ಅಂಬ್ಯುಲೆನ್ಸ್ ಜೊತೆಗೆ ೧೧೨ ವಾಹನ ಸದುಪಯೋಗಕ್ಕೆ ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಕರೆ
ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಹಜರತ್ ಸೈಯದ್ ಸಾದತ್ ಷಾ ಖಾದ್ರಿ ದರ್ಗಾ ಕಮಿಟಿ ವತಿಯಿಂದ ಸಾಮಾಜಿಕ ಸೇವಾ ಯೋಜನೆಯಡಿ ಉಚಿತವಾಗಿ 'ತುರ್ತು ಅಂಬ್ಯುಲೆನ್ಸ್ ಸೇವೆಗೆ' ಸೋಮವಾರ ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಚಾಲನೆ ನೀಡಿದರು.
ಭದ್ರಾವತಿ, ಫೆ. ೧: ದುರ್ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ತುರ್ತು ಸೇವೆಗಳಿಗೆ ಅಂಬ್ಯುಲೆನ್ಸ್‌ಗಳು ಅಗತ್ಯವಾಗಿದ್ದು, ಸಾರ್ವಜನಿಕರು ಉಚಿತ ಅಂಬ್ಯುಲೆನ್ಸ್ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಹೇಳಿದರು.
ಅವರು ಸೋಮವಾರ ನಗರದ ತರೀಕೆರೆ ರಸ್ತೆಯಲ್ಲಿರುವ ಹಜರತ್ ಸೈಯದ್ ಸಾದತ್ ಷಾ ಖಾದ್ರಿ ದರ್ಗಾ ಕಮಿಟಿ ವತಿಯಿಂದ ಸಾಮಾಜಿಕ ಸೇವಾ ಯೋಜನೆಯಡಿ ಉಚಿತವಾಗಿ 'ತುರ್ತು ಅಂಬ್ಯುಲೆನ್ಸ್ ಸೇವೆಗೆ' ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಅಂಬ್ಯುಲೆನ್ಸ್‌ಗಳ ಸೇವೆ ಅನಿವಾರ್ಯವಾಗಿದೆ. ಕಮಿಟಿ ವತಿಯಿಂದ ಕೈಗೊಂಡಿರುವ ಕಾರ್ಯ ಅಭಿನಂದನಾರ್ಹವಾಗಿದ್ದು, ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಪೊಲೀಸ್ ಇಲಾಖೆ ವತಿಯಿಂದ ಸಹ ತುರ್ತು ವಾಹನ ಸೌಲಭ್ಯ:
ಪೊಲೀಸ್ ಇಲಾಖೆ ಸಹ ಎಲ್ಲಾ ರೀತಿಯ ತುರ್ತು ಸಂದರ್ಭಗಳಿಗೆ ನೆರವಾಗುವಂತೆ ನೂತನವಾಗಿ ೧೧೨ ವಾಹನ ಸೇವೆಗೆ ಚಾಲನೆ ನೀಡಿದೆ. ಪ್ರಸ್ತುತ ಭದ್ರಾವತಿ ತಾಲೂಕಿನಲ್ಲಿ ನಗರ, ಗ್ರಾಮಾಂತರ ಹಾಗು ಹೊಳೆಹೊನ್ನೂರು ಭಾಗ ಒಟ್ಟು ೩ ವಾಹನಗಳನ್ನು ಮೀಸಲಿಡಲಾಗಿದೆ. ಈ ವಾಹನಗಳು ದಿನದ ೨೪ ಗಂಟೆ ಕಾರ್ಯ ನಿರ್ವಹಿಸಲಿದೆ. ಯಾವುದೇ ರೀತಿಯ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ೧೧೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
ನಗರಸಭೆ ಪೌರಾಯುಕ್ತ ಮನೋಹರ್ ಮಾತನಾಡಿ, ನಗರಸಭೆ ವತಿಯಿಂದ ಕಮಿಟಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಬದ್ದವಾಗಿದ್ದೇನೆ. ಈಗಾಗಲೇ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹಜರತ್ ಸೈಯದ್ ಸಾದತ್ ಷಾ ಖಾದ್ರಿ ದರ್ಗಾ ಧರ್ಮಗುರುಗಳು ಕಾರ್ಯಕ್ರಮ ನೇತೃತ್ವ ವಹಿಸಿದ್ದರು. ಕಮಿಟಿ ಅಧ್ಯಕ್ಷ ಮುಕ್ರಂ ಖಾನ್ ಹಾಗು ಪದಾಧಿಕಾರಿಗಳು ಮತ್ತು ಮುಸ್ಲಿಂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
No comments:
Post a Comment