ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ನೇತೃತ್ವದಲ್ಲಿ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ
ಭದ್ರಾವತಿ, ಜ. ೧೨: ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಗರದ ನಿವೃತ್ತ ಪ್ರಾಧ್ಯಾಪಕಿ, ಸಾಹಿತಿ ಡಾ. ಎಸ್.ಎಸ್ ವಿಜಯದೇವಿ ಆಯ್ಕೆಯಾಗಿದ್ದು, ಮಂಗಳವಾರ ಅವರನ್ನು ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ನೇತೃತ್ವದಲ್ಲಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಬಿ ಶಂಕರಪ್ಪ, ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಸಮ್ಮೇಳನದ ಆಹ್ವಾನ ಪತ್ರಿಕೆಗಳಿಂದಲೇ ಅದರ ವಿಶೇಷತೆಗಳನ್ನು ಕಂಡುಕೊಳ್ಳಬಹುದಾಗಿದೆ. ಎಲ್ಲವನ್ನು ಕ್ರಮಬದ್ಧವಾಗಿ, ವ್ಯವಸ್ಥಿತವಾಗಿ ರೂಪಿಸುವ, ಯೋಚಿಸುವ ಪರಿ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಡಾ.ಎಸ್.ಎಸ್ ವಿಜಯದೇವಿಯವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವುದು ಅವರಲ್ಲಿನ ವೈಶಿಷ್ಟತೆಯಾಗಿದೆ ಎಂದರೆ ತಪ್ಪಾಗಲಾರದು ಎಂದರು.
ಪರಿಷತ್ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ಮಾತನಾಡಿ, ಡಾ. ಎಸ್.ಎಸ್ ವಿಜಯದೇವಿಯವರು ಉಪನ್ಯಾಸಕರಾಗಿ, ಅಧ್ಯಾಪಕರಾಗಿ ಸೇವೆ ಸಲ್ಲಿಸುವ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರಲ್ಲಿನ ಪ್ರತಿಭೆ ಬಹಳಷ್ಟು ಎತ್ತರಕ್ಕೆ ಅವರನ್ನು ಕೊಂಡ್ಯೊಯ್ದಿದೆ. ಅವರನ್ನು ಈ ಬಾರಿಯ ೧೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನಗರದ ಜನರಲ್ಲಿ ಸಂಭ್ರಮವನ್ನುಂಟು ಮಾಡಿದೆ ಎಂದರೆ ತಪ್ಪಾಗಲಾರದು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಎಂ.ಎನ್ ಸುಂದರ್‌ರಾಜ್, ಎಸ್. ರುದ್ರಮುನಿ ಸಜ್ಜನ್, ಎಸ್.ವಿ ಚಂದ್ರಕಲಾ ಅರಸ್, ರಂಜನಿ ದತ್ತಾತ್ರಿ, ಮಮತಾ ಹೆಗಡೆ, ತಾಲೂಕು ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಕಾರ್ಯದರ್ಶಿ ಸಿ. ಚನ್ನಪ್ಪ, ಸಿದ್ದಲಿಂಗಯ್ಯ, ಅರಳೇಹಳ್ಳಿ ಅಣ್ಣಪ್ಪ, ನಾಗರತ್ನ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment