರ ನಡುವೆ ಮಾತುಕತೆಗಳು ಕಡಿಮೆಯಾಗುತ್ತಿವೆ. ಟಿ.ವಿ ಮಾದ್ಯಮಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಹಾಗು ಮೊಬೈಲ್‌ಗಳ ಮೊರೆ ಹೋಗಿ ಪುಸ್ತಕ ಓದುವ, ಬರೆಯುವ ಹಾಗು ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಯತ್ನ ಪೋಷಕರಿಂದಾಗುತ್ತಿಲ್ಲ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ವಿಷಾದ ವ್ಯಕ್ತಪಡಿಸಿದರು.
   ಅವರು ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಕನ್ನಡ ಸಾಹಿತ್ಯಾಭಿಮಾನಿಗಳ ಬಳಗ ಅಂತರಗಂಗೆ ಆಯೋಜಿದ್ದ 'ನಾಡ ದೇವಿಗೆ ನಮನ ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರಿಂದ ಕನ್ನಡ ನಾಡು, ಭಾಷೆ, ಸಂಸ್ಕೃತಿ ಬೆಳೆದು ಬಂದಿದೆ ಹೊರತು. ಬೇರೆ ಯಾರಿಂದಲೂ ಅಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆ ಎಂದರೆ ಕೇವಲ ದ್ವಜಾರೋಹಣ ಮಾಡಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡುವುದಷ್ಟೆ ಅಲ್ಲ. ಮಕ್ಕಳಿಗೆ ಉತ್ತಮ ಗುಣ, ನಡತೆ, ಸಂಸ್ಕೃತಿಯ ಜೊತೆಗೆ ಭಾಷೆಯ ಮಹತ್ವ ಹೇಳಿ ಕೊಡುವುದಾಗಿದೆ ಎಂದರು.  
     ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ರಾಜ್ಯೋತ್ಸವ ಎಂದಾಕ್ಷಣ ಸಂಭ್ರಮಿಸಬೇಕಾದ ದಿನಗಳು ಇದುವರೆಗೂ ಒದಗಿ ಬರದಿರುವುದು ಈ ನಾಡಿನ ದೊಡ್ಡ ದುರಂತವಾಗಿದೆ. ಮಕ್ಕಳಿಗೆ ಯಾವ ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು ಎಂಬುದರ ಬಗ್ಗೆ ಪೋಷಕರಲ್ಲಿಯೇ ಗೊಂದಲವಿದೆ, ಆಂಗ್ಲ ಭಾಷೆಯಲ್ಲಿ ಶಿಕ್ಷಣ ದೊರೆಯದಿದ್ದರೆ ಮುಂದಿನ ದಿನಗಳು ಕಷ್ಟವಾಗುತ್ತದೆ ಎಂಬ ತಪ್ಪು ಕಲ್ಪನೆಗಳು ಪ್ರತಿ ಪೋಷಕರಲ್ಲೂ ಮೂಡುತ್ತಿವೆ. ಎಲ್ಲಾ ಭಾಷೆಯನ್ನು ಕಲಿಯಬೇಕು. ಯಾವುದೇ ಭಾಷೆಯನ್ನು ಕಡೆಗಣಿಸಬಾರದು. ಆದರೆ ಮೊದಲ ಆದ್ಯತೆ ಕನ್ನಡ ಭಾಷೆಗೆ ನೀಡಬೇಕೆಂದರು.  
  ಕನ್ನಡ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವೇದಿಕೆ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ನಾಗರಾಜ್, ವಿ.ಎಚ್ ಹರೀಶ್‌ಬಾಬು, ಎಸ್.ಕೆ ಗುರುಸ್ವಾಮಿ, ಬಿ. ನಾಗೇಶ್, ಶ್ರೀಧರ್, ಅಶೋಕ್, ಪೀಟರ್, ಗುರು, ಲೋಕೇಶ್ ಶಿವಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


No comments:

Post a Comment