ತಾಲೂಕು ಬ್ರಾಹ್ಮಣ ಸಭಾ ಖಂಡನೆ
ಎಂ.ಎಸ್ ಜನಾರ್ಧನ ಅಯ್ಯಂಗಾರ್
ಭದ್ರಾವತಿ, ಫೆ. ೨೪: ಇತ್ತೀಚೆಗೆ ಬಿಡುಗಡೆಯಾದ ಪೊಗರು ಕನ್ನಡ ಚಲನಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅತ್ಯಂತ ಅವಮಾನವೀಯವಾಗಿ ಚಿತ್ರಿಸಿ, ಬ್ರಾಹ್ಮಣ ಸಮಾಜಕ್ಕೆ ಹಾಗು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಇದನ್ನು ತಾಲೂಕು ಬ್ರಾಹ್ಮಣ ಸಭಾ ಖಂಡಿಸುತ್ತದೆ ಎಂದು ಸಭಾ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್ ತಿಳಿಸಿದ್ದಾರೆ.
ಈ ಸಂಬಂಧ ಸಭಾ ಕಛೇರಿಯಲ್ಲಿ ಸಭೆ ನಡೆಸಲಾಗಿದ್ದು, ಬ್ರಾಹ್ಮಣರು ಪ್ರತಿಭಟಿಸುವುದಿಲ್ಲ ಹಾಗು ಅವರಲ್ಲಿ ಐಕ್ಯತೆ ಇಲ್ಲ ಎಂಬ ಭಾವನೆಯಿಂದ ಪೊಗರು ಚಿತ್ರದಲ್ಲಿ ಅವಮಾನವೀಯವಾಗಿ ಚಿತ್ರಿಸಿ ಕ್ರೌರ ಮೆರೆಯಲಾಗಿದೆ. ಚಲನಚಿತ್ರಗಳು ಮನೋರಂಜನೆಯೊಂದಿಗೆ ಜನರಲ್ಲಿ ಸಾಮಾಜಿಕ ಹಾಗು ಧಾರ್ಮಿಕ ಅರಿವು ಮೂಡಿಸಬೇಕೇ ಹೊರತು ಧಾರ್ಮಿಕ ಮತ್ತು ಜಾತಿ ನಿಂದನೆ ಮಾಡುವುದು, ಅವಮಾನಿಸುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಚಿತ್ರದ ನಿರ್ಮಾಪಕರು, ನಿರ್ದೇಶಕರು ಚಿತ್ರದಲ್ಲಿರುವ ಅವಮಾನವೀಯ ಭಾಗವನ್ನು ತೆಗೆದು ಹಾಕಬೇಕು. ಇದೆ ರೀತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಾಹ್ಮಣ ಅರ್ಚಕ ಸಮುದಾಯದವರನ್ನು ಅವಮಾನಿಸಿದ್ದು, ಈ ಹಿನ್ನಲೆಯಲ್ಲಿ ಅವರು ತಕ್ಷಣ ಬಹಿರಂಗವಾಗಿ ಸಮುದಾಯದ ಕ್ಷಮೆಯಾಚಿಸಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ರಮಾಕಾಂತ್, ಕಾರ್ಯದರ್ಶಿ ಜಿ. ರಮೇಶ್, ಖಜಾಂಚಿ ಮಂಜುನಾಥ್, ಇಂದ್ರಸೇನ್, ಪ್ರಭಾಕರ್ ಜೋಯ್ಸ್, ನರಸಿಂಹಸ್ವಾಮಿ, ನೀಲಕಂಠ ಜೋಯ್ಸ್, ರಾಜಶೇಖರ್, ಎನ್. ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರೆಂದು ಅಯ್ಯಂಗಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
No comments:
Post a Comment