ಭದ್ರಾವತಿ ತಾಲೂಕಿನ ತಾವರೆಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿಗರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕ ಮೋಹನ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.
ಭದ್ರಾವತಿ, ಫೆ. ೧೦: ತಾಲೂಕಿನ ಮಂಗೋಟೆ, ಯಡೇಹಳ್ಳಿ, ಮಾರಶೆಟ್ಟಿಹಳ್ಳಿ, ದೊಣಬಘಟ್ಟ, ಮಾವಿನಕೆರೆ, ಬಾರಂದೂರು, ತಾವರಘಟ್ಟ ಮತ್ತು ಅರಕೆರೆ ಸೇರಿದಂತೆ ಒಟ್ಟು ೮ ಗ್ರಾಮ ಪಂಚಾಯಿತಿಗಳಿಗೆ ಬುಧವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ೨ ಪಂಚಾಯಿತಿ ಬಿಜೆಪಿ, ೧ ಪಂಚಾಯಿತಿ ಕಾಂಗ್ರೆಸ್, ೨ ಪಂಚಾಯಿತಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್ ಬೆಂಬಲಿಗರು ಹಾಗು ೧ ಪಂಚಾಯಿತಿ ಜೆಡಿಎಸ್ ಬೆಂಬಲಿಗರ ಪಾಲಾಗಿವೆ.
ದೊಣಬಘಟ್ಟ ಪಂಚಾಯಿತಿಯಲ್ಲಿ ಒಟ್ಟು ೨೧ ಸದಸ್ಯರಿದ್ದು, 'ಎ' ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಖಲೀಲ್ ಸಾಬ್ ಮತ್ತು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಹಾಲಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಸ್ಥಾನಗಳು ಜೆಡಿಎಸ್ ಬೆಂಬಲಿಗರ ಪಾಲಾಗಿವೆ.
ಬಾರಂದೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೧ ಸದಸ್ಯರಿದ್ದು, 'ಬಿ' ವರ್ಗ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ನೀಲಮ್ಮ ಮತ್ತು 'ಎ' ವರ್ಗ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಸುಮಾ .ಎಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ. ನಟರಾಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಈ ಪಂಚಾಯಿತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್ ಬೆಂಬಲಿಗರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತಾವರಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೪ ಜನ ಸದಸ್ಯರಿದ್ದು, ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಜಿ.ಎಸ್ ಮಹೇಶ್ವರಪ್ಪ ಮತ್ತು ಸಾಮಾನ್ಯ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಲತಾ ಅಡವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ. ಬಸವರಾಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಈ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿಗರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗೋಟೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೯ ಸದಸ್ಯರಿದ್ದು, ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ದ್ರಾಕ್ಷಾಯಿಣಿ .ಜಿ ಮತ್ತು ಪರಿಶಿಷ್ಟ ಜಾತಿಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಎ.ಕೆ ನಾಗರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚೇತನ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಈ ಪಂಚಾಯಿತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಸ್ಥಾನಗಳು ಬಿಜೆಪಿ ಬೆಂಬಲಿಗರ ಪಾಲಾಗಿವೆ.
ತಾಲೂಕಿನ ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೪ ಸದಸ್ಯರಿದ್ದು, ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಪಿ. ಮಂಜುನಾಥ್ ಮತ್ತು ಸಾಮಾನ್ಯ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಸಿ. ವಿಜಯಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಸಿ ಶಶಿಧರ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಈ ಪಂಚಾಯಿತಿಯಲ್ಲೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಸ್ಥಾನಗಳೂ ಬಿಜೆಪಿ ಬೆಂಬಲಿಗರ ಪಾಲಾಗಿವೆ.
ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೪ ಸದಸ್ಯರಿದ್ದು, 'ಎ' ವರ್ಗ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಲಲಿತಮ್ಮ ಹೊನ್ನಪ್ಪ ಎಚ್. ಹಾಗು ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಕಿರಣ್ ಮೋರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್‌ರಾಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಈ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಬಿಜೆಪಿ ಬೆಂಬಲಿಗರು ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿಗರು ತಮ್ಮದಾಗಿಸಿಕೊಂಡಿದ್ದಾರೆ.
ತಾಲೂಕಿನ ಮಾವಿನಕೆರೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೦ ಸದಸ್ಯರಿದ್ದು, ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಶ್ರೀಧರ ಶೆಟ್ಟಿ ಮತ್ತು 'ಎ' ವರ್ಗ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ನೇತ್ರಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಾಂತರಾಜ್ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸಿದರು. ಈ ಪಂಚಾಯಿತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್ ಬೆಂಬಲಿಗರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅರಕೆರೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೨ ಸದಸ್ಯರಿದ್ದು, 'ಎ' ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಆರ್.ಡಿ ಶೇಖರಪ್ಪ ಮತ್ತು ಸಾಮಾನ್ಯ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಗಾಯಿತ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್‌ರಾಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
No comments:
Post a Comment