Tuesday, March 2, 2021

ಅಧಿಕಾರ ದುರುಪಯೋಗಪಡಿಸಿಕೊಳ್ಳದೆ ಒಳ್ಳೆಯ ಕಾರ್ಯಕ್ಕೆ ಬಳಸಿ : ಆನಂದ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ 'ಎಂ.ಜೆ,ಅಪ್ಪಾಜಿ ಒಂದು ನೆನಪು' ಶ್ರದ್ದಾಂಜಲಿ ಕಾರ್ಯಕ್ರಮ ಶಾರದಾ ಅಪ್ಪಾಜಿ ಉದ್ಘಾಟಿಸಿದರು.
 ಭದ್ರಾವತಿ, ಮಾ. ೨: ರಾಜಕಾರಣದಲ್ಲಿ ನಮಗೆ ಲಭಿಸಿದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಒಳ್ಳೆ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಆಗ ಮಾತ್ರ ಭವಿಷ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಆನಂದ್ ತಿಳಿಸಿದರು.
    ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮಸ್ಥರು ಹಾಗೂ ಎಂ.ಜೆ.ಅಪ್ಪಾಜಿ ಅಭಿಮಾನಿ ಬಳಗದ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ 'ಎಂ.ಜೆ ಅಪ್ಪಾಜಿ ಒಂದು ನೆನಪು' ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
   ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರು ಯಾರು ಏನೇ ಮಾಡಿದರೂ ನಾವು ಒಳ್ಳೆಯದನ್ನೇ ಮಾಡಬೇಕು ಹೊರತು ಕೆಟ್ಟದ್ದನ್ನು ಮಾಡಬಾರದು. ಯಾರನ್ನು ಸಹ ದ್ವೇಷಿಸಬಾರದು ಎಂದು ಮಾರ್ಗದರ್ಶನ ನೀಡುತ್ತಿದ್ದರು. ಇದೆ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ಅಪ್ಪಾಜಿಯವರ ಬೆಂಬಲದಿಂದಾಗಿ ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷನಾಗಲು ಸಾಧ್ಯವಾಯಿತು. ಇಂದು ಅವರು ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರ ಆದರ್ಶಗಳು ನಮ್ಮೊಂದಿಗಿವೆ. ಈ ಹಿನ್ನಲೆಯಲ್ಲಿ ಸದಾ ಕಾಲ ಅವರ ಕುಟುಂಬದ ಜೊತೆಗಿದ್ದು, ಅವರ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.
   ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ಮಾತನಾಡಿ, ಅಪ್ಪಾಜಿಯವರು ಎಲ್ಲಾ ವರ್ಗದ ಜನರಿಗೂ ಅಧಿಕಾರ ದೊರಕಿಸಿ ಕೊಡುವ ಮೂಲಕ ಗೌರವದಿಂದ ಕಾಣುತ್ತಿದ್ದರು. ಅವರ ನಾಯಕತ್ವದಲ್ಲಿ ಬೆಳೆದ ಅನೇಕರು ಇಂದು ಬೇರೆಯವರ ಮನೆ ಬಾಗಿಲಿಗೆ ಹೋಗಿದ್ದಾರೆ, ಅಪ್ಪಾಜಿ ಕುಟುಂಬದಲ್ಲಿ ಅಪ್ಪಾಜಿ ಒಬ್ಬರೆ ರಾಜಕಾರಣ ಮಾಡುತ್ತಿದ್ದರು. ಆದರೆ ಅಲ್ಲಿ ಮನೆಯವರೆಲ್ಲರೂ ರಾಜಕಾರಣ ಮಾಡುತ್ತಿದ್ದಾರೆ ಎಂಬುದನ್ನು ಅವರು ಮನಗಾಣಬೇಕಿದೆ ಎಂದರು.
   ಅಪ್ಪಾಜಿ ಪತ್ನಿ ಶಾರದಾ ಅಪ್ಪಾಜಿ, ಪುತ್ರ ಎಂ.ಎ ಅಜಿತ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ತಾಲೂಕು ಪಂಚಾಯಿತಿ ಸದಸ್ಯ ಧರ್ಮೇಗೌಡ, ಬದರಿನಾರಾಯಣ್, ಬಿ.ಎನ್ ರಾಜು, ಕೃಷ್ಣರಾಜ್, ರಾಮಚಂದ್ರ, ಜವರಪ್ಪ, ವಿಜಯಕುಮಾರ್, ಮಂಜುನಾಥ್, ಅಶೋಕ್‌ಕುಮಾರ್, ಶೋಭಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


No comments:

Post a Comment