Monday, November 30, 2020

ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಿ : ಶಶಿಕುಮಾರ್ ಎಸ್. ಗೌಡ

ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಮನವಿ

ಒಕ್ಕಲಿಗ ಅಭಿವೃದ್ಧಿ ನಿಗಮ ಹಾಗು ರಾಜ್ಯದಲ್ಲಿರುವ ೧೫೦ಕ್ಕೂ ಹೆಚ್ಚು ಸಣ್ಣಪುಟ್ಟ ಸಮುದಾಯಗಳಿಗೂ ನಿಗಮ, ಮಂಡಳಿ ಸ್ಥಾಪಿಸಬೇಕೆಂದು ಒತ್ತಾಯಿಸಿ ಭದ್ರಾವತಿಯಲ್ಲಿ ಸೋಮವಾರ ಸಂಯುಕ್ತ ಜನಾತದಳವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೩೦: ಪ್ರಸ್ತುತ ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗು ಆರ್ಥಿಕವಾಗಿ ಹಿಂದುಳಿದಿದ್ದು, ಈ ಸಮುದಾಯದ ಏಳಿಗೆಗೆ ಮುಖ್ಯಮಂತ್ರಿಗಳು ಒಕ್ಕಲಿಗ ಅಭಿವೃದ್ಧಿ ನಿಗಮ ಹಾಗು ರಾಜ್ಯದಲ್ಲಿರುವ ೧೫೦ಕ್ಕೂ ಹೆಚ್ಚು ಸಣ್ಣಪುಟ್ಟ ಸಮುದಾಯಗಳಿಗೂ ನಿಗಮ, ಮಂಡಳಿ ಸ್ಥಾಪಿಸಬೇಕೆಂದು ಸಂಯುಕ್ತ ಜನಾತದಳ ಒತ್ತಾಯಿಸುತ್ತದೆ ಎಂದು ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ತಿಳಿಸಿದರು.
   ಸೋಮವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ, ಮೈಸೂರು ಸಂಸ್ಥಾನದ ಪಿಟೀಲ್ ವಾದಕ ಚೌಡಯ್ಯ, ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ರಾಷ್ಟ್ರಕವಿ ಕುವೆಂಪು, ಚಲನಚಿತ್ರ ನಟ ಅಂಬರೀಷ್, ಹೃದಯ ತಜ್ಞ ಡಾ. ಮಂಜುನಾಥ್ ಸೇರಿದಂತೆ ಒಕ್ಕಲಿಗ ಸಮುದಾಯದ ಅನೇಕ ಮಹಾನ್ ವ್ಯಕ್ತಿಗಳು ನಾಡಿನಲ್ಲಿ ಜಾತಿ, ಧರ್ಮ ಮೀರಿದ ಸೇವೆಯನ್ನು ಸಲ್ಲಿಸಿರುತ್ತಾರೆ. ಕೃಷಿ, ಆರೋಗ್ಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ, ರಂಗಭೂಮಿ, ಸಿನಿಮಾ, ಕೈಗಾರಿಕೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.
    ರಾಜ್ಯದಲ್ಲಿ ಮೂರನೇ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿರುವ ಒಕ್ಕಲಿಗ ಸಮಾಜ ಪ್ರಸ್ತುತ ಸಂಕಷ್ಟಕ್ಕೆ ಒಳಗಾಗಿದೆ. ನಾಡಿಗೆ ಅನ್ನಕೊಟ್ಟ ಒಕ್ಕಲಿಗ ರೈತಾಪಿ ವರ್ಗ ಅತಿವೃಷ್ಠಿ, ಅನಾವೃಷ್ಠಿ ಹಾಗು ಕೊರೋನಾದಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ. ಅಲ್ಲದೆ ಈ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಈ ಹಿನ್ನಲೆಯಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಅನಿವಾರ್ಯವಾಗಿದೆ ಎಂದರು.
    ಇದೆ ರೀತಿ ರಾಜ್ಯದಲ್ಲಿರುವ ಸುಮಾರು ೧೫೦ಕ್ಕೂ ಹೆಚ್ಚು ಸಣ್ಣಪುಟ್ಟ ಸಮುದಾಯಗಳಿಗೂ ನಿಗಮ ಮಂಡಳಿ ಸ್ಥಾಪಿಸುವ ಮೂಲಕ ಎಲ್ಲಾ ಸಮುದಾಯಗಳು ಹಂತ ಹಂತವಾಗಿ ಅಭಿವೃದ್ದಿ ಹೊಂದಲು ಸಹಕರಿಸಬೇಕೆಂದು ಮನವಿ ಮಾಡಿದರು.
     ಪಕ್ಷ ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಬಂಜಾರ ಯುವ ಘಟಕದ ಅಧ್ಯಕ್ಷ ಕೃಷ್ಣನಾಯ್ಕ್, ಮುಖಂಡರಾದ ವೆಂಕಟೇಶ್, ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment