ಭದ್ರಾವತಿ ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿರುವ ಕನಕಮಂಟಪ ಮೈದಾನದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಗುಂಪು ಸೇರಿರುವುದು.
ಭದ್ರಾವತಿ, ಡಿ. ೩೦: ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳ ೩೭೫ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಮಧ್ಯಾಹ್ನ ೧ ಗಂಟೆ ವೇಳೆಗೆ ಶೇ.೫೦ರಷ್ಟು ಫಲಿತಾಂಶ ಹೊರಬಿದ್ದಿದೆ.
ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು. ಫಲಿತಾಂಶದ ಪ್ರಕಾರ ಕೆಲವು ಕ್ಷೇತ್ರಗಳಲ್ಲಿ ಈ ಹಿಂದಿನ ಸದಸ್ಯರೇ ಪುನಃ ಆಯ್ಕೆಯಾಗಿದ್ದಾರೆ. ಯರೇಹಳ್ಳಿ ಗ್ರಾ.ಪಂ. ಕೊರಲಕೊಪ್ಪ ಕ್ಷೇತ್ರ-೨ರಿಂದ ಸಿ.ಆರ್ ಶಿವರಾಮ್ ಮತ್ತು ಮಾವಿನಕೆರೆ ಗ್ರಾ.ಪಂ. ಕೆಂಚೇನಹಳ್ಳಿ ಕ್ಷೇತ್ರ-೫ರಿಂದ ಸುರೇಶ್ ತಲಾ ೪ನೇ ಬಾರಿಗೆ, ಅಂತರಗಂಗೆ ಗ್ರಾ.ಪಂ. ಕ್ಷೇತ್ರ-೧ರಿಂದ ಬಿ. ನಾಗೇಶ್ ಮತ್ತು ಯರೇಹಳ್ಳಿ ಗ್ರಾ.ಪಂ. ಕ್ಷೇತ್ರ-೧ರಿಂದ ಈ ಚಂದ್ರಶೇಖರ್ ಹಾಗು ಕ್ಷೇತ್ರ-೩ರಿಂದ ಎನ್. ಉಮೇಶ್ ತಲಾ ೩ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಹಿರಿಯೂರು ಗ್ರಾ.ಪಂ.ಯಲ್ಲಿ ಗಂಗಮ್ಮ ೪ನೇ ಬಾರಿಗೆ ಮತ್ತು ಪವಿತ್ರ ಜಿ. ಮಂಜುನಾಥ್ ೨ನೇ ಬಾರಿಗೆ, ಸಿಂಗನಮನೆ ಗ್ರಾ.ಪಂ.ಯಲ್ಲಿ ಗಿರೀಶ್ ಮತ್ತು ಪ್ರವೀಣ್ ಮರು ಆಯ್ಕೆಯಾಗಿದ್ದಾರೆ. ಇದೆ ರೀತಿ ಬಹುತೇಕ ಕ್ಷೇತ್ರಗಳಲ್ಲಿ ಈ ಹಿಂದಿನ ಸದಸ್ಯರೇ ಪುನಃ ಆಯ್ಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಗಮನ ಸೆಳೆದ ಗ್ರಾಮ ಪಂಚಾಯಿತಿ:
ಈ ಬಾರಿ ಚುನಾವಣೆಯಲ್ಲಿ ಯರೇಹಳ್ಳಿ ಪಂಚಾಯಿತಿ ಹಲವು ವಿಶೇಷತೆಗಳಿಂದ ಎಲ್ಲರ ಗಮನ ಸೆಳೆದಿದೆ. ಮುಖ್ಯವಾಗಿ ಕುಟುಂಬ ಸದಸ್ಯರ ಸ್ಪರ್ಧೆಯಲ್ಲಿ ಒಂದು ಕ್ಷೇತ್ರದಲ್ಲಿ ಅಪ್ಪ ಸಿ.ಆರ್ ಶಿವರಾಂ ಗೆಲುವು ಸಾಧಿಸಿದರೇ, ಮತ್ತೊಂದು ಕ್ಷೇತ್ರದಲ್ಲಿ ಮಗ ರಘು ಸೋಲು ಕಂಡಿದ್ದಾರೆ. ಇದೆ ರೀತಿ ಎಪಿಎಂಸಿ ನಿರ್ದೇಶಕ ಎನ್. ಉಮೇಶ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೇ, ಮತ್ತೊಂದು ಕ್ಷೇತ್ರದಲ್ಲಿ ಇವರ ನಾದಿನಿ(ತಮ್ಮನ ಪತ್ನಿ) ಗೆಲುವು ಸಾಧಿಸಿದ್ದಾರೆ. ಅಲ್ಲದೆ ಈ ಗ್ರಾಮ ಪಂಚಾಯಿತಿ ಹಿಂದಿನ ಅವಧಿಯ ೩ ಸದಸ್ಯರು ಮರು ಆಯ್ಕೆಯಾಗಿದ್ದಾರೆ.
ಬಹತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಗರ ಗೆಲುವು:
ನಿರೀಕ್ಷೆಯಂತೆ ಈ ಬಾರಿ ಚುನಾವಣೆಯಲ್ಲೂ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಷ್ಠೆ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಅನುಕಂಪದ ಅಲೆ ಕಂಡು ಬಂದಿದ್ದು, ಕೂಡ್ಲಿಗೆರೆ, ಹಿರಿಯೂರು ಮತ್ತು ಸಿಂಗನಮನೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕಳೆದ ಬಾರಿಗಿಂತ ಫಲಿತಾಂಶದಲ್ಲಿ ಸ್ವಲ್ಪ ಸುಧಾರಣೆ ಕಾಯ್ದುಕೊಂಡಿದೆ ಎನ್ನಲಾಗಿದೆ.
೨ ಮತ ಅಂತರದಿಂದ ಗೆಲುವು : ಮರು ಮತದಾನಕ್ಕೆ ಮನವಿ
ತಡಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭ್ಯರ್ಥಿಯೊಬ್ಬರು ೨ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಹಿನ್ನಲೆಯಲ್ಲಿ ಎದುರಾಳಿ ಅಭ್ಯರ್ಥಿ ಮರು ಎಣಿಕೆ ಮಾಡುವಂತೆ ಒತ್ತಾಯಿಸಿ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅರಹತೊಳಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಪತ್ರಕರ್ತ ರಂಗನಾಥ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ತಾಲೂಕಿನ ಸಿಂಗನ ಮನೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುತ್ತಿಗೆ ಕೆಲಸ ಮಾಡುವ ವ್ಯಕ್ತಿಯೋರ್ವನ ಪತ್ನಿ ಲಕ್ಷ್ಮಿ ಎಂಬುವರು ಇದೆ ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ. ಇದೆ ಮೊದಲ ಬಾರಿಗೆ ಪೊಲೀಸ್ ಉಮೇಶ್ ನೇತೃತ್ವದ ಸ್ನೇಹ ಜೀವಿ ಬಳಗದಿಂದ ಒಟ್ಟು ೧೬ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಈ ಪೈಕಿ ಕಲ್ಲಹಳ್ಳಿ ಕ್ಷೇತ್ರದಿಂದ ಕೆ.ವಿ ಧನಂಜಯ, ನಾಗತಿ ಬೆಳಗಲು ಕ್ಷೇತ್ರದಿಂದ ಲಕ್ಷ್ಮಮ್ಮ ಮತ್ತು ಮಂಜುಳ ಹಾಗು ಬಿಆರ್‌ಪಿಯಲ್ಲಿ ಲತಾ ಒಟ್ಟು ೪ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದಂತೆ ೧೦ ಕ್ಷೇತ್ರಗಳಲ್ಲಿ ೨ನೇ ಸ್ಥಾನ ಕಾಯ್ದುಕೊಂಡು ಗಮನೆ ಸೆಳೆದಿದೆ.
ತಾಲೂಕಿನ ೩೫ ಗ್ರಾ.ಪಂ. ವ್ಯಾಪ್ತಿಯ ಒಟ್ಟು ೧೬೫ ಕ್ಷೇತ್ರಗಳ ೪೧೯ ಸ್ಥಾನಗಳ ಪೈಕಿ ೪೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ೩೭೫ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆಯ್ಕೆಯಾಗಿದ್ದಾರೆ. ಒಟ್ಟು ೧೦೭೦ ಅಭ್ಯರ್ಥಿಗಳು ಕಣದಲ್ಲಿದ್ದರು.
ಒಟ್ಟು ೭೫ ಟೇಬಲ್‌ಗಳ ಎಣಿಕೆ ನಡೆದಿದ್ದು, ಒಂದು ಟೇಬಲ್‌ನಲ್ಲಿ ತಲಾ ಇಬ್ಬರು ಎಣಿಕೆಗಾರರಂತೆ ಒಟ್ಟು ೧೫೦ ಎಣಿಕೆಗಾರರು, ೭೫ ಮಂದಿ ಮೇಲ್ವಿಚಾರಕರು ಸೇರಿದಂತೆ ೨೨೫ ಮಂದಿ ಹಾಗು ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿಗಳು ಹಾಗು ಭದ್ರತೆಗಾಗಿ ಸುಮಾರು ೧೨೦ ಮಂದಿ ಪೊಲೀಸ್ ಸಿಬ್ಬಂದಿಗಳು ಸಹ ಕರ್ತವ್ಯದಲ್ಲಿ ಪಾಲ್ಗೊಂಡಿದ್ದರು. ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿರುವ ಕನಕಮಂಟಪ ಮೈದಾನದಲ್ಲಿ ಬೆಂಬಲಿಗರು ಸಂಭ್ರಮಿಸಿದರು.
ಭದ್ರಾವತಿ ಯರೇಹಳ್ಳಿ ಗ್ರಾ.ಪಂ. ಕೊರಲಕೊಪ್ಪ ಕ್ಷೇತ್ರ-೨ರಿಂದ ೪ನೇ ಬಾರಿಗೆ ಆಯ್ಕೆಯಾಗಿ ಗಮನ ಸೆಳೆದಿರುವ ಅಭ್ಯರ್ಥಿ ಸಿ.ಆರ್ ಶಿವರಾಮ್.
No comments:
Post a Comment