Monday, February 1, 2021

೩ ವರ್ಷದ ಮಗುವಿನ ಬುದ್ದಿಮತ್ತೆಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಪ್ರಶಸ್ತಿ

ಬೆರಗಾದ ಶಾಸಕ ಬಿ.ಕೆ ಸಂಗಮೇಶ್ವರ್, ಮಗುವಿನ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಿನ ಭರವಸೆ

 ಭದ್ರಾವತಿ ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ ಪ್ರದೀಪ್ ಮತ್ತು ಸಿಂಧುರವರ ೩ ವರ್ಷದ ಹೆಣ್ಣು ಮಗು ಪ್ರತೀಕ್ಷ ಬುದ್ದಿಮತ್ತೆ ಸಾಧನೆಗೆ ಲಭಿಸಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ವಿತರಿಸಿದರು.
ಭದ್ರಾವತಿ, ಫೆ. ೧: ಕೆಲವು ಮಕ್ಕಳಿಗೆ ೩ ವರ್ಷ ಕಳೆದರೂ ಸಹ ಸರಿಯಾಗಿ ಮಾತು ಬರುವುದಿಲ್ಲ. ಇನ್ನೂ ಕೆಲವು ಮಕ್ಕಳಿಗೆ ದಿನದ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವಷ್ಟು ಬುದ್ದಿಮತ್ತೆ  ಸಹ ಇರುವುದಿಲ್ಲ. ಆದರೆ ಇಲ್ಲೊಂದು ೩ ವರ್ಷದ ಮಗುವಿನ ಬುದ್ದಿಮತ್ತೆ ಎಲ್ಲರನ್ನು ಬೆರಗುಗೊಳಿಸಿದೆ. ಹಲವು ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೊಂಡಿರುವ ಈ ಮಗುವಿನ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-೨೦೨೧ ಪ್ರಶಸ್ತಿ ಲಭಿಸಿದೆ.

ಎಲ್ಲಾ ಪೋಷಕರು ಸಹ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕೇವಲ ೩ ವರ್ಷದ ಮಗುವಿನ ಸಾಧನೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಈ ಮಗು ಇತರೆ ಮಕ್ಕಳಿಗೆ ಮಾದರಿಯಾಗಿದೆ. ಈ ಮಗುವಿನ ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ನೆರವು ನೀಡುತ್ತೇನೆ.
    - ಬಿ.ಕೆ ಸಂಗಮೇಶ್ವರ್, ಶಾಸಕರು, ಭದ್ರಾವತಿ.


ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ ಪ್ರದೀಪ್ ಮತ್ತು ಸಿಂಧುರವರ ೩ ವರ್ಷದ ಹೆಣ್ಣು ಮಗು ಪ್ರತೀಕ್ಷ ಸಾಧನೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಬೆರಗುಗೊಂಡಿದ್ದಾರೆ. ರಾಷ್ಟ್ರಗೀತೆ, ವಾರದ ೭ ದಿನಗಳ ಹೆಸರು, ೧೨ ತಿಂಗಳುಗಳ ಹೆಸರು, ೪ ರಾಷ್ಟ್ರೀಯ ಚಿಹ್ನೆಗಳು ಮತ್ತು ೧೪ ವಾಹನಗಳು ಹಾಗು ಮನುಷ್ಯನ ದೇಹದ ಅಂಗಾಂಗಗಳ ಗುರುತಿಸುವಿಕೆ, ೯ ರಾಷ್ಟ್ರೀಯ ಆಟಗಳ ಹೆಸರು ಹೀಗೆ ಹಲವು ವಿಷಯಗಳು ಕೇಳಿದ ತಕ್ಷಣ ಪಟ ಪಟನೆ ಪಟಾಕಿಯಂತೆ ಹೊರ ಬರುತ್ತವೆ ಈ ಮಗುವಿನ ಜ್ಞಾನ ಭಂಡಾರದಿಂದ.
ಉಕ್ಕುಂದ ಗ್ರಾಮ ಅರಣ್ಯ ವ್ಯಾಪ್ತಿಯ ಗ್ರಾಮೀಣ ಪ್ರದೇಶವಾಗಿದ್ದು, ನಗರ ಪ್ರದೇಶದಿಂದ ಸುಮಾರು ೧೦ ಕಿ.ಮೀ ದೂರದಲ್ಲಿದೆ. ಈ ಗ್ರಾಮಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಸಹ ಇಲ್ಲ. ಆನೆ, ಕರಡಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಯಿಂದ ಸದಾ ಇಲ್ಲಿನ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ. ಈ ಗ್ರಾಮದಲ್ಲಿಯೇ ಹುಟ್ಟಿ ಬೆಳೆದಿರುವ ತಂದೆ ಪ್ರದೀಪ್ ಪದವಿ ಪೂರೈಸಿದ್ದು, ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಉಳಿದಂತೆ ಪತ್ನಿ ಮನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಇಬ್ಬರು ಹೆಣ್ಣು ಮಕ್ಕಳು, ತಾಯಿಯೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಒಟ್ಟು ೫ ಜನರನ್ನು ಹೊಂದಿರುವ ಕುಟುಂಬಕ್ಕೆ ಮನೆ ಮನೆಗೆ ಹಾಲು ವಿತರಣೆ ಹಾಗು ಕೂಲಿ ಕೆಲಸವೇ ಆಧಾರವಾಗಿದೆ.

 ಮಗುವಿನ ಸಾಧನೆಯಿಂದ ಗ್ರಾಮಕ್ಕೆ ಮತ್ತಷ್ಟು ಹಿರಿಮೆ ಬಂದಿದ್ದು, ಬಾಲ್ಯದಿಂದಲೂ ಒಡನಾಟ ಹೊಂದಿರುವ ತಂದೆ ಪ್ರದೀಪ್ ಪದವಿ ಓದಿದ್ದರೂ ಸಹ ಕೂಲಿ ಕೆಲಸ ಮಾಡುವ ಮೂಲಕ ಗ್ರಾಮದಲ್ಲಿಯೇ ಉಳಿದುಕೊಂಡಿದ್ದಾರೆ. ಈ ಬಡ ಕುಟುಂಬಕ್ಕೆ ಹೆಚ್ಚಿನ ನೆರವಿನ ಅಗತ್ಯವಿದೆ.
                     - ಶಿವಕುಮಾರ್, ಗ್ರಾಮಸ್ಥ ಹಾಗು ಸಾಮಾಜಿಕ ಹೋರಾಟಗಾರ, ಉಕ್ಕುಂದ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗೆ ಭಾಜನಳಾಗಿರುವ ಪ್ರತೀಕ್ಷಳ ಮುಂದಿನ ವಿದ್ಯಾಭ್ಯಾಸ ಪೋಷಕರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ಮಗುವಿನ ಸಾಧನೆ  ಗ್ರಾಮದಲ್ಲಿ ಹಬ್ಬದ ಸಂಭ್ರಮವನ್ನುಂಟು ಮಾಡಿದೆ. ಕೆಲವು ದಿನಗಳ ಹಿಂದೆಯೇ ಪ್ರಶಸ್ತಿ ಘೋಷಣೆಯಾಗಿರುವ ಬಗ್ಗೆ ಪೋಷಕರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾಹಿತಿ ನೀಡಿತ್ತು. ಇದೀಗ ಪದಕ ಮತ್ತು ಪ್ರಶಸ್ತಿ ಪತ್ರ ಲಭಿಸಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಮಗುವಿಗೆ ಪದಕ ಮತ್ತು ಪ್ರಶಸ್ತಿ ಪದಕ ವಿತರಿಸಿದರು.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


No comments:

Post a Comment