Monday, January 4, 2021

ಕೈಗಾರಿಕಾ ಉದ್ದೇಶಕ್ಕೆ ಮೀಸಲಿಟ್ಟ ಕೆರೆ ಜಾಗದಲ್ಲಿ ಅಕ್ರಮ ಬಡಾವಣೆ ನಿರ್ಮಾಣ

ನೈಜತೆ ತಿಳಿಯಲು ಸೂಕ್ತ ತನಿಖೆಗೆ ಆಗ್ರಹಿಸಿ ಮನವಿ

ಭದ್ರಾವತಿ ಸರ್ವೆ ನಂ.೫೭ರ ಸೀಗೆಬಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದಲ್ಲಿರುವ ಬೆಂಡಿಕಟ್ಟೆ ಕೆರೆ ಜಾಗದಲ್ಲಿ ಹೊಸದಾಗಿ ಬಡಾವಣೆ ನಿರ್ಮಿಸಿರುವುದು.
    ಭದ್ರಾವತಿ, ಜ. ೪: ಕೈಗಾರಿಕಾ ಉದ್ದೇಶಕ್ಕೆ ಬಳಸಿಕೊಳ್ಳಲು ಮಂಜೂರಾತಿಯಾಗಿರುವ ಕೆರೆ ಜಾಗದಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಹಿನ್ನಲೆಯಲ್ಲಿ ಇದರ ನೈಜತೆ ಕಂಡುಕೊಳ್ಳಲು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಕೆ.ಸಿ ಪುರಷೋತ್ತಮ್‌ರವರಿಗೆ ಮನವಿ ಸಲ್ಲಿಸಲಾಗಿದೆ.
    ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೭೦ ಕೆರೆಗಳಿದ್ದು, ಬಹಳ ವರ್ಷಗಳ ನಂತರ ನಗರಸಭೆ ಪೌರಾಯುಕ್ತ ಮನೋಹರ್‌ರವರು ಕೆರೆಗಳನ್ನು ಅಭಿವೃದ್ಧಿಪಡಿಸುವ ಹಿನ್ನಲೆಯಲ್ಲಿ ತಾಲೂಕು ಆಡಳಿತದೊಂದಿಗೆ ಬೌಂಡರಿ ನಿಗದಿಪಡಿಸುತ್ತಿದ್ದು, ಕೆರೆಗಳ ಪಹಣಿ ಪರಿಶೀಲನೆ ಸಂದರ್ಭದಲ್ಲಿ ಸರ್ವೆ ನಂ.೫೭ರ ಸೀಗೆಬಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದಲ್ಲಿರುವ ಬೆಂಡಿಕಟ್ಟೆ ಕೆರೆ ಸುಮಾರು ೫ ಎಕರೆ ೧ ಗುಂಟೆ ವಿಸ್ತೀರ್ಣ ಹೊಂದಿರುವುದು ತಿಳಿದು ಬಂದಿದೆ. ಈ ನಡುವೆ ಸುಮಾರು ೩ ಎಕರೆ ಜಾಗವನ್ನು ಕೈಗಾರಿಕಾ ಉದ್ದೇಶಕ್ಕೆ ಬಿಟ್ಟುಕೊಡಲಾಗಿದೆ. ಆದರೆ ಈ ಜಾಗದಲ್ಲಿ ಖಾಸಗಿಯವರು ಬಡಾವಣೆ ನಿರ್ಮಿಸಿ ವಿತರಿಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ಜಾಗದ ಕುರಿತು ಸಾರ್ವಜನಿಕರಿಗೆ ದಿಗ್ಬ್ರಮೆ ಉಂಟಾಗಿದೆ. ತಕ್ಷಣ ಸಾರ್ವಜನಿಕರಿಗೆ ಉಂಟಾಗಿರುವ ದಿಗ್ಬ್ರಮೆ ದೂರ ಮಾಡಲು ಸೂಕ್ತ ತನಿಖೆ ಕೈಗೊಂಡು ನೈಜತೆ ತಿಳಿಸಬೇಕಾಗಿದೆ ಎಂದು ಮನವಿ ಮಾಡಲಾಗಿದೆ.
     ಇದೆ ರೀತಿ ಶಿವಮೊಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದು, ಬಡಾವಣೆ ನಿರ್ಮಾಣದ ಬಗ್ಗೆ ನೈಜತೆ ತಿಳಿಯಲು ಸೂಕ್ತ ತನಿಖೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರಾಧಿಕಾರ ಬಡಾವಣೆ ಮಾಲೀಕರಿಗೆ ನೀಡಿರುವ ತತ್ಕಾಲಿಕ ನಕ್ಷೆ ಅನುಮೋದನೆ ತಡೆಹಿಡಿಯುವಂತೆ ಟ್ರಸ್ಟ್ ಛೇರ‍್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕೋರಿದ್ದಾರೆ.

No comments:

Post a Comment