ಭದ್ರಾವತಿ, ಜ. ೧೨: ಕರ್ತವ್ಯ ಲೋಪ ವೆಸಗಿರುವ ಅರಣ್ಯ ಇಲಾಖೆ ಮಾವಿನಕಟ್ಟೆ ವಲಯ(ಶಾಂತಿ ಸಾಗರ)ದ ವಲಯ ಅರಣ್ಯಾಧಿಕಾರಿ ಮಾವಿನ ಹೊಳೆಯಪ್ಪರವರನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಕುಮಾರ್ ಶೆಟ್ಟಿ ಬಣ) ತಾಲೂಕು ಘಟಕದ ವತಿಯಿಂದ ಜ.೧೩ರಂದು ಬೆಳಿಗ್ಗೆ ೧೦.೩೦ಕ್ಕೆ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಆರ್‌ಎಫ್‌ಓ ಮಾವಿನ ಹೊಳೆಯಪ್ಪರವರು ಸುಮಾರು ೨ ತಿಂಗಳ ಹಿಂದೆ ಅರಣ್ಯ ಇಲಾಖೆಯ ದಿನಗೂಲಿ/ಪಿ.ಸಿ.ಪಿ ನೌಕರರನ್ನು ವಲಯದ ವ್ಯಾಪ್ತಿ ಮೀರಿ ತಮ್ಮ ಸ್ವಂತ ಜಮೀನಿನಲ್ಲಿ ಜೋಳ ಮುರಿದು ತುಂಬಿಸುವ ಕೆಲಸದಲ್ಲಿ ತೊಡಗಿಸಿಕೊಂಡು ಕರ್ತವ್ಯ ಲೋಪವೆಸಗಿದ್ದಾರೆ. ಈ ಕುರಿತು ವಿಡಿಯೋ ಚಿತ್ರೀಕರಣ ಹಾಗು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಸ್ಥಳ ಮಹಜರು ನಡೆಸಿ ದೂರು ಸಲ್ಲಿಸಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಮಾವಿನ ಹೊಳೆಯಪ್ಪನವರು ಈ ಹಿಂದೆ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿ ಅಮಾನತ್ತುಗೊಂಡು ಪುನಃ ಮಾವಿನಕಟ್ಟೆ ವಲಯಕ್ಕೆ ಬಂದಿದ್ದು, ಇವರ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಮಾಡಿ ಹಣ ಸುಲಿಗೆ ಮಾಡುತ್ತಿರುವುದು, ಅರಣ್ಯದಲ್ಲಿರುವ ಕೆಮ್ಮಣ್ಣು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಸೇರಿದಂತೆ ಹಲವು ದೂರುಗಳಿವೆ. ಈ ಹಿನ್ನಲೆಯಲ್ಲಿ ಇವರನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
No comments:
Post a Comment