Tuesday, November 24, 2020

ರೈತ ಮುಖಂಡರೊಬ್ಬರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಅಪಪ್ರಚಾರ

ನ್ಯಾಯ ಒದಗಿಸಿಕೊಡಲು ಡಿ.ಬಿ ಹಳ್ಳಿ ನಿವಾಸಿ ಎಂ.ಎಸ್ ಶಿವಕುಮಾರ್ ಮನವಿ

ಭದ್ರಾವತಿ, ನ. ೨೪: ರೈತ ಮುಖಂಡರೊಬ್ಬರ ಕುಮ್ಮಕ್ಕಿನಿಂದ ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಹಾಗು ನನ್ನ ವಿರುದ್ಧ ಇತ್ತೀಚೆಗೆ ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ ಮಾಡಿ ಸುಳ್ಳು ಹೇಳಿಕೆ ನೀಡಲಾಗಿದೆ ಎಂದು ಡಿ.ಬಿ ಹಳ್ಳಿ ನಿವಾಸಿ ಎಂ.ಎಸ್ ಶಿವಕುಮಾರ್ ಆರೋಪಿಸಿದ್ದಾರೆ.
   ಈ ಕುರಿತು ದಾಖಲೆಗಳೊಂದಿಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮದ ರೈತ ಮುಖಂಡರೊಬ್ಬರು ರೈತ ಸಂಘದ ಪ್ರಭಾವದಿಂದ ನನ್ನ ವಿರುದ್ಧ ಇತರರನ್ನು ಬಳಸಿಕೊಂಡು ಪಿತೂರಿ ನಡೆಸುತ್ತಿದ್ದಾರೆ. ನನ್ನ ಮೇಲೆ ಹಲ್ಲೆ, ದೌರ್ಜನ್ಯ, ಕೊಲೆಯತ್ನ ನಡೆಸಲು ಮುಂದಾಗಿದ್ದು, ಇವರ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಪೊಲೀಸ್ ಇಲಾಖೆ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
    ನಮ್ಮ ಆಸ್ತಿಗಳ ಮೇಲೆ ವಿನಾಕಾರಣ ನಗರದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿಸಿದ್ದು, ಇದರ ವಿಚಾರಣೆ ನಡೆದು ತೀರ್ಪು ನಮ್ಮ ಪರವಾಗಿ ಬಂದಿರುತ್ತದೆ. ಮತ್ತೊಂದು ಪ್ರಕರಣದ ವಿಚಾರಣೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಈ ನಡುವೆ ನನ್ನ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಬೆದರಿಕೆ ಹಾಕಿ ಆಸ್ತಿಯನ್ನು ಕಬಳಿಸಲು ಯತ್ನಿಸಲಾಗುತ್ತಿದೆ. ಅಲ್ಲದೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಲಾಗಿದೆ. ಮಾರಶೆಟ್ಟಿಹಳ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಮಾಡಿರುವ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿವೆ ಎಂದು ಆರೋಪಿಸಿದ್ದಾರೆ.
   ನನ್ನ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ದನಾಗಿದ್ದು, ನನಗೆ ನ್ಯಾಯ ಒದಗಿಸಿಕೊಡುವಂತೆ ಶಿವಕುಮಾರ್ ಮನವಿ ಮಾಡಿದ್ದಾರೆ.

No comments:

Post a Comment